ನವದೆಹಲಿ(ಸೆ.08): ಸಿಂಧ್ರಿ, ಗೋರಖ್ಪುರ ಮತ್ತು ಬಾರೌನಿಗಳಲ್ಲಿ ರಸಗೊಬ್ಬರ ಯೋಜನೆಗಳನ್ನು ಪುನಶ್ಚೇತನಗೊಳಿಸಲು ಹಿಂದೂಸ್ತಾನ್ ಉರ್ವಾರಕ್ ಮತ್ತು ರಸಾಯನ್ ಲಿಮಿಟೆಡ್ (ಎಚ್ಯುಆರ್ಎಲ್)ಗೆ 1257.82 ಕೋಟಿ ರೂಪಾಯಿ ಬಡ್ಡಿರಹಿತ ಸಾಲ ನೀಡಲು ರಸಗೊಬ್ಬರ ಇಲಾಖೆ ಮತ್ತು ಎಚ್ಯುಆರ್ಎಲ್ ನಡುವೆ ಸಾಲ ಒಪ್ಪಂದಕ್ಕೆ ರಾಸಾಯನಿಕ ಮತ್ತು ರಸಗೊಬ್ಬರಗಳ ಖಾತೆ ಸಚಿವ ಡಿ.ವಿ. ಸದಾನಂದಗೌಡ, ಇಲಾಖೆಯ ಕಾರ್ಯದರ್ಶಿ (ರಸಗೊಬ್ಬರಗಳು), ಹೆಚ್ಚುವರಿ ಕಾರ್ಯದರ್ಶಿ (ರಸಗೊಬ್ಬರಗಳು) ಮತ್ತು ಹಿಂದೂಸ್ತಾನ್ ಉರ್ವಾರಕ್ ಮತ್ತು ರಸಾಯನ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕರ ಉಪಸ್ಥಿತಿಯಲ್ಲಿ ಸಹಿ ಹಾಕಲಾಯಿತು. ಬಡ್ಡಿರಹಿತ ಸಾಲ (ಐಎಫ್ಎಲ್) ಒಪ್ಪಂದಕ್ಕೆ ರಸಗೊಬ್ಬರ ಇಲಾಖೆ ನಿರ್ದೇಶಕ ನಿರಂಜನ್ ಲಾಲ್ ಮತ್ತು ಎಚ್ಯುಆರ್ಎಲ್ ವ್ಯವಸ್ಥಾಪಕ ನಿರ್ದೇಶಕ ಅರುಣ್ ಕುಮಾರ್ ಗುಪ್ತಾ ಸಹಿ ಹಾಕಿದರು. ‘ಭಾರತ ಸರ್ಕಾರ ಎಚ್ಯುಆರ್ಎಲ್ಗೆ 1257.82 ಕೋಟಿ ರೂಪಾಯಿ ಬಡ್ಡಿರಹಿತ ಸಾಲಕ್ಕೆ (ಗೋರಖ್ಪುರ, ಸಿಂದ್ರಿ ಮತ್ತು ಬಾರೌನಿ ಯೋಜನೆಗಳಿಗೆ ಕ್ರಮವಾಗಿ 422.28 ಕೋಟಿ ರೂಪಾಯಿ, 415 ಕೋಟಿ ರೂಪಾಯಿ ಮತ್ತು 419.77 ಕೋಟಿ ರೂಪಾಯಿ ಅನುಮೋದನೆ ನೀಡಿದೆ. ಬಡ್ಡಿರಹಿತ ಸಾಲದ ಮರುಪಾವತಿಯನ್ನು 2022-23ರಿಂದ ಪ್ರಾರಂಭಿಸಿ 8 ವರ್ಷಗಳಲ್ಲಿ ಮಾಡಲಾಗುತ್ತದೆ.
ಈ ಸಂದರ್ಭದಲ್ಲಿ ಮಾತನಾಡಿದ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ. ಸದಾನಂದಗೌಡ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ದೇಶೀಯ ಉತ್ಪಾದನೆಯನ್ನು ಹೆಚ್ಚಿಸುವ ಮತ್ತು ಯೂರಿಯಾ ಆಮದು ಅವಲಂಬನೆಯನ್ನು ಕಡಿಮೆ ಮಾಡುವ ದೂರದೃಷ್ಟಿಗೆ ಅನುಗುಣವಾಗಿ ಎಚ್ಯುಆರ್ಎಲ್ನ ಮೂರು ಘಟಕಗಳಿಗೆ ಬಡ್ಡಿರಹಿತ ಸಾಲವನ್ನು ಅನುಮೋದಿಸಲಾಗಿದೆ ಎಂದು ಹೇಳಿದರು.
ಗೋರಖ್ಪುರ, ಬಾರೌನಿ ಮತ್ತು ಸಿಂದ್ರಿಯಲ್ಲಿರುವ ಎಚ್ಯುಆರ್ಎಲ್ನ ಮೂರು ಘಟಕಗಳಿಗೆ ಬಡ್ಡಿರಹಿತ ಸಾಲದ ಬಿಡುಗಡೆಯು, ಈ ಘಟಕಗಳು 2021ರ ವೇಳೆಗೆ ಬೇವು ಲೇಪಿತ ಯೂರಿಯಾದ ವಾಣಿಜ್ಯ ಉತ್ಪಾದನೆಯನ್ನು ಪ್ರಾರಂಭಿಸಲು ಸಹಾಯ ಮಾಡುತ್ತದೆ ಎಂದು ಹೇಳಿದರು.
ಇದನ್ನೂ ಓದಿ: Bangalore Rain: ಬೆಂಗಳೂರಿನಲ್ಲಿ ಗುಡುಗು ಸಹಿತ ಧಾರಾಕಾರ ಮಳೆ
ಕೋವಿಡ್-19 ಸಾಂಕ್ರಾಮಿಕದಿಂದ ಉಂಟಾದ ಅನೇಕ ಸಮಸ್ಯೆಗಳ ನಡುವೆಯೂ ಗೋರಖ್ಪುರ, ಸಿಂಧ್ರಿ ಮತ್ತು ಬಾರೌನಿ ಘಟಕಗಳ ಶೇಕಡಾ 80.3, ಶೇಕಡಾ 74.2 ಮತ್ತು ಶೇಕಡಾ 72.8ರಷ್ಟು ಪ್ರಗತಿಯು ಸಾಕಷ್ಟು ತೃಪ್ತಿಕರವಾಗಿದೆ. ಘಟಕಗಳನ್ನು ಯಶಸ್ವಿಯಾಗಿ ನಿಯೋಜಿಸುವುದರಿಂದ ದೇಶೀಯ ಉತ್ಪಾದನೆಗೆ 38.1 ಲಕ್ಷ ಮೆಟ್ರಿಕ್ ಟನ್ ಬೇವು ಲೇಪಿತ ಯೂರಿಯಾವನ್ನು ಸೇರಿಸಲಾಗುತ್ತದೆ ಮತ್ತು ಇದು ಯೂರಿಯಾ ಆಮದಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ. ಇದು ಭಾರತ ಸರ್ಕಾರದ “ಆತ್ಮನಿರ್ಭರ ಭಾರತ” ಅಭಿಯಾನಕ್ಕೂ ಸಹಾಯ ಮಾಡುತ್ತದೆ ಹಾಗೂ ಪ್ರತ್ಯಕ್ಷ ಮತ್ತು ಪರೋಕ್ಷ ಉದ್ಯೋಗವನ್ನು ಸೃಷ್ಟಿಸುತ್ತದೆ ಎಂದು ಸದಾನಂದಗೌಡ ಅವರು ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ