ನವದೆಹಲಿ(ಡಿ.15): ಕಳೆದ 3 ವರ್ಷಗಳ ಅವಧಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್(Petrol-Diesel) ಮೇಲಿನ ತೆರಿಗೆಯಿಂದಾಗಿ ಕೇಂದ್ರ ಸರ್ಕಾರವು ಸುಮಾರು 8.02 ಲಕ್ಷ ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್(Union Finance Minister Nirmala Sitharaman) ತಿಳಿಸಿದ್ದಾರೆ. ಮಂಗಳವಾರ ಸಂಸತ್ತಿ(Parliament)ಗೆ ನೀಡಿದ ಮಾಹಿತಿಯಲ್ಲಿ ಅವರು ಈ ವಿಷಯವನ್ನು ಪ್ರಸ್ತಾಪಿಸಿದರು. 2021ರ ಹಣಕಾಸು ವರ್ಷದಲ್ಲೇ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆ ಸುಮಾರು 3.71 ಲಕ್ಷ ಕೋಟಿ ಸಂಗ್ರಹವಾಗಿದೆ ಎಂದು ಮಾಹಿತಿ ನೀಡಿದರು.
ರಾಜ್ಯಸಭೆಯಲ್ಲಿ ಉತ್ತರ ನೀಡಿದ ಸಚಿವೆ ನಿರ್ಮಲಾ ಸೀತಾರಾಮನ್
ರಾಜ್ಯಸಭೆಯಲ್ಲಿ ಕೇಳಲಾದ ಪ್ರಶ್ನೆಗೆ ಸಚಿವೆ ನಿರ್ಮಲಾ ಸೀತಾರಾಮನ್ ಲಿಖಿತ ರೂಪದಲ್ಲಿ ಉತ್ತರ ನೀಡಿದರು. ಕಳೆದ ಮೂರು ವರ್ಷಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕ ಹೆಚ್ಚಳ ಮತ್ತು ಈ ಇಂಧನಗಳ ಮೇಲಿನ ವಿವಿಧ ತೆರಿಗೆಗಳ ಮೂಲಕ ಗಳಿಸಿದ ಆದಾಯದ ವಿವರಗಳ ಕುರಿತಾದ ಪ್ರಶ್ನೆಗಳಿಗೆ ಸಚಿವೆ ಉತ್ತರಿಸಿದರು.
ಪೆಟ್ರೋಲ್ ಮೇಲಿನ ಅಬಕಾರಿ ಸುಂಕ ಏರಿಕೆ
2018ರ ಅಕ್ಟೋಬರ್ 5 ರಿಂದ 19.48 ರೂ. ಇದ್ದ ಪೆಟ್ರೋಲ್ ಮೇಲಿನ ಅಬಕಾರಿ ಸುಂಕವು 2021ರ ನವೆಂಬರ್ 4ರ ವೇಳೆಗೆ ರೂ. 27.90ಕ್ಕೆ ಏರಿಕೆ ಕಂಡಿದೆ. ಅಲ್ಲದೆ ಇದೇ ಅವಧಿಯಲ್ಲಿ ಡೀಸೆಲ್ ಮೇಲಿನ ಸುಂಕವು ಲೀಟರ್‌ಗೆ ರೂ. 15.33 ರೂ.ಗಳಿಂದ 21.80 ಕ್ಕೆ ತಲುಪಿದೆ ಎಂದು ಸೀತಾರಾಮನ್ ರಾಜ್ಯಸಭೆಗೆ ಲಿಖಿತ ಉತ್ತರ ನೀಡಿದರು.
ಇದನ್ನೂ ಓದಿ: Omicron ಇತರೆ ರೂಪಾಂತರಗಳಿಗಿಂತ ವೇಗವಾಗಿ ಹರಡುತ್ತೆ, ಕಡೆಗಣಿಸಬೇಡಿ: WHO ಎಚ್ಚರಿಕೆ
ಈ ಅವಧಿಯಲ್ಲಿ, ಪೆಟ್ರೋಲ್ ಮೇಲಿನ ಅಬಕಾರಿ ಸುಂಕವು 2018ರ ಅಕ್ಟೋಬರ್ 5 ರಿಂದ 2019ರ ಜುಲೈ 6ರ ವೇಳೆಗೆ ಲೀಟರ್‌ಗೆ 19.48 ರೂ.ಗಳಿಂದ ರೂ. 17.98ಕ್ಕೆ ಇಳಿದಿದೆ. ಡೀಸೆಲ್ ಮೇಲಿನ ಅಬಕಾರಿ 15.33 ರೂ.ನಿಂದ 13.83 ರೂ.ಗೆ ಇಳಿಕೆಯಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.
ಪೆಟ್ರೋಲ್ -ಡೀಸೆಲ್ ಸುಂಕ ಇಳಿಕೆ
ಫೆಬ್ರವರಿ 2, 2021 ರವರೆಗೆ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕಗಳು ಕ್ರಮವಾಗಿ ₹32.98 ಮತ್ತು ₹ 31.83 ರಷ್ಟಿದ್ದವು. ಬಳಿಕ 2021ರ ನವೆಂಬರ್ 4ಕ್ಕೆ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕಗಳು ಕ್ರಮವಾಗಿ, 27.90ರೂ. ಮತ್ತು 21.80 ರೂ.ಗೆ ಇಳಿದಿದೆ ಎಂದರು.
ಈ ವರ್ಷ 3,71,908 ಕೋಟಿ ತೆರಿಗೆ ಸಂಗ್ರಹ
ಕಳೆದ ಮೂರು ವರ್ಷಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್‌ನಿಂದ ಸಂಗ್ರಹಿಸಲಾದ ಸೆಸ್ ಸೇರಿದಂತೆ ಕೇಂದ್ರ ಅಬಕಾರಿ ಸುಂಕಗಳ ಬಗ್ಗೆ ಸಚಿವೆ ನಿರ್ಮಲಾ ಸೀತಾರಾಮನ್ ಮಾಹಿತಿ ನೀಡಿದರು. 2018-19ರಲ್ಲಿ 2,10,282 ಕೋಟಿ ರೂ, 2019-20ರಲ್ಲಿ 2,19,750 ಕೋಟಿ ಮತ್ತು 2020-21ರಲ್ಲಿ ರೂ 3,71,908 ಕೋಟಿ ಸಂಗ್ರಹವಾಗಿದೆ ಎಂದು ಹೇಳಿದರು.
ಇದನ್ನೂ ಓದಿ: Petrol, Diesel Price Today: ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಏರಿಳಿತ: ಇವತ್ತಿನ ದರ ಇಲ್ಲಿದೆ
ಈ ವರ್ಷದ ದೀಪಾವಳಿಯ ಮೊದಲು ನವೆಂಬರ್ 4ರಂದು, ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕ್ರಮವಾಗಿ ಲೀಟರ್‌ಗೆ 5 ಮತ್ತು 10 ರೂ.ಗಳಷ್ಟು ಕಡಿತಗೊಳಿಸಿದೆ. ತದನಂತರ ಹಲವು ರಾಜ್ಯಗಳು ಎರಡೂ ಇಂಧನಗಳ ಮೇಲಿನ ಮೌಲ್ಯವರ್ಧಿತ ತೆರಿಗೆ (ವ್ಯಾಟ್) ಕಡಿತ ಘೋಷಿಸಿದ್ದವು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ