ನವದೆಹಲಿ(ಜ. 29): ಫೆಬ್ರವರಿ 1ರಂದು ಮಂಡನೆ ಆಗಲಿರುವ ಕೊರೋನಾ (Corona) ನಂತರದ ಎರಡನೇ ಕೇಂದ್ರ ಬಜೆಟ್ (Union Budget) ಭಾರೀ ಕುತೂಹಲ ಹುಟ್ಟುಹಾಕಿದೆ. ದೇಶದ ಆರ್ಥಿಕತೆ (Economy) ತೀವ್ರವಾಗಿ ಕುಸಿದಿರುವುದರಿಂದ ಮತ್ತು ಅದು ದೊಡ್ಡ ಪ್ರಮಾಣದಲ್ಲಿ ಉದ್ಯೋಗ ನಷ್ಟ ಮಾಡುತ್ತಿರುವುದರಿಂದ ಈ ಬಾರಿಯ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Union Finance Minister Nirmala Sitharaman) ಮಂಡಿಸುವ ಬಜೆಟ್ ನಲ್ಲಿ ನಿರುದ್ಯೋಗದ (Unemployment) ಮೇಲೆ ಗಮನ ಹರಿಸಲಾಗುತ್ತದೆ. ಉದ್ಯೋಗ ಸೃಷ್ಟಿಗೆ ಒತ್ತು ನೀಡಲಾಗುತ್ತದೆ ಎಂದು ಕೇಂದ್ರ ಸರ್ಕಾರದ ಮೂಲಗಳಿಂದ ತಿಳಿದುಬಂದಿದೆ.
ಕೇಂದ್ರದ ವಿರುದ್ಧ ಆಕ್ರೋಶಗೊಂಡಿರುವ ನಿರುದ್ಯೋಗಿಗಳು
ದೇಶದಲ್ಲಿ ಈಗ ತೀವ್ರವಾಗಿ ಹೆಚ್ಚುತ್ತಿರುವ ನಿರುದ್ಯೋಗದ ಬಗ್ಗೆ ವ್ಯಾಪಕವಾದ ಚರ್ಚೆ ಆಗುತ್ತಿದೆ. ಅದರಲ್ಲೂ ಸದ್ಯ ನಡೆಯುತ್ತಿರುವ ಉತ್ತರ ಪ್ರದೇಶ, ಗೋವಾ, ಉತ್ತರಖಂಡಾ, ಪಂಜಾಬ್ ಹಾಗೂ ಮಣಿಪುರ ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ನಿರುದ್ಯೋಗ ಸಮಸ್ಯೆ ಮುಖ್ಯ ವಿಷಯವಾಗಿದೆ. ನಿರುದ್ಯೋಗ ಸಮಸ್ಯೆ ಬಗ್ಗೆ ನಿರಂತರವಾಗಿ ದನಿ ಎತ್ತುತ್ತಿರುವ ಕಾಂಗ್ರೆಸ್ ಪಕ್ಷವು ಉತ್ತರ ಪ್ರದೇಶ ಚುನಾವಣೆಗೆ 'ಯುವ ಘೋಷಣೆ' ಬಿಡುಗಡೆ ಮಾಡಿದೆ. ಆ ಮೂಲಕ ಯುವಕರನ್ನು ಉದ್ಯೋಗ ನೀಡದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಬಡಿದೆಬ್ಬಿಸುತ್ತಿದೆ. ಈ ಎಲ್ಲಾ ಹಿನ್ನಲೆಯಲ್ಲಿ ನಿರುದ್ಯೋಗದ ಬಗ್ಗೆ ಈ ಬಾರಿಯ ಬಜೆಟ್ ನಲ್ಲಿ ವಿಶೇಷ ಗಮನ ಹರಿಸಲಾಗುತ್ತದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Budget 2022: ಬಜೆಟ್ ಹೇಗೆ ಸಿದ್ಧವಾಗುತ್ತೆ? ಎಲ್ಲಿ ಮುದ್ರಣ ಮಾಡಲಾಗುತ್ತೆ? ಇಲ್ಲಿದೆ ರಹಸ್ಯ ಮಾಹಿತಿ
MSME ಕ್ಷೇತ್ರಕ್ಕೆ ಹೆಚ್ಚಿನ ಒತ್ತು ಸಾಧ್ಯತೆ
ನಿರುದ್ಯೋಗ ಸಮಸ್ಯೆ ನಿವಾರಣೆಗೆ ಬಜೆಟ್ ನಲ್ಲಿ ಹಲವು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ಆ ಪೈಕಿ ಬಹಳ ಮುಖ್ಯವಾಗಿ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕಾ (MSME) ಕ್ಷೇತ್ರಕ್ಕೆ ಹೆಚ್ಚಿನ ಉತ್ತೇಜನ ನೀಡುವ ಸಂಭವ ಇದೆ. ಎನ್ನಲಾಗುತ್ತಿದೆ. ಏಕೆಂದರೆ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಕ್ಷೇತ್ರದಲ್ಲಿ ಅತಿ ಹೆಚ್ಚು ಉದ್ಯೋಗ ಸೃಷ್ಟಿಸಲು ಅವಕಾಶ ಇದೆ ಎಂದು. ಹಾಗಾಗಿ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಕ್ಷೇತ್ರಕ್ಕೆ ಪೂರಕವಾಗಿ ಬಜೆಟ್ ನಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ. ಸಾಲ ಸೌಲಭ್ಯ, ರಿಯಾಯಿತಿ, ಕಚ್ಚಾ ವಸ್ತುಗಳ ಮೇಲಿನ ತೆರಿಗೆ ಕಡಿತ, ಆಮದು ಸುಂಕ ಕಡಿತ ಮತ್ತಿತರ ಕ್ರಮ ಸಾಧ್ಯತೆ ಇದೆ. ಇದಲ್ಲದೆ ಸ್ಟಾರ್ಟಪ್ ಗಳ ಉತ್ತೇಜನಕ್ಕೆ ಬಜೆಟ್ ನಲ್ಲಿ ಪೂರಕ ಅವಕಾಶ ಒದಗಿಸುವ ಸಾಧ್ಯತೆ ಇದೆ.
ಒಟ್ಟಾರೆ ಹೆಚ್ಚು ಉದ್ಯೋಗ ಸೃಷ್ಟಿಸಬಲ್ಲ ಕ್ಷೇತ್ರಗಳಿಗೆ ಬೆಂಬಲ ನೀಡುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಉಕ್ಕು, ಅಲ್ಯೂಮಿನಿಯಂ, ಜವಳಿ, ಆಭರಣಗಳು, ಔಷಧಗಳು, ವೈದ್ಯಕೀಯ ಸಾಧನಗಳು, ಎಲೆಕ್ಟ್ರಾನಿಕ್ ಘಟಕಗಳು, ಟೆಲಿಕಾಂ ನೆಟ್‌ವರ್ಕ್ ಉತ್ಪನ್ನಗಳ ಉತ್ಪಾದನೆಗೆ ಅಗತ್ಯ ಇರುವ ಕಚ್ಚಾ ವಸ್ತುಗಳ ಮೇಲಿನ ಆಮದು ಸುಂಕ ಕಡಿತ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Union Budget 2022: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಟೀಂನಲ್ಲಿರೋ ಸದಸ್ಯರ ಮಾಹಿತಿ ಇಲ್ಲಿದೆ
ಪೇಪರ್ ಲೆಸ್ ಬಜೆಟ್
ಕೌಶಲ್ಯ ತರಬೇತಿಗೆ ಆದ್ಯತೆ ನೀಡಲಿರುವ ಕೇಂದ್ರದ ಬಜೆಟ್ ನಲ್ಲಿ ರಿಯಲ್ ಎಸ್ಟೇಟ್, ಮೂಲ ಸೌಕರ್ಯ ಕ್ಷೇತ್ರ, ಸೇವಾ ಕ್ಷೇತ್ರ, ಆಧುನಿಕ ತಂತ್ರಜ್ಞಾನ ಕ್ಷೇತ್ರಗಳಿಗೆ ಪೂರಕವಾಗಿ ಕೆಲವು ಘೋಷಣೆಗಳು ಹೊರಬೀಳಲಿವೆ ಎನ್ನಲಾಗುತ್ತಿದೆ. ಫೆಬ್ರವರಿ 1ರಂದು ನಿರ್ಮಲಾ ಸೀತಾರಾಮನ್ ಈ ಬಾರಿ ಪೇಪರ್ ಲೆಸ್ ಬಜೆಟ್ ಮಂಡನೆ ಮಾಡಲಿದ್ದು ಅಂದು ನಿರುದ್ಯೋಗ ಸಮಸ್ಯೆಯನ್ನು ಕೇಂದ್ರ ಸರ್ಕಾರ ಎಷ್ಟು ಗಂಭೀರವಾಗಿ ಪರಿಗಣಿಸಿದೆ ಎಂಬುದು ಗೊತ್ತಾಗಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ