ನವದೆಹಲಿ; ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1ರಂದು ಬಜೆಟ್ ಮಂಡನೆ ಮಾಡಲಿದ್ದಾರೆ. ಅದಕ್ಕೂ ಮುನ್ನ ನಡೆಯುವ ಹಲ್ವಾ ಸಮಾರಂಭ ನಾಳೆ (ಶನಿವಾರ) ನಡೆಯಲಿದೆ. ಬಜೆಟ್ ದಾಖಲೆಗಳು ಮುದ್ರಣಕ್ಕೆ ಹೋಗುವ ಮುನ್ನ ವಿತ್ತ ಸಚಿವಾಲಯದ ಸಿಬ್ಬಂದಿಗೆ ಹಲ್ವಾ ಹಂಚುವ ಸಂಪ್ರದಾಯ ಹಿಂದಿನಿಂದಲೂ ನಡೆದುಕೊಂಡು ಬಂದಿದೆ.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ವಿತ್ತ ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್, ಹಣಕಾಸು ಸಚಿವಾಲಯದ ಕಾರ್ಯದರ್ಶಿಗಳು ಈ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ಬಜೆಟ್ ಮಂಡನೆಗೆ ಕೆಲ ದಿನಗಳು ಬಾಕಿ ಇರುವಂತೆ ಪ್ರತಿವರ್ಷ ಸರ್ಕಾರ ವಾರ್ಷಿಕ ಸಂಪ್ರದಾಯವಾದ ಹಲ್ವಾ ಸಮಾರಂಭವನ್ನು ಆಯೋಜಿಸುತ್ತದೆ.
ಹಲ್ವಾ ಸಮಾರಂಭದ ಹಿಂದಿನ ಚಾರಿತ್ರಿಕ ಹಿನ್ನೆಲೆ ಬಗ್ಗೆ ಸ್ಪಷ್ಟತೆ ಇಲ್ಲ. ಆದರೆ, ಯಾವುದೇ ಶುಭ ಕಾರ್ಯ ಆರಂಭಿಸುವುದಕ್ಕೂ ಮೊದಲು ಸಿಹಿ ಹಂಚುವ ಸಂಪ್ರದಾಯದಂತೆ ಹಲ್ವಾ ಸಮಾರಂಭವೂ ನಡೆದುಕೊಂಡು ಬಂದಿದೆ. ಕೇಂದ್ರ ಹಣಕಾಸು ಇಲಾಖೆಯ ಪ್ರಕಾರ ಹಲ್ವಾ ಸಮಾರಂಭ ಎಂದರೆ ಅದು ಇಲಾಖೆಯ ಸಿಬ್ಬಂದಿಯನ್ನು ಬಜೆಟ್ ಪ್ರತಿ ಮುದ್ರಣ ಕಾರ್ಯದಲ್ಲಿ ತೊಡಗಿಸುವುದು ಎಂದೇ ಅರ್ಥ. ಹಲ್ವಾ ಸಮಾರಂಭ ಮುಗಿದ ಕೂಡಲೇ ಹಣಕಾಸು ಇಲಾಖೆಯ ಸಿಬ್ಬಂದಿ 10 ದಿನಗಳ ಕಾಲ ಬಂಧಿಗಳಾಗುತ್ತಾರೆ. ಅದರೆ, ಮನೆಗೂ ಹೋಗದಂತೆ ಬಜೆಟ್ ಪ್ರತಿ ಮುದ್ರಣ ಕಾರ್ಯದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುತ್ತಾರೆ.
ಇದನ್ನು ಓದಿ: Union Budget 2021: ಈ ಬಾರಿಯ ಕೇಂದ್ರ ಬಜೆಟ್ನ ನಿರೀಕ್ಷೆಗಳಿವು
ಬಜೆಟ್ ಮುಗಿಯುವವರೆಗೆ ಅವರಿಗೆ ಬಾಹ್ಯ ಜಗತ್ತಿನ ಸಂಪರ್ಕ ಇರುವುದಿಲ್ಲ. ಮುದ್ರಣ ಕಾರ್ಯಕ್ಕಾಗಿ ಅವರೆಲ್ಲರೂ ಉತ್ತರ ಬ್ಲಾಕ್ನ ತಳಅಂತಸ್ತಿನ ಕಚೇರಿಗೆ ಸ್ಥಳಾಂತರಗೊಳ್ಳುತ್ತಾರೆ. ಬಜೆಟ್ ಕುರಿತು ಗೌಪ್ಯತೆ ಕಾಯ್ದುಕೊಳ್ಳುವುದು ಇದರ ಮೂಲ ಉದ್ದೇಶ. ಬಜೆಟ್ ಮುಗಿಯುವವರೆಗೂ ಸಿಬ್ಬಂದಿ ಹೊರಗಿನವರೊಂದಿಗೆ ಆಗಲಿ, ಕುಟುಂಬದವರೊಂದಿಗೆ ಆಗಲಿ ಮಾತನಾಡಲು ಸಾಧ್ಯವಿಲ್ಲ. ಇ-ಮೇಲ್, ಫೋನ್ ಸಂಪರ್ಕವೂ ಇರುವುದಿಲ್ಲ. ಮೇಲಧಿಕಾರಿಗಳು ಮಾತ್ರ ಮನೆಯೊಂದಿಗೆ ಸಂಪರ್ಕ ಹೊಂದಿರಬಹುದು.
ಬಜೆಟ್ ಪ್ರತಿಗಳು 1950ರವರೆಗೆ ರಾಷ್ಟ್ರಪತಿ ಭವನದಲ್ಲಿ ಮುದ್ರಣವಾಗುತ್ತಿದ್ದವು. ಅದೇ ವರ್ಷ ಪ್ರತಿಗಳು ಸೋರಿಕೆಯಾಗಿದ್ದವು. ಆ ಹಿನ್ನೆಲೆಯಲ್ಲಿ ಉತ್ತರ ಬ್ಲಾಕ್ಗೆ ಮುದ್ರಣ ಕಾರ್ಯ ಸ್ಥಳಾಂತರಗೊಂಡಿತು. ಅಂದಿನಿಂದಲೂ ಮುದ್ರಣ ಅಲ್ಲಿಯೇ ನಡೆಯುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ