2ನೇ ತ್ರೈಮಾಸಿಕದಲ್ಲೂ ಜಿಡಿಪಿ ಕುಸಿತ ಸ್ವೀಕಾರಾರ್ಹವಲ್ಲ; ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಆತಂಕ

ದೇಶದ ಆರ್ಥಿಕತೆ ಶೀಘ್ರದಲ್ಲೇ ಚೇತರಿಸಿಕೊಳ್ಳಲಿದೆ ಎಂದು ಭಾರತ ಸರ್ಕಾರ ಹೇಳಿತ್ತು. ಜೊತೆಗೆ ಆರ್ಥಿಕತೆ ಉತ್ತೇಜನಕ್ಕಾಗಿ ಕಳೆದ ಕೆಲವು ತಿಂಗಳುಗಳಿಂದ ಹಲವು ಸುಧಾರಣಾ ಕ್ರಮಗಳನ್ನು ಘೋಷಿಸಿತ್ತು. ವಿದೇಶಿ ಹೂಡಿಕೆದಾರರಿಗೆ ಅತಿಹೆಚ್ಚಿನ ತೆರಿಗೆಯನ್ನು ರದ್ದುಪಡಿಸಲಾಗಿತ್ತು, ಅಷ್ಟೇ ಅಲ್ಲದೇ, ಕಾರ್ಪೋರೆಟ್ ತೆರಿಗೆಯನ್ನು ಕಡಿತಗೊಳಿಸಿತ್ತು. ಆದರೂ ಆರ್ಥಿಕತೆ ಮಾತ್ರ ಚೇತರಿಕೆ ಕಾಣುತ್ತಿಲ್ಲ.

HR Ramesh | news18-kannada
Updated:November 29, 2019, 8:49 PM IST
2ನೇ ತ್ರೈಮಾಸಿಕದಲ್ಲೂ ಜಿಡಿಪಿ ಕುಸಿತ ಸ್ವೀಕಾರಾರ್ಹವಲ್ಲ; ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಆತಂಕ
ಡಾ. ಮನಮೋಹನ್ ಸಿಂಗ್
  • Share this:
ನವದೆಹಲಿ: ಪ್ರಸಕ್ತ ಸಾಲಿನ ಆರ್ಥಿಕ ವರ್ಷದ ಎರಡನೇ ತ್ರೈಮಾಸಿಕದ ಜಿಡಿಪಿ ಶೇ.4.5ಕ್ಕೆ ಕುಸಿದಿರುವುದಕ್ಕೆ ಮಾಜಿ ಪ್ರಧಾನಿ, ಅರ್ಥಶಾಸ್ತ್ರಜ್ಞ ಡಾ.ಮನಮೋಹನ್ ಸಿಂಗ್ ಅವರು ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜಿಡಿಪಿ ಅಂಕಿ-ಅಂಶಗಳು ಶುಕ್ರವಾರ ಬಿಡುಗಡೆಯಾದ ಬಳಿಕ ಪ್ರತಿಕ್ರಿಯಿಸಿರುವ ಸಿಂಗ್, ಭಾರತದ ಪ್ರಸ್ತುತ ಆರ್ಥಿಕತೆ ಸ್ವೀಕಾರ್ಹವಲ್ಲ ಎಂದು ಹೇಳಿದ್ದಾರೆ.

ಮೊದಲ ತ್ರೈಮಾಸಿಕದಲ್ಲಿ ಇದ್ದ ಶೇ.5ರಷ್ಟು ಜಿಡಿಪಿ ಎರಡನೇ ತ್ರೈಮಾಸಿಕದಲ್ಲಿ ಶೇ.4.5ಕ್ಕೆ ಕುಸಿದಿರುವುದು ಆತಂಕಕಾರಿ ವಿಷಯ ಎಂದು ಹೇಳಿರುವ ಮನಮೋಹನ್ ಸಿಂಗ್, ಮೊದಲ ತ್ರೈಮಾಸಿಕದ ಜಿಡಿಪಿ ಎರಡನೇ ತ್ರೈಮಾಸಿಕದಲ್ಲಿ ಶೇ.0.5ರಷ್ಟು ಕುಸಿದಿರುವುದು ಆತಂಕಕಾರಿ ವಿಷಯ. ಕೇವಲ ಆರ್ಥಿಕ ನೀತಿಗಳನ್ನು ಬದಲಿಸಿದರಷ್ಟೇ ಆರ್ಥಿಕ ಹಿಂಜರಿತದ ಪುನರುಜ್ಜೀವನಗೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

ದೆಹಲಿಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಆರ್ಥಿಕ ಸಮಾವೇಶದಲ್ಲಿ ಸಮಾರೋಪ ಭಾಷಣ ಮಾಡಿದ ಡಾ.ಮನಮೋಹನ್ ಸಿಂಗ್ ಅವರು, ಮೊದಲ ತ್ರೈಮಾಸಿಕದಲ್ಲಿ ಹಿಂಜರಿತಕ್ಕೆ ಸಿಲುಕಿದ ಉತ್ಪಾದನಾ ವಲಯಗಳು ಎರಡನೇ ತ್ರೈಮಾಸಿಕದಲ್ಲೂ ಋಣಾತ್ಮಕ ಬೆಳವಣಿಗೆಗೆ ಸಾಕ್ಷಿಯಾಗಿವೆ. ಈ ಅವಧಿಯಲ್ಲಿ ಈ ವಲಯಗಳು ಶೇ.-1ರಷ್ಟು ಹಿನ್ನಡೆ ಅನುಭವಿಸಿವೆ ಎಂದರು.

ಜುಲೈನಿಂದ ಸೆಪ್ಟೆಂಬರ್ ಅವಧಿಯ ಭಾರತದ ಆರ್ಥಿಕತೆ ಕಳೆದ ಆರು ವರ್ಷಗಳ ಹಿಂದಕ್ಕೆ ಕುಸಿದಿದೆ ಎಂದು ಶುಕ್ರವಾರ ಅಧಿಕೃತ ದಾಖಲೆಗಳು ಹೇಳಿವೆ. ಪ್ರಸ್ತುತ ಆರ್ಥಿಕ ವರ್ಷದ ಎರಡನೇ ತ್ರೈಮಾಸಿಕದಲ್ಲಿ ಜಿಡಿಪಿ (ಒಟ್ಟು ದೇಶೀಯ ಉತ್ಪನ್ನ) ಶೇ. 4.5 ನಷ್ಟಿದೆ. ಮೊದಲ ತ್ರೈಮಾಸಿಕದಲ್ಲಿ ದೇಶದ ಜಿಡಿಪಿ ಶೇ.5ರಷ್ಟಿತ್ತು. ಆದರೆ, ಈ ತ್ರೈಮಾಸಿಕದಲ್ಲಿ ಶೇ.0.5ರಷ್ಟು ಜಿಡಿಪಿ ಕುಸಿದಿದೆ. ಅಷ್ಟೇ ಅಲ್ಲದೇ. 2018ರ ಇದೇ ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ ದೇಶದ ಜಿಡಿಪಿ ಶೇ.7ರಷ್ಟಿತ್ತು. ಜಿಡಿಪಿ ದತ್ತಾಂಶವೂ ಅರ್ಥಶಾಸ್ತ್ರಜ್ಞರ ಅಂದಾಜಿಗಿಂತ ಕೆಟ್ಟದ್ದಾಗಿದೆ. ರಾಯಿಟರ್ಸ್​ ಸುದ್ದಿಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಜುಲೈ-ಸೆಪ್ಟೆಂಬರ್ ಅವಧಿಯ ಜಿಡಿಪಿ ಶೇ.4.7ರಷ್ಟು ಬೆಳವಣಿಗೆ ಸಾಧಿಸಲಿದೆ ಎಂದು ಅರ್ಥಶಾಸ್ತ್ರಜ್ಞರು ನಿರೀಕ್ಷಿಸಿದ್ದರು.

ಇದನ್ನು ಓದಿ: 2ನೇ ತ್ರೈಮಾಸಿಕದಲ್ಲಿ ಶೇ.4.5ಕ್ಕೆ ಕುಸಿದ ದೇಶದ ಜಿಡಿಪಿ; ಆರು ವರ್ಷಗಳ ಹಿಂದಕ್ಕೆ ದೇಶದ ಆರ್ಥಿಕತೆ

ದೇಶದ ಆರ್ಥಿಕತೆ ಶೇ.5ಕ್ಕಿಂತ ಕುಸಿದಿರುವುದು 2013ರ ನಂತರ ಇದೇ ಮೊದಲು. 2013ರ ಜನವರಿಯಿಂದ ಮಾರ್ಚ್​ ಅವಧಿಯ ತೃತೀಯ ತ್ರೈಮಾಸಿಕದಲ್ಲಿ ಜಿಡಿಪಿ ಶೇ.4.3ರಷ್ಟಿತ್ತು. ಶುಕ್ರವಾರ ಬಿಡುಗಡೆಯಾದ ಜಿಡಿಪಿ ಅಂಕಿ-ಅಂಶಗಳು ದೇಶದ ಅರ್ಥಶಾಸ್ತ್ರಜ್ಞರನ್ನು ಅಸಮಾಧಾನಕ್ಕೂ ಕಾರಣವಾಗಿದೆ.

ದೇಶದ ಆರ್ಥಿಕತೆ ಶೀಘ್ರದಲ್ಲೇ ಚೇತರಿಸಿಕೊಳ್ಳಲಿದೆ ಎಂದು ಭಾರತ ಸರ್ಕಾರ ಹೇಳಿತ್ತು. ಜೊತೆಗೆ ಆರ್ಥಿಕತೆ ಉತ್ತೇಜನಕ್ಕಾಗಿ ಕಳೆದ ಕೆಲವು ತಿಂಗಳುಗಳಿಂದ ಹಲವು ಸುಧಾರಣಾ ಕ್ರಮಗಳನ್ನು ಘೋಷಿಸಿತ್ತು. ವಿದೇಶಿ ಹೂಡಿಕೆದಾರರಿಗೆ ಅತಿಹೆಚ್ಚಿನ ತೆರಿಗೆಯನ್ನು ರದ್ದುಪಡಿಸಲಾಗಿತ್ತು, ಅಷ್ಟೇ ಅಲ್ಲದೇ, ಕಾರ್ಪೋರೆಟ್ ತೆರಿಗೆಯನ್ನು ಕಡಿತಗೊಳಿಸಿತ್ತು. ಆದರೂ ಆರ್ಥಿಕತೆ ಮಾತ್ರ ಚೇತರಿಕೆ ಕಾಣುತ್ತಿಲ್ಲ.
First published:November 29, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ