ವಿಶ್ವ ಸಂಸ್ಥೆ ಮಾನವ ಹಕ್ಕು ಮುಖ್ಯಸ್ಥೆಯಿಂದ ಸಿಎಎ ವಿರುದ್ಧ ಸುಪ್ರೀಂ ಕೋರ್ಟ್​ನಲ್ಲಿ ಅರ್ಜಿ; ಭಾರತ ಆಕ್ಷೇಪ

ಭಾರತದ ಸಾರ್ವಭೌಮತೆಗೆ ಸಂಬಂಧಿಸಿದ ವಿಚಾರಗಳಲ್ಲಿ ಯಾವುದೇ ವಿದೇಶೀ ಶಕ್ತಿಯ ಹಕ್ಕು ಇರುವುದಿಲ್ಲ ಎಂಬುದು ನಮ್ಮ ಅಭಿಪ್ರಾಯ” ಎಂದು ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಹೇಳಿದ್ದಾರೆ.

ಸುಪ್ರೀಂ ಕೋರ್ಟ್

ಸುಪ್ರೀಂ ಕೋರ್ಟ್

 • News18
 • Last Updated :
 • Share this:
  ನವದೆಹಲಿ(ಮಾ. 03): ಪೌರತ್ವ ತಿದ್ದುಪಡಿ ಕಾಯ್ದೆ ಈಗ ಅಂತಾರಾಷ್ಟ್ರೀಯ ಸಂಸ್ಥೆಗಳ ಗಮನ ಸೆಳೆದಿದೆ. ವಿಶ್ವ ಸಂಸ್ಥೆ ಮಾನವ ಹಕ್ಕುಗಳ ಮುಖ್ಯಸ್ಥ ಮಿಚೆಲೆ ಬಾಚೆಲೆಟ್ ಅವರು ಸಿಎಎ ವಿಚಾರವಾಗಿ ಮಧ್ಯಪ್ರವೇಶ ಮಾಡಲು ಅವಕಾಶ ಕೋರಿ ಸುಪ್ರೀಂ ಕೋರ್ಟ್​​ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಈ ವಿಚಾರವನ್ನು ಅವರು ಜಿನಿವಾದಲ್ಲಿರುವ ಭಾರತದ ಪರ್ಮನೆಂಟ್ ಮಿಷನ್​ನ ಗಮನಕ್ಕೆ ತಂದಿದ್ಧಾರೆ. ಹಾಗೆಯೇ, ದಿಲ್ಲಿಯಲ್ಲಿ ನಡೆಯುತ್ತಿರುವ ಹಿಂಸಾಚಾರದಲ್ಲಿ ಪೊಲೀಸರು ನಿಷ್ಕ್ರಿಯತೆ ತೋರಿದ್ಧಾರೆ ಎಂದೂ ವಿಶ್ವಸಂಸ್ಥೆಯ ಅಧಿಕಾರಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿರುವ ಭಾರತ ಸರ್ಕಾರ, ಇದು ದೇಶದ ಆಂತರಿಕ ವ್ಯವಹಾರದಲ್ಲಿ ತಲೆತೂರಿಸುವ ಪ್ರಯತ್ನ ಎಂದು ಆಕ್ಷೇಪ ವ್ಯಕ್ತಪಡಿಸಿದೆ.

  ಸಿಎಎ ಕಾನೂನು ಜಾರಿಗೆ ಬಂದಾಗಿನಿಂದಲೂ ವಿಶ್ವ ಸಂಸ್ಥೆ ಹ್ಯೂಮನ್ ರೈಟ್ಸ್ ಹೈ ಕಮಿಷನರ್ (UNHCHR) ಕಚೇರಿ ಅದರ ವಿರುದ್ಧ ಧ್ವನಿ ಎತ್ತುತ್ತಾ ಬಂದಿದೆ. ಫೆ. 27ರಂದು ಜಿನಿವಾದಲ್ಲಿ ನಡೆದ ಮಾನವ ಹಕ್ಕುಗಳ ಮಂಡಳಿಯ 43ನೇ ಅಧಿವೇಶನದಲ್ಲಿ ಪ್ರಸ್ತುಪಡಿಸಲಾದ ಜಾಗತಿಕ ವರದಿಯಲ್ಲಿ ಸಿಎಎ ಬಗ್ಗೆ ತಕರಾರು ವ್ಯಕ್ತಪಡಿಸಿತ್ತು. “ಕಳೆದ ಡಿಸೆಂಬರ್​ನಲ್ಲಿ ಜಾರಿಗೆ ತಂದ ಪೌರತ್ವ ತಿದ್ದುಪಡಿ ಕಾಯ್ದೆ ಆತಂಕದ ವಿಚಾರವಾಗಿದೆ. ಭಾರತದ ಎಲ್ಲಾ ಸಮುದಾಯಗಳಿಂದ ದೊಡ್ಡ ಪ್ರಮಾಣದಲ್ಲಿ ಜನರು ಶಾಂತಿಯುತವಾಗಿ ಈ ಕಾಯ್ದೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ದೇಶದಲ್ಲಿ ದೀರ್ಘ ಕಾಲದಿಂದ ಇರುವ ಜಾತ್ಯತೀತೆಗೆ ಇವರೆಲ್ಲರು ಬೆಂಬಲ ವ್ಯಕ್ತಪಡಿಸಿದ್ದಾರೆ” ಎಂದು ವಿಶ್ವಸಂಸ್ಥೆ ಮಾನವ ಹಕ್ಕುಗಳ ಮುಖ್ಯಸ್ಥೆ ಬಾಚೆಲೆಟ್ ತಮ್ಮ ವರದಿಯಲ್ಲಿ ತಿಳಿಸಿದ್ದರು. ಹಾಗೆಯೇ, ಈ ವರದಿಯಲ್ಲಿ ದಿಲ್ಲಿ ಹಿಂಸಾಚಾರಗಳಲ್ಲಿ ಪೊಲೀಸರ ವರ್ತನೆ ಬಗ್ಗೆ ಆಕ್ಷೇಪವನ್ನೂ ವ್ಯಕ್ತಪಡಿಸಲಾಗಿತ್ತು.

  ಇದನ್ನೂ ಓದಿ: ಕೊರೋನಾ ಭೀತಿ; ಚೀನಾ, ಮಲೇಷಿಯಾ, ಇರಾನ್​, ಜಪಾನ್​, ಥಾಯ್ಲೆಂಡ್​ ಸೇರಿದಂತೆ ಹಲವು ದೇಶಗಳಿಂದ ಭಾರತಕ್ಕೆ ಪ್ರವೇಶವಿಲ್ಲ

  ಯುಎನ್​ಎಚ್​ಸಿಎಚ್​ಆರ್​ನ ಈ ವರದಿಯನ್ನು ಭಾರತ ಸರ್ಕಾರ ಟೀಕೆ ಮಾಡಿದೆ. “ಸಿಎಎ ಭಾರತದ ಆಂತರಿಕ ವಿಚಾರವಾಗಿದ್ದು ಕಾನೂನುಗಳನ್ನು ರೂಪಿಸುವುದು ಭಾರತೀಯ ಸಂಸತ್​ನ ಸಾರ್ವಭೌಮ ಹಕ್ಕಾಗಿದೆ” ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

  “ಭಾರತದ ಸಾರ್ವಭೌಮತೆಗೆ ಸಂಬಂಧಿಸಿದ ವಿಚಾರಗಳಲ್ಲಿ ಯಾವುದೇ ವಿದೇಶೀ ಶಕ್ತಿಯ ಹಕ್ಕು ಇರುವುದಿಲ್ಲ ಎಂಬುದು ನಮ್ಮ ಅಭಿಪ್ರಾಯ” ಎಂದು ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಹೇಳಿದರು.

  ಸಿಎಎ ಸಂವಿಧಾನಿಕವಾಗಿ ಸಿಂಧುವಾಗಿದೆ. ಭಾರತದ ಸಂವಿಧಾನದ ಎಲ್ಲಾ ಮೌಲ್ಯಗಳಿಗೆ ಇದು ಬದ್ಧವಾಗಿದೆ. ಭಾರತದ ವಿಭಜನೆಯ ದುರಂತದಿಂದ ಉದ್ಭವಿಸಿದ ಮಾನವ ಹಕ್ಕು ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಬೆಳೆದುಬಂದಿರುವ ನಮ್ಮ ದೀರ್ಘಕಾಲೀನ ರಾಷ್ಟ್ರೀಯ ಬದ್ಧತೆಗೆ ಇದು ಪೂರಕವಾಗಿದೆ ಎಂದೂ ಅವರು ಸಿಎಎಯನ್ನು ಸಮರ್ಥಿಸಿಕೊಂಡರು.

  ಇದನ್ನೂ ಓದಿ: ಸಿಎಂ ಕೇಜ್ರಿವಾಲ್-ಪ್ರಧಾನಿ ಮೋದಿ ಭೇಟಿ: ದೆಹಲಿ ಹಿಂಸಾಚಾರ ಮತ್ತು ಕೊರೋನಾ ವೈರಸ್​​ ಬಗ್ಗೆ ಚರ್ಚೆ

  “ಭಾರತವು ಕಾನೂನಿನ ನಿಯಮಗಳಿಂದ ನಿರ್ವಹಿಸಲಾಗುತ್ತಿರುವ ಪ್ರಜಾತಂತ್ರೀಯ ದೇಶವಾಗಿದೆ. ನಮ್ಮ ಸ್ವತಂತ್ರ ನ್ಯಾಯಾಂಗದ ಬಗ್ಗೆ ನಮಗೆಲ್ಲರಿಗೂ ಅತ್ಯುಚ್ಚ ಗೌರವ ಮತ್ತು ಪೂರ್ಣ ವಿಶ್ವಾಸ ಇದೆ. ನಮ್ಮ ಕ್ರಮಕ್ಕೆ ಸುಪ್ರೀಂ ಕೋರ್ಟ್ ಮಾನ್ಯತೆ ಕೊಡುತ್ತದೆ ಎಂಬ ವಿಶ್ವಾಸವೂ ನಮಗಿದೆ” ಎಂದು ರವೀಶ್ ಕುಮಾರ್ ಹೇಳಿದರು.

  ಫೆ. 27ರಂದು ಜಿನಿವಾದಲ್ಲಿ ಈ ವರದಿ ಮಂಡನೆಯಾದಾಗ ಅಲ್ಲಿಯೇ ಇದ್ದ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಹಿರಿಯ ರಾಜತಾಂತ್ರಿಕ ವಿಕಾಸ್ ಸ್ವರೂಪ್ ಅವರು ಮಿಶೆಲೆ ಬಾಚೆಲೆಟ್ ಅವರನ್ನು ಭೇಟಿ ಮಾಡಿ ಮಾತನಾಡಿದ್ದರು. ಆ ಬಳಿಕ ಅವರು ಭಾರತದ ಎಲ್ಲಾ ನಾಗರಿಕರ ಮಾನವ ಹಕ್ಕು ರಕ್ಷಣೆಗೆ ಸರ್ಕಾರ ಬದ್ಧವಾಗಿದೆ ಎಂದು ಟ್ವೀಟ್ ಮಾಡಿದ್ದರು.

  ಇನ್ನು, ಭಾರತದ ಭೇಟಿ ಬಂದಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸಿಎಎ ಬಗ್ಗೆ ಮಾತನಾಡಿ, ಇದು ಭಾರತದ ಆಂತರಿಕ ವಿಚಾರ ಎಂದು ಅಭಿಪ್ರಾಯಪಟ್ಟಿದ್ದರು.

  ವರದಿ: ಮಹಾ ಸಿದ್ಧಿಕಿ

  ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

  First published: