ಜೈಪುರ: ಭಾರತೀಯ ಜನತಾ ಪಕ್ಷದ ನಾಯಕಿ, ಮಾಜಿ ಮುಖ್ಯಮಂತ್ರಿ ಉಮಾಭಾರತಿ (Uma bharti) ಅವರು ಮಧ್ಯಪ್ರದೇಶದ (Madhya Pradesh) ಓರ್ಚಾ ಬಳಿ ಇರುವ ಮದ್ಯದ ಅಂಗಡಿಯ (Wine Shop) ಮುಂಭಾಗದಲ್ಲಿ ಬಿಡಾಡಿ ದನಗಳನ್ನು ಕಟ್ಟಿ ಹಾಕಿ ಮದ್ಯವನ್ನು ತ್ಯಜಿಸಿ ಹಸುವಿನ ಹಾಲು ಕುಡಿಯುವಂತೆ ಜನರಿಗೆ ಕರೆ ನೀಡಿದರು. ಮಧ್ಯಪ್ರದೇಶದಲ್ಲಿ ಮದ್ಯಪಾನ ವಿರುದ್ಧ ಹೋರಾಟ ನಡೆಸುತ್ತಿರುವ ಉಮಾಭಾರತಿ ಅವರು ದನಗಳಿಗೆ ಹುಲ್ಲು ತಿನ್ನಿಸಿ, ಮದ್ಯಪಾನದ ಬದಲು ಹಾಲು ಕುಡಿಯಿರಿ ಇದು ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳಿದರು.
ನಿವಾರಿ ಜಿಲ್ಲೆಯ ಓರ್ಚಾ ಬಳಿ ಇರುವ ಭಾರತ ನಿರ್ಮಿತ ವಿದೇಶಿ ಮದ್ಯ ಮಾರಾಟ ಮಾಡುವ ಬಾರ್‌ನ ಮುಂದೆ ಬಿಡಾಡಿ ದನಗಳನ್ನು ಕಟ್ಟಿ ಪ್ರತಿಭಟನೆ ನಡೆಸಿದ ಉಮಾ ಭಾರತಿ ಮತ್ತು ಬೆಂಬಲಿಗರು ಹಾಲು ಕುಡಿಯಿರಿ, ಶರಾಬನ್ನಲ್ಲ ಎಂದು ಘೋಷಣೆ ಕೂಗಿದರು. ಈ ವೇಳೆ ಪರಿಸ್ಥಿತಿ ಹದಗೆಡುವ ಮುನ್ನ ಬಾರ್‌ನ ಮಾಲೀಕರು ತಕ್ಷಣವೇ ಮದ್ಯದಂಗಡಿ ಬಾಗಿಲು ಬಂದ್ ಮಾಡಿದ್ದಾರೆ. ಕಳೆದ ವರ್ಷ ಜೂನ್ ತಿಂಗಳಲ್ಲಿ ಇದೇ ಮದ್ಯದಂಗಡಿಗೆ ಬಿಜೆಪಿ ಮುಖಂಡನೊಬ್ಬ ಹಸುವಿನ ಸೆಗಣಿ ಎಸೆದು ಪ್ರತಿಭಟನೆ ಮಾಡಿದ್ದರು.
ಇದನ್ನೂ ಓದಿ: Uma Bharti: ಮದ್ಯದಂಗಡಿಗಳನ್ನು ಗೋಶಾಲೆಯನ್ನಾಗಿ ಪರಿವರ್ತನೆ ಮಾಡುತ್ತೇವೆ: ಉಮಾಭಾರತಿ ಎಚ್ಚರಿಕೆ
ಬಿಜೆಪಿ ಆಡಳಿತವಿರುವ ಮಧ್ಯಪ್ರದೇಶದಲ್ಲಿ ಮದ್ಯ ಸೇವನೆ ವಿರುದ್ಧದ ಅಭಿಯಾನವನ್ನು ಮಾಜಿ ಮುಖ್ಯಮಂತ್ರಿ ಉಮಾಭಾರತಿ ನಡೆಸುತ್ತಿದ್ದು, ರಾಜ್ಯ ಸರ್ಕಾರವು ಪ್ರತಿ ವರ್ಷ ಬಿಡುಗಡೆ ಮಾಡುವ ಮದ್ಯದ ನೀತಿಗೆ ಸೂಕ್ತವಾದ ತಿದ್ದುಪಡಿಗಳನ್ನು ಮತ್ತು ವ್ಯಸನವನ್ನು ನಿಯಂತ್ರಿಸಲು ಕ್ರಮಗಳನ್ನು ಅಳವಡಿಸಬೇಕೆಂದು ಅವರು ಒತ್ತಾಯಿಸುತ್ತಿದ್ದಾರೆ.
ಅಪರಾಧ ಕೃತ್ಯಗಳ ಸಂಖ್ಯೆ ಹೆಚ್ಚಾಗಲು ಸಾರಾಯಿ ಸೇವನೆ ಕಾರಣ ಎಂದಿದ್ದ ಉಮಾಭಾರತಿ
ಎರಡು ದಿನಗಳ ಹಿಂದೆ ಇದೇ ವಿಚಾರವಾಗಿ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧವೇ ಕಿಡಿಕಾರಿದ್ದ ಉಮಾಭಾರತಿ ಮಧ್ಯಪ್ರದೇಶದಲ್ಲಿ ಇರುವ ಮದ್ಯದ ಅಂಗಡಿಗಳನ್ನು ಗೋಶಾಲೆಗಳನ್ನಾಗಿ ಪರಿವರ್ತಿಸಬೇಕು ಎಂದು ಆಗ್ರಹಿಸಿದ್ದರು. ಮಹಿಳೆಯರ ವಿರುದ್ಧ ಅಪರಾಧ ಕೃತ್ಯಗಳ ಸಂಖ್ಯೆ ಹೆಚ್ಚಾಗಲು ಸಾರಾಯಿ ಸೇವನೆ ಕಾರಣ. ಸರ್ಕಾರದ ಮದ್ಯ ನೀತಿಗೆ ಕಾಯೋದಿಲ್ಲ, ನಿಯಮ ಉಲ್ಲಂಘಿಸಿ ನಡೆಸುತ್ತಿರುವ ಮದ್ಯದ ಅಂಗಡಿಗಳನ್ನುಗೋಶಾಲೆಗಳನ್ನಾಗಿ ಪರಿವರ್ತಿಸಲು ನಾನು ಮುಂದಾಗುತ್ತೇನೆ ಎಂದು ಎಚ್ಚರಿಕೆ ಕೊಟ್ಟಿದ್ದರು.
ಇದನ್ನೂ ಓದಿ: Uma Bharti: ರಾಮ-ಹನುಮ ಬಿಜೆಪಿಗೆ ಮಾತ್ರ ಸೇರಿದವರಲ್ಲ! ಕೇಸರಿ ಪಡೆಗೆ ಮುಜುಗರ ತಂದ ಉಮಾಭಾರತಿ ಹೇಳಿಕೆ
'ಯಾರು ತಡೆಯುತ್ತಾರೆ ನೋಡುತ್ತೇನೆ'
ಭೋಪಾಲ್‌ನ ಟ್ರಿಸೆಕ್ಷನ್ ಬಳಿ ಇರುವ ಮದ್ಯದ ಅಂಗಡಿ ಸಮೀಪದ ದೇವಸ್ಥಾನದ ಸ್ಥಳಾಂತರ ವಿವಾದಕ್ಕೆ ಸಂಬಂಧಿಸಿದಂತೆ ಮಾತನಾಡಿ ದೇಗುಲದ ಸ್ಥಳಾಂತರ ಸಾಧ್ಯವೇ ಇಲ್ಲ. ರಾಜ್ಯದಲ್ಲಿ ನಿಯಂತ್ರಿತ ಮದ್ಯ ನೀತಿಯ ಬೇಡಿಕೆಯನ್ನು ಬೆಂಬಲಿಸುವ ಸಲುವಾಗಿ ‘ಮಧುಶಾಲಾ ಮೇ ಗೋಶಾಲಾ’ ಕಾರ್ಯಕ್ರಮವನ್ನು ಪ್ರಾರಂಭಿಸುವುದಾಗಿ ಘೋಷಿಸಿದ್ದರು. ಮದ್ಯದ ಅಂಗಡಿಯ ಹೊರಗೆ 11 ಹಸುಗಳನ್ನು ಹಾಕುವಂತೆ ವ್ಯವಸ್ಥೆ ಮಾಡಲು ಇಲ್ಲಿನ ಜನರಿಗೆ ತಿಳಿಸಿದ್ದೇನೆ ಎಂದು ಹೇಳಿದ್ದ ಅವರು, ನನ್ನನ್ನು ತಡೆಯಲು ಯಾರು ಧೈರ್ಯ ಮಾಡುತ್ತಾರೆ ಎಂದು ನೋಡುತ್ತೇವೆ. ಈ ಹಸುಗಳಿಗೆ ಆಹಾರ ಮತ್ತು ನೀರನ್ನು ಮದ್ಯದ ಅಂಗಡಿಯಲ್ಲಿ ಕೊಡುತ್ತೇವೆ ಎಂದು ಹೇಳಿದ್ದರು. ಇದೀಗ ಹೇಳಿದಂತೆಯೇ ಮದ್ಯದಂಗಡಿ ಮುಂದೆ ಬಿಡಾಡಿ ಹಸು ಕಟ್ಟಿ ಪ್ರತಿಭಟನೆ ಮಾಡಿದ್ದಾರೆ.
ಇನ್ನು ಬಿಜೆಪಿ ಪಕ್ಷದ ಒಂದು ಗುಂಪು ನಾನು ಮದ್ಯ ಸೇವನೆಯ ವಿರುದ್ಧ ಕಾರ್ಯಕ್ರಮ ರೂಪಿಸಿದ್ದಕ್ಕೆ ನನ್ನನ್ನೇ ಟ್ರೋಲ್ ಮಾಡುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದ ಉಮಾ ಭಾರತಿ ಅವರು, ಅದನ್ನು ತನ್ನ ರಾಜಕೀಯ ಉದ್ದೇಶಕ್ಕೆ ಬಳಸುತ್ತಿದೆ. ಭಾರತಿ ಅವರು ಸಿಎಂ ಆಗಿ ಸೇವೆಯನ್ನು ಸಲ್ಲಿಸಿದ್ದಾರೆ, ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ ಮತ್ತು ಈಗ ಪ್ರಧಾನಿ ಸ್ಥಾನ ಮಾತ್ರ ಉಳಿದಿದೆ, ಆದರೆ ಕೆಲವೇ ಕೆಲವು ರಾಜಕಾರಣಿಗಳು ಆ ಉನ್ನತ ಹುದ್ದೆಯನ್ನು ಅಲಂಕರಿಸಬಹುದು. ಮದ್ಯ ನಿಷೇಧ ಆಂದೋಲನದಿಂದಾಗಿ ನನಗೆ ಆ ಹುದ್ದೆ ಸಿಗುತ್ತದೆಯೇ? ಆದರೆ ಬಿಜೆಪಿಯ ಒಂದು ಗುಂಪು ಇಂತಹ ವಿಷಯಗಳನ್ನು ಹರಡುತ್ತಿದೆ ಎಂದು ಹೇಳಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ