ರಷ್ಯಾ (Russia) ಹಾಗೂ ಉಕ್ರೇನ್ (Ukraine) ನಡುವಿನ ಯುದ್ಧ (War) ಮುಂದುವರೆದಿದೆ. ಇದೀಗ ಬರೋಬ್ಬರಿ 38ನೇ ದಿನಕ್ಕೆ ಕಾಲಿಟ್ಟಿದೆ. ಸಂಧಾನ ಮಾಡಿಕೊಳ್ಳುವ ಮಾತನಾಡಿದ್ದ ರಷ್ಯಾ ಮತ್ತೆ ಯುದ್ಧ ಮುಂದುವರೆಸಿದೆ. ಇದೀಗ ಉಭಯ ರಾಷ್ಟ್ರಗಳ ನಡುವಿನ ಯುದ್ಧ ಮತ್ತಷ್ಟು ಭೀಕರವಾಗುತ್ತಿದೆ. ಇದೀಗ ರಷ್ಯಾ ವಿರುದ್ಧ ಉಕ್ರೇನ್ ತಿರುಗಿ ಬಿದ್ದಿದೆ. ನಿನ್ನೆ ರಷ್ಯಾ ವಿರುದ್ಧ ಉಕ್ರೇನ್ ಭರ್ಜರಿ ಏರ್ಸ್ಟ್ರೈಕ್ (Air Strike) ನಡೆಸಿವೆ. ಉಕ್ರೇನ್ ಸೇನಾಪಡೆಗಳು (Military Force) ರಷ್ಯಾದ ಇಂಧನ ಶೇಖರಣಾ ಕೇಂದ್ರದ (Fuel Storage Center) ಮೇಲೆ ವೈಮಾನಿಕ ದಾಳಿ ಮಾಡಿ ಧ್ವಂಸ ಮಾಡಿದೆ. ಇದು ರಷ್ಯಾದ ಮೇಲೆ ಉಕ್ರೇನ್ ಮಾಡಿದ ಮೊದಲ ವೈಮಾನಿಕ ದಾಳಿಯಾಗಿದೆ.
ರಷ್ಯಾ ವಿರುದ್ಧ ತಿರುಗಿ ಬಿದ್ದ ಉಕ್ರೇನ್
ಈ ಹಿಂದೆ ಉಕ್ರೇನ್ನ ಪ್ರದೇಶಗಳ ಮೇಲೆ ಸತತವಾಗಿ ದಾಳಿ ಮುಂದುವರಿಸಿರಷ್ಯಾ ಕ್ರೌರ್ಯ ಸೃಷ್ಟಿಸಿತ್ತು. ಇದೀಗ ರಷ್ಯಾದ ವಿರುದ್ಧ ಉಕ್ರೇನ್ ತಿರುಗಿ ಬಿದ್ದಿದೆ. ಈ ಬಗ್ಗೆ ಆರೋಪಿಸಿರುವ ರಷ್ಯಾ, ಉಕ್ರೇನ್ ಒಂದೆಡೆ ಸಂಧಾನ ನಡೆಸುವ ಮಾತುನಾಡುತ್ತೆ .ಇತ್ತ ತನ್ನ ಇಂಧನ ಶೇಖರಣಾ ಘಟಕದ ಮೇಲೆ ವೈಮಾನಿಕ ದಾಳಿ ಮಾಡಿ ಧ್ವಂಸ ಮಾಡಿದೆ. ಇದರಿಂದ ಘಟಕ ಭಾರಿ ಬೆಂಕಿಯಿಂದ ಹೊತ್ತಿ ಉರಿಯುತ್ತಿದೆ ಎಂದಿದೆ.
ಇಂದು ಮುಂಜಾನೆ ಉಕ್ರೇನ್ನಿಂದ ಏರ್ಸ್ಟ್ರೈಕ್
ಬೆಳಗ್ಗೆ 6 ಗಂಟೆಗೆ ಎರಡು ಉಕ್ರೇನಿಯನ್ ಸೇನಾ ಹೆಲಿಕಾಪ್ಟರ್ಗಳು ರಷ್ಯಾದ ಮೇಲೆ ದಾಳಿ ಮಾಡಿವೆ. ಉಕ್ರೇನ್ ಸೇನೆಯ ಎರಡು ಹೆಲಿಕಾಪ್ಟರ್ಗಳು ಕಡಿಮೆ ಎತ್ತರದ ಚಲನೆಯಲ್ಲಿ ರಷ್ಯಾ ಭಾಗವನ್ನು ಪ್ರವೇಶಿಸಿದ್ದು, ಈ ದಾಳಿ ನಡೆಸಿವೆ. ಇದರ ಪರಿಣಾಮ ಪೆಟ್ರೋಲ್ ಡಿಪೋದಲ್ಲಿ ಬೆಂಕಿ ಅನಾಹುತ ಉಂಟಾಗಿದೆ .
ಇಂಧನ ಘಟಕದಲ್ಲಿ ಭಾರೀ ಪ್ರಮಾಣದ ಬೆಂಕಿ
ಉಕ್ರೇನ್ವಾಯುದಾಳಿಯಿಂದಾಗಿ ರಷ್ಯಾದ ಪೆಟ್ರೋಲ್ ಶೇಖರಣಾ ಘಟಕದಲ್ಲಿ ಬೆಂಕಿ ಹೊತ್ತಿಕೊಂಡಿದೆ. ಇಬ್ಬರು ಉದ್ಯೋಗಿಗಳು ತೀವ್ರವಾಗಿ ಗಾಯಗೊಂಡಿದ್ದಾರೆ. ಬೆಂಕಿಯನ್ನು ನಂದಿಸಲು 170 ಅಗ್ನಿಶಾಮಕ ಸಿಬ್ಬಂದಿ ಹೋರಾಡುತ್ತಿದ್ದಾರೆ ಎಂದು ಬೆಲ್ಗೊರೊಡ್ ಪ್ರದೇಶದ ಗವರ್ನರ್ ವ್ಯಾಚೆಸ್ಲಾವ್ ಗ್ಲಾಡ್ಕೊವ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Ukraine ಯುದ್ಧ ಸಂತ್ರಸ್ತರಿಗೆ ಮಿಡಿದ ಭಾರತೀಯನ ಹೃದಯ! ನಿರಾಶ್ರಿತರಿಗಾಗಿ App ಕಂಡು ಹಿಡಿದ ಬಾಲಕ
ದಾಳಿಯಿಂದ ಬೃಹತ್ ಪ್ರಮಾಣದ ಬೆಂಕಿ
ಉಕ್ರೇನ್ ವೈಮಾನಿಕ ದಾಳಿಯಿಂದ ಭಾರಿ ಪ್ರಮಾಣದ ಜ್ವಾಲೆಗಳು ಎದ್ದಿದ್ದು, ಕಪ್ಪು ಹಾಗೂ ಬಿಳಿ ಬಣ್ಣದ ದಟ್ಟ ಹೊಗೆ ಆಕಾಶವನ್ನು ಆವರಿಸಿದೆ. ಈ ಘಟಕದ ಮಾಲೀಕತ್ವ ಹೊಂದಿರುವ ರಷ್ಯಾ ಇಂಧನ ದಿಗ್ಗಜ ರೋಸ್ನೆಫ್ಟ್, ಆವರಣದಲ್ಲಿದ್ದ ಎಲ್ಲ ಸಿಬ್ಬಂದಿಯನ್ನು ಸ್ಥಳಾಂತರ ಮಾಡಿರುವುದಾಗಿ ತಿಳಿಸಿದೆ.
ಉಕ್ರೇನ್ ವೈಮಾನಿಕ ದಾಳಿಯ ವಿಡಿಯೋ ರಿಲೀಸ್
ಇಂಧನ ಸಂಸ್ಕರಣಾ ಘಟಕ ಬೆಂಕಿಯಿಂದ ಹೊತ್ತಿ ಉರಿಯುತ್ತಿರುವ ವಿಡಿಯೋವನ್ನು ರಷ್ಯಾ ಸರ್ಕಾರ ಜಾಲತಾಣದಲ್ಲಿ ಬಿಡುಗಡೆ ಮಾಡಿದೆ. ದಾಳಿಗೊಳಗಾದ ರಷ್ಯಾ ಪ್ರದೇಶವಾದ ಬೆಲ್ಗೊರೊಡ್ ಉಕ್ರೇನ್ನ ಗಡಿಯಿಂದ ಸುಮಾರು 40 ಕಿಲೋಮೀಟರ್, ಖಾರ್ಕಿವ್ನಿಂದ ಸುಮಾರು 80 ಕಿಲೋಮೀಟರ್ ದೂರದಲ್ಲಿದೆ.
ರಷ್ಯಾದಲ್ಲೀಗ ಇಂಧನ ಕೊರತೆ ಭೀತಿ
ಇದರಿಂದ ಪೆಟ್ರೋಲ್ ಕೊರತೆಯ ಭೀತಿ ಜನರಲ್ಲಿ ಮೂಡಿದ್ದು, ಪೆಟ್ರೋಲ್ ಪಂಪ್ಗಳ ಎದುರು ಭಾರಿ ದೊಡ್ಡ ಸರದಿ ಕಂಡುಬಂದಿದೆ. ಸಾಕಷ್ಟು ಪ್ರಮಾಣದಲ್ಲಿ ಪೆಟ್ರೋಲ್ ಲಭ್ಯವಿದ್ದು, ಜನರು ಆತಂಕ ಪಡುವ ಅಗತ್ಯವಿಲ್ಲ ಎಂದು ಗವರ್ನರ್ ಭರವಸೆ ನೀಡಿದ್ದಾರೆ.
ಇದನ್ನೂ ಓದಿ: Explained: ಹೈಪರ್ಸಾನಿಕ್ ಕ್ಷಿಪಣಿಗಳು ಅಂದರೇನು? ರಷ್ಯಾ ಇದನ್ನು ಉಕ್ರೇನ್ನಲ್ಲಿ ಬಳಸುತ್ತಿರುವುದೇಕೆ?
ನಿರಂತರ 37 ದಿನಗಳಿಂದ ರಷ್ಯಾ-ಉಕ್ರೇನ್ ಯುದ್ಧ
ಫೆಬ್ರವರಿ 24ರಂದು ರಷ್ಯಾ ಸೇನಾ ಕಾರ್ಯಾಚರಣೆ ಆರಂಭಿಸಿ, 37ನೇ ದಿನದಂದು ಈ ಪ್ರಕಟಣೆ ಹೊರಬಂದಿದೆ. ಯುದ್ಧದಲ್ಲಿ ಸಾವಿರಾರು ಜನರು ಮೃತಪಟ್ಟಿದ್ದು, 1 ಕೋಟಿಗೂ ಹೆಚ್ಚು ಮಂದಿ ನೆಲೆ ಕಳೆದುಕೊಂಡಿದ್ದಾರೆ. ಎರಡನೇ ವಿಶ್ವಯುದ್ಧದ ಬಳಿಕ ಯುರೋಪ್ನಲ್ಲಿ ಉಂಟಾಗಿರುವ ಅತ್ಯಂತ ಭೀಕರ ನಿರಾಶ್ರಿತರ ಬಿಕ್ಕಟ್ಟು ಇದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ