ಲಂಡನ್(ಜುಲೈ 21): ಚೀನಾ ದೇಶ ಹಾಂಕಾಂಗ್ನಲ್ಲಿ ತನ್ನ ಮುಷ್ಟಿ ಇನ್ನಷ್ಟು ಬಿಗಿಗೊಳಿಸುತ್ತಿರುವಂತೆಯೇ ಬ್ರಿಟನ್ ದೇಶವು ಹಾಂಕಾಂಗ್ ಜೊತೆಗಿನ ಹಸ್ತಾಂತರ ಒಪ್ಪಂದವನ್ನು (Extradition Treaty) ರದ್ದುಗೊಳಿಸಿದೆ. ಹಾಗೆಯೇ, ತನ್ನ ಮಾಜಿ ಅಧೀನ ಪ್ರದೇಶಕ್ಕೆ ಮಾಡಲಾಗುತ್ತಿದ್ದ ಶಸ್ತ್ರಾಸ್ತ್ರ ಪೂರೈಕೆಯನ್ನೂ ಸ್ಥಗಿತಗೊಳಿಸಿದೆ. ಚೀನಾ ಸರ್ಕಾರ ಹಾಂಕಾಂಗ್ನಲ್ಲಿ ಹೊಸ ರಾಷ್ಟ್ರೀಯ ಭದ್ರತಾ ಕಾನೂನನ್ನು ಜಾರಿಗೊಳಿಸಿದ ಪರಿಣಾಮ ಇದು.
ಬ್ರಿಟನ್ ಆಡಳಿತದಲ್ಲಿದ್ದ ಹಾಂಕಾಂಗ್ ಅನ್ನು 1997ರಲ್ಲಿ ಚೀನಾಗೆ ಬಿಟ್ಟುಕೊಡಲಾಗಿತ್ತು. 100 ವರ್ಷಗಳ ಕಾಲ ಹಾಂಕಾಂಗ್ನಲ್ಲಿ ಪ್ರತ್ಯೇಕ ಕಾನೂನು ವ್ಯವಸ್ಥೆ ಮುಂದುವರಿಸಿಕೊಂಡು ಹೋಗುವಂತೆ ಈ ಒಪ್ಪಂದದಲ್ಲಿ ಷರತ್ತು ವಿಧಿಸಲಾಗಿತ್ತು. ಆದರೆ, ಚೀನಾ ಸರ್ಕಾರ ಹಾಂಕಾಂಗ್ನಲ್ಲಿ ತನ್ನ ಹಿಡಿತ ಹೆಚ್ಚಿಸಿಕೊಳ್ಳಲು ನಿರಂತರ ಯತ್ನಿಸುತ್ತಲೇ ಇದೆ. ಹೊಸದಾಗಿ ರೂಪಿಸಲಾದ ರಾಷ್ಟ್ರೀಯ ಭದ್ರತಾ ಕಾನೂನು ಇದರ ಒಂದು ಭಾಗವಾಗಿದೆ. ಇದು ಬ್ರಿಟನ್ ದೇಶದ ಕೆಂಗಣ್ಣಿಗೆ ಕಾರಣವಾಗಿದೆ. ಮೇಲಾಗಿ, ಚೀನಾ ಸರ್ಕಾರ ಊಯ್ಗರ್ ಮುಸ್ಲಿಮರ ಮೇಲೆ ದೌರ್ಜನ್ಯ ಎಸಗುತ್ತಿದೆ ಎಂದು ಅಮೆರಿಕ ಮೊದಲಾದ ದೇಶಗಳು ಚೀನಾವನ್ನು ಟೀಕಿಸುತ್ತಿವೆ. ಬ್ರಿಟನ್ ದೇಶದ ನಿರ್ಧಾರಕ್ಕೆ ಇದೂ ಒಂದು ಕಾರಣವಾಗಿದೆ.
ಹಾಂಕಾಂಗ್ನಲ್ಲಿ ಚೀನಾ ಹೇರಿರುವ ಹೊಸ ಕಾನೂನು ಹಾಗೂ ಉಯ್ಗರ್ ಮುಸ್ಲಿಮರ ಮೇಲೆ ಚೀನಾ ನಡೆಸಿರುವ ದೌರ್ಜನ್ಯ ಹಾಗೂ ಮಾನವ ಹಕ್ಕು ಉಲ್ಲಂಘನೆ ಆತಂಕಕಾರಿ ಎನಿಸಿವೆ. ಹಸ್ತಾಂತರ ಒಪ್ಪಂದವನ್ನು ಹಿಂಪಡೆದದ್ದು ಹಾಗೂ ಶಸ್ತ್ರಾಸ್ತ್ರ ಪೂರೈಕೆ ನಿಲ್ಲಿಸಿದ್ದು ಸರಿಯಾದ ಕ್ರಮ ಎಂದು ಬ್ರಿಟನ್ ದೇಶದ ವಿದೇಶಾಂಗ ಕಾರ್ಯದರ್ಶಿ ಡಾಮಿನಿಚ್ ರಾಬ್ ತಮ್ಮ ದೇಶದ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.
ಇದನ್ನೂ ಓದಿ: ಆಕ್ಸ್ಫರ್ಡ್ ವಿವಿಯಿಂದ ಕೋವಿಡ್ ಲಸಿಕೆ: ಮೊದಲೆರಡು ಹಂತಗಳ ಮಾನವ ಪ್ರಯೋಗ ಯಶಸ್ವಿ?
“ನಾವು ನಮ್ಮ ಹಿತಾಸಕ್ತಿಯನ್ನು ರಕ್ಷಿಸಿಕೊಳ್ಳಬೇಕಿದೆ. ಚೀನಾ ತನ್ನ ಅಂತಾರಾಷ್ಟ್ರೀಯ ಜವಾಬ್ದಾರಿಗಳನ್ನ ಅರಿತುಕೊಳ್ಳುವಂತೆ ಮಾಡಬೇಕಿದೆ” ಎಂದು ರಾಬ್ ಹೇಳಿದ್ಧಾರೆ.
ಏನಿದು ಹಸ್ತಾಂತರ ಒಪ್ಪಂದ?
ಹಾಂಕಾಂಗ್ನಲ್ಲಿರುವ ಒಬ್ಬ ವ್ಯಕ್ತಿ ಬ್ರಿಟನ್ ದೇಶದಲ್ಲಿ ಅಪರಾಧ ಎಸಗಿದಾಗ ಆತನ ವಿಚಾರಣೆಗೆ ಬ್ರಿಟನ್ಗೆ ಹಸ್ತಾಂತರಿಸಬೇಕು. ಹಾಗೆಯೇ, ಬ್ರಿಟನ್ ದೇಶದ ವ್ಯಕ್ತಿಯು ಹಾಂಕಾಂಗ್ನಲ್ಲಿ ಅಪರಾಧ ಎಸಗಿದಾಗ ಅಲ್ಲಿಂದ ಹಾಂಕಾಂಗ್ಗೆ ಹಸ್ತಾಂತರಿಸಬೇಕು ಎಂಬುದು ಈ ಒಪ್ಪಂದ.
ಚೀನಾ ರೂಪಿಸಿರುವ ಹೊಸ ಭದ್ರತಾ ಕಾನೂನು ಪ್ರಕಾರ, ಹಸ್ತಾಂತರ ಒಪ್ಪಂದದಿಂದ ಹಾಂಕಾಂಗ್ಗೆ ಕರೆತರಲಾಗುವ ವ್ಯಕ್ತಿಯನ್ನು ಚೀನಾ ದೇಶದ ಕಾನೂನಿನ ಪ್ರಕಾರ ವಿಚಾರಣೆ ನಡೆಸಲು ಸಾಧ್ಯ ಮಾಡಿಕೊಡುತ್ತದೆ. ಈಗ ಇದನ್ನು ಚೀನಾ ದುರುಪಯೋಪಡಿಸಿಕೊಳ್ಳಬಹುದು ಎಂಬ ಶಂಕೆ ಶುರುವಾಗಿದೆ.
ಬ್ರಿಟನ್ ದೇಶಕ್ಕೆ ಮುನ್ನ ಅಮೆರಿಕ, ಆಸ್ಟ್ರೇಲಿಯಾ ಮತ್ತು ಕೆನಡಾ ದೇಶಗಳೂ ಕೂಡ ಹಾಂಕಾಂಗ್ ಜೊತೆಗಿನ ಹಸ್ತಾಂತರ ಒಪ್ಪಂದವನ್ನು ರದ್ದು ಮಾಡಿಕೊಂಡಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ