57 ವರ್ಷಗಳ ಹಿಂದೆ ಭಾರತದಿಂದ ಕಳವಾಗಿದ್ದ ಬುದ್ಧನ ವಿಗ್ರಹವನ್ನು ಲಂಡನ್​ನಲ್ಲಿ ಪತ್ತೆ ಹಚ್ಚಿದ ಪೊಲೀಸರು

news18
Updated:August 26, 2018, 6:45 PM IST
57 ವರ್ಷಗಳ ಹಿಂದೆ ಭಾರತದಿಂದ ಕಳವಾಗಿದ್ದ ಬುದ್ಧನ ವಿಗ್ರಹವನ್ನು ಲಂಡನ್​ನಲ್ಲಿ ಪತ್ತೆ ಹಚ್ಚಿದ ಪೊಲೀಸರು
news18
Updated: August 26, 2018, 6:45 PM IST
-ನ್ಯೂಸ್ 18 ಕನ್ನಡ

ಬಿಹಾರದ ನಳಂದ ಮ್ಯೂಸಿಯಂನಿಂದ ಕಳವು ಮಾಡಲಾಗಿದ್ದ 12ನೇ ಶತಮಾನದ ಕಂಚಿನ ಬುದ್ದನ ವಿಗ್ರಹವು ಮರಳಿ ಭಾರತಾಂಬೆಯ ಮಡಿಲು ಸೇರಿದೆ. 1961 ರಲ್ಲಿ 14 ವಿಗ್ರಹಗಳನ್ನು ನಳಂದದಲ್ಲಿರುವ ಆರ್ಕಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾ (ಎಎಸ್ಐ) ವಸ್ತು ಸಂಗ್ರಹಾಲಯದಿಂದ ಕಳವಾಗಿತ್ತು. ಹಲವರ ಕೈ ಸೇರಿದ್ದ ಈ ವಿಗ್ರಹವು ಇತ್ತೀಚೆಗೆ ಲಂಡನ್​ ಹರಾಜಿನಲ್ಲಿ ಕಾಣಿಸಿಕೊಂಡಿದೆ. ಈ ವೇಳೆ ವಿಗ್ರಹವನ್ನು ವಶಪಡಿಸಿಕೊಂಡಿರುವ ಲಂಡನ್ ಮೆಟ್ರೋಪಾಲಿಟನ್ ಪೊಲೀಸ್ ಇತ್ತೀಚೆಗೆ ಇದನ್ನು ಭಾರತಕ್ಕೆ ಮರಳಿಸಿದೆ.

ಲಂಡನ್ ಮೆಟ್ರೊಪಾಲಿಟನ್ ಪೊಲೀಸರು ಅತಿ ಪುರಾಣ ವಿಗ್ರಹವನ್ನು  ಗುರುತಿಸಿ, ಶಿಲ್ಪ ಕಲಾ ತಜ್ಞರ ಮೂಲಕ ಅದನ್ನು ಪರೀಕ್ಷೆಗೆ ಒಳಪಡಿಸಿದ್ದರು. ಇದು ಭಾರತದಿಂದ ಕಳವಾಗಿದ್ದ ಕಂಚಿನ ವಿಗ್ರಹ ಎಂಬ ಖಚಿತ ಮಾಹಿತಿ ಪಡೆದು ಹರಾಜಿನಲ್ಲಿ ಕಾಣಿಸಿಕೊಂಡ ವ್ಯಾಪಾರಿಯ ಮನವೊಲಿಸಿ ವಿಗ್ರಹವನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದರು. ಕಳೆದ ಮಾರ್ಚ್​ನಲ್ಲಿ ಅಸೋಸಿಯೇಷನ್ ​​ಫಾರ್ ರಿಸರ್ಚ್ ಇನ್ ಕ್ರೈಮ್ಸ್ ಎಗೇನ್ಸ್ಟ್ ಆರ್ಟ್ (ಎಆರ್​ಸಿಎ) ಸಂಸ್ಥೆಯ ಲಿಂಡಾ ಆಲ್ಬರ್ಟ್​ಸನ್ ಮತ್ತು ಇಂಡಿಯಾ ಪ್ರೈಡ್ ಪ್ರಾಜೆಕ್ಟ್​ನ ವಿಜಯ್ ಕುಮಾರ್ ಈ ಬುದ್ದನ ಮೂರ್ತಿಯನ್ನು ಗುರುತಿಸಿದ್ದರು. ಅಲ್ಲದೆ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿ ಪ್ರಕರಣ ಬೇಧಿಸುವಂತೆ ಕೋರಿಕೊಂಡಿದ್ದರು. ಇದರಿಂದ ಎಚ್ಚೆತ್ತ ಲಂಡನ್ ಪೊಲೀಸ್ ಕದ್ದ ವಸ್ತುವನ್ನು ಮರಳಿ ನೀಡುವಂತೆ ಸೂಚಿಸಿ, ಅದನ್ನು ಇತ್ತೀಚೆಗೆ ಲಂಡನ್​ನಲ್ಲಿರುವ ಭಾರತದ ಹೈ ಕಮೀಷನರ್​ ವೈ.ಕೆ ಸಿನ್ಹಾ ಅವರಿಗೆ ಹಸ್ತಾಂತರಿಸಿದ್ದಾರೆ.

ಈ ಐತಿಹಾಸಿಕ ವಿಗ್ರಹವನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿರುವ ಬಗ್ಗೆ ಸಂತೋಷ ವ್ಯಕ್ತಪಡಿಸಿರುವ ಡಿಟೆಕ್ಟಿವ್ ಪೊಲೀಸ್ ಮುಖ್ಯಸ್ಥ ಶೈಲ ಸ್ಟೀವರ್ಟ್, ಕಾನೂನು ಮತ್ತು ವ್ಯಾಪಾರಿಗಳ ಸಹಕಾರದಿಂದ ಅತ್ಯುತ್ತಮ ಫಲಿತಾಂಶ ಪಡೆಯಬಹುದು ಎಂಬುದಕ್ಕೆ ಇದುವೇ ಉದಾಹರಣೆ ಎಂದು ತಿಳಿಸಿದ್ದಾರೆ.

57 ವರ್ಷಗಳ ಹಿಂದೆ ಭಾರತದಿಂದ ಕಳುವಾಗಿದ್ದ ಈ ವಿಗ್ರಹವನ್ನು ದೀರ್ಘಕಾಲದ ನಂತರ ಪತ್ತೆ ಹಚ್ಚುವಲ್ಲಿ ಸಹಕರಿಸಿದ ಎಲ್ಲರಿಗೂ ಇದೇ ವೇಳೆ ಧನ್ಯವಾದ ತಿಳಿಸಿದ ಭಾರತದ ಹೈ ಕಮೀಷನರ್​ ವೈ.ಕೆ ಸಿನ್ಹಾ, ಇದು ಭಾರತ ಮತ್ತು ಇಂಗ್ಲೆಂಡ್ ನಡುವಿನ ಸಹಕಾರವನ್ನು ತೋರಿಸುತ್ತದೆ ಎಂದು ತಿಳಿಸಿದರು.
First published:August 26, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ