ನವದೆಹಲಿ (ಏ.16): ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್ಬಿ)ಗೆ 13,000 ಕೋಟಿ ರೂ. ವಂಚಿಸಿ ಬ್ರಿಟನ್ಗೆ ಪರಾರಿಯಾಗಿದ್ದ ವಜ್ರದ ಉದ್ಯಮಿ ನೀರವ್ ಮೋದಿಯನ್ನು ಭಾರತಕ್ಕೆ ಹಸ್ತಾಂತರಿಸಲು ಬ್ರಿಟನ್ ಸರ್ಕಾರ ಒಪ್ಪಿದೆ. ಈ ವರ್ಷ ಫೆಬ್ರವರಿ 25ರಂದೇ ಮೋದಿಯನ್ನು ಭಾರತಕ್ಕೆ ಹಸ್ತಾಂತರಿಸಲು ಲಂಡನ್ ಕೋರ್ಟ್ ಆದೇಶ ನೀಡಿತ್ತು. ಇದರ ಅನ್ವಯ ಲಂಡನ್ ಗೃಹ ಸಚಿವಾಲಯ ಸಹ ಮೋದಿ ಹಸ್ತಾಂತರಕ್ಕೆ ಅನುಮತಿ ನೀಡಿದೆ. ಲಂಡನ್ ಸರ್ಕಾರದ ಈ ಕ್ರಮವನ್ನು ಉನ್ನತ ಕೋರ್ಟ್ನಲ್ಲಿ ಪ್ರಶ್ನಿಸಬಹುದಾಗಿದ್ದು, ಆರೋಪಿ ನೀರವ್ ಮೋದಿ ಹಸ್ತಾಂತರ ಕೌತಕ ಘಟವನ್ನು ತಲುಪಿದೆ.
ಫೆ. 25ರಂದೇ ಲಂಡನ್ನ ವೆಸ್ಟ್ಮನ್ ಕೋರ್ಟ್ನಲ್ಲಿ ಆರೋಪಿ ನೀರವ್ ಮೋದಿಗೆ ಹಿನ್ನಡೆಯಾಗಿತ್ತು. ಭಾರತದ ಕೋರ್ಟ್ನಲ್ಲಿ ಆರೋಪಿ ವಿರುದ್ಧ ಗಂಭೀರ ಆರೋಪಗಳಿವೆ. ಜೊತೆಗೆ ನೀರವ್ ಮೋದಿ ಆರೋಪಿಸಿರುವಂತೆ ಭಾರತದ ನ್ಯಾಯಾಲಯದಲ್ಲಿ ನ್ಯಾಯೋಚಿತ ವಿಚಾರಣೆ ನಡೆಯುದಿಲ್ಲ ಎಂಬುವುದಕ್ಕೆ ಯಾವುದೇ ಗುರುತರ ಕಾರಣಗಳಿಲ್ಲ. ಹೀಗಾಗಿ ನೀರವ್ ಮೋದಿಯನ್ನು ಭಾರತಕ್ಕೆ ಹಸ್ತಾಂತರಿಸಬಹುದು ಎಂದು ಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿತ್ತು.
ನೀರವ್ ಮೋದಿ ವಂಚನೆ ಹಾಗೂ ಅಕ್ರಮ ಹಣ ವರ್ಗಾವಣೆ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಹೀಗಾಗಿ ಆರೋಪಿ ಭಾರತೀಯ ನ್ಯಾಯಾಲಯಗಳ ಮುಂದೆ ಉತ್ತರ ನೀಡಬೇಕು ಎಂದು ಬ್ರಿಟನ್ ಜಿಲ್ಲಾ ನ್ಯಾಯಾಲಯದ ನ್ಯಾಯಮೂರ್ತಿ ಸಾಮ್ಯುಯೆಲ್ ಗೂಜಿ ತೀರ್ಪು ನೀಡಿದ್ದರು. ತನ್ನನ್ನು ಭಾರತಕ್ಕೆ ಹಸ್ತಾಂತರಿಸಬಾರದು ಎಂದು ನೀರವ್ ಮೋದಿ ಡಿಸ್ಟಿಕ್ ಕೋರ್ಟ್ನಲ್ಲಿ ಕಳೆದ 2 ವರ್ಷಗಳಿಂದ ಕಾನೂನು ಹೋರಾಟ ನಡೆಸಿದ್ದರು.
ಇದನ್ನು ಓದಿ: ಮಾನವೀಯತೆ ಎಲ್ಲಕ್ಕಿಂತ ಮೇಲು: ರಂಜಾನ್ ಉಪವಾಸ ಮುರಿದು ಸೋಂಕಿತರಿಗೆ ಪ್ಲಾಸ್ಮಾ ನೀಡಿದ ವ್ಯಕ್ತಿ
ಜಿಲ್ಲಾ ಕೋರ್ಟ್ನ ಆದೇಶದ ಆಧಾರವಾಗಿ ಬ್ರಿಟನ್ ಸರ್ಕಾರ ಸಹ ನೀರವ್ ಮೋದಿಯನ್ನು ಭಾರತಕ್ಕೆ ಹಸ್ತಾಂತರಿಸಲು ಅನುಮತಿ ನೀಡಿದೆ. ಇದರಿಂದ ಆರೋಪಿ ನೀರವ್ ಮೋದಿಗೆ ತೀವ್ರ ಹಿನ್ನಡೆಯಾಗಿದ್ದು, ಆದೇಶವನ್ನು ಪ್ರಶ್ನಿಸಿ 14 ದಿನಗಳೊಳಗೆ ಉನ್ನತ ನ್ಯಾಯಾಲಯದ ಮೊರೆ ಹೋಗಲಿದ್ದಾರೆ ಎನ್ನಲಾಗುತ್ತಿದೆ.
ನೀರವ್ ಮೋದಿ ವಿರುದ್ಧ ಸಿಬಿಐ ಹಾಗೂ ಜಾರಿ ನಿರ್ದೇಶನಾಲಯದಲ್ಲಿ ಗಂಭೀರ ಪ್ರಕರಣಗಳು ದಾಖಲಾಗಿವೆ. ಪಿಎನ್ಬಿ ಬಹುಕೋಟಿ ಹಗರಣ, ಅಕ್ರಮ ಹಣ ವರ್ಗಾವಣೆ, ಸಾಕ್ಷ್ಯಗಳನ್ನು ನಾಶ ಮಾಡಿದ ಆರೋಪ ನೀರವ್ ಮೋದಿ ಮೇಲಿದೆ.
(ವರದಿ: ಕಾವ್ಯಾ ವಿ) ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ