ಮುಂಬೈ: ಆಂಗ್ಲ ಸುದ್ದಿ ಮಾಧ್ಯಮವಾದ ರಿಪಬ್ಲಿಕ್ ಟಿವಿ ಹಣ ನೀಡಿ ಟಿಆರ್ಪಿ ತಿರುಚಿದ ಪ್ರಕರಣ ಪ್ರಸ್ತುತ ದೇಶದಲ್ಲಿ ಅದರಲ್ಲೂ ಮಹಾರಾಷ್ಟ್ರದಲ್ಲಿ ಭಾರೀ ಸದ್ದು ಮಾಡುತ್ತಿದೆ. ಟಿಆರ್ಪಿ ಹಗರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಈಗಾಗಲೇ ಅನೇಕರನ್ನು ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಈ ನಡುವೆ ರಿಪಬ್ಲಿಕ್ ಟಿವಿ ಸಂಪಾದಕ 46 ವರ್ಷದ ಅರ್ನಾಬ್ ಗೋಸ್ವಾಮಿ ಸಹ ಬಂಧನದ ಭೀತಿ ಎದುರಿಸುತ್ತಿದ್ದಾರೆ. ಈ ನಡುವೆ ಕೇಂದ್ರ ಸರ್ಕಾರ ಟಿಆರ್ಪಿ ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸಿತ್ತು. ಈಗಾಗಲೇ ತನಿಖೆಯನ್ನು ಆರಂಭಿಸಿರುವ ಸಿಬಿಐ ಪೊಲೀಸರು ಪ್ರಕರಣದ ಸಂಬಂಧ ಎಫ್ಐಆರ್ ಸಹ ದಾಖಲಿಸಿದ್ದಾರೆ. ಆದರೆ, ಎಫ್ಐಆರ್ ದಾಖಲಾದ ಮರುದಿನವೇ ಹೊಸ ಆದೇಶ ಹೊರಡಿಸಿರುವ ಮಹಾರಾಷ್ಟ್ರ ಸರ್ಕಾರ, “ರಾಜ್ಯದಲ್ಲಿ ಟಿಆರ್ಪಿ ಹಗರಣದ ಪ್ರಕರಣಗಳ ತನಿಖೆ ನಡೆಸಲು ಮಹಾರಾಷ್ಟ್ರ ಸರ್ಕಾರ ಕೇಂದ್ರ ತನಿಖಾ ದಳಕ್ಕೆ (ಸಿಬಿಐ)ನೀಡಿದ್ದ ಒಪ್ಪಿಗೆಯನ್ನು ಹಿಂತೆಗೆದುಕೊಂಡಿದೆ. ರಾಜ್ಯ ಸರ್ಕಾರದ ಆದೇಶದಂತೆ, ಸಿಬಿಐ ಈಗ ಕೇಸ್-ಟು-ಕೇಸ್ ಆಧಾರದ ಮೇಲೆ ತನಿಖೆ ನಡೆಸಲು ಅನುಮತಿ ಪಡೆಯಲು ಬದ್ಧವಾಗಿರುತ್ತದೆ” ಎಂದಿರುವುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.
ಮಹಾರಾಷ್ಟ್ರ ಸರ್ಕಾರದ ಉಪ ಕಾರ್ಯದರ್ಶಿ ಕೈಲಾಸ್ ಗಾಯಕ್ವಾಡ್ ಹೊರಡಿಸಿದ ಆದೇಶದಲ್ಲಿ, "ದೆಹಲಿ ವಿಶೇಷ ಪೊಲೀಸ್ ಸ್ಥಾಪನಾ ಕಾಯ್ದೆ 1956 ರ ಸೆಕ್ಷನ್ 6 ರ ಪ್ರಕಾರ ಅಧಿಕಾರವನ್ನು ಚಲಾಯಿಸುವಾಗ ಮಹಾರಾಷ್ಟ್ರ ಸರ್ಕಾರವು ದೆಹಲಿ ವಿಶೇಷ ಪೊಲೀಸ್ ಪಡೆಯ (ಸಿಬಿಐ) ಸದಸ್ಯರಿಗೆ ನೀಡಿದ್ದ ಒಪ್ಪಿಗೆಯನ್ನು ಹಿಂಪಡೆಯುತ್ತದೆ” ಎಂದು ಆದೇಶ ಹೊರಡಿಸಲಾಗಿದೆ.
ಆದರೆ, ದೆಹಲಿ ವಿಶೇಷ ಪೊಲೀಸ್ ಸ್ಥಾಪನಾ ಕಾಯ್ದೆಯಿಂದ ಪ್ರಕರಣಗಳ ತನಿಖೆ ನಡೆಸಲು ಸಿಬಿಐ ತನ್ನ ಅಧಿಕಾರವನ್ನು ಉಳಿಸಿಕೊಳ್ಳಲಿದೆ ಎಂದೂ ಹೇಳಲಾಗುತ್ತಿದೆ. ಮೂಲಗಳ ಪ್ರಕಾರ, ಫೆಬ್ರವರಿ 22, 1989 ರ ಕಾನೂನಿನ ಪ್ರಕಾರ ಸಿಬಿಐ ಯಾವುದೇ ರಾಜ್ಯದಲ್ಲಿ ತನ್ನ ಅಧಿಕಾರವನ್ನು ಚಲಾಯಿಸಲು ಆಯಾ ರಾಜ್ಯಗಳ ಒಪ್ಪಿಗೆಯೂ ಅಗತ್ಯ. ಹೀಗಾಗಿ ಈ ಮುನ್ನ ಮಹಾರಾಷ್ಟ್ರ ಸರ್ಕಾರ ನೀಡಿದ ಸಾಮಾನ್ಯ ಒಪ್ಪಿಗೆಯಿಂದ ಸಿಬಿಐ ಈ ಪ್ರಕರಣದ ತನಿಖೆಗೆ ಪೂರ್ಣ ಪ್ರಮಾಣದಲ್ಲಿ ಇಳಿಯುವುದು ಸಾಧ್ಯವಿಲ್ಲ. ಸಿಬಿಐ ತನಿಖೆಗೆ ನಡೆಸಲು ಮಹಾರಾಷ್ಟ್ರ ಸರ್ಕಾರದಿಂದ ಅಧಿಕೃತವಾಗಿ ಕಾನೂನಾತ್ಮಕ ಒಪ್ಪಿಗೆಯನ್ನೂ ಪಡೆಯಬೇಕಾಗುತ್ತದೆ ಎಂದು ಹೇಳಲಾಗುತ್ತಿದೆ.
ಟಿಆರ್ಪಿ ಹಗರಣ ಮಹಾರಾಷ್ಟ್ರದಲ್ಲಿ ಸದ್ದು ಮಾಡಿತ್ತು ಪರಿಣಾಮ ಅಲ್ಲಿನ ಅಪರಾಧ ವಿಭಾಗದ ಪೊಲೀಸರು ಈ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿದ್ದರು. ಹೀಗಾಗಿ ಮಹಾರಾಷ್ಟ್ರ ಸರ್ಕಾರ ಸಿಬಿಐ ಸಹಾಯವನ್ನು ಕೇಳಿರಲಿಲ್ಲ. ಆದರೆ, ಇದೇ ಪ್ರಕರಣವನ್ನು ಲಖನೌದ ಹಜರತ್ಗಂಜ್ ಪೊಲೀಸ್ ಠಾಣೆಯಲ್ಲೂ ದಾಖಲಿಸಲಾಗಿತ್ತು. ಹೀಗಾಗಿ ಉತ್ತರಪ್ರದೇಶ ಸರ್ಕಾರ ಈ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸುವಂತೆ ಕೇಂದ್ರ ಸರ್ಕಾರವನ್ನು ಕೇಳಿಕೊಂಡ ನಂತರ ಕೇಂದ್ರ ಸರ್ಕಾರ ಟಿಆರ್ಪಿ ಹಗರಣದ ತನಿಖೆ ಜವಾಬ್ದಾರಿಯನ್ನು ಸಿಬಿಐಗೆ ನೀಡಲು ಮುಂದಾಗಿತ್ತು.
ಆದರೆ, ಉತ್ತರಪ್ರದೇಶ ಸರ್ಕಾರಕ್ಕೆ ಇದರಲ್ಲಿ ಒಮ್ಮತ ಇಲ್ಲ. ಈ ಕುರಿತು ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ಮುಖ್ ಗುರುವಾರ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎನ್ನಲಾಗುತ್ತಿದೆ. ಇನ್ನೂ ರಾಜಸ್ಥಾನ ಮತ್ತು ಪಶ್ಚಿಮ ಬಂಗಾಳ ಸರ್ಕಾರಗಳು ಸಹ ಟಿಆರ್ಪಿ ಹಗರಣ ತನಿಖೆಯನ್ನು ಸಿಬಿಐಗೆ ನೀಡಿದ್ದ ಒಪ್ಪಿಗೆಯನ್ನು ಹಿಂದಕ್ಕೆ ಪಡೆದಿವೆ ಎಂದು ವರದಿಯಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ