ಅರಬ್ ರಾಷ್ಟ್ರದಿಂದ ಪ್ರವಾಹಪೀಡಿತ ಕೇರಳಕ್ಕೆ 700 ಕೋಟಿ ರೂ. ನೆರವು


Updated:August 21, 2018, 3:03 PM IST
ಅರಬ್ ರಾಷ್ಟ್ರದಿಂದ ಪ್ರವಾಹಪೀಡಿತ ಕೇರಳಕ್ಕೆ 700 ಕೋಟಿ ರೂ. ನೆರವು

Updated: August 21, 2018, 3:03 PM IST
- ನ್ಯೂಸ್18 ಕನ್ನಡ

ನವದೆಹಲಿ(ಆ. 21): ಭೀಕರ ಪ್ರವಾಹಪೀಡಿತ ಕೇರಳ ರಾಜ್ಯಕ್ಕೆ ನೆರವುಗಳು ಹರಿದುಬರುತ್ತಿವೆ. ಪ್ರಕೃತಿ ವಿಕೋಪ ನಿರ್ವಹಣಾ ಪಡೆಗಳ ಸಿಬ್ಬಂದಿ, ಸ್ಥಳೀಯರು, ವಿವಿಧ ಸಂಘ ಸಂಸ್ಥೆಗಳ ಕಾರ್ಯಕರ್ತರು ಹೀಗೆ ಸಮರೋಪಾದಿಯಲ್ಲಿ ಕೇರಳದಲ್ಲಿ ಸಂತ್ರಸ್ತರಿಗೆ ನೆರವಿನ ಮಹಾಪೂರವೇ ಹರಿದುಬರುತ್ತಿದೆ. ಕೇಂದ್ರ ಸರಕಾರದಿಂದ 500 ಕೋಟಿ ರೂ ತುರ್ತುನಿಧಿ ಸೇರಿದಂತೆ ವಿವಿಧ ರಾಜ್ಯಗಳು, ವ್ಯಕ್ತಿಗಳಿಂದ ಕೋಟ್ಯಂತರ ಹಣ ಸಂಗ್ರಹವಾಗುತ್ತಿದೆ. ಕೇರಳಕ್ಕೆ 700 ಕೋಟಿ ರೂ ಹಣದ ನೆರವು ನೀಡಲುಸಂಯುಕ್ತ ಅರಬ್ ಸಂಸ್ಥಾನ ಮುಂದಾಗಿದೆ. ಕೇರಳ ಮುಖ್ಯಮಂತ್ರಿ ಪಿಣರಯಿ ವಿಜಯನ್ ಅವರು ಅರಬ್ ನಾಡಿನ ರಾಷ್ಟ್ರಕ್ಕೆ ಧನ್ಯವಾದ ಹೇಳಿದ್ದಾರೆ. ಯುಎಇಗಷ್ಟೇ ಅಲ್ಲ, ಕೇರಳಕ್ಕೆ ಸಹಾಯಹಸ್ತ ಚಾಚಿರುವ ಪ್ರತಿಯೊಬ್ಬರಿಗೂ ಸಿಎಂ ಕೃತಜ್ಞತೆ ತಿಳಿಸಿದ್ದಾರೆ.

“ಕೇರಳಕ್ಕೆ ಸಹಾಯ ಮಾಡಲು ಹಲವರು ಮುಂದೆ ಬಂದಿದ್ದಾರೆ. ದೇಶದ ವಿವಿಧ ರಾಜ್ಯಗಳ ಜೊತೆಗೆ ವಿದೇಶಗಳಿಂದಲೂ ನೆರವಿನ ಹಸ್ತ ಚಾಚಲಾಗುತ್ತಿದೆ. ಕೇರಳಕ್ಕೆ ಪರಿಹಾರ ಪ್ಯಾಕೇಜ್ ನೀಡಲು ಯುಎಇ ಮುಂದಾಗಿದೆ. ಕೊಲ್ಲಿ ರಾಷ್ಟ್ರಗಳು ಎಲ್ಲಾ ವಿಧದಲ್ಲೂ ನಮಗೆ ನೆರವು ನೀಡುತ್ತಿವೆ,” ಎಂದು ಪಿಣರಯಿ ವಿಜಯನ್ ಹೇಳಿದ್ದಾರೆ.

ಕೇರಳಕ್ಕೆ 100 ಮಿಲಿಯನ್ ಡಾಲರ್ (ಸುಮಾರು 700 ಕೋಟಿ ರೂ.) ಹಣ ನೀಡಲು ಯುಎಇ ನಿರ್ಧರಿಸಿದೆ. ಅಬುಧಾಬಿಯ ರಾಜ ಈಗಾಗಲೇ ಪ್ರಧಾನಿ ಮೋದಿ ಅವರೊಂದಿಗೆ ಈ ಕುರಿತು ಮಾತುಕತೆ ನಡೆಸಿರುವ ವಿಚಾರ ತಿಳಿದುಬಂದಿದೆ.

ಗಲ್ಫ್ ರಾಷ್ಟ್ರಗಳಿಗೂ ಕೇರಳಿಗರಿಗೂ ಬಹಳ ಗಟ್ಟಿ ಸಂಬಂಧವಿದೆ. ಕೊಲ್ಲಿ ರಾಷ್ಟ್ರಗಳಲ್ಲಿ ಕೆಲಸ ಮಾಡುತ್ತಿರುವ ಭಾರತೀಯರಲ್ಲಿ ಬಹುತೇಕರು ಕೇರಳಿಗರೇ ಆಗಿದ್ದಾರೆ. ಅಲ್ಲಿನ ಅನೇಕ ಕ್ಷೇತ್ರಗಳಲ್ಲಿ ಕೇರಳದವರ ಮುದ್ರೆ ಇದೆ. ಅರಬ್ ಬೆಳವಣಿಗೆಯಲ್ಲಿ ಮಲಯಾಳಿಗಳ ಪಾತ್ರ ಹಾಸುಹೊಕ್ಕಾಗಿದೆ. ಹೀಗಾಗಿ, ಕೇರಳದ ಪ್ರವಾಹ ಸಂಕಷ್ಟಕ್ಕೆ ಗಲ್ಫ್ ರಾಷ್ಟ್ರಗಳೂ ಸಂವೇದನಾಶೀಲತೆ ತೋರುತ್ತಿವೆ.

ಇನ್ನು, ಪ್ರಕೃತಿ ವಿಕೋಪದಿಂದ ಕೇರಳಕ್ಕೆ ಅಂದಾಜು 25 ಸಾವಿರ ಕೋಟಿ ರೂ. ಹಾನಿಯಾಗಿದೆ. ಆಸ್ತಿಪಾಸ್ತಿ ನಾಶವಷ್ಟೇ ಅಲ್ಲದೆ, ವಿವಿಧ ಸ್ತರಗಳಲ್ಲಿ ಸಾಕಷ್ಟು ಘಾಸಿಗೊಂಡಿರುವ ಕೇರಳದಲ್ಲಿ ಈಗ ಸಮರೋಪಾದಿಯಲ್ಲಿ ಪರಿಹಾರ ಕಾರ್ಯಗಳು ನಡೆಯುತ್ತಿವೆ. ಸಾವಿರಾರು ಮಂದಿಯ ಪ್ರಾಣ ಕಾಪಾಡಲಾಗಿದೆ. ಪಕ್ಷಭೇದವಿಲ್ಲದೆ ಜನರು ಸಹಾಯಕ್ಕೆ ಕೈಜೋಡಿಸಿದ್ದಾರೆ. ಕೇರಳ ಸಿಎಂ ಪರವಾಗಿ ಕಾಂಗ್ರೆಸ್ ಮುಖಂಡ ಶಶಿ ತರೂರ್ ಅವರು ವಿಶ್ವಸಂಸ್ಥೆಯ ವಿವಿಧ ಸಂಸ್ಥೆಗಳಲ್ಲಿ ನೆರವಿಗಾಗಿ ಎಡತಾಕಿದ್ದಾರೆ. ಇಂದು ಸಂಜೆ ಕೇರಳ ಸಿಎಂ ಅವರು ಸರ್ವಪಕ್ಷ ಸಭೆ ಕರೆದಿದ್ದಾರೆ.
First published:August 21, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ