ಹಟಾಯ್(ಟರ್ಕಿ): ಟರ್ಕಿಯಲ್ಲಿ ಸಂಭವಿಸಿರುವ ಭೂಕಂಪಕ್ಕೆ (Turkey earthquake) ಈಗಾಗಲೇ 28,000ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ, ಅದಕ್ಕಿಂತಲೂ ಹೆಚ್ಚು ಮಂದಿ ಗಾಯಾಳುಗಳಾಗಿದ್ದಾರೆ. ದೇಶದಲ್ಲಿ ಸುಮಾರು 6000 ಬೃಹತ್ ಕಟ್ಟಡಗಳು ಕುಸಿದುಬಿದ್ದಿವೆ. ಭೀಕರ ದುರಂತ ನಡೆದು ವಾರವಾಗುತ್ತಾ ಬಂದಿದ್ದರೂ ರಕ್ಷಣಾ ಕಾರ್ಯ (Rescue Operation) ಮುಂದುವರಿಯುತ್ತಿದೆ. ನೊಂದಿರುವ ರಾಷ್ಟ್ರಕ್ಕೆ ಭಾರತ (India) ಸೇರಿ ಹಲವು ರಾಷ್ಟ್ರಗಳು ಸಹಾಯ ಹಸ್ತ ಚಾಚಿವೆ. ಆದರೆ ಪಕೃತಿ ವಿಕೋಪ (Natural disaster) ಮತ್ತು ಹತಾಶೆಯ ಮಧ್ಯೆ ಕೆಲವರು ಬದುಕುಳಿಯುತ್ತಿರುವ ಹಲವು ಪವಾಡಗಳು ವಾರದಿಂದ ಹೊರಹೊಮ್ಮುತ್ತಲೇ ಇವೆ. ಈಗಾಗಲೆ ಕಟ್ಟಡಕುಸಿತದಡಿಯಲ್ಲಿ ಜನಿಸಿದ ಮಗು ತಾಯಿಯನ್ನು ಕಳೆದುಕೊಂಡರೂ ತಾನೂ ಜೀವ ಉಳಿಸಿಕೊಂಡಿತ್ತು. ಮತ್ತೊಂದು ಘಟನೆಯಲ್ಲಿ 2 ತಿಂಗಳ ಮಗು 48 ಗಂಟೆಗಳ ನಂತರೂ ಜೀವಂತವಾಗಿ ಅವಶೇಷಗಳ ಅಡಿಯಲ್ಲಿ ಸಿಕ್ಕಿತ್ತು. ಇದೀಗ ಬರೋಬ್ಬರಿ 128 ಗಂಟೆಗಳ ನಂತರ ಜೀವಂತವಾಗಿ ಪತ್ತೆಯಾಗಿ ಅಚ್ಚರಿ ಮೂಡಿಸಿದೆ.
ನೋವಿನಲ್ಲೂ ಸಂಭ್ರಮ
ಶನಿವಾರ ಟರ್ಕಿಯ ಹಟಾಯ್ಯಲ್ಲಿ ಅವಶೇಷಗಳಡಿಯಿಂದ ಈ ಎರಡು ತಿಂಗಳ ಮಗುವನ್ನು ರಕ್ಷಿಸಲಾಗಿದೆ. ಭೂಕಂಪ ಸಂಭವಿಸಿದ ಸುಮಾರು 128 ಗಂಟೆಗಳ ನಂತರ ಮಗು ಜೀವಂತವಾಗಿ ಪತ್ತೆಯಾಗಿದೆ ನಿಜಕ್ಕೂ ದೊಡ್ಡ ಪವಾಡ ಎನ್ನಬಹುದು. ಈ ಸಂದರ್ಭದಲ್ಲಿ ನೆರೆದಿದ್ದ ಜನ ಚಪ್ಪಾಳೆ ತಟ್ಟುವ ಮೂಲಕ ನೋವಿನಲ್ಲೂ ಸಂಭ್ರಮಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗುತ್ತಿದೆ. ಹಮ್ಲಾ ಭಾಗದಲ್ಲಿ 7 ತಿಂಗಳ ಮಗು, ಗಾಜಿಯಾಟೆಪ್ನಲ್ಲಿ 13 ವರ್ಷದ ಹೆಣ್ಣು ಮಗುವನ್ನು ಕೂಡ ರಕ್ಷಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
20 ಸಾವಿರ ಕಾರ್ಯಕರ್ತರಿಂದ ರಕ್ಷಣಾ ಕಾರ್ಯ
ಹೆಪ್ಪುಗಟ್ಟುವಂತಹ ಚಳಿಯ ಹೊರತಾಗಿಯೂ 20 ಸಾವಿರಕ್ಕೂ ಹೆಚ್ಚಿನ ರಕ್ಷಣಾ ಕಾರ್ಯಕರ್ತರು ಇನ್ನೂ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಕಳೆದ ಐದರು ದಿನಗಳಿಂದ ಎರಡುವ ವರ್ಷದ ಬಾಲಕಿ, ಆರು ತಿಂಗಳ ಗರ್ಭಿಣಿ, 70 ವರ್ಷದ ವೃದ್ಧೆಯನ್ನು ಶನಿವಾರ ರಕ್ಷಣೆ ಮಾಡಲಾಗಿದೆ ಎಂದು ಟರ್ಕಿ ಮಾಧ್ಯಮಗಳು ವರದಿ ಮಾಡಿವೆ.
ಇದನ್ನೂ ಓದಿ: Turkey Earthquake: ನಡುಗಿದ ಭೂಮಿ, ಟರ್ಕಿ-ಸಿರಿಯಾ ಅವಶೇಷಗಳಡಿ 21,000 ಮಂದಿ ಸಾವು!
2.6 ಕೋಟಿ ಜನರಿಗೆ ಹಾನಿ
ಟರ್ಕಿ ಭೂಕಂಪದಿಂದ ಸುಮಾರು 2.6 ಕೋಟಿ ಜನರು ಸಂತ್ರಸ್ತವಾಗಿದ್ದಾರೆ. ಸುಮಾರು 5 ಲಕ್ಷಕ್ಕೂ ಹೆಚ್ಚು ಜನರು ತಮ್ಮ ಮನೆ ಮಠ ಕಳೆದುಕೊಂಡಿದ್ದಾರೆ. ಟೆರ್ಕಿ ಹಾಗೂ ಸಿರಿಯಾದಲ್ಲಿ ಸುಮಾರು 8 ಲಕ್ಷಕ್ಕೂ ಹೆಚ್ಚು ಮಂದಿಗೆ ಆಹಾರ ಒದಗಿಸಬೇಕಿದೆ ಎಂದು ವಿಶ್ವಸಂಸ್ಥೆ ಮಾಹಿತಿ ನೀಡಿದೆ.
ಜನರನ್ನು ಬಾಧಿಸುತ್ತಿರುವ ಚಳಿ
ಭೂಕಂಪ ಒಂದು ಕಡೆ ಟರ್ಕಿ ಜನರನ್ನು ಬಾದಿಸುತ್ತಿದ್ದರೆ, ಮತ್ತೊಂದು ವಿಪರೀತಿ ಚಳಿ ಅಲ್ಲಿನ ಜನರನ್ನು ಮತ್ತಷ್ಟು ನೋವಿಗೆ ತಳ್ಳಿದೆ. ಭೂಕಂಪದಿಂದ ಬದುಕುಳಿದವರು ಚಳಿಯಿಂದ ಪ್ರಾಣ ಕಳೆದುಕೊಳ್ಳುವ ಭೀತಿಗೆ ಒಳಗಾಗಿದ್ದಾರೆ. ಚಳಿಯಿಂದ ರಕ್ಷಣೆ ಮಾಡಿಕೊಳ್ಳಲು ಅಲ್ಲಿನ ಜನರು ತಮ್ಮ ತಮ್ಮ ಕಾರುಗಳಲ್ಲಿ ರಾತ್ರಿ ಕಳೆಯುತ್ತಿದ್ದಾರೆ. ಅಲ್ಲಲ್ಲಿ ಬೆಂಕಿ ಕಾಯುವಿಕೆ ಸಾಮಾನ್ಯವಾಗಿದೆ.
1939ರ ನಂತರ ಸಂಭವಿಸಿದ ಬೀಕರ ಭೂಕಂಪ
ಟರ್ಕಿಯಲ್ಲಿ ವಾರದ ಹಿಂದೆ ಸಂಭವಿಸಿದ ಅಪಘಾತ ದೇಶದಲ್ಲಿ ಕಳೆದ 8 ದಶಗಳಲ್ಲಿ ಸಂಭವಿಸಿದ ಭೀಕಂರ ಭೂಕಂಪವಾಗಿದೆ. 1939ರಲ್ಲಿ ಭೂಕಂಪಕ್ಕೆ ಸುಮಾರು 30 ಸಾವಿರ ಮಂದಿ ಸಾವನ್ನಪ್ಪಿದ್ದರು. ಇದೀಗ 28 ಸಾವಿರ ಮಂದಿ ದುರಂತದಲ್ಲಿ ಉಸಿರು ಚೆಲ್ಲಿದ್ದಾರೆ. ಇನ್ನೂ ರಕ್ಷಣಾ ಕಾರ್ಯ ನಡೆಯುತ್ತಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಸಿರಿಯಾದಲ್ಲಿ ಸುಮಾರು 3500 ಮಂದಿ ಸಾವನ್ನಪ್ಪಿದ್ದಾರೆ.
ಶತಮಾನದ 7ನೇ ದೊಡ್ಡ ಭೂಕಂಪ
ಕಳೆದ ಸೋಮವಾರದ ಟರ್ಕಿಯಲ್ಲಿ 7.8 ತೀವ್ರತೆಯ ಭೂಕಂಪ ಸಂಭವಿಸಿದೆ. ಈ ದುರಂತ ಈ ಶತಮಾನದ ವಿಶ್ವದ ಏಳನೇ ಮಾರಣಾಂತಿಕ ನೈಸರ್ಗಿಕ ವಿಕೋಪವಾಗಿದೆ. 2003 ರಲ್ಲಿ ನೆರೆಯ ಇರಾನ್‌ನಲ್ಲಿ ಭೂಕಂಪ ಸಂಭವಿಸಿ ಸುಮಾರು 31,000 ಸಾವನ್ನಪ್ಪಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ