ಗುವಾಹಟಿ: ಅರುಣಾಚಲ ಪ್ರದೇಶದ (Arunachal Pradesh) ಪಶ್ಚಿಮ ಕಮೆಂಗ್ ಜಿಲ್ಲೆಯ ಮಂಡಲ ಬಳಿ ಭಾರತೀಯ ಸೇನೆಯ (Indian Army) ಚೀತಾ ಹೆಲಿಕಾಪ್ಟರ್ (Cheetah Helicopter)ಗುರುವಾರ ಪತನಗೊಂಡಿತ್ತು. ಇದೀಗ ಹೆಲಿಕಾಪ್ಟರ್‌ನ ಪೈಲಟ್ ( Pilots Killed) ಮತ್ತು ಸಹ ಪೈಲಟ್ ಸಾವಿಗೀಡಾಗಿದ್ದಾರೆ ಎಂದು ತಿಳಿದುಬಂದಿದೆ. ಇಬ್ಬರು ಪೈಲೆಟ್ಗಳಿದ್ದ ಹೆಲಿಕಾಪ್ಟರ್ ಇಂದು ಬೆಳಿಗ್ಗೆ 9:15ರ ವೇಳೆಗೆ ಎಟಿಸಿ ಜೊತೆಗಿನ ಸಂಪರ್ಕ ಕಡಿತಗೊಂಡಿದೆ ಎಂದು ರಕ್ಷಣಾ ಇಲಾಖೆ ತಿಳಿಸಿತ್ತು. ಇದೀಗ ಲೆಫ್ಟಿನೆಂಟ್ ಕರ್ನಲ್ ವಿವಿಬಿ ರೆಡ್ಡಿ ಮತ್ತು ಮೇಜರ್ ಜಯಂತ್ ಎ ಮೃತದೇಹ ಪತ್ತೆಯಾಗಿದೆ, ಮುಂದಿನ ಪ್ರಕ್ರಿಯೆಗಳಿಗಾಗಿ ಮಂಡಲದಿಂದ ಸುಮಾರು 30 ಕಿಮೀ ದೂರದಲ್ಲಿರುವ ದಿರಾಂಗ್‌ಗೆ ಮೃತದೇಹಗಳನ್ನು ತರಲಾಗುವುದು ಎಂದು ಸೇನೆ ಮಾಹಿತಿ ನೀಡಿದೆ.
ಹೆಲಿಕಾಪ್ಟರ್ ಪತನದ ಸುದ್ದಿ ಬಳಿಕ ಭಾರತೀಯ ಸೇನೆಯ ಶೋಧ ತಂಡಗಳಾದ ಸಶಸ್ತ್ರ ಸೀಮಾ ಬಾಲ್ ಮತ್ತು ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲೀಸ್ (ITBP) ಪೈಲಟ್ಗಳಿಗಾಗಿ ಶೋಧ ಕಾರ್ಯ ನಡೆಸಿದ್ದವು. ಮಧ್ಯಾಹ್ನದ 12:30ರ ಸುಮಾರಿಗೆ ಮಂಡಲದ ಬಂಗ್ಲಾಜಾಪ್ ಗ್ರಾಮದ ಬಳಿ ವಿಮಾನದ ಅವಶೇಷಗಳು ಪತ್ತೆಯಾಗಿದ್ದವು.
ಅರುಣಾಚಲ ಪ್ರದೇಶದ ಬೊಮ್ಡಿಲಾ ಪಟ್ಟಣದ ಪಶ್ಚಿಮದಲ್ಲಿರುವ ಮಂಡಲ ಪ್ರದೇಶದ ಬಳಿ ಆರ್ಮಿ ಏವಿಯೇಷನ್‌ನ ಚೀತಾ ಹೆಲಿಕಾಪ್ಟರ್ ಕಾರ್ಯಾಚರಣೆ ನಡೆಸುತ್ತಿತ್ತು. ಜಿಲ್ಲೆಯ ಸಂಗೆ ಗ್ರಾಮದಿಂದ ಬೆಳಗ್ಗೆ 9 ಗಂಟೆಗೆ ಹೆಲಿಕಾಪ್ಟರ್ ಟೇಕಾಫ್ ಆಗಿದ್ದು, ಅಸ್ಸಾಂನ ಸೋನಿತ್‌ಪುರ ಜಿಲ್ಲೆಯ ಮಿಸ್ಸಮರಿ ಕಡೆಗೆ ತೆರಳುತ್ತಿತ್ತು. ಬೆಳಗ್ಗೆ 9.15ಕ್ಕೆ ಏರ್ ಟ್ರಾಫಿಕ್ ಕಂಟ್ರೋಲ್‌ನೊಂದಿಗೆ (ATC) ಸಂಪರ್ಕ ಕಳೆದುಕೊಂಡ ಹೆಲಿಕಾಪ್ಟರ್ ಕೆಲವೇ ಕ್ಷಣಗಳಲ್ಲಿ ಅಪಘಾತ ಸಂಭವಿಸಿತ್ತು.
ಅಪಘಾತಕ್ಕೀಡಾದ ಹೆಲಿಕಾಪ್ಟರ್ ಉರಿಯುತ್ತಿರುವುದನ್ನು ಗ್ರಾಮಸ್ಥರು ಕಂಡು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ ಎಂದು ವಿಶೇಷ ತನಿಖಾ ಸೆಲ್ (SIC) ಪೊಲೀಸ್ ವರಿಷ್ಠಾಧಿಕಾರಿ ರೋಹಿತ್ ರಾಜ್‌ಬೀರ್ ಸಿಂಗ್ ತಿಳಿಸಿದ್ದಾರೆ.
ಪೈಲಟ್ಗಳ ಸಾವನ್ನು ಖಚಿತಪಡಿಸಿದ 8 ಪೊಲೀಸ್
'' ಹೆಲಿಕಾಪ್ಟರ್‌ನಲ್ಲಿ ಇಬ್ಬರು ಪೈಲಟ್‌ಗಳು ಪ್ರಯಾಣಿಸುತ್ತಿದ್ದರು. ಭಾರತೀಯ ಸೇನೆ, ಎಸ್‌ಎಸ್‌ಬಿ ಹಾಗೂ ಪೊಲೀಸ್ ತಂಡಗಳು ಶೋಧ ಕಾರ್ಯಾಚರಣೆ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ. ಹೆಲಿಕಾಪ್ಟರ್ ಪತನಗೊಂಡಿರುವ ಸ್ಥಳದಲ್ಲಿ ಟೆಲಿಫೋನ್ ನೆಟ್‌ವರ್ಕ್ ಲಭ್ಯವಿರದ ಕಾರಣ, ಅಲ್ಲಿನ ಫೋಟೋಗಳನ್ನು ರವಾನಿಸಲು ಸಾಧ್ಯವಾಗಿಲ್ಲ '' ಎಂದು ಅರುಣಾಚಲ ಪೊಲೀಸರು ಪ್ರಾಥಮಿಕ ಮಾಹಿತಿ ನೀಡಿದ್ದರು, ಇದೀಗ ಪೈಲಟ್ಗಳಿ ಹುತಾತ್ಮರಾಗಿರುವ ವಿಷಯವನ್ನು ಖಚಿತಪಡಿಸಿದ್ದಾರೆ.
ಹಿಂದಿನ ಸೇನಾ ಹೆಲಿಕಾಪ್ಟರ್ ದುರಂತಗಳು
2021ರ ಡಿಸೆಂಬರ್ 8 ರಂದು ತಮಿಳುನಾಡಿನ ನೀಲಿಗಿರಿಯ ಕೂನೂರಿನಲ್ಲಿ ನಡೆದ ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಸೇನಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್, ಅವರ ಪತ್ಮಿ ಹಾಗೂ ಹಲವು ಸೇನಾ ಸಿಬ್ಬಂದಿ ಪ್ರಾಣ ಬಿಟ್ಟಿದ್ದರು. ಜೂನ್ 3, 2019 ರಂದು ಭಾರತೀಯ ಸೇನೆಯ AN-32 ವಿಮಾನವು ಅಸ್ಸಾಂನ ಜೋರ್ಹತ್‌ನಿಂದ ಟೇಕಾಫ್ ಆದ ನಂತರ ಪತನಗೊಂಡಿತ್ತು. ಘಟನೆಯಲ್ಲಿ ಹದಿಮೂರು 13 ಭಾರತೀಯ ವಾಯುಪಡೆ ಸಿಬ್ಬಂದಿ ಸಾವನ್ನಪ್ಪಿದ್ದರು.
ಹೆಲಿಕಾಪ್ಟರ್ ದುರಂತದಲ್ಲಿ 7 ಉಗ್ರರ ಸಾವು
ಉತ್ತರ ಇರಾಕ್‌ನಲ್ಲಿ ಹೆಲಿಕಾಪ್ಟರ್ ಒಂದು ಪತನಗೊಂಡಿದ್ದು, ಕುರ್ದಿಶ್ ಬಂಡಾಯ ಗುಂಪಿಗೆ ಸೇರಿದ ಉಗ್ರರು ಸೇರಿದಂತೆ ಹಲವರು ಮೃತಪಟ್ಟಿದ್ದಾರೆ ಎಂದು ಇರಾಕಿ ಕುರ್ದಿಷ್ ನೇತೃತ್ವದ ಭಯೋತ್ಪಾದನಾ ನಿಗ್ರಹ ಸೇವೆ ಹೇಳಿಕೆ ಬಿಡುಗಡೆ ಮಾಡಿದೆ. AS350 ಯುರೋಕಾಪ್ಟರ್ ಬುಧವಾರ ರಾತ್ರಿ ಇರಾಕ್‌ನ ಅರೆ ಸ್ವಾಯತ್ತ ಕುರ್ದಿಶ್ ಪ್ರದೇಶದ ದೋಹುಕ್ ಪ್ರಾಂತ್ಯದ ಚಮಂಕೆ ಜಿಲ್ಲೆಯಲ್ಲಿ ಪತನಗೊಂಡಿದೆ ಎಂದು ಭಯೋತ್ಪಾದನಾ ನಿಗ್ರಹ ಸೇವೆಯು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ