ಹೈದರಾಬಾದ್: ಒಂದೇ ತಾಯಿಯ ಹೊಟ್ಟೆಯಲ್ಲಿ ಹುಟ್ಟಿದ ಆ ಇಬ್ಬರು ಅಣ್ಣ-ತಮ್ಮ(Brothers) ಬರೋಬ್ಬರಿ 65 ವರ್ಷಗಳವರೆಗೂ ಒಟ್ಟಿಗೆ ವಾಸಿಸುತ್ತಿದ್ದರು. ಇಬ್ಬರೂ ಸೇರಿ ಒಟ್ಟಿಗೆ ಕಟ್ಟಡ ನಿರ್ಮಾಣ ಮಾಡುವ ಕೆಲಸ ಮಾಡುತ್ತಿದ್ದರು. ಮಕ್ಕಳನ್ನೆಲ್ಲಾ ಬೆಳೆಸಿ ಮದುವೆ ಮಾಡಿಕೊಟ್ಟು, ಮೊಮ್ಮಕ್ಕಳು ಮನೆಯಲ್ಲಿದ್ದರೂ, ತಾವೂ ಯಾರಿಗೂ ಹೊರೆಯಾಗಬಾರದೆಂದು ದುಡಿದು ತಿನ್ನುತ್ತಿದ್ದರು. ಆದರೆ ಅನಿರೀಕ್ಷಿತ ಘಟನೆಯಲ್ಲಿ ಇಬ್ಬರು ಒಂದೇ ದಿನ ಸಾವನ್ನಪ್ಪಿದ್ದಾರೆ. ಈ ದಾರುಣ ಘಟನೆ ತೆಲಂಗಾಣದ (Telangana) ನಿಜಾಮಾಬಾದ್ (Nizambad) ಜಿಲ್ಲೆಯಲ್ಲಿ ನಡೆದಿದ್ದು 6 ದಶಲಗಳ ಕಾಲ ಒಟ್ಟಿಗೆ ಬದುಕಿದ್ದ ಹಿರಿಯ ಸಹೋದರರು ಒಂದೇ ದಿನ, ಒಂದೇ ಸಮಯದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಮೋರ್ತಾಡ್ ತಾಲೂಕಿನಲ್ಲಿ ಈ ದುರಂತ ಸಂಭವಿಸಿದೆ. ಯಾವತ್ತೂ ಜಗಳವಾಡದೇ ಅನ್ಯೋನ್ಯವಾಗಿದ್ದ ಈ ಸಹೋದರರು ಪ್ರಾಣ ಕಳೆದುಕೊಂಡಿದ್ದರಿಂದ ಗ್ರಾಮದ ಪ್ರತಿಯೊಬ್ಬರು ಕಣ್ಣೀರಿಟ್ಟಿದ್ದಾರೆ.
ಮೇಸ್ತ್ರಿ ಕೆಲಸ ಮಾಡುತ್ತಿದ್ದ ಸಹೋದರರು
ನಿಜಾಮಾಬಾದ್ ಜಿಲ್ಲೆಯ ಮೋರ್ತಾಡ್ ತಾಲೂಕು ಕೇಂದ್ರಕ್ಕೆ ಸೇರಿದ 67 ವರ್ಷದ ಗೋನುಗೊಪ್ಪುಲ ರಾಮುಲು ಮತ್ತು 65 ವರ್ಷದ ಗೋನುಗೊಪ್ಪುಲ ಲಿಂಗಣ್ಣ ಎಂಬ ಸಹೋದರರು ಮೇಸ್ತ್ರಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ನೆರೆಯ ಮಹಿಳೆ ಲತಾ ಎಂಬುವವರ ಮನೆ ಶಿಥಿಲಾವಸ್ಥೆ ತಲುಪಿದ್ದರಿಂದ ರಾಮುಲು ಹಾಗೂ ಲಿಂಗಣ್ಣ ಎಂಬುವರಿಗೆ ಮನೆಯ ಗೋಡೆಗಳ ದುರಸ್ತಿ ಕಾರ್ಯವನ್ನು ವಹಿಸಲಾಗಿತ್ತು. ಈ ಇಬ್ಬರು ಸಹೋದರರು ಎರಡು ದಿನಗಳ ಹಿಂದೆ ಕಾಮಗಾರಿ ಆರಂಭಿಸಿ ಗೋಡೆಗಳಿಗೆ ಪ್ಲಾಸ್ಟರ್ ಹಾಕಿದ್ದರು.
ಗೋಡೆ ಕುಸಿದು ಬಿದ್ದು ಇಬ್ಬರೂ ಸಾವು
ದುರಸ್ತಿ ಮಾಡಿದ್ದ ಗೋಡೆ ಮಣ್ಣಿನದ್ದಾಗಿತ್ತು. ಮೊದಲೇ ಶಿಥಿಲಾವಸ್ಥೆಯಲ್ಲಿದ್ದ ಗೋಡೆಯ ಮತ್ತೊಂದು ಬದಿಯಲ್ಲಿ ಪ್ಲಾಸ್ಟರಿಂಗ್ ಮಾಡಿದ್ದರಿಂದ ಮತ್ತಷ್ಟು ಶೀತ ಹೆಚ್ಚಾಗಿ ಇದ್ದಕ್ಕಿದ್ದಂತೆ ಗೋಡೆ ಕುಸಿದಿದೆ. ಗೋಡೆ ಕುಸಿದು ಬಿದ್ದಾಗ ರಾಮ ಮತ್ತು ಲಿಂಗಣ್ಣ ಪಕ್ಕದಲ್ಲೇ ನಿಂತಿದ್ದರು. ಲಿಂಗಣ್ಣ ಅವರ ಮೇಲೆ ಗೋಡೆಯ ಸಂಪೂರ್ಣ ಮಣ್ಣು ಬಿದ್ದಿದ್ದರಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಾಯಗೊಂಡಿದ್ದ ರಾಮುಲು ಅವರನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಕಣ್ಣೀರಿಟ್ಟ ಗ್ರಾಮ
ಈ ವಿಷಯ ತಿಳಿದು ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಸ್ಥಳಕ್ಕೆ ಆಗಮಿಸಿದರು. ಈ ಆದರ್ಶ ಸಹೋದರರು ಒಂದೇ ಪ್ರಾಣ ಕಳೆದುಕೊಂಡದ್ದನ್ನು ಕಂಡು ಕಣ್ಣೀರಿಟ್ಟರು. ಲಿಂಗಣ್ಣ ಅವರಿಗೆ ಒಬ್ಬ ಮಗ ಮತ್ತು ಮಗಳಿದ್ದರೆ, ರಾಮುಲುಗೆ ಇಬ್ಬರು ಗಂಡು ಮತ್ತು ಹೆಣ್ಣು ಮಗಳಿದ್ದಾರೆ. ಇವರೆಲ್ಲ ಮದುವೆಯಾಗಿ ಎಲ್ಲರೂ ತಮ್ಮ ತಮ್ಮ ಮಕ್ಕಳೊಂದಿಗೆ ಇದ್ದರೆಂದು ತಿಳಿದುಬಂದಿದೆ.
ಆಘಾತಕಾರಿ ಘಟನೆ
ರಾಮುಲು ಮತ್ತು ಲಿಂಗಣ್ಣ 65 ವರ್ಷ ದಾಟಿದರೂ ಮೇಸ್ತ್ರಿ ಕೆಲಸ ಮಾಡುತ್ತಿಸದ್ದರು. ವೃದ್ಧಾಪ್ಯದಲ್ಲೂ ಯಾರನ್ನೂ ಅವಲಂಬಿಸದೆ ಒಟ್ಟಿಗೇ ಜೀವನ ನಡೆಸುತ್ತಿರುವ ಅಣ್ಣ-ತಮ್ಮಂದಿರ ಬದುಕು ಒಂದೇ ದಿನ ಅಂತ್ಯವಾಗಿದ್ದು ಬೇಸರದ ಸಂಗತಿ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ.
ಒಂದೇ ದಿನ ನಾದ ನಿಲ್ಲಿಸಿದ ಸಹೋದರರು
ಉಡುಪಿಯಲ್ಲೂ ವಾರದ ಹಿಂದೆಯಷ್ಟೇ ಅಣ್ಣ ಹಾಗೂ ತಮ್ಮ ಒಂದೇ ದಿನ ಸಾವನ್ನಪ್ಪಿದ ಘಟನೆ ನಡೆದಿತ್ತು. ಬ್ರಹ್ಮಾವರ ತಾಲೂಕಿನ ದೇವಾಡಿಗರಬೆಟ್ಟು ಎಂಬಲ್ಲಿ ದೇವಾಡಿಗರಬೆಟ್ಟು ರಘುನಾಥ ದೇವಾಡಿಗ ಹಾಗೂ ಸುಮತಿ ದೇವಾಡಿಗ ಅವರ ಪುತ್ರರಾದ ರಾಘವೇಂದ್ರ (40) ಗಣೇಶ್ ದೇವಾಡಿಗ (51) ಎಂಬುವವರು ನಿಧನರಾಗಿದ್ದರು. ಮೊದಲು ರಾಘವೇಂದ್ರ ಅನಾರೋಗ್ಯದಿಂದ ಮೃತಪಟ್ಟಿದ್ದರು. ತಮ್ಮನ ಸುದ್ದಿ ತಿಳಿದು ಆಗಮಿಸಿದ್ದ ಗಣೇಶ್ ಕೂಡ ಮಧ್ಯಾಹ್ನ ಮೃಪಟ್ಟಿದ್ದರು.
ರಾಮುಲು-ಲಿಂಗಣ್ಣರಂತೆ ಇವರೂ ಕೂಡ ಒಂದೇ ಮನೆಯಲ್ಲಿ ವಾಸಿಸುತ್ತಿದ್ದರು. ವಿಶೇಷವೆಂದರೆ ಇಬ್ಬರೂ ವಾದ್ಯ ಸಂಗೀತದಲ್ಲಿ ಪ್ರಸಿದ್ಧಿ ಪಡೆದವರಾಗಿದ್ದರು. ಒಂದೇ ದಿನ ಇಬ್ಬರೂ ಸಾವನ್ನಪ್ಪಿದ್ದರಿಂದ ಇಡೀ ಊರು ಕಂಬನಿ ಮಿಡಿದಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ