Deepavali Tragedy- ಸ್ಕೂಟರ್​ನಲ್ಲಿದ್ದ ಪಟಾಕಿ ಸ್ಫೋಟ: ಅಪ್ಪ ಮಗ ಸಾವು- ಮೂವರಿಗೆ ಗಾಯ

Crackers Blast kills Father and Son in Tamil Nadu- ಸ್ಕೂಟರ್​ನಲ್ಲಿ ಸಾಗಿಸಲಾಗುತ್ತಿದ್ದ ಪಟಾಕಿ ಸ್ಫೋಟಗೊಂಡು ಅಪ್ಪ ಮತ್ತು ಮಗ ಇಬ್ಬರೂ ಸಜೀವ ದಹನಗೊಂಡು ಸಾವನ್ನಪ್ಪಿದ ಘಟನೆ ತಮಿಳುನಾಡಿನ ಪುದುಚೇರಿ ಸಮೀಪ ಸಂಭವಿಸಿದೆ.

ಪಟಾಕಿ ಸ್ಫೋಟ

ಪಟಾಕಿ ಸ್ಫೋಟ

 • News18
 • Last Updated :
 • Share this:
  ಚೆನ್ನೈ, ನ. 05: ದೀಪಾವಳಿ ಹಬ್ಬದ ಗುಂಗಿನಲ್ಲಿ ಸಾಗುತ್ತಿದ್ದ ಕುಟುಂಬಕ್ಕೆ ಜವರಾಯ ವಕ್ಕರಿಸಿದ. ಚೀಲದಲ್ಲಿ ಪಟಾಕಿ ತುಂಬಿಕೊಂಡು ಸ್ಕೂಟರ್​ನಲ್ಲಿ ಹೋಗುತ್ತಿದ್ದಾಗ ಪಟಾಕಿ ಸ್ಫೋಟಗೊಂಡು (Cracker Blast on Scooter) ಅಪ್ಪ ಮತ್ತು ಮಗ ಇಬ್ಬರೂ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ತಮಿಳುನಾಡಿನಲ್ಲಿ ಸಂಭವಿಸಿದೆ. ಪುದುಚೇರಿ ಸಮೀಪದ ಅರಿಯನ್​ಕುಪ್ಪಂ ಪ್ರದೇಶದ 37 ವರ್ಷದ ಕಲೈಅರಸನ್ (Kalaiarasan) ಹಾಗೂ ಅವರ 7 ವರ್ಷದ ಮಗ ಪ್ರದೀಶ್ (Pradeesh) ಮೃತಪಟ್ಟ ದುರ್ದೈವಿಗಳು.

  ಅಪ್ಪ ಮಗ ಇಬ್ಬರೂ ದೊಡ್ಡ ಪ್ರಮಾಣದ ಪಟಾಕಿಯಿದ್ದ ಚೀಲವನ್ನ ಸ್ಕೂಟರ್​ನಲ್ಲಿ ಇರಿಸಿಕೊಂಡು ಹೋಗುತ್ತಿದ್ದಾಗ ಕೊಟ್ಟಕುಪ್ಪಂ ಬಳಿ ಈ ದುರಂತ ಸಂಭವಿಸಿದೆ. ಪಟಾಕಿ ಸಿಡಿದು ದೊಡ್ಡ ಸ್ಫೋಟ ಸಂಭವಿಸಿ ಹಲವು ಮೀಟರ್​ಗಳ ದೂರದವರೆಗೆ ಬೆಂಕಿ ಸಿಡಿದಿರುವ ದೃಶ್ಯ ಸಿಸಿಟಿವಿ ಫೂಟೇಜ್​ನಲ್ಲೂ ರೆಕಾರ್ಡ್ ಆಗಿದೆ. ಆದರೆ, ಪಟಾಕಿ ಹೊತ್ತಿಕೊಳ್ಳಲು ಏನು ಕಾರಣ ಎಂದು ಗೊತ್ತಾಗಿಲ್ಲ.

  ಸ್ಕೂಟರ್​ನಲ್ಲಿ ಹೋಗುತ್ತಿದ್ದ ಅಪ್ಪ ಮತ್ತು ಮಗ ಇಬ್ಬರೂ ಸ್ಥಳದಲ್ಲೇ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸ್ಫೋಟ ಸಂಭವಿಸಿದ ಸ್ಥಳದ ಸಮೀಪ ಹೋಗುತ್ತಿದ್ದ ಇತರ ವಾಹನ ಸವಾರರ ಪೈಕಿ ಮೂವರಿಗೆ ಗಾಯವಾಗಿದೆ. ಗಣೇಶ್ (45), ಸಯದ್ ಅಹಮದ್ (60) ಮತ್ತು ವಿಜಿ ಆನಂದ್ (36) ಗಾಯಗೊಂಡವರು. ಗಾಯಾಳುಗಳನ್ನ ಪುದುಚೇರಿಯ ಜಿಪ್​ಮೆರ್ (JIPMER) ಹಾಸ್ಪಿಟಲ್​ಗೆ ದಾಖಲಿಸಲಾಗಿದೆ.

  ಸ್ವಂತಕ್ಕಿಷ್ಟು ಮಾರಾಟಕ್ಕಿಷ್ಟು ಎಂದು ಎರಡು ಬ್ಯಾಗ್ ಹೊತ್ತೊಯ್ಯುತ್ತಿದ್ದ ದುರ್ದೈವಿಗಳು:

  ಕಲೈ ಅರಸನ್ ಅವರ ಕುಟುಂಬದ ಇತರ ಸದಸ್ಯರು ನೀಡಿದ ಮಾಹಿತಿ ಪ್ರಕಾರ, ಅವರಿಬ್ಬರು ಪಟಾಕಿ ಖರೀದಿಸಿ ಊರಿಗೆ ವಾಪಸ್ಸಾಗುತ್ತಿದ್ದರು. ಪಟಾಕಿಯ ಸ್ವಲ್ಪ ಭಾಗವನ್ನು ಸ್ವಂತ ಬಳಕೆಗೂ, ಉಳಿದವನ್ನ ಸ್ಥಳೀಯವಾಗಿ ಮಾರಾಟ ಮಾಡುವ ಉದ್ದೇಶದಿಂದ ದೊಡ್ಡ ಪ್ರಮಾಣದಲ್ಲಿ ಪಟಾಕಿ ಖರೀದಿಸಿ ಹೊತ್ತೊಯ್ಯುತ್ತಿದ್ದರೆನ್ನಲಾಗಿದೆ.

  ಇದನ್ನೂ ಓದಿ: Deepavali 2021 ; ಕೋವಿಡ್, ವಾಯು ಮಾಲಿನ್ಯದ ಭೀತಿಯಲ್ಲಿಯೇ ದೀಪಾವಳಿ ಆಚರಣೆ; ದೆಹಲಿಯಲ್ಲಿ ಅಪಾಯದ ಮಟ್ಟ ತಲುಪಿದ ಗಾಳಿ ಗುಣಮಟ್ಟ

  ಪೊಲೀಸರು ಯಾಕೆ ತಡೆಯಲಿಲ್ಲ?

  ದ್ವಿಚಕ್ರ ವಾಹನದಲ್ಲಿ ಇಂತಿಷ್ಟು ಪ್ರಮಾಣದಲ್ಲಿ ಮಾತ್ರ ಪಟಾಕಿ ಸಾಗಿಸಬಹುದು ಎಂಬ ನಿಯಮ ಇದೆ. ಆದರೂ ಕೂಡ ಅವರು ದೊಡ್ಡ ಪ್ರಮಾಣದಲ್ಲಿ ಪಟಾಕಿ ತೆಗೆದುಕೊಂಡು ಹೋಗುತ್ತಿದ್ದರೂ ಪೊಲೀಸರು ಯಾಕೆ ತಡೆಯಲಿಲ್ಲ ಎಂದು ಸ್ಥಳೀಯರು ಪ್ರಶ್ನಿಸಿದ್ದಾರೆ.

  ವಿಲ್ಲುಪುರಂನ ಡಿಐಜಿ ಎಂ ಪಾಂಡಿಯನ್ ಮತ್ತು ಎಸ್​ಪಿ ಎನ್ ಶ್ರೀನಾಥ ಅವರು ಸ್ಥಳಕ್ಕೆ ಧಾವಿಸಿ ಆರಂಭಿಕ ತನಿಖೆ ನಡೆಸಿದ್ದಾರೆ. ಪಾರ್ಸಲ್​ಗಾಗಿ ಪಟಾಕಿ ಇರಿಸಲಾಗಿದ್ದ ಗನ್ನಿ ಬ್ಯಾಗ್​ಗಳನ್ನ ಪೊಲೀಸರು ವಶಪಡಿಸಿಕೊಂಡಿರುವುದು ತಿಳಿದುಬಂದಿದೆ.

  ಒತ್ತಡದಿಂದ ಬಿಸಿಯಾಗಿ ಸ್ಫೋಟವಾಗಿರಬಹುದು:

  “ಕಲೈನರಸನ್ ಅವರು ಪುದುಚೇರಿಯಲ್ಲಿ ಎರಡು ಬ್ಯಾಗ್​ಗಳಷ್ಟು ನಾಡ ಪಟಾಕಿಗಳನ್ನ ನವೆಂಬರ್ 3ರಂದು ಖರೀದಿ ಮಾಡಿ ತಮ್ಮ ಮಾವನ ಮನೆಯಲ್ಲಿ ಇರಿಸಿದ್ದರು. ನ. 4ರಂದು ಒಂದು ಬ್ಯಾಗನ್ನು ತೆಗೆದುಕೊಂಡು ಪುದುಚೇರಿಯತ್ತ ಹೋಗುತ್ತಿದ್ದಾಗ ದುರಂತ ಸಂಭವಿಸಿದೆ. ಬ್ಯಾಗ್​ನೊಳಗೆ ಪಟಾಕಿ ಒತ್ತೊತ್ತಾಗಿ ಇದ್ದ ಕಾರಣಕ್ಕೆ ಬಿಸಿಗೊಂಡು ಸ್ಫೋಟ ಆಗಿರಬಹುದು. ಪೊಲೀಸರು ಕೂನಿಮೇಡು ಬಳಿ ಒಂದು ಬ್ಯಾಗ್ ಪಟಾಕಿಯನ್ನ ವಶಕ್ಕೆ ಪಡೆದುಕೊಂಡು ಐಪಿಸಿ ಮತ್ತು ಸ್ಫೋಟಕ ಕಾಯ್ದೆಯ ವಿವಿಧ ಸೆಕ್ಷನ್ ಅಡಿ ಪ್ರಕರಣ ದಾಖಲಿಸಿದ್ದಾರೆ” ಎಂದು ಎಸ್​ಪಿ ಎನ್ ಶ್ರೀನಾಥ ಅವರು ಹೇಳಿದರೆಂದು ಇಂಡಿಯನ್ ಎಕ್ಸ್​ಪ್ರೆಸ್​ನ ವರದಿ ಹೇಳಿದೆ.

  ಇದನ್ನೂ ಓದಿ: Kashmir: ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದನೆ ಕೊನೆಯ ಹಂತದಲ್ಲಿದೆ ಎಂದ ಸಚಿವ ಜಿತೇಂದ್ರ ಸಿಂಗ್​!

  ಇದೇ ವೇಳೆ, ನಿನ್ನೆ ದೀಪಾವಳಿ ದಿನದಂದು ಚೆನ್ನೈ ನಗರ ಪೊಲೀಸರು ವಿವಿಧ ಸ್ಥಳಗಳಲ್ಲಿ ಪಟಾಕಿ ನಿಯಮಗಳನ್ನ ಮೀರಿದ ಕಾರಣಕ್ಕೆ 760 ಮಂದಿಯ ಮೇಲೆ ಪ್ರಕರಣ ದಾಖಲಿಸಿದ್ಧಾರೆ. ಇವರಲ್ಲಿ ಬಹುತೇಕರು ನಿಗದಿತ ಅವಧಿಯ ಹೊರಗೆ ಪಟಾಕಿ ಹೊಡೆದ ಆರೋಪ ಇದೆ. 239 ಪಟಾಕಿ ಅಂಗಡಿ ಮಾಲೀಕರ ಮೇಲೂ ಕೇಸ್​ಗಳನ್ನ ದಾಖಲಿಸಲಾಗಿದೆ.

  ಪಟಾಕಿ ಹೊಡೆಯುವ ಸಮಯ ಯಾವುದು?

  ತಮಿಳುನಾಡಿನಲ್ಲಿ ಬೆಳಗ್ಗೆ 6ರಿಂದ 7 ಗಂಟೆ ಹಾಗು ಸಂಜೆ 7ರಿಂದ 8 ಗಂಟೆಯವರೆಗೆ ಮಾತ್ರ ಪಟಾಕಿ ಹೊಡೆಯಲು ಮದ್ರಾಸ್ ಹೈಕೋರ್ಟ್ ಅನುಮತಿ ನೀಡಿದೆ.

  ನಿನ್ನೆ ಚೆನ್ನೈ ನಗರದಲ್ಲಿ ಪಟಾಕಿ ಆರ್ಭಟ ಬಹಳ ಜೋರಾಗಿತ್ತು. ಪಟಾಕಿ ಸ್ಫೋಟದಿಂದ ಹೊಗೆ ದಟ್ಟವಾಗಿ ವಾತಾವರಣ ಸೇರಿ ನಗರದ ಬಹುಭಾಗ ಹಗಲಿನ ಹೊತ್ತೇ ಕತ್ತಲಲ್ಲಿ ಮುಳುಗಿಹೋಗಿದ್ದು ಕಂಡು ಬಂತು.
  Published by:Vijayasarthy SN
  First published: