HOME » NEWS » National-international » TWO DAUGHTERS IN A UP GOVERNMENT HOSPITAL GAVE MOUTH TO MOUTH RESUSCITATION TO SAVE MOTHER SESR

ಉಸಿರು ಕೊಟ್ಟವಳ ಬದುಕಿಸಲು ಉಸಿರು ನೀಡಿದ ಮಕ್ಕಳು; ಆದರೂ ಉಳಿಯಲಿಲ್ಲ ತಾಯಿ

ಕಣ್ಣ ಮುಂದೆಯೇ ತಾಯಿ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದರೂ ಚಿಕಿತ್ಸೆ ಸಿಗದ ಹಿನ್ನಲೆ ದಿಕ್ಕು ತೋಚದ ಆಕೆಯ ಇಬ್ಬರು ಹೆಣ್ಣು ಮಕ್ಕಳು  ಬಾಯಿಂದ ಬಾಯಿಗೆ ಉಸಿರು ನೀಡಲು ಮುಂದಾಗಿದ್ದಾರೆ.

news18-kannada
Updated:May 3, 2021, 3:03 PM IST
ಉಸಿರು ಕೊಟ್ಟವಳ ಬದುಕಿಸಲು ಉಸಿರು ನೀಡಿದ ಮಕ್ಕಳು; ಆದರೂ ಉಳಿಯಲಿಲ್ಲ ತಾಯಿ
ತಾಯಿ ಬಾಯಿಗೆ ಉಸಿರು ನೀಡುತ್ತಿರುವ ಮಗಳು
  • Share this:
ಲಕ್ನೋ (ಮೇ. 3):  ಕೋವಿಡ್​ನಿಂದಾಗಿ ಉಸಿರಾಟ ಸಮಸ್ಯೆ ಅನುಭವಿಸಿ ನರಳುತ್ತಿದ್ದ ತಾಯಿಯನ್ನು ಉಸಿರಿಗೆ ಉಸಿರು ನೀಡಿ ಬದುಕಿಸಿಕೊಳ್ಳಲು ಹೋರಾಟ ನಡೆಸಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಕಣ್ಣ ಮುಂದೆಯೇ ತಾಯಿ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದರೂ ಚಿಕಿತ್ಸೆ ಸಿಗದ ಹಿನ್ನಲೆ ದಿಕ್ಕು ತೋಚದ ಆಕೆಯ ಇಬ್ಬರು ಹೆಣ್ಣು ಮಕ್ಕಳು  ಬಾಯಿಂದ ಬಾಯಿಗೆ ಉಸಿರು ನೀಡುವ ಕಾರ್ಯಕ್ಕೆ ಮುಂದಾಗಿದ್ದಾರೆ. ಉತ್ತರ ಪ್ರದೇಶದ ಬಹ್ರೇಚ್​ನ ಸರ್ಕಾರಿ ಆಸ್ಪತ್ರೆಯಲ್ಲಿ ಈ ಹೃದಯ ವಿದ್ರಾವಕ ಘಟನೆ ನಡೆದಿದೆ. ಆಕ್ಸಿಜನ್​ ಸಿಗದೇ ತಾಯಿ ಒದ್ದಾಡುತ್ತಿರುವದನ್ನು ಕಂಡ ಅಕ್ಕ-ತಂಗಿಯರಿಬ್ಬರು ಒಬ್ಬರಾದ ನಂತರ ಒಬ್ಬರು ತಾಯಿ ಬಾಯಿಗೆ ಬಾಯಿಟ್ಟು ಉಸಿರು ನೀಡುವ ಪ್ರಯತ್ನ ನಡೆಸಿದರು. ಆದರೆ, ದುರಾದೃಷ್ಟವಶಾತ್​ ಆಕೆ ಬದುಕುಳಿಯಲಿಲ್ಲ.

ಶನಿವಾರ ಈ ಘಟನೆ ನಡೆದಿದ್ದು, ಈ ಮನಕಲಕುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಆಸ್ಪತ್ರೆಯಲ್ಲಿ ಸಿಬ್ಬಂದಿ ಹಾಗೂ ಆಕ್ಸಿಜನ್​ ಕೊರತೆಯಿಂದ ಜನರು ಯಾವ ರೀತಿ ತೊಂದರೆ ಅನುಭವಿಸುತ್ತಿದ್ದಾರೆ ಎಂಬ ಕುರಿತು ಟೀಕೆ ವ್ಯಕ್ತವಾಗಿದೆ.

ಘಟನೆ ಕುರಿತು ಪ್ರತಿಕ್ರಿಯಿಸಿರುವ ಇಲ್ಲಿನ ತುರ್ತು ವೈದ್ಯಕೀಯ ಅಧಿಕಾರಿ ಅಹ್ತಿಸಮ್​ ಆಲಿ, ಉಸಿರಾಟದ ಸಮಸ್ಯೆಯಿಂದಾಗಿ ಮಹಿಳೆ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ತಕ್ಷಣಕ್ಕೆ ಚಿಕಿತ್ಸೆ ನೀಡಲಾಯಿತಾದರೂ ಆಕೆ ಉಳಿಯಲಿಲ್ಲ ಎಂದಿದ್ದಾರೆ.

ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದಂತೆ ಜಿಲ್ಲಾ ಮ್ಯಾಜಿಸ್ಟೇಟರ್​ ಶಂಭು ಕುಮಾರ್​ ಮತ್ತು ವೈದ್ಯಕೀಯ ಕಾಲೇಜಿನ ಹಿರಿಯ ವೈದ್ಯರು ಮಹಿಳಾ ರೋಗಿಯ ಪರಿಸ್ಥಿತಿ ಅವಲೋಕಿಸಿದರು.

ಮಹಿಳೆ ಚಿಂತಾಜನಕ ಸ್ಥಿತಿಯಲ್ಲಿದ್ದಾಗಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ತಕ್ಷಣಕ್ಕೆ ವೈದ್ಯಕೀಯ ಸಿಬ್ಬಂದಿ ಚಿಕಿತ್ಸೆ ನೀಡಿದ್ದಾರೆ. ಆದರೂ ಆಕೆ ಬದುಕುಳಿಯಲಿಲ್ಲ. ಈ ವೇಳೆ ಮಹಿಳೆ ಸ್ಥಿತಿ ಮತ್ತಷ್ಟು ಚಿಂತಾಜನಕವಾಗಿದ್ದು, ಈ ವೇಳೆ ಭಾವನೆಗೆ ಒಳಗಾದ ಆಕೆಯ ಇಬ್ಬರು ಹೆಣ್ಣು ಮಕ್ಕಳು ಅವಳಿಗೆ ತಮ್ಮ ಉಸಿರು ನೀಡುವ ಮೂಲಕ ಬದುಕಿಸುವ ಯತ್ನ ನಡೆಸಿದ್ದಾರೆ. ಆಸ್ಪತ್ರೆಯಲ್ಲಿ ಯಾವುದೇ ಆಕ್ಸಿಜನ್​​ ಕೊರತೆ ಇಲ್ಲ ಎಂದು ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಎ. ಕೆ ಸಾಹ್ನಿ ಸ್ಪಷ್ಟ ಪಡಿಸಿದ್ದಾರೆ.

ಇದನ್ನು ಓದಿ: ರಾಜಕೀಯ ಕಮಾಲ್​ ಮಾಡುವಲ್ಲಿ ಸೋತ ಕಮಲ್​​; ಮಕ್ಕಳ ನಿಧಿ ಮಯ್ಯಂ ಪಕ್ಷಕ್ಕೆ ಒಂದೂ ಸ್ಥಾನವಿಲ್ಲ

ಉತ್ತರ ಪ್ರದೇಶ ರಾಜ್ಯದಲ್ಲಿ ಕೊರೋನಾ ವೈರಸ್​ ಸೋಂಕು ತಡೆಗೆ ಇನ್ನಷ್ಟು ಕ್ರಮಕ್ಕೆ ಮುಂದಾಗಿರುವ ಯೋಗಿ ಸರ್ಕಾರ ಇಂದಿನಿಂದ ಮತ್ತೆ ಮೂರು ದಿನಗಳ ಕಾಲ ಲಾಕ್​ ಡೌನ್​ ಅನ್ನು ವಿಸ್ತರಿಸಿದೆ. ಮೇ 6 ರವರೆಗೂ ಲಾಕ್​ಡೌನ್​ ಜಾರಿಯಲ್ಲಿರಲಿದ್ದು, ಅಗತ್ಯ ಸೇವೆಗಳು ಸಿಗಲಿದೆ ಎಂದು ಸರ್ಕಾರ ತಿಳಿಸಿದೆ.ದೇಶದಲ್ಲಿ ಆಕ್ಸಿಜನ್​ ಬಿಕ್ಕಟ್ಟು ಎದುರಾಗಿದ್ದು, ಸೋಂಕಿತರು ಆಮ್ಲಜನಕ ವಿಲ್ಲದೇ ಸಾವನ್ನಪ್ಪುತ್ತಿದ್ದಾರೆ. ಉತ್ತರ ಪ್ರದೇಶ, ದೆಹಲಿ , ಕರ್ನಾಟಕದಲ್ಲಿ ಆಮ್ಲಜನಕ ಬಿಕ್ಕಟ್ಟು ಎದುರಾಗಿದೆ. ಈ ನಡುವೆ ಉತ್ತರ ಪ್ರದೇಶ ಸಿಎಂ ಯೋಗಿ ಮಾತ್ರ ಇಲ್ಲಿ ಯಾವುದೇ ಆಕ್ಸಿಜನ್​ ಕೊರತೆ ಸಮಸ್ಯೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ, ಈ ರೀತಿಯ ಘಟನೆಗಳು ಮಾತ್ರ ಮರುಕಳಿಸುತ್ತಲೇ ಇವೆ.

ಕರ್ನಾಟಕದಲ್ಲಿ ಕೂಡ ಇಂದು ಆಕ್ಸಿಜನ್​ ಸಿಗದೇ ಚಾಮರಾಜನಗರದಲ್ಲಿ 24 ಜನರು ಸಾವನ್ನಪ್ಪಿದ್ದು, ರಾಜ್ಯದಲ್ಲಿ ಕೂಡ ಆಕ್ಸಿಜನ್​ ಸಮಸ್ಯೆ ಉಂಟಾಗಿದೆ ಎಂಬುದನ್ನು ತೋರಿಸಿದೆ. ಘಟನೆ ಬೆನ್ನಲ್ಲೇ ಸರ್ಕಾರ ಜಿಲ್ಲಾಸ್ಪತ್ರೆಗೆ 6000 ಲೀ ಲಿಕ್ವಿಡ್​ ಆಕ್ಸಿಜನ್​ ಪೂರೈಕೆ ಮಾಡಿದೆ.
Published by: Seema R
First published: May 3, 2021, 3:03 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories