ನವದೆಹಲಿ: ಟ್ವಿಟರ್ನಲ್ಲಿ ಗಣ್ಯತೆಯ ಸಂಕೇತವನ್ನು ತೋರ್ಪಡಿಸುತ್ತಿದ್ದ ಬ್ಲೂ ಟಿಕ್ (Twitter Blue Tick) ಮಾರ್ಕ್ ಕೆಲವು ಗಣ್ಯರ ಖಾತೆಗಳಿಂದ ಎರಡು ದಿನಗಳ ಹಿಂದೆ ದಿಢೀರ್ ಕಣ್ಮರೆಯಾಗಿತ್ತು. ಹಲವಾರು ಸೆಲೆಬ್ರಿಟಿಗಳಿಗೆ (Celebrities)ಎಲಾನ್ ಮಸ್ಕ್ (Elon Musk) ಒಡೆತನದ ಟ್ವಿಟರ್ ಶಾಕ್ ನೀಡಿತ್ತು. ಆದರೆ ಇಂದು ಮತ್ತೆ ಬ್ಲೂಟಿಕ್ ಮಾರ್ಕ್ ಅನ್ನು ವಾಪಸ್ ನೀಡುವ ಮೂಲಕ ಅಚ್ಚರಿ ಮೂಡಿಸಿದೆ. ಮುಕ್ತ ವಾಕ್ ಮತ್ತು ಸಮಾನತೆಯನ್ನು (Free Speech and Equality) ಬೆಂಬಲಿಸಲು ಈ ರೀತಿಯ ಬ್ಲೂ ಮಾರ್ಕ್ ತೆಗೆಯಬೇಕೆಂದು ಹಿಂದೊಮ್ಮೆ ವಾದಿಸಿದ್ದ ಎಲಾನ್ ಮಸ್ಕ್, ತಮ್ಮ ನಿಲುವನ್ನು ವಾಪಸ್ ತೆಗೆದುಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ (Social Media) ಪ್ರಸಿದ್ಧವಾಗಿರುವ ವೇದಿಕೆಯು ಅನೇಕ ಸೆಲೆಬ್ರಿಟಿಗಳ ಖಾತೆಗಳನ್ನು ವೆರಿಫೈಡ್ ಮಾಡಿ ಬ್ಲೂ ಟಿಕ್ ವಾಪಸ್ ನೀಡಿದೆ. ವಿಚಿತ್ರವೆಂದರೆ ಈಗಾಗಲೇ ನಿಧನರಾಗಿರುವ ಹಲವು ಗಣ್ಯರ ಖಾತೆಗಳಿಗೂ ಬ್ಲೂ ಟಿಕ್ ನೀಡಿರುವುದು ಅಚ್ಚರಿಗೆ ಕಾರಣವಾಗಿದೆ.
ಶುಲ್ಕ ಪಾವತಿಸದ ಕಾರಣಕ್ಕೆ ಬ್ಲೂಟಿಕ್ ತೆಗೆದಿದ್ದ ಕಂಪನಿ
ಚಂದಾದಾರಿಕೆಯ ಶುಲ್ಕ ಪಾವತಿಸಿಲ್ಲ ಎನ್ನುವ ಕಾರಣಕ್ಕೆ ದೇಶದ ರಾಜಕೀಯ ನಾಯಕರು, ಸಿನಿಮಾ ತಾರೆಯರು, ಪ್ರಸಿದ್ಧ ಕ್ರೀಡಾಪಟುಗಳ ಅಧಿಕೃತ ಟ್ವಿಟರ್ ಖಾತೆಯಿಂದ ರಾತ್ರೋರಾತ್ರಿ ಬ್ಲೂ ಟಿಕ್ ತೆಗೆಯಲಾಗಿತ್ತು. ಆದರೆ ಎರಡು ದಿನಗಳಲ್ಲಿ ಮತ್ತೆ ಖ್ಯಾತನಾಮರ ಖಾತೆಗಳಲ್ಲಿ ಬ್ಲೂ ಟಿಕ್ ಕಾಣಿಸಿಕೊಂಡಿದ್ದು, ಅಚ್ಚರಿಗೆ ಕಾರಣವಾಗಿದೆ. ಪ್ರಸ್ತುತ ಒಂದು ಮಿಲಿಯನ್ ಫಾಲೋವರ್ಸ್ ಹೊಂದಿರುವ ಖ್ಯಾತನಾಮರ ಅಕೌಂಟ್ಗಳಿಗೆ ಮತ್ತೆ ಬ್ಲೂ ಟಿಕ್ ಮಾರ್ಕ್ ವಾಪಸ್ ಆಗಿದೆ ಎನ್ನಲಾಗುತ್ತಿದೆ. ಆದರೆ ಅವರೆಲ್ಲಾ ಕಂಪನಿ ಬೇಡಿಕೆಯಂತೆ ಶುಲ್ಕ ಪಾವತಿಸಿದ್ದಾರೆಯೇ ಎನ್ನುವುದು ಇನ್ನೂ ಖಚಿತವಾಗಿಲ್ಲ.
ಬ್ಲೂಟಿಕ್ ಮರಳಿ ಪಡೆದ ಸೆಲೆಬ್ರಿಟಿಗಳು
ಬಾಲಿವುಡ್ ನಟರಾದ ಶಾರುಕ್ ಖಾನ್, ಸಲ್ಮಾನ್ ಖಾನ್, ಸಿಂಗರ್ ಎಆರ್ ರೆಹಮಾನ್, ಕ್ರಿಕೆಟಿಗ ವಿರಾಟ್ ಕೊಹ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಕೆಲವು ಐಪಿಎಲ್ ತಂಡಗಳ ಅಧಿಕೃತ ಟ್ವಿಟರ್ ಖಾತೆಗಳ ಬ್ಲೂ ಟಿಕ್ ಮಾರ್ಕ್ ಕಾಣೆಯಾಗಿತ್ತು. ಆದರೆ ಇಂದು ಈ ಎಲ್ಲರ ಖಾತೆಗಳಿಗೂ ಬ್ಲೂ ಟಿಕ್ ಮರಳಿ ಪಡೆದುಕೊಂಡಿವೆ.
ಹಣ ಪಾವತಿಸುವುದಿಲ್ಲ ಎಂದವರಿಗೂ ಸಿಕ್ತು ವೆರಿಫೈಡ್ ಮಾರ್ಕ್
ಮಸ್ಕ್ ಟ್ವಿಟರ್ ಕಂಪನಿಯನ್ನು ಖರೀಸಿದ ನಂತರ ಪ್ರತಿಯೊಂದು ಬ್ಲೂ ಟಿಕ್ ಚಂದಾದಾರಿಕೆ ಪಡೆಯಲು 8 ಡಾಲರ್ ಶುಲ್ಕ ನಿಗಧಿಪಡಿಸಿತ್ತು. ಆದರೆ ಕೆಲವು ಸೆಲೆಬ್ರಿಟಿಗಳು ಇದನ್ನು ವಿರೋಧಿಸಿದ್ದರು. ಲೆಬ್ರಾನ್ ಜೇಮ್ಸ್, ಸ್ಟೀಫನ್ ಕಿಂಗ್ ಮತ್ತು ವಿಲಿಯಂ ಶಾಟ್ನರ್ ಅವರಂತಹ ಖ್ಯಾತ ನಾಮರು ಶುಲ್ಕ ಪಾವತಿಗೆ ವಿರೋಧಿಸಿದ್ದರು. ಆದರೆ ಈಗ ಈ ಮೂವರ ಪ್ರೊಫೈಲ್‌ಗಳು ಬ್ಲೂ ಟಿಕ್ ಚಂದಾದಾರರಾಗಿದ್ದಾರೆ ಎಂದು ತೋರಿಸುತ್ತಿದೆ. ಸ್ಟೀಫನ್ ಕಿಂಗ್ ಸ್ವತಃ ಟ್ವೀಟ್ ಮಾಡಿ ನಾನು ಹಣ ನೀಡಿಲ್ಲ, ಪೋನ್ ನಂಬರ್ ಕೂಡ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದಕ್ಕೆ ರಿಪ್ಲೇ ಮಾಡಿರುವ ಎಲಾನ್ ಮಸ್ಕ್ ಕೆಲವು ಸೆಲೆಬ್ರಿಟಿಗಳು ಮತ್ತು ಪಬ್ಲಿಕ್ ಫಿಗರ್ಗಳ ಟ್ವಿಟರ್ ಖಾತೆಗಳ ಬ್ಲೂ ಟಿಕ್ ಚಂದಾದಾರಿಕೆಗಾಗಿ ವೈಯಕ್ತಿಕವಾಗಿ ನಾನೇ ಹಣ ಪಾವತಿಸಿದ್ದೇನೆ ಎಂದು ತಿಳಿಸಿದ್ದಾರೆ.
ಸತ್ತವರ ಖಾತೆಗಳಿಗೂ ಮರಳಿದ ಬ್ಲೂ ಟಿಕ್
ವಿಚಿತ್ರ ಎಂದರೆ ಈಗಾಗಲೇ ಮೃತಪಟ್ಟಿರುವ ಸೆಲಿಬ್ರಿಟಿಗಳಾದ ಮೈಕಲ್ ಜಾಕ್ಸನ್, ಸೇರಿದಂತೆ ಹಲವರ ಖಾತೆಗಳಿಗೂ ಅದು ಮರಳಿದೆ. ಪತ್ರಕರ್ತ ಜಮಾಲ್ ಖಶೋಗಿ, ನಟ ಚಾಡ್ವಿಕ್ ಬೋಸ್ಮನ್, ಹಾಸ್ಯನಟ ನಾರ್ಮ್ ಮ್ಯಾಕ್ಡೊನಾಲ್ಡ್, ಬಾಸ್ಕೆಟ್‌ಬಾಲ್ ಆಟಗಾರ ಕೋಬ್ ಬ್ರ್ಯಾಂಟ್ ಹಾಗೂ ಭಾರತದ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಟ್ವಿಟರ್ ಪ್ರೊಫೈಲ್ಗಳಿಗೂ ಬ್ಲೂ ಟಿಕ್ ಮರಳಿದೆ.
ಈ ಖಾತೆಗಳಲ್ಲಿ ಹಲವು ವರ್ಷಗಳಿಂದ ನಿಷ್ಕ್ರಿಯವಾಗಿದ್ದರೂ, ಅವರ ಪ್ರೊಫೈಲ್ ಇನ್ನೂ ಅವರು ಟ್ವಿಟರ್ನ ಬ್ಲೂಗೆ ಚಂದಾದಾರರಾಗಿದ್ದಾರೆ ಮತ್ತು ಅವರ ಫೋನ್ ಸಂಖ್ಯೆಯನ್ನು ಪರಿಶೀಲಿಸಲಾಗಿದೆ ಎಂಬ ಸಂದೇಶವನ್ನು ತೋರಿಸುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ