HOME » NEWS » National-international » TWITTER BANS POLITICAL ADS ON ITS PLATFORM PRESSURE UP ON DEFIANT FACEBOOK MAK

ವಿಶ್ವದಾದ್ಯಂತ ರಾಜಕೀಯ ಜಾಹೀರಾತುಗಳನ್ನು ನಿಷೇಧಿಸಿದ ಟ್ವಿಟ್ಟರ್​; ಫೇಸ್​ಬುಕ್​ ಮೇಲೆ ಹೆಚ್ಚಿದ ಒತ್ತಡ

ರಾಜಕೀಯ ಜಾಹೀರಾತು ನಿಷೇಧದ ಕುರಿತ ಟ್ವಿಟ್ಟರ್​ನ ನಿಲುವು ಇದೀಗ ವಿಶ್ವ ಮಟ್ಟದಲ್ಲಿ ದೊಟ್ಟ ಚರ್ಚೆಗೆ ಕಾರಣವಾಗಿದೆ. ಆದರೆ, ಟ್ವಿಟ್ಟರ್​ನ ಪ್ರಬಲ ಪ್ರತಿಸ್ಪರ್ಧಿ ಫೇಸ್​ಬುಕ್ ಇದಕ್ಕೆ ತದ್ವಿರುದ್ಧವಾದ ನಿಲುವನ್ನು ಹೊಂದಿದೆ. ಅಲ್ಲದೆ, ರಾಜಕೀಯ ಜಾಹೀರಾತುಗಳನ್ನು ನಿಷೇಧವನ್ನು ತಳ್ಳಿಹಾಕಿದೆ.

MAshok Kumar | news18-kannada
Updated:October 31, 2019, 10:24 AM IST
ವಿಶ್ವದಾದ್ಯಂತ ರಾಜಕೀಯ ಜಾಹೀರಾತುಗಳನ್ನು ನಿಷೇಧಿಸಿದ ಟ್ವಿಟ್ಟರ್​; ಫೇಸ್​ಬುಕ್​ ಮೇಲೆ ಹೆಚ್ಚಿದ ಒತ್ತಡ
ಪ್ರಾತಿನಿಧಿಕ ಚಿತ್ರ.
  • Share this:
ವಿಶ್ವದ ದೊಡ್ಡಣ್ಣ ಅಮೆರಿಕ ದೇಶಕ್ಕೆ ಮುಂದಿನ ಅಧ್ಯಕ್ಷ ಯಾರು? ಎಂಬ ಪ್ರಶ್ನೆ ಇದೀಗ ಜೋರಾಗಿದೆ. ಪ್ರಸ್ತುತ ಅಧ್ಯಕ್ಷರಾಗಿರುವ ಡೊನಾಲ್ಡ್ ಟ್ರಂಪ್ ಮತ್ತೊಂದು ಅವಧಿಗೆ ಮರು ಆಯ್ಕೆ ಬಯಸಿದ್ದರೆ, ಡೆಮಾಕ್ರಟಿಕ್ ಫ್ರಂಟ್ ಪಕ್ಷದ ಜೋ ಬಿಡನ್ ಪ್ರಬಲ ಪ್ರತಿಸ್ಪರ್ಧಿಯಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ. ಆದರೆ, 2020ರ ಆರಂಭದಲ್ಲೇ ನಡೆಯಲಿರುವ ಈ ಅಧ್ಯಕ್ಷೀಯ ಚುನಾವಣೆ ಇಡೀ ವಿಶ್ವದ ಗಮನ ಸೆಳೆದಿರುವುದು ಸುಳ್ಳಲ್ಲ.

ಆದರೆ, ಈ ಚುನಾವಣೆಗಿಂತ ಪ್ರಸ್ತುತ ವಿಶ್ವದಾದ್ಯಂತ ಹೆಚ್ಚು ಗಮನ ಸೆಳೆಯುತ್ತಿರುವುದು ರಾಜಕೀಯ ಪ್ರಚಾರ ಮತ್ತು ರಾಜಕೀಯ ಜಾಹೀರಾತು ಕುರಿತ ಫೇಸ್​ಬುಕ್ ಮತ್ತು ಟ್ವಿಟರ್ ನಡುವಿನ ನಿಲುವಿಲ್ಲಿನ ವ್ಯತ್ಯಾಸ.

ಟ್ವಿಟ್ಟರ್​ ಇನ್ನೂ ತಾನು ವಿಶ್ವದಾದ್ಯಂತ ಯಾವ ರಾಷ್ಟ್ರದಲ್ಲೂ ರಾಜಕೀಯ ಜಾಹೀರಾತುಗಳನ್ನು ಪಡೆಯುವುದಿಲ್ಲ ಎಂದು ಘೋಷಿಸಿದ್ದರೆ, ಇದಕ್ಕೆ ತದ್ವಿರುದ್ಧವಾಗಿ ಫೇಸ್​ಬುಕ್​ ರಾಜಕೀಯ ಜಾಹೀರಾತು ನೀಡುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ತಿಳಿಸಿರುವುದು ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಚರ್ಚೆಯೊಂದನ್ನು ಹುಟ್ಟುಹಾಕಿದೆ.

ಅಸಲಿಗೆ ಅಮೆರಿಕದ ಕಳೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಹಾಗೂ ಹಿಲರಿ ಕ್ಲಿಂಟನ್ ನಡುವೆ ಪ್ರಬಲ ಸ್ಪರ್ಧೆ ಇತ್ತು. ಈ ಚುನಾವಣೆಯಲ್ಲಿ ಹಿಲರಿ ಕ್ಲಿಂಟನ್ ಗೆಲ್ಲುವ ಅಭ್ಯರ್ಥಿ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ, ಕೊನೆಯ ಕ್ಷಣದಲ್ಲಿ ಫೇಸ್​ಬುಕ್ ಇಡೀ ಚುನಾವಣಾ ಅಖಾಡವನ್ನು ಬದಲಿಸಿತ್ತು. ಫೇಸ್​ಬುಕ್​ನಲ್ಲಿ ರಾಜಕೀಯ ಜಾಹೀರಾತು ನೀಡಲು ಮುಂದಾಗಿದ್ದ ಟ್ರಂಪ್ ಇದರ ಫಲ ಅನುಭವಿಸಿದ್ದರು.

ನಂತರ ಎಲ್ಲಾ ರಾಷ್ಟ್ರದಲ್ಲೂ ಚುನಾವಣೆ ಸಂದರ್ಭದಲ್ಲಿ ಫೇಸ್ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ರಾಜಕೀಯ ಪ್ರಚಾರ ಮಾಡುವುದು ಒಂದು ಸಂಪ್ರದಾಯದಂತೆ ನಡೆದುಕೊಂಡು ಬರುತ್ತಿದೆ. ಇದರ ಜೊತೆ ಜೊತೆಗೆ ರಾಜಕೀಯ ಜಾಹೀರಾತುಗಳ ಮೂಲಕ ಸುಳ್ಳು ಸುದ್ದಿ ಹಬ್ಬುವ ಕಾರಣ ಇದನ್ನು ತಡೆಯಬೇಕು ಎಂಬ ಮಾತುಗಳೂ ಕೇಳಿ ಬರುತ್ತಲೇ ಇವೆ. ಈ ನಡುವೆ ಟ್ವಿಟ್ಟರ್ ಸಿಇಓ ಜಾಕ್ ಡಾರ್ಸೆ ಇದೀಗ ನೀಡಿರುವ ಹೇಳಿಕೆ ಇಡೀ ರಾಷ್ಟ್ರದ ಗಮನ ಸೆಳೆಯುತ್ತಿದೆ.



ಟ್ವಿಟ್ಟರ್​ನಲ್ಲಿ ರಾಜಕೀಯ ಜಾಹೀರಾತುಗಳನ್ನು ಪ್ರಚುರಪಡಿಸುವ ಕುರಿತು ತಮ್ಮ ಕಂಪೆನಿಯ ನಿಲುವನ್ನು ಇಂದು ಟ್ವೀಟ್ ಮೂಲಕವೇ ತಿಳಿಸಿರುವ ಅವರು, “ವಾಣಿಜ್ಯ ಜಾಹೀರಾತುದಾರರಿಗೆ ಲಾಭದಾಯಕವಾಗಿರುವ ಇಂಟರ್ನೆಟ್ ರಾಜಕೀಯ ಜಾಹೀರಾತುಗಳು ನಂಬಿಕಾರ್ಹವಲ್ಲ. ಇದು ರಾಜಕೀಯಕ್ಕೆ ಗಮನಾರ್ಹ ಅಪಾಯಗಳನ್ನು ತಂದೊಡ್ಡುತ್ತದೆ. ಲಕ್ಷಾಂತರ ಜನರ ಮತ್ತು ಮತದಾರರ ಮೇಲೆ ಪ್ರಭಾವ ಬೀರಲು ಇದನ್ನು ಬಳಸಬಹುದು. ಜನರನ್ನು ತಪ್ಪುದಾರಿಗೆ ಎಳೆಯುವ, ತಪ್ಪು ಮಾಹಿತಿಯನ್ನು ಹರಡುವ ಸಲುವಾಗಿ ಜಾಹೀರಾತುಗಳನ್ನು ಬಳಸಲಾಗುತ್ತಿದೆ. ಈ ಇಂಟರ್ನೆಟ್ ಜಾಹೀರಾತುಗಳು ನಾಗರೀಕ ಪ್ರಪಂಚಕ್ಕೆ ಹೊಸ ಸವಾಲಾಗಿ ಮಾರ್ಪಟ್ಟಿದೆ. ಇದನ್ನು ತಡೆಯುವ ಸಲುವಾಗಿ ನಾವು ಶ್ರಮಿಸುತ್ತಿದ್ದೇವೆ" ಎಂದು ಅಭಿಪ್ರಾಯಪಟ್ಟಿದ್ದಾರೆ.

ಟ್ವಿಟ್ಟರ್​ನ ಈ ನಿಲುವು ಇದೀಗ ವಿಶ್ವ ಮಟ್ಟದಲ್ಲಿ ದೊಟ್ಟ ಚರ್ಚೆಗೆ ಕಾರಣವಾಗಿದೆ. ಆದರೆ, ಟ್ವಿಟ್ಟರ್​ನ ಪ್ರಬಲ ಪ್ರತಿಸ್ಪರ್ಧಿ ಫೇಸ್​ಬುಕ್ ಇದಕ್ಕೆ ತದ್ವಿರುದ್ಧವಾದ ನಿಲುವನ್ನು ಹೊಂದಿದೆ. ಅಲ್ಲದೆ, ರಾಜಕೀಯ ಜಾಹೀರಾತುಗಳನ್ನು ನಿಷೇಧವನ್ನು ತಳ್ಳಿಹಾಕಿದೆ.

ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿರುವ ಫೇಸ್​ಬುಕ್ ಸಂಸ್ಥಾಪಕ ಮಾರ್ಕ್ ಜುಕರ್ಬರ್ಗ್, “ರಾಜಕೀಯ ಜಾಹೀರಾತುಗಳು ಆದಾಯದ ಮೂಲವಲ್ಲ, ಬದಲಾಗಿ ಪ್ರತಿಯೊಬ್ಬರಿಗೂ ಧ್ವನಿಯನ್ನು ಅನುಮತಿಸುವುದು ಮುಖ್ಯ. ರಾಜಕೀಯ ಜಾಹೀರಾತುಗಳನ್ನು ನಿಷೇಧಿಸುವುದರಿಂದ ಅಧಿಕಾರಸ್ಥರಿಗೆ ಅನುಕೂಲವಾಗುತ್ತದೆ. ಅಲ್ಲದೆ, ಪ್ರಜಾಪ್ರಭುತ್ವದಲ್ಲಿ ಖಾಸಗಿ ಕಂಪೆನಿಗಳು ರಾಜಕಾರಣಿಗಳ ಜಾಹೀರಾತುಗಳನ್ನು ಅಥವಾ ರಾಜಕೀಯ ಸುದ್ದಿಯನ್ನು ಸೆನ್ಸಾರ್ ಮಾಡುವುದು ಸರಿಯಲ್ಲ” ಎಂದು ತಿಳಿಸಿದ್ದಾರೆ.

ಟ್ವಿಟ್ಟರ್​ ಸಂಸ್ಥೆ ರಾಜಕೀಯ ಜಾಹೀರಾತುಗಳನ್ನು ನಿಷೇಧಿಸಿರುವ ನೀತಿಯನ್ನು ಬಲವಾಗಿ ಖಂಡಿಸಿರುವ ಡೊನಾಲ್ಡ್ ಟ್ರಂಪ್ ಚುನಾವಣಾ ಪ್ರಚಾರದ ವ್ಯವಸ್ಥಾಪಕ ಬ್ರಾಡ್ ಪಾರ್ಸ್ಕೇಲ್, “ಈ ನಿಷೇಧವು ಅಧ್ಯಕ್ಷ ಟ್ರಂಪ್ ಮತ್ತು ಸಂಪ್ರದಾಯವಾದಿಗಳನ್ನು ಮೌನಗೊಳಿಸುವ ಎಡಪಂಥೀಯರ ಮತ್ತೊಂದು ಪ್ರಯತ್ನ” ಎಂದು ಕಿಡಿಕಾರಿದ್ದಾರೆ.



ಆದರೆ ಟ್ವಟ್ಟರ್ ಕಂಪೆನಿಯ ಹೊಸ ನಿಯಮವನ್ನು ಸ್ವಾಗತಿಸಿರುವ ಹಿಲರಿ ಕ್ಲಿಂಟನ್ ಟ್ವಿಟ್ಟರ್ ರಾಜಕೀಯ ನಿಷೇಧವನ್ನು ಸ್ವಾಗತಿಸಿದ್ದಾರೆ, ಅಲ್ಲದೆ, ಫೇಸ್​ಬುಕ್ ಸಹ ಈ ಕುರಿತ ತನ್ನ ನಿಲುವನ್ನು ಪರಾಮರ್ಶಿಸಬೇಕು ಎಂದು ಒತ್ತಾಯಿಸಿದ್ದಾರೆ. ಹಿಲರಿ ಕ್ಲಿಂಟನ್ 2016ರ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿ ಟ್ರಂಪ್ ಎದುರು ಸ್ಪರ್ಧಿಸಿ ಸೋಲನುಭವಿಸಿದ್ದರು. ಇದಕ್ಕೆ ಕಾರಣ ಫೇಸ್​ಬುಕ್​ ಮತ್ತು ಮಾರ್ಕ್​ ಜುಕರ್​ಬರ್ಗ್​ ಎಂಬುದು ಫೇಸ್​ಬುಕ್ ಸಂಸ್ಥಾಪಕನ ಮೇಲಿರುವ ಅತ್ಯಂತ ದೊಡ್ಡ ಆರೋಪ.

ಒಟ್ಟಾರೆ ಸಾಮಾಜಿಕ ಜಾಲತಾಣದಲ್ಲಿ ರಾಜಕೀಯ ಸುದ್ದಿಗಳ ಕುರಿತಾಗಿ ಹರಡುವ ತಪ್ಪು ಮಾಹಿತಿಗೆ ಟ್ವಿಟ್ಟರ್​ ನಿಷೇಧ ಹೇರಲು ಮುಂದಾಗಿದೆ. ಲಾಭ ಎನ್ನುವ ಪರಧಿಯನ್ನೂ ದಾಟಿ ನಿಂತಿರುವ ಟ್ವಿಟ್ಟರ್​ ಇದೇ ಕಾರಣಕ್ಕೆ ಭಾರೀ ಪ್ರಮಾಣದ ಜನ ಮೆಚ್ಚುಗೆಗೂ ಕಾರಣವಾಗಿದೆ. ಆದರೆ, ಈ ಕುರಿತು ಫೇಸ್​ಬುಕ್ ಭಿನ್ನ ಅಭಿಪ್ರಾಯ ತಳೆದಿರುವುದು ಭವಿಷ್ಯದ ಪ್ರಜಾತಂತ್ರ ವ್ಯವಸ್ಥೆಗೆ ಮತ್ತಷ್ಟು ಮಾರಕವಾಗಿ ಪರಿಣಮಿಸಲಿದೆ. ಸುಳ್ಳು ಸುದ್ದಿಗಳು ಮತ್ತಷ್ಟು ರೆಕ್ಕೆಪುಕ್ಕಗಳೊಂದಿಗೆ ಪ್ರಬಲವಾಗಿ ಜನರ ನಡುವೆ ಹರಡಲಿದೆ ಎಂದು ವಿಶ್ವದಾದ್ಯಂತ ಹಲವಾರು ಪ್ರಜಾಪ್ರಭುತ್ವ ಹೋರಾಟಗಾರರು ಆತಂಕ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ಗುಂಪು ಹತ್ಯೆ ಪ್ರಕರಣ: ಗೋರಕ್ಷಕರಿಂದ ಹತ್ಯೆಗೀಡಾಗಿದ್ದ ಪೆಹ್ಲು ಖಾನ್ ಸೇರಿದಂತೆ ಪುತ್ರರ ವಿರುದ್ಧದ ಕೇಸ್​ ರದ್ದು

First published: October 31, 2019, 10:24 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories