ಕೇಂದ್ರ ಸರ್ಕಾರದ (Central Government) ಬಹುನೀರಿಕ್ಷಿತ ಯೋಜನೆ ಡಿಜಿಟಲ್ ಕರೆನ್ಸಿ (Digital Currency) ಪ್ರಾಯೋಗಿಕವಾಗಿ ಕಾರ್ಯಕಲ್ಪಕ್ಕೆ ಬಂದಾಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಬರೋಡಾ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಎಚ್ಡಿಎಫ್ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್, ಯೆಸ್ ಬ್ಯಾಂಕ್, ಐಡಿಎಫ್ಸಿ ಫಸ್ಟ್ ಬ್ಯಾಂಕ್ ಮತ್ತು ಎಚ್ಎಸ್ಬಿಸಿ ಒಟ್ಟು 9 ಬ್ಯಾಂಕ್ಗಳು ಸರ್ಕಾರಿ ಬಾಂಡ್ಗಳಲ್ಲಿನ ವಹಿವಾಟುಗಳಿಗಾಗಿ ವರ್ಚುವಲ್ ಕರೆನ್ಸಿಯನ್ನು ವಿತರಿಸುತ್ತಿವೆ.
ಡಿಜಿಟಲ್ ಕರೆನ್ಸಿ ಮೇಲೆ ಗಾಂಧಿ ಫೋಟೋ ಇಲ್ಲದ್ದಕ್ಕೆ ಮರಿಮೊಮ್ಮಗ ಗರಂ
ಡಿಜಿಟಲ್ ಕರೆನ್ಸಿಯನ್ನು ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಡಿಜಿಟಲ್ ಹಣವೇ ಭವಿಷ್ಯ ಎಂದು ಹೇಳುತ್ತಿದ್ದಾರೆ. ಆದರೆ ಡಿಜಿಟಲ್ ಕರೆನ್ಸಿಯ ವಿನ್ಯಾಸದ ಬಗ್ಗೆ ಮಹಾತ್ಮ ಗಾಂಧಿ ಅವರ ಮರಿಮೊಮ್ಮಗ ಚಕಾರ ಎತ್ತಿದ್ದಾರೆ.
ಡಿಜಿಟಲ್ ಕರೆನ್ಸಿಯಲ್ಲಿ ತಮ್ಮ ತಾತನ ಫೋಟೋ ಇಲ್ಲದ್ದಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಮಹಾತ್ಮ ಗಾಂಧಿ ಅವರ ಮರಿಮೊಮ್ಮಗ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಟ್ವೀಟ್ನಲ್ಲಿ ತುಷಾರ್ ಅರುಣ್ ಗಾಂಧಿ ವ್ಯಂಗ್ಯ
ಗಾಂಧಿ ಅವರ ಮರಿಮೊಮ್ಮಗ ತುಷಾರ್ ಅರುಣ್ ಗಾಂಧಿ ಈ ಕುರಿತಾಗಿ ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದು, ಕಾಗದದ ಹಣದಿಂದಲೂ ಅವರ ಫೋಟೋವನ್ನು ತೆಗೆದುಹಾಕಿ ಎಂದು ಟ್ವೀಟ್ ಮಾಡಿದ್ದಾರೆ.
ಟ್ವಿಟರ್ನಲ್ಲಿ ತುಷಾರ್ ಗಾಂಧಿ "ಹೊಸದಾಗಿ ಪರಿಚಯಿಸಲಾದ ಡಿಜಿಟಲ್ ಕರೆನ್ಸಿಯಲ್ಲಿ ಬಾಪು ಅವರ ಚಿತ್ರವನ್ನು ಸೇರಿಸದಿದ್ದಕ್ಕಾಗಿ ಆರ್ಬಿಐ ಮತ್ತು ಸರ್ಕಾರಕ್ಕೆ ಧನ್ಯವಾದಗಳು. ಹಾಗೆಯೇ ದಯವಿಟ್ಟು ಅವರ ಚಿತ್ರವನ್ನು ಕಾಗದದ ನೋಟುಗಳಿಂದಲೂ ತೆಗೆದುಬಿಡಿ" ಎಂದು ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದಾರೆ.
ಡಿಜಿಟಲ್ ಕರೆನ್ಸಿ
ಇನ್ನೂ 2022-23ರ ಕೇಂದ್ರ ಬಜೆಟ್ನಲ್ಲಿ ಘೋಷಣೆ ಮಾಡಿದಂತೆ ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ ಅಥವಾ ಇ-ರೂಪಾಯಿ ಪರಿಕಲ್ಪನೆಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ಈ ತಿಂಗಳ ಅಂದರೆ ಡಿಸೆಂಬರ್ 1 ರಂದು ಪ್ರಾಯೋಗಿಕವಾಗಿ ಜಾರಿಗೆ ತಂದಿದೆ. ಒಟ್ಟು ಒಂಬತ್ತು ಬ್ಯಾಂಕ್ಗಳು ಡಿಜಿಟಲ್ ರೂಪಾಯಿಯನ್ನು ಜನರಿಗೆ ವಿತರಿಸಲಿವೆ.
ಮೊದಲಿಗೆ ಬೆಂಗಳೂರು, ಮುಂಬೈ, ದೆಹಲಿ, ಭುವನೇಶ್ವರದಲ್ಲಿ ಈ ಪ್ರಯೋಗ ನಡೆಯುತ್ತಿದೆ. ಪ್ರಯೋಗದ ಭಾಗವಾಗಿ ಆಯ್ದ ಪ್ರಾಂತ್ಯಗಳಲ್ಲಿ ಬಳಕೆದಾರರು ಮತ್ತು ವ್ಯಾಪಾರಿಗಳ ನಡುವೆ ಡಿಜಿಟಲ್ ರೂಪಾಯಿ ಮೂಲಕ ವ್ಯವಹಾರ ನಡೆಯುತ್ತದೆ. ಸದ್ಯ ನೋಟು ಮತ್ತು ನಾಣ್ಯಗಳ ಮೌಲ್ಯದಲ್ಲೇ ಡಿಜಿಟಲ್ ರೂಪಾಯಿಯ ವ್ಯವಹಾರಗಳು ನಡೆಯಲಿದೆ.
ಆರ್ಬಿಐ ಭೌತಿಕ ನಗದಿನಿಂದ ಡಿಜಿಟಲ್ ರೂಪಾಯಿ/ಕರೆನ್ಸಿ/ಇ-ರುಪಾಯಿ ಕಡೆಗೆ ಗಮನಹರಿಸುತ್ತಿರುವುದರಿಂದ, ಕಾಗದ ನೋಟಿನ ಹಣ ಕ್ರಮೇಣ ಕಣ್ಮರೆಯಾಗಬಹುದು ಎಂದು ಸಹ ಊಹಿಸಲಾಗಿದೆ.
ಇನ್ನೂ eRupee ಡಿಜಿಟಲ್ ಟೋಕನ್ ರೂಪದಲ್ಲಿದ್ದು ಅದು ಕಾನೂನು ಟೆಂಡರ್ ಅನ್ನು ಪ್ರತಿನಿಧಿಸುತ್ತದೆ. ಡಿಜಿಟಲ್ ರೂಪಾಯಿಯನ್ನು ಇತ್ತೀಚಿನ ತಂತ್ರಜ್ಞಾನವನ್ನು ಬಳಸಿಕೊಂಡು ಆರ್ಬಿಐ ರಚಿಸಿದೆ.
ಡಿಜಿಟಲ್ ಕರೆನ್ಸಿಯನ್ನು ಹೇಗೆ ಪಡೆಯಬಹುದು ಎಂದು ನೋಡುವುದಾದರೆ, ಮೊದಲಿಗೆ ಗ್ರಾಹಕರು ಡಿಜಿಟಲ್ ವಾಲೆಟ್ ಮೂಲಕ ಡಿಜಿಟಲ್ ರೂಪಾಯಿಗಾಗಿ ವಿನಂತಿಯನ್ನು ಬ್ಯಾಂಕ್ಗಳು ಒದಗಿಸಿದ ತಮ್ಮ ಮೊಬೈಲ್ ಅಪ್ಲಿಕೇಶನ್ನಲ್ಲಿ ನೀಡಬೇಕು. ತದನಂತರ ವಿನಂತಿಸಿದ ಮೊತ್ತವನ್ನು ಅವರ ಡಿಜಿಟಲ್ ರೂಪಾಯಿ ವ್ಯಾಲೆಟ್ಗಳಿಗೆ ಬ್ಯಾಂಕ್ಗಳು ಕ್ರೆಡಿಟ್ ಮಾಡುತ್ತಾರೆ.
ಸೆಂಟ್ರಲ್ ಬ್ಯಾಂಕ್ ನೀಡುವ ಡಿಜಿಟಲ್ ಕರೆನ್ಸಿ ಆರ್ಬಿಐ ಹೊಣೆಗಾರಿಕೆಯಾಗಿದೆ. ಆದರೆ ಯುಪಿಐ ಪಾವತಿಯ ಸಾಧನವಾಗಿದೆ ಮತ್ತು ಯುಪಿಎ ಮೂಲಕ ನಡೆಯುವ ಯಾವುದೇ ವಹಿವಾಟು ಆಯಾ ಬ್ಯಾಂಕ್ನ ಹೊಣೆಗಾರಿಕೆಯಾಗಿದೆ.
ಹಲವು ದೇಶಗಳಲ್ಲಿ ಡಿಜಿಟಲ್ ಕರೆನ್ಸಿ
ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ (CBDC) ಟ್ರ್ಯಾಕರ್ ಪ್ರಕಾರ, ವಿಶ್ವದ GDP ಯ 95% ರಷ್ಟು ಪ್ರತಿನಿಧಿಸುವ ಸುಮಾರು 105 ದೇಶಗಳು ಡಿಜಿಟಲ್ ಕರೆನ್ಸಿಯನ್ನು ಅಳವಡಿಸಲು ಕ್ರಮಗಳನ್ನು ಕೈಗೊಂಡಿವೆ.
ಇನ್ನೂ ಸುಮಾರು 50 ದೇಶಗಳು ಡಿಜಿಟಲ್ ಕರೆನ್ಸಿಯನ್ನು ಪ್ರಾರಂಭಿಸಲು ಪರಿಶೋಧನೆ ನಡೆಸುತ್ತಿವೆ. ಆದರೆ 10 ದೇಶಗಳು ಸಂಪೂರ್ಣವಾಗಿ ಡಿಜಿಟಲ್ ಕರೆನ್ಸಿಯನ್ನು ಪ್ರಾರಂಭಿಸಿವೆ ಎಂದು ಹೇಳಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ