conversation: ಮುಖ 9 ಡಿಗ್ರಿ ತಿರುಗಿಸಿ ಮಾತನಾಡಿದರೆ ಕೊರೋನಾ ಹರಡುವುದಿಲ್ಲವಂತೆ! ವರದಿ ಏನು ಹೇಳಿದೆ ನೋಡಿ

ಸಣ್ಣ-ಪುಟ್ಟ ಸಂಭಾಷಣೆ ಮಾಡುವಾಗ ಮುಖವನ್ನು 9 ಡಿಗ್ರಿ ಆಚೆ ತಿರುಗಿಸಿಕೊಂಡು ಮಾತನಾಡಿದರೆ ಕೋವಿಡ್ ಸೋಂಕು ಬರುವ ಸಾಧ್ಯತೆ ಕಡಿಮೆಯಾಗಿರುತ್ತದೆ ಎಂದು ಭಾರತೀಯ ವಿಜ್ಞಾನ ಸಂಸ್ಥೆ ಅಂದರೆ ಐಐಎಸ್ಸಿ ಹೇಳಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಸಾಮಾನ್ಯವಾಗಿ ಇಬ್ಬರು ವ್ಯಕ್ತಿಗಳು ಸಂಭಾಷಣೆ ನಡೆಸಿದರೆ ಮುಖಗಳನ್ನು ಎದುರು-ಬದುರು ನೋಡಿಕೊಂಡು ಮಾತನಾಡುವುದು ಸಾಮಾನ್ಯ. ಆದರೆ, ಕೋವಿಡ್ ಸಾಂಕ್ರಾಮಿಕ ತನ್ನ ಉತ್ತುಂಗದ ಸ್ತರದಲ್ಲಿದ್ದಾಗ ಇಂತಹ ಸಂಭಾಷಣೆಗಳೇ (Conversation) ನಿಂತು ಹೋಗಿದ್ದವು ಎಂದರೂ ತಪ್ಪಾಗಲಿಕ್ಕಿಲ್ಲ, ಏಕೆಂದರೆ ಈ ರೀತಿ ಮಾತನಾಡುವಾಗ ಯಾರೇ ಆಗಲಿ ಸೋಂಕಿತರಾಗಿದ್ದ ಸಂದರ್ಭದಲ್ಲಿ ಅವರಿಂದ ವೈರಾಣುಗಳು ಇನ್ನೊಬ್ಬರನ್ನು ಸುಲಭವಾಗಿ ಸೇರುತ್ತಿದ್ದವು. ಆದರೆ, ಇದೀಗ ಪ್ರಕಟವಾಗಿರುವ ವರದಿಯೊಂದರ ಪ್ರಕಾರ, ಸಣ್ಣ-ಪುಟ್ಟ ಸಂಭಾಷಣೆ ಮಾಡುವಾಗ ಮುಖವನ್ನು (Face) 9 ಡಿಗ್ರಿ ಆಚೆ ತಿರುಗಿಸಿಕೊಂಡು ಮಾತನಾಡಿದರೆ ಕೋವಿಡ್ ಸೋಂಕು ಬರುವ ಸಾಧ್ಯತೆ ಕಡಿಮೆಯಾಗಿರುತ್ತದೆ ಎಂದು ಭಾರತೀಯ ವಿಜ್ಞಾನ ಸಂಸ್ಥೆ (Indian Institute of Science) ಅಂದರೆ ಐಐಎಸ್ಸಿ ಹೇಳಿದೆ.

ಅಧ್ಯಯನ ಏನು ಹೇಳಿದೆ?
ಸದ್ಯ ಈ ಒಂದು ಅಧ್ಯಯನವನ್ನು ಐಐಎಸ್ಸಿ ಸಂಸ್ಥೆಯು ಇತರೆ ಎರಡು ಸಂಸ್ಥೆಗಳ ಸಹಯೋಗದಿಂದ ಮಾಡಿದೆ. ಇದರಲ್ಲಿ ಭಾಗಿಯಾಗಿದ್ದ ಎರಡು ಇತರೆ ಸಂಸ್ಥೆಗಳೆಂದರೆ, ಸ್ಟಾಕ್‍ಹೋಮ್ ಮೂಲದ ನಾರ್ಡಿಕ್ ಇನ್ಸ್ಟಿಟ್ಯೂಟ್ ಆಫ್ ಥೆರಾಟಿಕಲ್ ಫಿಸಿಕ್ಸ್ ಹಾಗೂ ಇಂಟರ್ನ್ಯಾಷನಲ್ ಸೆಂಟರ್ ಫಾರ್ ಥೆರಾಟಿಕಲ್ ಸೈನ್ಸಸ್. ಮೂರು ಸಂಸ್ಥೆಗಳ ಸಂಶೋಧಕರ ತಂಡವೊಂದು ಈ ಅಧ್ಯಯನ ಮಾಡಿದ್ದು ಆ ಬಗ್ಗೆ ತನ್ನ ಅಧ್ಯಯನಾವರದಿಯಲ್ಲಿ ತಿಳಿಸಿದೆ. ಇದನ್ನು ಜರ್ನಲ್ ಫ್ಲೋವ್ ನಲ್ಲಿ ಪ್ರಕಟಿಸಲಾಗಿದೆ.

ಮುಖ ಒಂಭತ್ತು ಡಿಗ್ರಿ ಆಚೆ ತಿರುಗಿಸಿಕೊಂಡು ಸಂಭಾಷಣೆ ನಡೆಸಿದರೆ ಉತ್ತಮ
ವರದಿಯಲ್ಲಿ ಹೇಳಲಾಗಿರುವಂತೆ, ಇಬ್ಬರು ವ್ಯಕ್ತಿಗಳು ಒಬ್ಬರಿಗೊಬ್ಬರು ನೋಡುವುದನ್ನು ಉಳಿಸಿಕೊಂಡಾಗಿಯೂ ಕೇವಲ ಪರಸ್ಪರರ ಮುಖಗಳನ್ನು ಕೇವಲ ಒಂಭತ್ತು ಡಿಗ್ರಿಗಳಷ್ಟು ಆಚೆ ತಿರುಗಿಸಿಕೊಂಡು ಸಂಭಾಷಣೆ ನಡೆಸಿದರೆ ಅದರಿಂದ ಅವರು ಸೋಂಕನ್ನು ಹೊಂದುವ ಸಾಧ್ಯತೆ ಇಲ್ಲವೆಂದು ಅಥವಾ ತುಂಬ ಕಡಿಮೆ ಎಂದು ಕಂಡುಬಂದಿದೆ.

ಇದನ್ನೂ ಓದಿ: Explained: ಬ್ಲ್ಯೂ ಬೇಬಿ ಸಿಂಡ್ರೋಮ್ ಎಂದರೇನು? ಚರ್ಮ ನೀಲಿ ಬಣ್ಣಕ್ಕೆ ತಿರುಗುವ ಹಿಂದಿದೆ ಈ ಕಾರಣ!

ಇಬ್ಬರು ವ್ಯಕ್ತಿಗಳು ಮಾತನಾಡುತ್ತಿರುವಾಗ ಸೋಂಕಿತ ವ್ಯಕ್ತಿಯೊಬ್ಬ ಸೀನಿದರೆ ಅಥವಾ ಕೆಮ್ಮಿದರೆ ಅವನಿಂದ ಸೋಂಕು ಉಂಟು ಮಾಡುವ ವೈರಾಣುಗಳು ಗಾಳಿಯಲ್ಲಿ ಸೇರಿ ತದನಂತರ ಆ ಗಾಳಿಯ ಸೇವನೆಯನ್ನು ಇನ್ನೊಬ್ಬ ವ್ಯಕ್ತಿ ಮಾಡಿದಾಗ ಅವನಲ್ಲೂ ಆ ಸೋಂಕು ಬರುತ್ತದೆ ಎಂಬುದು ನಮಗೆಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದೆ. ಆದರೆ, ಇಬ್ಬರು ವ್ಯಕ್ತಿಗಳು ಮಾತನಾಡಿದಾಗಲೂ ಹೀಗೆ ಸಂಭವಿಸಬಹುದೆ? ಮಾತನಾಡುವಾಗ ಬಾಯಿಯಿಂದ ಹೊರಬರುವ ಉಗುಳಿನ ಡ್ರಾಪ್ಲೆಟ್ಸ್ ಗಳೂ ಸಹ ಗಾಳಿಯಲ್ಲಿ ಸೇರಿ ಮತ್ತೊಬ್ಬ ವ್ಯಕ್ತಿಗೂ ಸೋಂಕು ಉಂಟು ಮಾಡಬಹುದೇ..? ಎಂಬ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವತ್ತ ಗಮನಹರಿಸಿ ಸಂಶೋಧಕರ ತಂಡವು ಅಧ್ಯಯನದಲ್ಲಿ ತೊಡಗಿತ್ತು.

ಈ ಅಧ್ಯಯನದಲ್ಲಿ ಸಂಶೋಧಕರು ಮುಖ್ಯವಾಗಿ ಗಾಳಿಯಲ್ಲಿ ಸೇರಿರುವ ಉಗುಳುಭರಿತ ಕಣಗಳು ಅಂದರೆ "ಏರೋಸೋಲ್" ಗಳನ್ನು ವಿಶ್ಲೇಷಿಸಿ ಈ ಅಧ್ಯಯನ ನಡೆಸಿದ್ದಾರೆ. ಹಲವು ಸಂದರ್ಭಗಳಲ್ಲಿ ಈ ಏರೋಸೋಲುಗಳು ಹೇಗೆ ಪ್ರತಿಕ್ರಯಿಸುತ್ತವೆ, ಹೇಗೆ ಚಲಿಸುತ್ತವೆ ಎಂಬುದನ್ನು ಅಧ್ಯಯನ ಮಾಡಿದ್ದಾರೆನ್ನಲಾಗಿದೆ. ಈ ಸಂದರ್ಭದಲ್ಲಿ ಅವರು ಇಬ್ಬರು ವ್ಯಕ್ತಿಗಳು ಮಾಸ್ಕ್ ಧರಿಸದೆಯೇ ಪ್ರತ್ಯೇಕ ಸಂದರ್ಭಗಳಲ್ಲಿ ಎರಡು, ನಾಲ್ಕು ಹಾಗೂ ಆರು ಅಡಿಗಳಷ್ಟು ಒಬ್ಬರಿಗೊಬ್ಬರು ಅಂತರದಲ್ಲಿ ನಿಂತು ಸುಮಾರು ಒಂದು ನಿಮಿಷಗಳ ಕಾಲ ಮಾತನಾಡುವ ಅಥವಾ ಸಂಭಾಷಣೆ ನಡೆಸುವುದನ್ನು ಹಲವು ಆಯಾಮಗಳಲ್ಲಿ ಅಭ್ಯಸಿಸಿದ್ದಾರೆ.

ಮಾತನಾಡುವ ವ್ಯಕ್ತಿಯ ಮೂಲಕ ಸೋಂಕಿನ ವೈರಾಣುಗಳು ಕೇಳುಗನಲ್ಲಿ ಪ್ರವೇಶಿಸುವ ಸಾಧ್ಯತೆ
ಈ ರೀತಿಯ ಅಧ್ಯಯನದಲ್ಲಿ ಅವರಿಗೆ ಅಂದರೆ ಒಂದು ಸಂದರ್ಭದಲ್ಲಿ ಒಬ್ಬ ವ್ಯಕ್ತಿಯು ಮಾತನಾಡುತ್ತಿದ್ದು ಇನ್ನೊಬ್ಬ ಕೇವಲ ಅದನ್ನು ಆಲಿಸುತ್ತಿರುವ ಸಂದರ್ಭದಲ್ಲಿ ಮಾತನಾಡುವ ವ್ಯಕ್ತಿಯ ಮೂಲಕ ಸೋಂಕಿನ ವೈರಾಣುಗಳು ಕೇಳುಗನಲ್ಲಿ ಪ್ರವೇಶಿಸುವ ಸಾಧ್ಯತೆ ಹೆಚ್ಚಾಗಿರುವುದಾಗಿ ತಿಳಿದುಬಂದಿದೆ. ಈ ಸಂದರ್ಭದಲ್ಲಿ ಮಾತನಾಡುವ ವ್ಯಕ್ತಿಗಳ ಎತ್ತರ ಹಾಗೂ ಮಾತನಾಡುವ ವ್ಯಕ್ತಿಯ ಬಾಯಿಯಿಂದ ಹೊರದೂಡಲ್ಪಡುವ ಉಗುಳಿನ ಕಣಗಳ ಗುಣಾತ್ಮಕತೆಯಂತಹ ಅಂಶಗಳೂ ಸಹ ಸೋಂಕು ಹರಡುವಿಕೆಯಲ್ಲಿ ಹೆಚ್ಚಿನ ಪಾತ್ರವಹಿಸುತ್ತವೆ ಎಂಬುದು ತಿಳಿದುಬಂದಿದೆ.

ಈ ತಂಡದ ಭಾಗವಾಗಿರುವ ಏರೋಸ್ಪೇಸ್ ಇಂಜಿನಿಯರಿಂಗ್ ವಿಭಾಗದ ಅಸಿಸ್ಟೆಂಟ್ ಪ್ರೊಫೆಸರ್ ಆಗಿರುವ ಸೌರಭ್ ದಿವಾನ್ ಅವರು ಹೇಳುತ್ತಾರೆ, "ವ್ಯಕ್ತಿಗಳು ಮತನಾಡುವಾಗ ಮುಂದಿರುವ ಮನುಷ್ಯನಿಗೆ ನಾನು ಸೋಂಕು ತಾಕಿಸಬಲ್ಲೆ ಎಂಬ ಅರಿವಿಲ್ಲದೆ ಮಾತುಗಳಲ್ಲೇ ನಿರತನಾಗಿರುತ್ತಾನೆ, ಹಾಗಾಗಿ ಈ ಬಗ್ಗೆ ಆ ವ್ಯಕ್ತಿಗೆ ತಿಳಿಯುವುದಿಲ್ಲ. ಆದಾಗ್ಯೂ, ಕೋವಿಡ್ ಸಂದರ್ಭದಲ್ಲಿ ಅದರ ಸಂಕ್ರಮಣವು ಹೆಚ್ಚಾಗಿ ಜನರು ಕೆಮ್ಮುವುದರಿಂದ ಮತ್ತು ಸೀನುವುದರಿಂದ ಹರಡಿತ್ತು. ತದನಂತರ ಲಕ್ಷಣಗಳಿಲ್ಲದೆ ಇರುವವರಿಂದಲೂ ಇದರ ಪ್ರಸರಣವಾದ ಬಗ್ಗೆ ತಿಳಿಯಿತು. ಹಾಗೇ ನೋಡಿದರೆ ಏರೋಸೋಲುಗಳ ಮೂಲಕ ಹರಡುವಿಕೆಯ ಬಗ್ಗೆ ಸಂಶೋಧನೆಗಳು ನಡೆದಿದ್ದು ವಿರಳ." ಎಂದು.

ವಿಶೇಷ ಕೋಡ್ ಅನ್ನು ಬರೆದು ಅಧ್ಯಯನ ನಡೆಸಿದ ಸಂಶೋಧಕರು
ಇದಕ್ಕಾಗಿ ಸಂಶೋಧಕರ ತಂಡವು ತಮ್ಮದೇ ಆದ ವಿಶೇಷ ಕೋಡ್ ಅನ್ನು ಬರೆದು ಅಧ್ಯಯನ ನಡೆಸಿದೆ. ಸಾಮಾನ್ಯವಾಗಿ ವ್ಯಕ್ತಿಗಳು ಮಾತನಾಡಿದಾಗ ಆ ವ್ಯಕ್ತಿಯ ಬಾಯಿಯಿಂದ ಹೊರಬರುವ ಏರೋಸೋಲುಗಳು ಯಾವ ರೀತಿ ತನ್ನ ಪ್ರಭಾವ ಬೀರುತ್ತದೆ, ಎಷ್ಟು ಹೊತ್ತು ಕ್ರಮಿಸುತ್ತದೆ, ಅದರ ಕ್ಷಮತೆ ಹೇಗಿರುತ್ತದೆ, ಅದು ಸೋಂಕನ್ನು ಪ್ರಸರಿಸಬಲ್ಲದೆ ಎಂಬೆಲ್ಲ ಅಂಶಗಳನ್ನು ಪರಿಗಣಿಸಿ ಅಧ್ಯಯನ ಮಾಡಿದ್ದು ಹಲವು ವಿಷಯಗಳ ಮೇಲೆ ಬೆಳಕು ಚೆಲ್ಲಿದ್ದಾರೆ. ಉದಾಹರಣೆಗೆ ಇಬ್ಬರ ವ್ಯಕ್ತಿಗಳ ಪೈಕಿ ಒಬ್ಬ ಎತ್ತರವಾಗಿದ್ದು ಇನ್ನೊಬ್ಬರು ಸ್ವಲ್ಪ ಕುಳ್ಳರಾಗಿದ್ದ ಸಂದರ್ಭದಲ್ಲಿ ಸೋಂಕು ಹರಡುವ ಸಾಧ್ಯತೆಯು ಇಬ್ಬರು ವ್ಯಕ್ತಿಗಳು ಹೆಚ್ಚುಕಡಿಮೆ ಒಂದೇ ಎತ್ತರ ಹೊಂದಿದ್ದ ಸಂದರ್ಭಕ್ಕಿಂತ ಅತ್ಯಂತ ಕಡಿಮೆಯಾಗಿರುತ್ತದೆ ಎಂದು ತಿಳಿದುಬಂದಿದೆ.

ಒಬ್ಬರಿಗೊಬ್ಬರು ಎದುರುಗೊಂಡು ಮಾತನಾಡುವಾಗ ಸೋಂಕು ಪ್ರಸರಣವಾಗುವ ಸಾಧ್ಯತೆ ಹೆಚ್ಚು
ಅದರಂತೆ ಇಬ್ಬರು ವ್ಯಕ್ತಿಗಳು ಒಬ್ಬರಿಗೊಬ್ಬರು ಎದುರುಗೊಂಡು ಮಾತನಾಡುವಾಗ ಸೋಂಕು ಪ್ರಸರಣವಾಗುವ ಸಾಧ್ಯತೆ ಹೆಚ್ಚಾಗಿದ್ದು ಇದು ಅದೇ ವ್ಯಕ್ತಿಗಳು ಕಣ್ಣುಗಳ ಸಂಪರ್ಕ ಕಡಿತಗೊಳಿಸದೆಯೇ ಮುಖಗಳನ್ನು ಇಬ್ಬರೂ ಒಂಭತ್ತು ಡಿಗ್ರಿಗಳಷ್ಟು ಪರಸ್ಪರ ಆಚೆ ಮಾಡಿಕೊಂಡು ಮಾತನಾಡಿದಾಗ ಸೋಂಕಿನ ಸಾಧ್ಯತೆ ಬಲು ಕಡಿಮೆಯಾಗಿರುತ್ತದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Explained: ಜಸ್ಟಿನ್ ಬೀಬರ್‌ಗೆ ಬಂದಿರುವ ರಾಮ್ಸೆ ಹಂಟ್​ ಸಿಂಡ್ರೋಮ್​ ಎಂದರೇನು? ಈ ಕಾಯಿಲೆಯ ಲಕ್ಷಣಗಳೇನು?

ಈ ನಿಟ್ಟಿನಲ್ಲಿ ಸಂಶೋಧಕರ ತಂಡವು ಮುಂದಿನ ದಿನಮಾನಗಳಲ್ಲಿ ಮತ್ತಷ್ಟು ವಿವಿಧ ಆಯಾಮಗಳಲ್ಲಿ ಇದನ್ನು ಸಂಶೋಧಿಸುವುದಲ್ಲದೆ ಇದನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಏನೆಲ್ಲ ಮಾರ್ಗದರ್ಶಿಗಳನ್ನು ಸಾಧ್ಯವಾದಲ್ಲಿ ಮುಂದಿನ ದಿನಗಳಲ್ಲಿ ಸರ್ಕಾರ ರೂಪಿಸಬಹುದೆಂಬುದರ ಬಗ್ಗೆಯೂ ಸಹ ಅಧ್ಯಯನ ಮಾಡಲಿದೆ ಎಂದು ಹೇಳಿದೆ.
Published by:Ashwini Prabhu
First published: