ಈಗಾಗಲೇ ಎಲ್ಲರಿಗೂ ಗೊತ್ತಿರುವಂತೆ ಟರ್ಕಿ (Turkey) ದೇಶವು ಆರ್ಥಿಕ ದುಸ್ಥಿತಿಯನ್ನು ಎದುರಿಸುತ್ತಿದೆ. ದೇಶವು ಹೇಗಾದರೂ ಮಾಡಿ ತನ್ನ ಆರ್ಥಿಕ ಸ್ಥಿತಿಯನ್ನು (Financial position) ಮತ್ತೆ ಸುಧಾರಿಸುವತ್ತ ಹಲವು ಕಠಿಣ ಕ್ರಮಗಳನ್ನು ಕೈಗೊಳ್ಳಲು ಸಜ್ಜಾದಂತೆ ತೋರುತ್ತಿದೆ. ಇತ್ತೀಚೆಗಷ್ಟೆ ಬೆಳಕಿಗೆ ಬಂದಂತೆ ಟರ್ಕಿ ದೇಶವು ರಿಯಲ್ ಎಸ್ಟೇಟ್ ಉದ್ಯಮದಲ್ಲಿ (Real Estate Business) ಹಣ ತೊಡಗಿಸುವ ಮೂಲಕ ತನ್ನ ದೇಶದಲ್ಲಿ ನಾಗರಿಕತೆ ಬಯಸಿರುವ ವಿದೇಶಿಗರಿಗೆ (Foreigners) ಬೆಲೆ ಹೆಚ್ಚಳ (Price Hike) ಮಾಡುವ ಕ್ರಮಕ್ಕೆ ಮುಂದಾಗಿದೆ. ಈ ಮೂಲಕ ದೇಶದ ಆರ್ಥಿಕತೆಗೂ ಇದರಿಂದ ನೆರವಾಗಲಿದೆ ಎಂಬುದು ಟರ್ಕಿಯ ಲೆಕ್ಕಾಚಾರವಾಗಿದೆ.
ಈ ಕ್ರಮದಿಂದಾಗಿ ಟರ್ಕಿ ದೇಶವು ಸದ್ಯ ತಾನು ಎದುರಿಸುತ್ತಿರುವ ಆರ್ಥಿಕ ಸಂಕಷ್ಟದಿಂದ ಹೊರಬರಲಿದೆ ಎನ್ನಲಾಗಿದ್ದು ಈ ಕ್ರಮವು ವಿದೇಶಿಯರ ಪ್ರೊಫೈಲ್ ಅನ್ನು ಸಹ ಬದಲಿಸಲಿದೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಅಲ್ಲಿ ಬಿತ್ತರಿಸಲಾಗಿದ್ದ ಜಾಹಿರಾತು ಒಂದರಲ್ಲಿ ಈ ರೀತಿ ಬರೆದಿರುವುದನ್ನು ಕಾಣಬಹುದಾಗಿದೆ, "ಜೂನ್ 3ವರೆಗೆ ಮಾತ್ರ ನೀವು ದೇಶದಲ್ಲಿ 250,000 ಡಾಲರ್ ಗಳನ್ನು ಹೂಡುವ ಮೂಲಕ ಟರ್ಕಿ ದೇಶದ ನಾಗರಿಕತ್ವ ಪಡೆಯಲು ಅರ್ಜಿ ಸಲ್ಲಿಸಬಹುದಾಗಿದೆ. ಇಸ್ತಾಂಬುಲ್ ನ ಪ್ರತಿಷ್ಠಿತ ಯೋಜನೆಗಳಲ್ಲಿ ನೆಲೆಸುವ ಮೂಲಕ ನಿಮ್ಮ ಟರ್ಕಿ ನಾಗರಿಕತ್ವ ಹಾಗೂ ಪಾಸ್‍ಪೋರ್ಟ್ ಅನ್ನು ಪಡೆಯಿರಿ" ಎನ್ನಲಾಗಿದೆ.
ರಿಯಲ್ ಎಸ್ಟೇಟ್ ಉದ್ಯಮಕ್ಕೆ ಸಂಬಂಧಿಸಿದಂತೆ ವಾಸದ ಮನೆಗಳ ಬೆಲೆ ಹೆಚ್ಚಳ
ಈಗಾಗಲೇ ಟರ್ಕಿಯಲ್ಲಿ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಸಂಬಂಧಿಸಿದಂತೆ ವಾಸದ ಮನೆಗಳ ಬೆಲೆಗಳು ರಾಕೆಟ್ ನಂತೆ ಅತಿಯಾಗಿ ಮೇಲೆ ಏರಿದ್ದು ಇದರಿಂದ ಟರ್ಕಿ ದೇಶದ ನಾಗರಿಕರ ಮೇಲೆ ದೊಡ್ಡ ಹೊಡೆತವೇ ಬಿದ್ದಿದೆ. ಆದಾಗ್ಯೂ ಈಗ ಟರ್ಕಿ ಸರ್ಕಾರವು ವಿದೇಶಿಯರು ಟರ್ಕಿಯಲ್ಲಿ ಹೂಡಿಕೆ ಮಾಡಬಹುದಾದ ಹಣದ ಮೊತ್ತವನ್ನು ಮತ್ತಷ್ಟು ಏರಿಸಿದ್ದು ಆ ಮೂಲಕ ಅವರು ಇಂತಿಷ್ಟು ಹಣ ಹೂಡಿಕೆ ಮಾಡಿ ನಾಗರಿಕತ್ವ ಪಡೆಯಬಹುದಾದ ಆಫರ್ ನೀಡಿದೆ.
ಈ ಹಿಂದೆ ಜಾಹಿರಾತಿನ ಪ್ರಕಾರ ಯಾವುದೇ ವಿದೇಶಿಗ 250,000 ಯುಎಸ್ ಡಾಲರ್ ಮೊತ್ತ ರಿಯಲ್ ಎಸ್ಟೇಟ್ ನಲ್ಲಿ ಹೂಡುವ ಮೂಲಕ ಟರ್ಕಿ ದೇಶದ ನಾಗರಿಕತ್ವ ಪಡೆಯಬಹುದಾಗಿತ್ತು, ಆದರೆ, ಸದ್ಯ ಆ ಮೊತ್ತವನ್ನು ಟರ್ಕಿ ಸರ್ಕಾರವು ಈಗ 400,000 ಡಾಲರ್ ಗಳಿಗೆ ಏರಿಸಿದೆ. ಇದರಲ್ಲಿ ಇನ್ನೆರಡು ಷರತ್ತುಗಳನ್ನು ವಿಧಿಸಲಾಗಿದ್ದು ಈ ಹಣವನ್ನು ವಿದೇಶಿಯು ಟರ್ಕಿ ಬ್ಯಾಂಕಿನಲ್ಲಿಯೇ ಡಿಪಾಸಿಟ್ ಮಾಡಬೇಕು ಹಾಗೂ ಅವನು/ಅವಳು ಕೊಂಡ ರಿಯಲ್ ಎಸ್ಟೇಟ್ ಆಸ್ತಿಯನ್ನು ಕನಿಷ್ಠ ಮೂರು ವರ್ಷಗಳ ಕಾಲ ಮಾರಾಟ ಮಾಡುವಂತಿಲ್ಲ ಎನ್ನಲಾಗಿದೆ.
ಟರ್ಕಿಯ ಎಲ್ಲ ಅಂಶಗಳನ್ನು ಪೂರೈಸುವವರು ಆ ದೇಶದ ನಾಗರಿಕರಾಗುತ್ತಾರೆ
ಯಾವುದೇ ವಿದೇಶಿ ಪ್ರಜೆ ಟರ್ಕಿಯ ಈ ಎಲ್ಲ ಅಂಶಗಳನ್ನು ಪೂರೈಸುವನೋ ಅವನು ಹಾಗೂ ಅವನ ಮಡದಿ ಮತ್ತು 18 ವರ್ಷದೊಳಗಿರುವ ಮಕ್ಕಳು ಸ್ವಯಂ ಆಗಿಯೇ ಟರ್ಕಿ ದೇಶದ ನಾಗರಿಕರಾಗುತ್ತಾರೆ ಮತ್ತು ಅವರಿಗೆ ಟರ್ಕಿ ಪಾಸ್‍ಪೋರ್ಟ್ ಗಳು ಲಭಿಸುತ್ತವೆ ಎಂದು ಹೇಳಲಾಗಿದೆ.
ಈ ರೀತಿಯ ಕ್ರಮ ಸದ್ಯ ಟರ್ಕಿ ದೇಶವು ಅನುಭವಿಸುತ್ತಿರುವ ಆರ್ಥಿಕ ಖಾತೆಯ ಕೊರತೆಯನ್ನು ತಹಬದಿಗೆ ತರಲಿದ್ದು ಇದರಿಂದ ದೇಶದ ರಿಯಲ್ ಎಸ್ಟೇಟ್ ಕ್ಷೇತ್ರಕ್ಕೂ ಬೆಂಬಲ ಸಿಗುವುದಲ್ಲದೆ ನಿರ್ಮಾಣ ಸಂಸ್ಥೆಗಳಿಗೆ ಹೆಚ್ಚಿನ ಉತ್ತೇಜನ ದೊರೆಯಬಹುದೆನ್ನಲಾಗಿದೆ.
ಟರ್ಕಿ ದೇಶದ ಆರ್ಥಿಕ ಕೊರತೆ
ಕಳೆದ ಎಪ್ರಿಲ್ ತಿಂಗಳಿನಲ್ಲಿ ದೇಶದ ಆರ್ಥಿಕ ಕೊರತೆಯು ಕಳೆದ ವರ್ಷಕ್ಕೆ ಹೋಲಿಸಿದರೆ ಮೂರು ಪಟ್ಟು ಹೆಚ್ಚಾಗಿತ್ತು ಹಾಗೂ ಹಣಕಾಸಿನ ಅಂತರವು ಏನಿಲ್ಲವೆಂದರೂ 50.2 ಬಿಲಿಯನ್ ಲಿರಾಗೆ ಹೋಗಿ ತಲುಪಿತ್ತು. ಈಗಲೂ ದೇಶವು 5.2 ಬಿಲಿಯನ್ ಡಾಲರ್ ಆರ್ಥಿಕ ಕೊರತೆಯನ್ನು ಅನುಭವಿಸುತ್ತಿದ್ದು ಈ ಕ್ರಮವು ದೇಶಕ್ಕೆ ಆರ್ಥಿಕ ಸಂಕಷ್ಟದಿಂದ ಸುಧಾರಿಸಿಕೊಳ್ಳಲು ನೆರವಾಗಲಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ: Afghanistan: ಬೀದಿಯಲ್ಲಿ ತಿನಿಸು ಮಾರುತ್ತಿರುವ ಟಿವಿ ಆ್ಯಂಕರ್!
ದೇಶದ ಇನ್ನೊಂದು ಕ್ರಮವಾದ ಖಾಸಗಿ ಪಿಂಚಣಿ ವ್ಯವಸ್ಥೆಯಲ್ಲಿ ಯಾವುದೇ ವಿದೇಶಿಯರು ಕನಿಷ್ಠ 500000 ಡಾಲರ್ ನೊಂದಿಗೆ ಅಥವಾ ಅದರ ವಿದೇಶಿ ತತ್ಸಮಾನ ಮೊತ್ತದೊಂದಿಗೆ ಕನಿಷ್ಠ ಮೂರು ವರ್ಷಗಳಿದ್ದರೆ ಅವರಿಗೂ ಟರ್ಕಿ ನಾಗರಿಕತ್ವ ದೊರೆಯಲಿದೆ ಎನ್ನಲಾಗಿದೆ. ಟರ್ಕಿಯಲ್ಲಿ ಕನಿಷ್ಠ 50 ಜನರಿಗೆ ಉದ್ಯೋಗ ನೀಡುವ ವಿದೇಶಿ ಉದ್ಯಮಿಗಳು ಅಥವಾ ಟರ್ಕಿ ಬ್ಯಾಂಕುಗಳಲ್ಲಿ 500000 ಡಾಲರ್ ಡಿಪಾಸಿಟ್ ಮಾಡಿ ಕನಿಷ್ಠ ಮೂರು ವರ್ಷಗಳ ಕಾಲ ಅದನ್ನು ಹಿಂತೆಗೆಯದೆ ಇರುವವರಿಗೂ ಸಹ ಟರ್ಕಿ ನಾಗರಿಕತ್ವ ದೊರೆಯಲಿದೆ.
ಈ ಎಲ್ಲ ಬದಲಾವಣೆಗಳು ಜೂನ್ 13 ರ ನಂತರದ ಟರ್ಕಿ ಕಾನೂನಿನಲ್ಲಿ ಜಾರಿಗೆ ಬಂದಿದ್ದು ಸದ್ಯ ದೇಶದ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ರಷ್ಯನ್ನರು, ಉಕ್ರೇನಿಯನ್ನರು ಹಾಗೂ ಗಲ್ಫ್ ದೇಶಗಳ ನಾಗರಿಕರು ಮಂಚೂಣಿ ಗ್ರಾಹಕರಾಗಿದ್ದಾರೆ. ಅಲ್ಲದೆ, ಇಲ್ಲಿ ರಷ್ಯನ್ನರು ದಾಖಲೆಯ 64 ಕಂಪನಿಗಳನ್ನು ಮಾರ್ಚ್ ತಿಂಗಳೊಂದರಲ್ಲೇ ಸ್ಥಾಪಿಸಿದ್ದಾರೆ.
ಈ ಬಗ್ಗೆ ವರ್ಲ್ಡ್ ಟೂರಿಸಮ್ ಫೋರಮ್ ಸಂಸ್ಥೆಯ ಅಧ್ಯಕ್ಷ ಹೇಳಿದ್ದೇನು
ಇನ್ನೊಂದೆಡೆ ದೇಶದಲ್ಲಿ ಕೆಲವು ಚಿಂತಕರ ಪ್ರಕಾರ, ವಿದೇಶಿಗರನ್ನು ಹಣ ಹೂಡಿಕೆ ಮಾಡುವಂತೆ ಕೇಳುವ ಬದಲು ಅವರು ಇಲ್ಲಿ ಉದ್ಯೋಗಾವಕಾಶಗಳನ್ನು ಹೆಚ್ಚು ಹೆಚ್ಚು ಸೃಷ್ಟಿ ಮಾಡಿದರೆ ದೀರ್ಘಾವಧಿಯಲ್ಲಿ ಅದು ನಮಗೆ ಸಾಕಷ್ಟು ಅನುಕೂಲವಾಗಬಹುದು ಎಂಬ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ. ವರ್ಲ್ಡ್ ಟೂರಿಸಮ್ ಫೋರಮ್ ಸಂಸ್ಥೆಯ ಅಧ್ಯಕ್ಷರಾದ ಬುಲುಟ್ ಬುಗ್ಸಿ ಅವರು ಮಾಧ್ಯಮವೊಂದಕ್ಕೆ ಮಾತನಾಡುತ್ತ "ಹಣ ಹೂಡಿಕೆಯ ಮೂಲಕ ಪೌರತ್ವ ಪಡೆಯುವ ವಿಧಾನ ಯುರೋಪ್ ದೇಶಗಳಲ್ಲಿ ಸಾಮಾನ್ಯವಾಗಿದ್ದು ಇದೀಗ ಟರ್ಕಿಯು ಅದೇ ಪಥದಲ್ಲಿ ನಡೆದಿದೆ.
ಇದನ್ನೂ ಓದಿ: Viral Photo: ಭಾರತ-ಪಾಕಿಸ್ತಾನ ವಿಭಜನೆಯಲ್ಲಿ ಕಳೆದು ಹೋಗಿದ್ದ ತಂಗಿ ಮರಳಿ ಸಿಕ್ಕಳು! ಪಟಿಯಾಲ ಬ್ರದರ್ಸ್ ಖುಷ್
ಯುಕೆಗಳಂತಹ ದೇಶಕ್ಕೆ ಹೋಲಿಸಿದರೆ ಟರ್ಕಿ ನಿಗದಿಪಡಿಸಿರುವ ಮೊತ್ತ ಬಹಳ ಕಡಿಮೆಯಾಗಿದ್ದರೂ ಇದು ಟರ್ಕಿಯ ಪ್ರವಾಸೋದ್ಯಮಕ್ಕೂ ಉತ್ತೇಜನ ನೀಡಲಿದೆ ಹಾಗೂ ಮುಂದೆ ಆದಾಯಗಳಿಕೆಗೆ ಕಾರಣವಾಗಲಿದೆ" ಎಂದು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ