ನವದೆಹಲಿ: ಟರ್ಕಿ ಮತ್ತು ಸಿರಿಯಾ (Turkey-Syria ) ದೇಶದಲ್ಲಿ ಭೀಕರ ಭೂಕಂಪ (Earthquake) ಸಂಭವಿಸಿದ್ದು, ಸುಮಾರು 1300ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ದುರಂತದಲ್ಲಿ ಸಾವನ್ನಪ್ಪುತ್ತಿರುವವರ ಸಂಖ್ಯೆ ಕ್ಷಣ ಕ್ಷಣಕ್ಕೂ ಹೆಚ್ಚಾಗುತ್ತಿದೆ. ಭೂಕಂಪನದಿಂದ ನೂರಾರು ಬಹುಮಹಡಿ ಕಟ್ಟಡಗಳು ನೆಲಕ್ಕುರುಳಿವೆ. ಪರಿಣಾಮ ಸಾವಿರಾರು ಜನರು ಅದರ ಅವಶೇಷದಡಿ ಸಿಲುಕಿದ್ದಾರೆ. ಭೂಕಂಪನದಿಂದ ಉಂಟಾಗಿರುವ ಜೀವಹಾನಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿ (PM Narendra Modi) ಸಂತಾಪ ಸೂಚಿಸಿದ್ದು, ಈ ದುರಂತವನ್ನು ನಿಭಾಯಿಸುವುದಕ್ಕೆ ಭಾರತದಿಂದ ಸಾಧ್ಯವಾಗುವ ಎಲ್ಲಾ ರೀತಿಯ ನೆರವು ನೀಡುವುದಾಗಿ ಘೋಷಿಸಿದ್ದಾರೆ.
ಸೋಮವಾರ ಮುಂಜಾನೆ ಆಗ್ನೇಯ ಟರ್ಕಿ ಹಾಗೂ ಸಿರಿಯಾದಲ್ಲಿ 7.8 ತೀವ್ರತೆಯ ಭೂಕಂಪ ಸಂಭವಿಸಿದೆ. ಇದರಿಂದ ಸಾವಿರಾರು ಪ್ರಾಣಹಾನಿಯಾಗಿದೆ. ಈ ಸಂದರ್ಭದಲ್ಲಿ ಟರ್ಕಿಯಲ್ಲಿ ಸಂಭವಿಸಿದ ಭೂಕಂಪ ಪರಿಸ್ಥಿತಿಯನ್ನು ನಿಭಾಯಿಸಲು ಸಾಧ್ಯವಿರುವ ಎಲ್ಲಾ ನೆರವು ನೀಡುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಪಿಎಂ ಪ್ರಧಾನ ಕಾರ್ಯದರ್ಶಿ ಡಾ. ಪಿ.ಕೆ.ಮಿಶ್ರಾ ತಕ್ಷಣದ ಪರಿಹಾರ ಕ್ರಮಗಳ ಕುರಿತು ಚರ್ಚಿಸಲು ಸೌತ್ ಬ್ಲಾಕ್‌ನಲ್ಲಿ ಸಭೆ ನಡೆಸಿದ್ದು, ಸಭೆಯಲ್ಲಿ ಎನ್‌ಡಿಆರ್‌ಎಫ್ ತಂಡ, ವೈದ್ಯಕೀಯ ತಂಡವನ್ನು ತುರ್ತು ಘಟನಾ ಸ್ಥಳಕ್ಕೆ ಕಳುಹಿಸಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.
100 ಸಿಬ್ಬಂದಿ, ಶ್ವಾನದಳ ರವಾನೆ
100 ಸಿಬ್ಬಂದಿ ಹಾಗೂ ವಿಶೇಷ ತರಬೇತಿ ಪಡೆದ ಶ್ವಾನದಳ, ಜೊತೆಗೆ ಅಗತ್ಯ ಉಪಕರಣಗಳೊಂದಿಗೆ 100 ಸಿಬ್ಬಂದಿಗಳನ್ನು ಒಳಗೊಂಡ ಎರಡು ಎನ್‌ಡಿಆರ್‌ಎಫ್ ತಂಡಗಳನ್ನು ಟರ್ಕಿಯಲ್ಲಿ ಭೂಕಂಪ ನಡೆದಿರುವ ಸ್ಥಳಕ್ಕೆ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಾಗಿ ತೆರಳಿವೆ ಎಂದು ಪ್ರಧಾನ ಮಂತ್ರಿ ಕಚೇರಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: Turkey Earthquake: ಟರ್ಕಿಯಲ್ಲಿ ಪ್ರಬಲ ಭೂಕಂಪ, 7.9 ತೀವ್ರತೆ ದಾಖಲು, ಧರೆಗುರುಳಿದ ಕಟ್ಟಡಗಳು!
ವೈದ್ಯರ ತಂಡ ಕಳುಹಿಸಲು ಸಿದ್ಧತೆ
ಇದರ ಜೊತೆಗೆ ತರಬೇತಿ ಪಡೆದ ವೈದ್ಯರು ಮತ್ತು ಅರೆವೈದ್ಯರ ತಂಡದ ಜೊತೆಗೆ ಅಗತ್ಯ ಔಷಧಿಗಳೊಂದಿಗೆ ವೈದ್ಯಕೀಯ ತಂಡಗಳನ್ನು ಸಹ ಸಿದ್ಧಪಡಿಸಲಾಗುತ್ತಿದೆ. ರಿಪಬ್ಲಿಕ್ ಆಫ್ ಟರ್ಕಿಯೆ ಸರ್ಕಾರ ಮತ್ತು ಅಂಕಾರಾದಲ್ಲಿರುವ ಭಾರತೀಯ ರಾಯಭಾರ ಕಚೇರಿ ಮತ್ತು ಇಸ್ತಾಂಬುಲ್‌ನಲ್ಲಿರುವ ಕಾನ್ಸುಲೇಟ್ ಜನರಲ್ ಕಚೇರಿಯ ಸಮನ್ವಯದೊಂದಿಗೆ ಪರಿಹಾರ ಸಾಮಗ್ರಿಗಳನ್ನು ರವಾನಿಸಲಾಗುತ್ತಿದೆ ಎಂದು ತಿಳಿಸಿದೆ.
ಯುರೋಪಿಯನ್ ರಾಷ್ಟ್ರ, ರಷ್ಯಾದಿಂದ ನೆರವು
ಭೂಕಂಪದಿಂದ ತತ್ತರಿಸಿರುವ ಟರ್ಕಿಗೆ ಯುರೋಪಿಯನ್ ರಾಷ್ಟ್ರಗಳ ಒಕ್ಕೂಟ ನೆರವಿಗೆ ದಾವಿಸಿದೆ. ಇತ್ತ ಉಕ್ರೇನ್ ವಿರುದ್ಧ ಯುದ್ದ ನಡೆಸುತ್ತಿರುವ ರಷ್ಯಾಕೂಡ ಟರ್ಕಿ ಮತ್ತು ಸಿರಿಯಾ ರಾಷ್ಟ್ರಗಳಿಗೆ ಅಗತ್ಯ ನೆರವು ನೀಡಲು ರಷ್ಯಾ ಸಿದ್ಧವಿದೆ ಎಂದು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸೋಮವಾರ ತಿಳಿಸಿದ್ದಾರೆ. ಸಿರಿಯಾ ಮತ್ತು ಟರ್ಕಿ ಎರಡು ರಾಷ್ಟ್ರಗಳೊಂದಿಗೆ ರಷ್ಯಾ ಬಲವಾದ ಸಂಬಂಧವನ್ನು ಹೊಂದಿದೆ. ಟರ್ಕಿಯ ಅಧ್ಯಕ್ಷ ತಯ್ಯಿಪ್ ಎರ್ಡೋಗನ್ ಅವರೊಂದಿಗೆ ಪುಟಿನ್ ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ.
45 ರಾಷ್ಟ್ರಗಳಿಂದ ನೆರವು
ಮಧ್ಯ ಟರ್ಕಿ ಮತ್ತು ವಾಯುವ್ಯ ಸಿರಿಯಾದಲ್ಲಿ 7.8 ತೀವ್ರತೆಯ ಭೂಕಂಪ ಸಂಭವಿಸಿದ ನಂತರ ಹಲವಾರು ಸರ್ಕಾರಗಳು ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳು ಬಂಬಲಕ್ಕೆ ಬಂದಿವೆ. ಸೋಮವಾರ 45 ದೇಶಗಳು ರಕ್ಷಣಾ ಕಾರ್ಯಕ್ಕೆ ಸಹಾಯ ಹಸ್ತಚಾಚಿವೆ ಎಂದು ಟರ್ಕಿಯ ಅಧ್ಯಕ್ಷ ತಯ್ಯಿಪ್ ಎರ್ಡೊಗನ್ ತಿಳಿಸಿದ್ದಾರೆ.
83 ವರ್ಷಗಳ ಬಳಿ ಪ್ರಬಲ ಭೂಕಂಪ
ಟರ್ಕಿಯಲ್ಲಿ 1939ರ ಬಳಿಕ ಇದೇ ಮೊದಲ ಬಾರಿಗೆ ಈ ರೀತಿಯ ಭಯನಾಕ ಭೂಪಂಕ ಸಂಭವಿಸಿ ಸಾವು ನೋವಿಗೆ ಕಾರಣವಾಗಿದೆ ಎಂದು ಇಸ್ತಾನ್‌ಬುಲ್ ತಾಂತ್ರಿಕ ವಿಶ್ವವಿದ್ಯಾನಿಲಯದ ಭೂವಿಜ್ಞಾನದ ಪ್ರಾಧ್ಯಾಪಕ ಓಕಾನ್ ಟುಯ್ಸುಜ್ ತಿಳಿಸಿದ್ದಾರೆ. 1939ರಲ್ಲಿ ಟರ್ಕಿಯ ಪೂರ್ವದ ನಗರವಾದ ಎರ್ಜಿನ್‌ಕಾನ್‌ಗೆ ಅಪ್ಪಳಿಸಿ ಸುಮಾರು 33,000 ಜನರನ್ನು ಬಲಿಯಾಗಿದ್ದರು. ಅದನ್ನು ಹೊರೆತುಪಡಿಸಿ ಸೋಮವಾರದ ಭೂಕಂಪ ಅತ್ಯಂತ ಪ್ರಬಲವಾಗಿದೆ. ಟರ್ಕಿಯ ಈ ಪ್ರದೇಶ ವಿಶ್ವದ ಅತ್ಯಂತ ಸಕ್ರಿಯ ಭೂಕಂಪನ ವಲಯಗಳಲ್ಲಿ ಒಂದಾಗಿದೆ ಎಂದು ಒಕಾನ್ ಮಾಹಿತಿ ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ