ಭೂಕಂಪದ(Earthquake) ಆರ್ಭಟಕ್ಕೆ ಟರ್ಕಿ(Turkey) ಮತ್ತು ಸಿರಿಯಾ(Syria) ಅಕ್ಷರಶಃ ತತ್ತರಿಸಿ ಹೋಗಿವೆ. ಸುಮಾರು 5,000 ಮಂದಿಯನ್ನು ಬಲಿಪಡೆದ ಭೂಕಂಪಕ್ಕೆ ವಿಶ್ವವೇ(World) ಬೆಚ್ಚಿಬಿದ್ದಿದೆ.
ಭಾರತಕ್ಕೂ ಭೂಕಂಪದ ಭಯ
ಭೂಕಂಪ, ಎಲ್ಲಾ ದೇಶಗಳಲ್ಲೂ ಉಂಟಾಗಬಹುದಾದ ಪ್ರಕೃತಿ ಸಹಜ ವಿಕೋಪ. ಭೂಕಂಪದ ಅಪಾಯದಿಂದ ಭಾರತವೇನೂ ಹೊರಗಿಲ್ಲ. ಉತ್ತರಾಖಂಡದ ಜೋಶಿಮಠದಲ್ಲಿ ಮನೆಗಳು, ರಸ್ತೆಗಳಲ್ಲಿ ಕಾಣಿಸಿಕೊಂಡ ಬಿರುಕುಗಳು ದೊಡ್ಡ ಅಪಾಯದ ಮುನ್ಸೂಚನೆಯನ್ನು ದೇಶಕ್ಕೆ ನೀಡಿದೆ.
ದೇಶದ 59% ಪ್ರದೇಶದಲ್ಲಿ ಭೂಕಂಪದ ಅಪಾಯ
ಒಂದೆರೆಡು ವರ್ಷಗಳ ಹಿಂದೆ ರಾಷ್ಟ್ರೀಯ ಭೂಕಂಪ ಕೇಂದ್ರ (ಎನ್‌ಸಿಎಸ್) ಬಿಡುಗಡೆ ಮಾಡಿದ ವರದಿಯು ದೇಶದ ಶೇ.59ರಷ್ಟು ಪ್ರದೇಶದಲ್ಲಿ ವಿವಿಧ ತೀವ್ರತೆಯ ಭೂಕಂಪದ ಸಾಧ್ಯತೆ ಇದ್ದು, ಭೂಕಂಪದ ಅಪಾಯದ ಅಂಚಿನಲ್ಲಿವೆ ಎಂದಿದೆ.
ಭಾರತದ ಯಾವ ಭಾಗಗಳು ಉನ್ನತ ಭೂಕಂಪನ ವಲಯದಲ್ಲಿವೆ ?
ವಿಜ್ಞಾನ ಮತ್ತು ತಂತ್ರಜ್ಞಾನ ಮತ್ತು ಭೂ ವಿಜ್ಞಾನಗಳ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಅವರು ಜುಲೈ 2021 ರಲ್ಲಿ ಲೋಕಸಭೆಗೆ ಈ ಬಗ್ಗೆ ಮಾಹಿತಿ ನೀಡಿದ್ದರು.
ದೇಶದ ಭೂಕಂಪನ ವಲಯ ನಕ್ಷೆಯ ಪ್ರಕಾರ, ಒಟ್ಟು ಪ್ರದೇಶವನ್ನು ಭೂಕಂಪದ ತೀವ್ರತೆ ಆಧಾರದ ಮೇಲೆ ಎರಡು, ಮೂರು, ನಾಲ್ಕು ಹಾಗೂ ಐದು ಎಂಬ ನಾಲ್ಕು ವಲಯಗಳನ್ನಾಗಿ ವಿಂಗಡಿಸಲಾಗಿದೆ. ವಲಯ 5 ಭೂಕಂಪನದ ಅತ್ಯಂತ ಸಕ್ರಿಯ ಪ್ರದೇಶವಾಗಿದ್ದು, 2ನೇ ವಲಯದಲ್ಲಿ ಕಡಿಮೆ ತೀವ್ರವಾದ ಭೂಕಂಪಗಳು ಸಂಭವಿಸುತ್ತವೆ ಎಂದಾಗಿದೆ.
ದೇಶದ ಸರಿಸುಮಾರು 11% ಪ್ರದೇಶವು ವಲಯ 5 ರಲ್ಲಿ ಬರುತ್ತದೆ, 18% ವಲಯ 4 ರಲ್ಲಿ, 30% ವಲಯ 3 ರಲ್ಲಿ ಮತ್ತು 41% ವಲಯ 2ರಲ್ಲಿ ಬರುತ್ತವೆ ಎಂದು ವರದಿಗಳು ಹೇಳಿವೆ.
5ನೇ ವಲಯದ ನಗರಗಳು
ಎಂಟು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ವಲಯ-5 ರಲ್ಲಿದ್ದು, ಅತಿ ಹೆಚ್ಚು ತೀವ್ರತೆಯ ಭೂಕಂಪಗಳ ಅಪಾಯದಲ್ಲಿದೆ ಎಂದು ಹೇಳಲಾಗಿದೆ.
ಇಲ್ಲಿ ಗುಜರಾತ್, ಹಿಮಾಚಲ ಪ್ರದೇಶ, ಬಿಹಾರ, ಅಸ್ಸಾಂ, ಮಣಿಪುರ, ನಾಗಾಲ್ಯಾಂಡ್, ಜಮ್ಮು ಮತ್ತು ಕಾಶ್ಮೀರ ಮತ್ತು ಅಂಡಮಾನ್ ಮತ್ತು ನಿಕೋಬಾರ್ ಪ್ರದೇಶಗಳು ಈ ಪಟ್ಟಿಗೆ ಸೇರಿವೆ.
ನಾಲ್ಕನೇ ವಲಯದಲ್ಲಿ ದೆಹಲಿ
ಇನ್ನೂ ದೆಹಲಿ-NCR ಪ್ರದೇಶವು ಎರಡನೇ ಅತಿ ಹೆಚ್ಚು ಅಪಾಯದ ವಲಯವಾದ ನಾಲ್ಕರಲ್ಲಿದೆ. ದೆಹಲಿಯು ಸೋಹ್ನಾ, ಮಥುರಾ ಮತ್ತು ದೆಹಲಿ-ಮೊರಾದಾಬಾದ್ ಸಕ್ರಿಯ ಭೂಕಂಪನಗಳಲ್ಲಿ ಸೇರಿವೆ.
ಮತ್ತು ದೆಹಲಿ-ಎನ್‌ಸಿಆರ್‌ನಲ್ಲಿ ಗುರುಗ್ರಾಮ್ ಅತ್ಯಂತ ಅಪಾಯಕಾರಿ ಪ್ರದೇಶವಾಗಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಇಲ್ಲಿ ಭೂಕಂಪ ಸಂಭವಿಸಿದರೆ ಹೆಚ್ಚಿನ ಹಾನಿಯುಂಟಾಗುತ್ತದೆ ಎನ್ನಲಾಗಿದೆ.
ಜೋಶಿಮಠದಲ್ಲಿ ಇತ್ತೀಚೆಗೆ ಭೂಮಿ ಕುಸಿತ ಕಂಡ ಉತ್ತರಾಖಂಡವು ವಲಯ ನಾಲ್ಕರಲ್ಲಿದೆ. ಇದರ ಹೊರತಾಗಿ, ಹರಿಯಾಣ, ಪಂಜಾಬ್, ಉತ್ತರ ಪ್ರದೇಶ, ಬಿಹಾರ, ಚಂಡೀಗಢ ಮತ್ತು ಪಶ್ಚಿಮ ಬಂಗಾಳವು ವಲಯ IV ರಲ್ಲಿ ಎರಡನೇ ಅತಿ ಹೆಚ್ಚು ವರ್ಗವಾಗಿದೆ.
ಇದನ್ನೂ ಓದಿ: Turkey Earthquake: ಫೆಬ್ರವರಿ 3ರಂದೇ ಊಹಿಸಲಾಗಿತ್ತು ಟರ್ಕಿ-ಸಿರಿಯಾದ ವಿನಾಶ? ಈ ಎಚ್ಚರಿಕೆ ಕೊಟ್ಟವರು ಇವರೇ ನೋಡಿ!
ಭೂಕಂಪದ ಅಪಾಯದಲ್ಲಿ ಹಿಮಾಲಯ
ಮಧ್ಯ ಹಿಮಾಲಯದ ಪ್ರದೇಶವು ವಿಶ್ವದಲ್ಲೇ ಅತ್ಯಂತ ಭೂಕಂಪನದಿಂದ ಸಕ್ರಿಯವಾಗಿರುವ ಪ್ರದೇಶವಾಗಿದೆ. 1905 ರಲ್ಲಿ, ಕಾಂಗ್ರಾದಲ್ಲಿ ಹಾಗೂ 1934 ರಲ್ಲಿ ಬಿಹಾರ-ನೇಪಾಳದಲ್ಲಿ ಭೂಕಂಪ ಸಂಭವಿಸಿತ್ತು. ಈ ಭೂಕಂಪಗಳು 8.2 ಅಳತೆಯಲ್ಲಿ ಸಂಭವಿಸಿದ್ದು ಸುಮಾರು 10,000 ಜನರನ್ನು ಬಲಿ ತೆಗೆದುಕೊಂಡಿದ್ದವು.
1991 ರಲ್ಲಿ, ಉತ್ತರಕಾಶಿಯಲ್ಲಿ 6.8 ತೀವ್ರತೆಯ ಭೂಕಂಪವು 800 ಕ್ಕೂ ಹೆಚ್ಚು ಜನರ ಪ್ರಾಣ ತೆಗೆದುಕೊಂಡರೆ 2005 ರಲ್ಲಿ, ಕಾಶ್ಮೀರದಲ್ಲಿ 7.6 ತೀವ್ರತೆಯ ಭೂಕಂಪ 80,000 ಜನರ ಸಾವಿಗೆ ಕಾರಣವಾಗಿತ್ತು.
ಈ ಪ್ರದೇಶದಲ್ಲಿ 700 ವರ್ಷಗಳಿಂದ ಟೆಕ್ಟೋನಿಕ್ ಒತ್ತಡವಿದ್ದು, ಇದು ಯಾವಾಗಲಾದರೂ ಸ್ಫೋಟಿಸಬಹುದು ಎನ್ನುತ್ತಾರೆ ತಜ್ಞರು. ದೆಹಲಿ-ಎನ್‌ಸಿಆರ್ ಹಿಮಾಲಯಕ್ಕೆ ಹತ್ತಿರವಾಗಿರುವುದರಿಂದ ಟೆಕ್ಟೋನಿಕ್ ಪ್ಲೇಟ್‌ಗಳಲ್ಲಿ ಆಗುವ ಬದಲಾವಣೆಗಳನ್ನು ಅನುಭವಿಸುತ್ತದೆ ಎಂದು ಭೂಕಂಪಶಾಸ್ತ್ರಜ್ಞರು ಹೇಳುತ್ತಾರೆ.
ಮಥುರಾ ಭೂಕಂಪ (1803) ಮತ್ತು ಬುಲಂದ್‌ಶಹರ್‌ನಲ್ಲಿ (1956) ದೆಹಲಿ-ಎನ್‌ಸಿಆರ್‌ನ ಸಮೀಪದಲ್ಲಿ ಸಂಭವಿಸಿದ ಪ್ರಮುಖ ಭೂಕಂಪಗಳಾಗಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ