• Home
 • »
 • News
 • »
 • national-international
 • »
 • Lord Hanuman - ಹನುಮಂತ ಹುಟ್ಟಿದ್ದು ಕರ್ನಾಟಕದಲ್ಲಲ್ಲವಾ? ರಾಮನವಮಿಯಂದು ಟಿಟಿಡಿಯಿಂದ ಸಾಕ್ಷ್

Lord Hanuman - ಹನುಮಂತ ಹುಟ್ಟಿದ್ದು ಕರ್ನಾಟಕದಲ್ಲಲ್ಲವಾ? ರಾಮನವಮಿಯಂದು ಟಿಟಿಡಿಯಿಂದ ಸಾಕ್ಷ್

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ರಾಮಾಯಣದ ಹನುಮಂತ ಹುಟ್ಟಿದ್ದು ಕೊಪ್ಪಳದ ಗಂಗಾವತಿಯಲ್ಲಿ ಅಲ್ಲ, ಆಂಧ್ರದ ತಿರುಮಲಾದಲ್ಲಿರುವ ಅಂಜನಾದ್ರಿ ಬೆಟ್ಟದಲ್ಲಿ ಎಂಬುದನ್ನು ನಿರೂಪಿಸಲು ಟಿಟಿಡಿ ಹೊರಟಿದೆ. ರಾಮನವಮಿಯಂದು ಸಾಕ್ಷ್ಯ ಬಿಡುಗಡೆ ಮಾಡುವುದಾಗಿ ಅದು ಹೇಳಿಕೊಂಡಿದೆ.

 • Share this:

  ಆಂಧ್ರ ಪ್ರದೇಶ: ರಾಮಾಯಣದ ಹನುಮಂತ ಹುಟ್ಟಿದ್ದು ಕರ್ನಾಟಕದ ಕೊಪ್ಪಳದ ಗಂಗಾವತಿಯಲ್ಲಿ ಈಗಿರುವ ಅಂಜನಾದ್ರಿ ಬೆಟ್ಟದಲ್ಲಿ ಎಂಬ ನಂಬಿಕೆ ಇದೆ. ಅನೇಕ ಸಂಶೋಧನೆಗಳು ಇದನ್ನ ದೃಢೀಕರಿಸಿವೆ. ರಾಮಾಯಣದ ವಿವಿಧ ಘಟನೆಗಳನ್ನ ಅವಲೋಕಿಸಿ ಸ್ಥಳ ನಕ್ಷೆ ತಯಾರಿಸಲಾಗಿದ್ದು, ಅದರ ಪ್ರಕಾರವೂ ಕೊಪ್ಪಳದ ಅಂಜನಾದ್ರಿ ಬೆಟ್ಟ ಎಂಬುದು ಆಂಜನೇಯ ಜನ್ಮಸ್ಥಳವೆಂದು ಗುರುತಿಸಲಾಗಿದೆ. ರಾಮಾಯಣದಲ್ಲಿ ಉಲ್ಲೇಖಿಸಿರುವಂತೆ ಹನುಮಂತ ಹುಟ್ಟಿದ್ದು ಕಿಷ್ಕಿಂದ ನಗರದಲ್ಲಿ. ಕಿಷ್ಕಿಂದೆಯು ಇವತ್ತಿನ ಕೊಪ್ಪಳ ಎಂದೇ ಪರಿಗಣಿಸಲಾಗಿದೆ. ಈಗ ತಿರುಪತಿ ದೇವಸ್ಥಾನದ ಆಡಳಿತ ಮಂಡಳಿ ಟಿಟಿಡಿ ಹೊಸ ವರಸೆ ತೆಗೆದಿದೆ. ಹನುಮಂತ ಹುಟ್ಟಿದ್ದು ತಿರುಮಲೆಯ ಬೆಟ್ಟಗಳ ಸಾಲಿನಲ್ಲಿ ಎಂದು ಹೇಳುತ್ತಿದೆ. ಇದಕ್ಕೆ ಅಗತ್ಯವಿರುವ ಸಾಕ್ಷ್ಯಗಳು ತನ್ನ ಬಳಿ ಇದ್ದು ಅದನ್ನು ಪ್ರಸ್ತುತಪಡಿಸುವುದಾಗಿ ಹೇಳಿಕೊಂಡಿದೆ. ನಿನ್ನೆ ಯುಗಾದಿ ಹಬ್ಬದ ದಿನದಂದು ಸಾಕ್ಷ್ಯಗಳನ್ನು ಬಹಿರಂಗಪಡಿಸುವುದಾಗಿ ಹೇಳಿದ್ದ ಟಿಟಿಡಿ ಈಗ ಅದನ್ನು ರಾಮನವಮಿಗೆ ಮುಂದೂಡಿದೆ.


  ಹನುಮಂತ ದೇವರು ಶ್ರೀರಾಮನ ಪರಮಭಕ್ತನಾಗಿದ್ದು, ರಾಮನ ಜನ್ಮದಿನದಂದು ಹನುಮಂತನ ಜನ್ಮಸ್ಥಾನದ ಸಾಕ್ಷ್ಯ ಬಿಡುಗಡೆ ಮಾಡುವುದು ಹೆಚ್ಚು ಸೂಕ್ತ. ಹೀಗಾಗಿ, ಯುಗಾದಿ ಬದಲು ಏಪ್ರಿಲ್ 21, ರಾಮನವಮಿಯಂದು ಸಾಕ್ಷ್ಯಗಳನ್ನ ಬಿಡುಗಡೆ ಮಾಡುವ ನಿರ್ಧಾರಕ್ಕೆ ಬಂದಿದ್ದೇವೆ ಎಂದು ಟಿಟಿಸಿ ಸ್ಪಷ್ಟಪಡಿಸಿದೆ. ತಿರುಪತಿಯ ತಿರುಮಲೆಯಲ್ಲೂ ಅಂಜನಾದ್ರಿ ಬೆಟ್ಟ ಇದೆ. ಅದುವೇ ‘ಹನುಮಂತನ ಜನ್ಮಸ್ಥಳ ಎಂಬುದು ಟಿಟಿಡಿಯ ವಾದ.


  ತಿರುಮಲದಲ್ಲಿ ಹನುಮಂತ ಜನಿಸಿದ್ದು ಎಂಬುದನ್ನು ಸಾಕ್ಷ್ಯಗಳ ಸಮೇತ ನಿರೂಪಿಸಲು ಟಿಟಿಸಿಯಿಂದ ತಜ್ಞರ ಸಮಿತಿಯೊಂದು ರಚನೆಯಾಗಿತ್ತು. ಇಸ್ರೋ ವಿಜ್ಞಾನಿ ಮೂರ್ತಿ ರೇಮಿಲಾ, ಆಂಧ್ರ ಪುರಾತತ್ವ ಇಲಾಖೆ ಅಧಿಕಾರಿ ವಿಜಯ್ ಕುಮಾರ್, ವೈದಿಕ ವಿಶ್ವವಿದ್ಯಾಲಯದ ಉಪಕುಲಪತಿ ಸುದರ್ಶನ ಶರ್ಮಾ, ರಾಷ್ಟ್ರೀಯ ಸಂಸ್ಕೃತಿ ವಿವಿ ಉಪಕುಲಪತಿ ಪ್ರೊ| ಮುರಳೀಧರ್ ಶರ್ಮಾ, ಉನ್ನತ ವೇದ ಅಧ್ಯಯನ ಯೋಜನೆ ಅಧಿಕಾರಿ ಡಾ. ವಿಭೀಷಣ ಶರ್ಮಾ ಮೊದಲಾದವರು ಸದಸ್ಯರಾಗಿರುವ ಈ ಸಮಿತಿ ಕಳೆದ ವರ್ಷದ ಡಿಸೆಂಬರ್​ನಿಂದ ಹಲವು ಸಂಶೋಧನೆಗಳನ್ನು ಮಾಡಿ ಬಹಳಷ್ಟು ಮಾಹಿತಿ ಕಲೆಹಾಕಿದ್ದಾರೆನ್ನಲಾಗಿದೆ. ಪುರಾಣಗಳಲ್ಲಿ ಉಲ್ಲೇಖವಾಗಿರುವ ಸಂಗತಿ, ವೈಜ್ಞಾನಿಕ ಸಾಕ್ಷ್ಯ, ಶಿಲಾ ಶಾಸನ (Epigraphical), ಜ್ಯೋತಿಷ್ಯಶಾಸ್ತ್ರ ಇತ್ಯಾದಿಗಳನ್ನ ತಾಳೆ ಮಾಡಿ ಸಾಕ್ಷ್ಯಗಳನ್ನ ಸಂಗ್ರಹಿಸಲಾಗಿದೆ ಎಂದು ಟಿಟಿಡಿ ಅಧಿಕಾರಿಗಳು ಹೇಳಿದ್ದಾರೆ.


  ಇದನ್ನೂ ಓದಿ: ರಾಹುಲ್ ದ್ರಾವಿಡ್ ಭಯಂಕರ ‘ಮುಖ’; ಸೋಷಿಯಲ್ ಮೀಡಿಯಾದಲ್ಲಿ ಇಂದಿರಾನಗರ ಗೂಂಡಾ ಹವಾ


  ಆದರೆ, ಕರ್ನಾಟಕದ ತಜ್ಞರು ಟಿಟಿಡಿಯ ಈ ಹೊಸ ವಾದವನ್ನು ಅನುಮಾನದಿಂದಲೇ ನೋಡುತ್ತಿದ್ಧಾರೆ. ರಾಮಾಯಣದ ಘಟನಾವಳಿಗಳ ಸರಣಿಯ ಪ್ರಕಾರ ಕೊಪ್ಪಳದ ಗಂಗಾವತಿಯೇ ರಾಮಾಯಣದಲ್ಲಿ ಕಿಷ್ಕಿಂದೆ ನಗರವಾಗಿತ್ತು. ಇದಕ್ಕೆ ಹಲವು ಸ್ಥಳ ಪುರಾವೆಗಳು ಇವೆ ಎಂದು ವಾದಿಸುತ್ತಾರೆ. ಆದರೂ ಟಿಟಿಡಿಯ ತಜ್ಞರ ಸಮಿತಿ ನೀಡುವ ಸಾಕ್ಷ್ಯಗಳನ್ನ ನೋಡಿ ಆನಂತರ ಇದರ ಬಗ್ಗೆ ಪ್ರತಿಕ್ರಿಯಿಸುವುದು ಸೂಕ್ತ ಎಂಬ ನಿರ್ಧಾರಕ್ಕೆ ಬಂದಿದ್ದಾರೆ.

  Published by:Vijayasarthy SN
  First published: