news18-kannada Updated:October 19, 2019, 4:58 PM IST
ತೆಲಂಗಾಣ ಸಂಪೂರ್ಣ ಬಂದ್
ಹೈದರಾಬಾದ್(ಅ.19): ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಟಿಆರ್ಡಿಸಿ)ಯ ನೌಕರರು ಇಂದು ರಾಜ್ಯಾದ್ಯಂತ ಬಂದ್ ಆಚರಿಸುತ್ತಿದ್ದಾರೆ. ಸತತ 14 ದಿನಗಳ ಅನಿರ್ದಿಷ್ಟಾವಧಿ ಮುಷ್ಕರದ ಬಳಿಕ ಟಿಎಸ್ಆರ್ಟಿಸಿ ಸಾರಿಗೆ ನೌಕರರ ಸಂಘದ ಜಂಟಿ ಕ್ರಿಯಾ ಸಮಿತಿ ಟಿಆರ್ಎಸ್ ಸರ್ಕಾರದ ವಿರುದ್ಧ ನೀಡಿದ ತೆಲಂಗಾಣ ಬಂದ್ ಕರೆಗೆ ಓಗೊಟ್ಟು ಕಾಂಗ್ರೆಸ್, ಟಿಡಿಪಿ, ಬಿಜೆಪಿ ಸೇರಿದಂತೆ ಎಡ ಪಕ್ಷಗಳು ಬೀದಿಗಿಳಿದಿವೆ. ಸಿಎಂ ಕೆ. ಚಂದ್ರಶೇಖರ್ ರಾವ್ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧಧ ಈ ಬಂದ್ ತೀವ್ರಸ್ವರೂಪ ಪಡೆದುಕೊಂಡಿದೆ. ಈಗಾಗಲೇ ಮುಷ್ಕರ ಪ್ರತಿಭಟನೆಗೆ ಇಬ್ಬರು ಸಾರಿಗೆ ನೌಕರರು ಬಲಿಯಾಗಿದ್ದಾರೆ. ಬಂದ್ ಆಚರಣೆ ವೇಳೆ ತೆಲಂಗಾಣ ಪೊಲೀಸರು ರಾಜ್ಯಾದ್ಯಂತ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದಿದ್ದಾರೆ.
ಈ ಮುನ್ನ ಅಕ್ಟೋಬರ್ 5ನೇ ತಾರೀಕಿನಂದು ಮುಷ್ಕರ ಆರಂಭಿಸಿದ ಕಾರ್ಮಿಕರು ಸುಮಾರು 26 ಬೇಡಿಕೆಗಳನ್ನು ಈಡೇರಿಸುವಂತೆ ಸಿಎಂ ಚಂದ್ರಶೇಖರ್ ರಾವ್ ಸರ್ಕಾರಕ್ಕೆ ಪಟ್ಟು ಹಿಡಿದಿದ್ದರು. ತೆಲಂಗಾಣ ರಸ್ತೆ ಸಾರಿಗೆ ನೌಕರರ ಸಂಘದ ಜಂಟಿ ಕ್ರಿಯಾ ಸಮಿತಿ ಆಯೋಜಿಸಿದ್ದ ಸರ್ಕಾರದ ವಿರುದ್ಧದ ಮುಷ್ಕರದಲ್ಲಿ 49,340 ನೌಕರರಿಗೂ ಹೆಚ್ಚು ಮಂದಿ ಭಾಗವಹಿಸಿದ್ದರು. ಈ ಪೈಕಿ ಬರೋಬ್ಬರಿ 48,000 ನೌಕರರನ್ನು ಸೇವೆಯಿಂದ ವಜಾಗೊಳಿಸಿ ಸಿಎಂ ಕೆಸಿಆರ್ ಆದೇಶ ಹೊರಡಿಸಿದ್ದರು. ಇದರ ಬಳಿಕ ಪ್ರತಿಭಟನೆಯೂ ಮತ್ತಷ್ಟು ತೀವ್ರಗೊಂಡಿತ್ತು. ಈ ಮಧ್ಯೆ ವಜಾಗೊಳಿಸಿದವರ ಜಾಗಕ್ಕೆ ಹೊಸ ನೌಕಕರನ್ನು ನೇಮಕಾತಿ ಮಾಡಿಕೊಳ್ಳುತ್ತೇವೆ ಎಂದು ಸಿಎಂ ನೀಡಿದ ಹೇಳಿಕೆ ಇನ್ನಷ್ಟೂ ಕಿಡಿ ಹೊತ್ತಿಸಿತ್ತು.
ಸಿಎಂ ಚಂದ್ರಶೇಖರ್ ರಾವ್ ಸರ್ಕಾರದ ವಿರುದ್ಧ ವಜಾಗೊಂಡ ನೌಕಕರರೀಗ ಪ್ರತಿಭಟನೆ ಮೂಲಕ ತಮ್ಮ ಅಸಮಾಧಾನ ಹೊರಹಾಕುತ್ತಿದ್ದಾರೆ. ಈಗಾಗಲೇ ಕಳೆದ ಶನಿವಾರ ಪ್ರತಿಭಟನೆ ವೇಳೆ ಟಿಎಸ್ಆರ್ಟಿಸಿ ಬಸ್ ಚಾಲಕ ಶ್ರೀನಿವಾಸ್ ರೆಡ್ಡಿ ಎಂಬುವರು ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೇ ಬಲಿಯಾಗಿದ್ದಾರೆ.
ಇದನ್ನೂ ಓದಿ: ರಾಜ್ಯಪಾಲರ ಭೇಟಿ ಬಳಿಕ ಹೋರಾಟ ಕೈಬಿಟ್ಟ ಮಹದಾಯಿ ರೈತರು
ಶ್ರೀನಿವಾಸ್ ರೆಡ್ಡಿ ಬೆನ್ನಲ್ಲೇ ಸುರೇಂದ್ರ ಗೌಡ (36) ಎಂಬುವರು ಕೂಡ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡದ್ದರು. ಅಂತೆಯೇ ಮತ್ತೋರ್ವ ಚಾಲಕ ವೆಂಕಟೇಶ್ವರ ಚಾರಿ ಎಂಬಾತ ಕೂಡಾ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ. ಆದರೆ, ತಕ್ಷಣವೇ ಮುಷ್ಕರ ನಿರತ ನೌಕರರು ಅವರನ್ನು ರಕ್ಷಿಸಿದ್ದರು.
ಇಷ್ಟಾದರೂ ಸಾರಿಗೆ ನೌಕರರ ಜತೆ ಮಾತುಕತೆಗೆ ಮುಂದಾಗದ ಸಿಎಂ ಕೆಸಿಆರ್ ಸರ್ಕಾರ, ಬಂದ್ ಆಚರಣೆ ದಿನದವರೆಗೂ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿತ್ತು. ದಿಢೀರ್ 48 ಸಾವಿರ ಸಾರಿಗೆ ನೌಕರರ ವಜಾಗೊಳಿಸಿದ ನಂತರ ತೆಲಂಗಾಣದ ಬಹುತೇಕ ಸರ್ಕಾರಿ ಬಸ್ಗಳು ಸ್ಥಗಿತಗೊಂಡಿದ್ದವು. ಹಾಗಾಗಿ ಶಾಲಾ-ಕಾಲೇಜುಗಳಿಗೆ ಅಜೆ ನೀಡಲಾಗಿದೆ ಎಂದು ಸಿಎಂ ಸಮಜಾಯಿಷಿ ನೀಡಿದ್ದರು.
ಇದನ್ನೂ ಓದಿ: ಮಹದಾಯಿ ಸಮಸ್ಯೆ ಕಗ್ಗಂಟಾಗಲು ಏನು ಕಾರಣ? ಸಿಎಂ, ರಾಜ್ಯಪಾಲರು ಮೀನ ಮೇಷ ಎಣಿಸುತ್ತಿರುವುದೇಕೆ?ತೆಲಂಗಾಣ ಹೈಕೋರ್ಟ್ ಮುಷ್ಕರ ನಿರತ ಕಾರ್ಮಿಕರೊಂದಿಗೆ ಮಾತುಕತೆ ನಡೆಸುವಂತೆ ಆದೇಶಿಸಿದೆ. ಆದರೂ, ಸಿಎಂ ಕೆಸಿಆರ್ ತಮ್ಮ ಹಠ ಮುಂದುವರೆಸಿದ್ದಾರೆ. ಇಂದಿನ ಬಂದ್ಗೆ ಬೆಂಬಲ ನೀಡಿ ಭಾಗಿಯಾಗಿರುವ ಕಾಂಗ್ರೆಸ್, ಬಿಜೆಪಿ, ಟಿಡಿಪಿ, ಜನಸೇನ, ಎಡಪಕ್ಷದ ಕಾರ್ಯಕಾರ್ತರನ್ನು ಬಂಧಿಸಲಾಗುತ್ತಿದೆ. ಕೆಲವಡೆ ಬಂದ್ ಆಚರಣೆ ವೇಳೆ ಹಿಂಸಾಚಾರಕ್ಕೆ ತಿರುಗಿದೆ. ಮೃತ ಶ್ರೀನಿವಾಸ ರೆಡ್ಡಿ ತವರು ಖಮ್ಮಂ ಜಿಲ್ಲೆಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಅನೇಕ ಬಸ್ ಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಇತ್ತ ಟಿಎಸ್ಆರ್ಟಿಸಿ ಜಂತಿ ಕ್ರಿಯಾ ಸಮಿತಿ ರಾಜ್ಯವ್ಯಾಪಿ ಸಂಪೂರ್ಣ ಬಂದ್ ಆಚರಿಸುತ್ತಿದ್ದರೇ, ಅತ್ತ ತಾತ್ಕಾಲಿಕವಾಗಿ ನೌಕರರನ್ನು ನೇಮಿಸಿಕೊಳ್ಳಲು ಕೆ ಚಂದ್ರಶೇಖರ್ ರಾವ್ ಮುಂದಾಗಿದ್ದಾರೆ.
-----------
First published:
October 19, 2019, 4:41 PM IST