ಅಮೆರಿಕ ಇತಿಹಾಸದಲ್ಲಿ ಟ್ರಂಪ್ ಓರ್ವ ಕೆಟ್ಟ ವಿಫಲ ಅಧ್ಯಕ್ಷರಾಗಿ ಉಳಿಯಲಿದ್ದಾರೆ: ನಟ ಅರ್ನಾಲ್ಡ್ ಅಸಮಾಧಾನ
ಸುಳ್ಳುಗಳಿಂದಲೇ ಟ್ರಂಪ್ ಸಹ ಇದೀಗ ಜನರನ್ನು ತಪ್ಪುದಾರಿಗೆಳೆಯುತ್ತಿದ್ದಾರೆ. ಅಧ್ಯಕ್ಷ ಟ್ರಂಪ್, ಚುನಾವಣೆಯ ಫಲಿತಾಂಶಗಳನ್ನು ಮತ್ತು ನ್ಯಾಯಯುತವಾಗಿ ನಡೆದ ಚುನಾವಣೆಯನ್ನು ರದ್ದುಗೊಳಿಸಲು ಪ್ರಯತ್ನಿಸಿದರು ಎಂದು ನಟ ಮಾಜಿ ಗವರ್ನರ್ ಅರ್ನಾಲ್ಡ್ ಕಿಡಿಕಾರಿದ್ದಾರೆ.
ಕ್ಯಾಲಿಫೋರ್ನಿಯಾ (ಜನವರಿ 11); ಅಮೆರಿಕದಲ್ಲಿ ಅಧ್ಯಕ್ಷ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು ಜೋ ಬೈಡೆನ್ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಹೀಗಾಗಿ ಅಧಿಕಾರ ಹಸ್ತಾಂತರದ ಪ್ರಕ್ರಿಯೆ ಈಗಾಗಲೇ ಅಮೆರಿಕದಲ್ಲಿ ಆರಂಭವಾಗಿದೆ. ಆದರೆ, ಈ ಸೋಲನ್ನು ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈವರೆಗೂ ಒಪ್ಪಿಲ್ಲ. ಅಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿ ಅವರು ಹಂಚಿಕೊಂಡಿದ್ದ ಕೆಲ ಹೇಳಿಕೆಗಳ ಪರಿಣಾಮ ಅವರ ಉದ್ರಿಕ್ತ ಅಭಿಮಾನಿಗಳ ಗುಂಪು ಕಳೆದ ಬುಧವಾರ ಅಮೆರಿಕದ ಸಂಸತ್ ಭವನಕ್ಕೆ ನುಗ್ಗಿ ದಾಂಧಲೆ ನಡೆಸಿದ್ದರು. ಈ ವೇಳೆ ಪೊಲೀಸರು ನಡೆಸಿದ್ದ ಶೂಟ್ಔಟ್ನಲ್ಲಿ ನಾಲ್ಕು ಜನ ಮೃತಪಟ್ಟಿದ್ದರು. ಈ ಘಟನೆಯ ನಂತರ ಸುಗಮ ಅಧಿಕಾರ ಹಸ್ತಾಂತರಕ್ಕೆ ಒಪ್ಪಿಗೆ ಸೂಚಿಸಿದ್ದ ಟ್ರಂಪ್ "ತಮ್ಮ ಅಧಿಕಾರ ಅವಧಿ ಅಮೆರಿಕ ರಾಜಕೀಯ ಇತಿಹಾಸದಲ್ಲಿ ಸುವರ್ಣ ಯುಗ" ಎಂದು ಅಭಿಪ್ರಾಯಪಟ್ಟಿದ್ದರು. ಆದರೆ, ಟ್ರಂಪ್ ಅವರ ಈ ಮಾತಿಗೆ ಕಿಡಿಕಾರಿರುವ ಕ್ಯಾಲಿಫೋರ್ನಿಯಾ ಮಾಜಿ ಗವರ್ನರ್ ಹಾಗೂ ನಟ ಅರ್ನಾಲ್ಡ್, "ಡೊನಾಲ್ಡ್ ಟ್ರಂಪ್ ಅಮೆರಿಕ ಪಾಲಿನ ಅತ್ಯಂತ ವಿಫಲ ನಾಯಕ ಮತ್ತು ಓರ್ವ ಕೆಟ್ಟ ಅಧ್ಯಕ್ಷರಾಗಿ ಇತಿಹಾಸದಲ್ಲಿ ಉಳಿಯಲಿದ್ದಾರೆ. ಅಲ್ಲದೆ, ಸಂಸತ್ ಭವನದ ಮೇಲಿನ ದಾಳಿ ಒಂದು ಜರ್ಮನಿಯ ನಾಜಿಗಳ ದೌರ್ಜನ್ಯಕ್ಕೆ ಸಮನಾದದ್ದು" ಎಂದು ತಾವು ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಕಿಡಿಕಾರಿದ್ದಾರೆ.
My message to my fellow Americans and friends around the world following this week's attack on the Capitol. pic.twitter.com/blOy35LWJ5
ಅಮೆರಿಕ ಸಂಸತ್ ಭವನದ ಮೇಲಿನ ದಾಳಿ ಮತ್ತು ಡೊನಾಲ್ಡ್ ಟ್ರಂಪ್ ನಡವಳಿಕೆ ಕುರಿತು ತಾವು ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಮಾತನಾಡಿರುವ ಅರ್ನಾಲ್ಡ್, "ಜಗತ್ತಿನಾದ್ಯಂತ ವ್ಯಾಪಕವಾಗಿ ಚರ್ಚೆಯಾಗುತ್ತಿರುವ ಅಮೆರಿಕ ಕ್ಯಾಪಿಟಲ್ ಮೇಲೆ ನಡೆದ ದಾಳಿಯ ಕುರಿತು ನನ್ನ ಅಮೆರಿಕದ ಪ್ರಜೆಗಳಿಗೆ ಮತ್ತು ಗೆಳೆಯರಿಗೆ ನನ್ನ ಸಂದೇಶ. 1938 ರಲ್ಲಿ ಜರ್ಮನಿಯ ನಾಜಿಗಳು 'ಕ್ರಿಸ್ಟಲ್ನಚ್ ಅಥವಾ ನೈಟ್ ಆಫ್ ಬ್ರೋಕನ್ ಗ್ಲಾಸ್' ಎಂದು ಕರೆಯಲ್ಪಡುವ ದಾಳಿಯಲ್ಲಿ ಯಹೂದಿ ಒಡೆತನದ ಮಳಿಗೆಗಳನ್ನು ಗುರಿಯಾಗಿಸಿ ದಾಳಿ ನಡೆಸಿದ್ದರು. ಈ ದಾಳಿಗೂ ಟ್ರಂಪ್ ಬೆಂಬಲಿಗರು ಕ್ಯಾಪಿಟಲ್ ಮೇಲೆ ಮಾಡಿದ ದಾಳಿಗೆ ಹೆಚ್ಚೇನು ವ್ಯತ್ಯಾಸವಿಲ್ಲ.
ಹೀಗಾಗಿ ನನ್ನ ಅಮೆರಿಕದ ಪ್ರಜೆಗಳು ಇಂತಹ ಹಿಂಸೆಗಳನ್ನು ಕೈಬಿಡಬೇಕು. ಎಲ್ಲರೂ ಒಟ್ಟಾಗಿ ಐಕ್ಯಮತೆಯಿಂದ ಬದುಕುವುದನ್ನು ಕಲಿಯಬೇಕು" ಎಂದು ಒತ್ತಾಯಿಸಿದ್ದಾರೆ. ಅಲ್ಲದೆ, ಇದೇ ವಿಡಿಯೋದಲ್ಲಿ ಡೊನಾಲ್ಡ್ ಟ್ರಂಪ್ ನಡವಳಿಕೆಯ ವಿರುದ್ಧವೂ ಕಿಡಿಕಾರಿರುವ ಅನಾರ್ಲ್ಡ್, "ಡೊನಾಲ್ಡ್ ಟ್ರಂಪ್ ಅಮೆರಿಕದ ರಾಜಕೀಯ ಇತಿಹಾಸ ಕಂಡ ಅತ್ಯಂತ ವಿಫಲ ಮತ್ತು ಕೆಟ್ಟ ಅಧ್ಯಕ್ಷ" ಎಂದು ಕಿಡಿಕಾರಿದ್ದಾರೆ.
ಇನ್ನೂ ಮುಂದುವರೆದು ತನ್ನ ಬಾಲ್ಯದ ಕಷ್ಟದ ದಿನಗಳನ್ನು ನೆನೆದು ಟ್ರಂಪ್ ವಿರುದ್ಧ ಹರಿಹಾಯ್ದಿರುವ ಅರ್ನಾಲ್ಡ್, " ಈ ವಿಚಾರ ನೋವಿನ ಸಂಗತಿಯಾದ್ದರಿಂದ ಇದುವರೆಗೂ ಸಾರ್ವಜನಿಕವಾಗಿ ಎಲ್ಲೂ ಹಂಚಿಕೊಂಡಿರಲಿಲ್ಲ. ನನ್ನ ಬಾಲ್ಯದಲ್ಲಿ ನನ್ನ ತಂದೆ ವಾರದಲ್ಲಿ 2-3 ಬಾರಿ ಕುಡಿದು ಬಂದು ನನ್ನನ್ನು ಮತ್ತು ನನ್ನ ತಾಯಿಯನ್ನು ಹೊಡೆಯುತ್ತಿದ್ದರು. ಹೆದರಿಸುತ್ತಿದ್ದರು. ನನ್ನ ತಂದೆಯನ್ನು ನಮ್ಮ ಕೆಲವು ನೆರೆಹೊರೆಯವರು ಸುಳ್ಳಿನ ಮೂಲಕ ದಾರಿ ತಪ್ಪಿಸುತ್ತಿದ್ದರು. ಇಂತಹ ಸುಳ್ಳುಗಳಿಗೆ ಯಾವಾಗಲೂ ಮುನ್ನಡೆಯಿರುತ್ತದೆ.
ಇಂತಹ ಸುಳ್ಳುಗಳಿಂದಲೇ ಟ್ರಂಪ್ ಸಹ ಇದೀಗ ಜನರನ್ನು ತಪ್ಪುದಾರಿಗೆಳೆಯುತ್ತಿದ್ದಾರೆ. ಅಧ್ಯಕ್ಷ ಟ್ರಂಪ್, ಚುನಾವಣೆಯ ಫಲಿತಾಂಶಗಳನ್ನು ಮತ್ತು ನ್ಯಾಯಯುತವಾಗಿ ನಡೆದ ಚುನಾವಣೆಯನ್ನು ರದ್ದುಗೊಳಿಸಲು ಪ್ರಯತ್ನಿಸಿದರು. ಸುಳ್ಳಿನಿಂದ ಜನರನ್ನು ತಪ್ಪುದಾರಿಗೆಳೆಯುವ ಮೂಲಕ ಅವರು ದೊಂಬಿಯೆಬ್ಬಿಸಲು ಬಯಸಿದರು. ಟ್ರಂಪ್ ಒಬ್ಬ ವಿಫಲ ನಾಯಕ. ಅವರು ಇತಿಹಾಸದಲ್ಲಿ ಒಬ್ಬ ಕೆಟ್ಟ ಅಧ್ಯಕ್ಷರಾಗಿ ಉಳಿಯುತ್ತಾರೆ" ಎಂದು ಅಸಮಾಧಾನ ಹೊರಹಾಕಿದ್ದಾರೆ.
Published by:MAshok Kumar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ