ನವದೆಹಲಿ(ನ. 09): ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸೋಲನುಭವಿಸಿದ ಡೊನಾಲ್ಡ್ ಟ್ರಂಪ್ ಈಗಲೇ ತಮ್ಮ ಅಧಿಕಾರ ಬಿಟ್ಟುಕೊಡುವಂತೆ ಕಾಣುತ್ತಿಲ್ಲ. ಇನ್ನೂ ಒಂದೆರಡು ತಿಂಗಳು ಆಡಳಿತ ನಡೆಸಲಿರುವ ಅವರು ಈ ಅವಧಿಯಲ್ಲಿ ಚೀನಾ ವಿರುದ್ಧ ಇನ್ನಷ್ಟು ತೀಕ್ಷ್ಣ ಪ್ರಹಾರ ನಡೆಸುವ ಸಾಧ್ಯತೆ ಇದೆ ಎಂದು ತಜ್ಞರು ಹೇಳುತ್ತಾರೆ. ಟ್ರಂಪ್ ಅವರ ನಾಲ್ಕು ವರ್ಷದ ಅಧಿಕಾರದಲ್ಲಿ ಚೀನಾದ ಬೆಳವಣಿಗೆ ಎದುರಿಸಲು ಹಲವು ಕ್ರಮಗಳನ್ನ ತೆಗೆದುಕೊಂಡಿದ್ದರು. ಕೊರೋನಾ ವಿಚಾರದಲ್ಲಿ ಅಮೆರಿಕ ಅನುಭವಿಸಿದ ವೈಫಲ್ಯಗಳಿಗೆ ಚೀನಾವನ್ನು ಹೊಣೆ ಮಾಡಿ ಝಾಡಿಸುವುದರ ಜೊತೆಗೆ, ಟ್ರಂಪ್ ಅವರು ತಮ್ಮ ಅಧಿಕಾರಾಂತ್ಯದಲ್ಲಿ ಹಲವು ಕಠೋರ ನಿರ್ಧಾರಗಳನ್ನ ತೆಗೆದುಕೊಳ್ಳಬಹುದು ಎಂದು ಜಾರ್ಜ್ಟೌನ್ ಯೂನಿವರ್ಸಿಟಿಯ ಜೇಮ್ಸ್ ಗ್ರೀನ್ ಅಭಿಪ್ರಾಯಪಟ್ಟಿದ್ದಾರೆ.
ಚೀನಾದ ಕ್ಸಿನ್ಜಿಯಾಂಗ್ ಪ್ರಾಂತ್ಯದ ಊಯ್ಗರ್ ಮುಸ್ಲಿಮ್ ಸಮುದಾಯದವರ ಮೇಲೆ ನಡೆಯುತ್ತಿದೆ ಎನ್ನಲಾದ ದೌರ್ಜನ್ಯದ ವಿಚಾರವನ್ನು ಇಟ್ಟುಕೊಂಡು ಟ್ರಂಪ್ ಅವರು ಟ್ರಂಪ್ ಕಾರ್ಡ್ ಪ್ರಯೋಗಿಸುವ ಸಾಧ್ಯತೆ ಇದೆ. ಚೀನಾದಿಂದ ಊಯ್ಗರ್ ಸಮುದಾಯದ ನರಮೇಧ ಮಾಡಲಾಗುತ್ತಿದ ಎಂಬ ಹಣೆಪಟ್ಟಿ ಕಟ್ಟಿ ಚೀನಾದ ಕಮ್ಯೂನಿಸ್ಟ್ ಪಕ್ಷದ ನಾಯಕರಿಗೆ ಅಮೆರಿಕದ ವೀಸಾ ನಿರಾಕರಣೆ ಮಾಡಬಹುದು. ಅಥವಾ 2022ರ ಬೀಜಿಂಗ್ ಚಳಿಗಾಲದ ಒಲಿಂಪಿಕ್ಸ್ಗೆ ಅಮೆರಿಕದ ಅಥ್ಲೀಟ್ಗಳನ್ನ ಕಳುಹಿಸಲು ನಿರಾಕರಿಸಬಹುದು.
ಇದನ್ನೂ ಓದಿ: ಅಮೆರಿಕದ ನೂತನ ಅಧ್ಯಕ್ಷರಿಂದ ಐದು ಲಕ್ಷ ಭಾರತೀಯರಿಗೆ ಪೌರತ್ವ ಭಾಗ್ಯ?
ಚೀನಾದ ಕ್ಸಿನ್ಜಿಯಾಂಗ್ ಪ್ರಾಂತ್ಯದಲ್ಲಿ ಭಯೋತ್ಪಾದನೆ ನಡೆಸುವ ಈಸ್ಟ್ ತುರ್ಕ್ಮೆನಿಸ್ತಾನ್ ಮೂವ್ಮೆಂಟ್ ಎಂಬ ಸಂಘಟನೆಗೆ ಕಟ್ಟಲಾಗಿದ್ದ ಭಯೋತ್ಪಾದಕ ಪಟ್ಟಿಯನ್ನು ಟ್ರಂಪ್ ತೆಗೆದುಹಾಕುವ ಸಾಧ್ಯತೆ ಇದೆ. ಇದರಿಂದ ಊಯ್ಗುರ್ ಸಮುದಾಯದ ವಿರುದ್ಧ ಚೀನಾ ಭಯೋತ್ಪಾದನೆ ಪಟ್ಟ ಕಟ್ಟು ಹತ್ತಿಕ್ಕಲು ಅಸಾಧ್ಯವಾಗಬಹುದು. ಊಯ್ಘುರ್ ಸಮುದಾಯದ ಬಲ ಕ್ರಮೇಣ ಹೆಚ್ಚಿ ಚೀನಾಗೆ ತಲೆನೋವು ಸೃಷ್ಟಿಯಾಗುವ ಸಾಧ್ಯತೆ ಇಲ್ಲದಿಲ್ಲ.
ವಿಶ್ವಾದ್ಯಂತ 5ಜಿ ನೆಟ್ವರ್ಕ್ ಸೌಕರ್ಯ ಕಲ್ಪಿಸಲು ಹೊರಟಿರುವ ಚೀನಾದ ಹುವಾವೇ ಟೆಕ್ನಾಲಜೀಸ್ ಸಂಸ್ಥೆಗೆ ಚಿಪ್ ತಯಾರಿಸಲು ಅಗತ್ಯವಾಗಿರುವ ಸೆಮಿಕಂಡಕ್ಟರ್ಗಳನ್ನ ಮಾರಾಟ ಮಾಡದಿರುವ ನಿರ್ಧಾರ ಮಾಡಬಹುದು. ಹೆಚ್ಚೆಚ್ಚು ಚೀನಾ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನ ನಿಷೇಧಿಸಬಹುದು.
ಇದನ್ನೂ ಓದಿ: Joe Biden: ಕಮಲಾ ಹ್ಯಾರೀಸ್ಗೆ ಮಾತ್ರವಲ್ಲ ಜೋ ಬಿಡೆನ್ಗೂ ಇದೆ ಭಾರತದ ನಂಟು!
ಸೌತ್ ಚೀನಾ ವಿಚಾರದಲ್ಲಿ ಚೀನಾ ವಿರುದ್ಧ ಟ್ರಂಪ್ ಕ್ಷಿಪ್ರ ನಿರ್ಧಾರಗಳನ್ನ ತೆಗೆದುಕೊಂಡರೂ ಅಚ್ಚರಿ ಇಲ್ಲ ಎನ್ನುತ್ತಾರೆ ತಜ್ಞರು. ಇನ್ನು, ನೂತನ ನಿಯೋಜಿತ ಅಧ್ಯಕ್ಷರಾಗಿರುವ ಜೋ ಬೈಡನ್ ಅವರು ಮೊದಲಿಂದಲೂ ಚೀನಾ ಬಗ್ಗೆ ಮೃದು ಧೋರಣೆ ಹೊಂದಿದವರಾದರೂ ಇತ್ತೀಚಿನ ಕೆಲ ವರ್ಷಗಳಲ್ಲಿ ಚೀನಾದ ಕಟುಟೀಕಾಕಾರರೂ ಆಗಿರುವುದು ಗಮನಾರ್ಹ. ಊಯ್ಗುರ್ ಮುಸ್ಲಿಮರು ಮತ್ತು ಹಾಂಕಾಂಗ್ ವಿಚಾರದಲ್ಲಿ ಚೀನಾದ ಧೋರಣಗಳನ್ನ ಬೈಡನ್ ಹಲವು ಬಾರಿ ಖಂಡಿಸಿದ್ದಾರೆ.
ಡೊನಾಲ್ಡ್ ಟ್ರಂಪ್ ಅವರು ಜನವರಿ ತಿಂಗಳಲ್ಲಿ ಅಧಿಕಾರದಿಂದ ಕೆಳಗಿಳಿದು ಜೋ ಬಿಡೆನ್ಗೆ ಅಧಿಕಾರ ಹಸ್ತಾಂತರ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ