ಕಾಂಗ್ರೆಸ್ ತ್ರಿಪುರಾ ಅಧ್ಯಕ್ಷ ಪಿಜುಶ್ ಕಾಂತಿ ಬಿಸ್ವಾಸ್ ಶನಿವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಅವರು ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿಗೆ ಸೇರಬಹುದು ಎನ್ನುವ ಊಹಾಪೋಹಗಳಿಗೆ ನಾಂದಿ ಹಾಡಿದ್ದಾರೆ.
“ನಾನು ಟಿಪಿಸಿಸಿ ಅಧ್ಯಕ್ಷನಾಗಿದ್ದಾಗ ನೀವುಗಳು ನೀಡಿದ ಅಮೂಲ್ಯ ಸಹಕಾರಕ್ಕಾಗಿ ನಾನು ಎಲ್ಲಾ ಕಾಂಗ್ರೆಸ್ ನಾಯಕರು, ಬೆಂಬಲಿಗರಿಗೆ ಪ್ರಾಮಾಣಿಕ ಕೃತಜ್ಞತೆ ಸಲ್ಲಿಸುತ್ತೇನೆ. ಇಂದು ನಾನು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಮತ್ತು ರಾಜಕೀಯದಿಂದಲೂ ನಿವೃತ್ತಿಯಾಗಿದ್ದೇನೆ. ಮಾನ್ಯ ರಾಷ್ಟ್ರೀ ಅಧ್ಯಕ್ಷರೂ ಆದ ಶ್ರೀಮತಿ ಸೋನಿಯಾ ಗಾಂಧೀಜಿ, ಅವರಿಗೆ ನನ್ನ ಪ್ರಾಮಾಣಿಕ ಕೃತಜ್ಞತೆಗಳು. ”ಎಂದು ಅವರು ಟ್ವೀಟ್ ಮಾಡಿದ್ದಾರೆ.
ರಾಜೀನಾಮೆಗೆ ಪ್ರತಿಕ್ರಿಯಿಸಿದ ಸುಶ್ಮಿತಾ ದೇವ್, "ಈ ರಾಜ್ಯದಲ್ಲಿ ನಮ್ಮ ಅಧಿಕಾರಾವಧಿಯು ಕಠಿಣವಾಗಿತ್ತು ... ಭವಿಷ್ಯಕ್ಕೆ ಶುಭವಾಗಲಿ."ಎಂದಿದ್ದಾರೆ. ಸುಶ್ಮಿತಾ ದೇವ್, ಅಖಿಲ ಭಾರತ ಮಹಿಳಾ ಕಾಂಗ್ರೆಸ್ನ ಮಾಜಿ ಅಧ್ಯಕ್ಷೆ, ಇವರು ಹಳೆಯ ಪಕ್ಷವನ್ನು ತೊರೆದು ಕಳೆದ ವಾರ ತೃಣಮೂಲ ಕಾಂಗ್ರೆಸ್ಗೆ ಸೇರಿದ್ದರು.
ಬರಾಕ್ ಕಣಿವೆಯಲ್ಲಿ ಜನರು ಸಿಎಎ ಪರವಾಗಿದ್ದಾರೆ ಎಂದು ಉಲ್ಲೇಖಿಸಿದ್ದ ದೇವ್ ಈ ಹಿಂದೆ ಸಿಎಎ ಕಾಯ್ದೆಯನ್ನು ಬೆಂಬಲಿಸಿದ್ದರು. ಈ ಭಾಗದ ಜನರು ವಿಭಜನೆಯ ನಂತರ ಉಂಟಾದ ಸಂತ್ರಸ್ತರ ಹೋರಾಟವನ್ನು ನೋಡಿದ್ದಾರೆ ಮತ್ತು ಸಿಎಎ ಬಾಂಗ್ಲಾದೇಶಿ ಹಿಂದೂಗಳ ಪೌರತ್ವವನ್ನು ಖಚಿತಪಡಿಸುತ್ತದೆ ಎಂದು ಹೇಳಿ ವಿವಾದ ಹುಟ್ಟುಹಾಕಿದ್ದರು.
ಬಿಸ್ವಾಸ್ ಅವರು ಸುಶ್ಮಿತಾ ದೇವ್ ಅವರ ಹೆಜ್ಜೆಗಳನ್ನು ಅನುಸರಿಸುತ್ತಾರೆ ಎಂದು ಹೇಳಲಾಗಿರುವುದರಿಂದ, ಟಿಎಂಸಿ ತನ್ನ ಬೇರುಗಳನ್ನು ತ್ರಿಪುರಾದಲ್ಲಿ ಹೇಗೆ ಭದ್ರಗೊಳಿಸುತ್ತದೆ ಎನ್ನುವುದರ ಮೇಲೆ ಇವರ ಮುಂದಿನ ನಡೆ ನಿರ್ಧಾರಿತವಾಗಿದೆ ಎಂದು ಹೇಳಲಾಗುತ್ತಿದೆ.
ನ್ಯೂಸ್ 18 ಟಿಎಂಸಿ ನಾಯಕರ ಪ್ರತಿಕ್ರಿಯೆ ಪಡೆಯಲು ಸಂಪರ್ಕಿಸಿದಾಗ, ಟಿಎಂಸಿ ವಕ್ತಾರ ಕುನಾಲ್ ಘೋಷ್ ಪ್ರತಿಕ್ರಿಯಿಸಲು ನಿರಾಕರಿಸಿದರು. ಆದಾಗ್ಯೂ, ತ್ರಿಪುರಾದಲ್ಲಿ ಕಾಂಗ್ರೆಸ್ ಪಕ್ಷವನ್ನು ಬಿಸ್ವಾಸ್ ತೊರೆಯುವುದು ಪಕ್ಷಕ್ಕೆ ದೊಡ್ಡ ಹಿನ್ನಡೆಯಾಗಿದೆ ಎಂದು ಹೇಳಲಾಗುತ್ತಿದೆ.
ಇದೇ ವೇಳೆ, ಬಿಜೆಪಿ ವಕ್ತಾರ ನಬೆಂದು ಭಟ್ಟಾಚಾರ್ಯ ಅವರು ಮಾತನಾಡಿ, ಇದೆಲ್ಲಾ ಕಾಂಗ್ರೆಸ್ನ ಆಂತರಿಕ ವಿಷಯವಾದ್ದರಿಂದ ನಾನು ಏನನ್ನೂ ಹೇಳಲು ಇಷ್ಟಪಡುವುದಿಲ್ಲ ಎಂದು ಹೇಳಿದರು.
25 ವರ್ಷಗಳ ಕಮ್ಯುನಿಷ್ಟ್ ಪಕ್ಷದ ಆಡಳಿತವನ್ನು ಕೊನೆಗಾಣಿಸಿದ ಬಿಜೆಪಿ ಪ್ರಸ್ತುತ ಈ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿದೆ. ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಟಿಎಂಸಿ ದಾಖಲಿಸಿದ ಅಭೂತಪೂರ್ವ ಯಶಸ್ಸಿನ ನಂತರ ಈಗ ತನ್ನ ಹೆಜ್ಜೆ ಮೂಡಿಸಲು ಆರಂಭಿಸಿದೆ. ಕಳೆದ ಒಂದು ತಿಂಗಳಿನಿಂದ ಟಿಎಂಸಿ ಹಾಗೂ ಬಿಜೆಪಿ ನಡುವೆ ಅಕ್ಷರಶಃ ರಣರಂಗ ಏರ್ಪಟ್ಟಿದೆ.
ಇದನ್ನೂ ಓದಿ: ಮಹಿಳೆಯರಷ್ಟೇ ಅಲ್ಲ, ಶಾಲಾ- ಕಾಲೇಜುಗಳನ್ನು ಕಂಡರೂ ತಾಲಿಬಾನಿಗಳಿಗೆ ಅಲರ್ಜಿ: ಇಲ್ಲಿದೆ ಸಂಪೂರ್ಣ ವರದಿ
ಆದರೆ ಕಾಂಗ್ರೆಸ್ ಚುನಾವಣೆ ಹತ್ತಿರವಿರುವಾಗಲೇ ಬಲವಾದ ಪೆಟ್ಟು ತಿಂದಿದ್ದು, ಪಕ್ಷದ ಪ್ರಮುಖ ನಾಯಕತ್ವವನ್ನು ಕಳೆದುಕೊಂಡಿದೆ. ಈಗ ತ್ರಿಪುರಾದಲ್ಲಿ ಮುಂದಿನ ದಿನಗಳಲ್ಲಿ ಬೆಂಗಾಳದಲ್ಲಿ ನಡೆದಂತೆ ಟಿಎಂಸಿ ಹಾಗೂ ಬಿಜೆಪಿ ನಡುವೆ ಸಾಕಷ್ಟು ಜಟಾಪಟಿಗೆ ಈ ರಾಜ್ಯ ಸಾಕ್ಷಿಯಾಗಬಹುದು ಎಂದು ಹೇಳಲಾಗುತ್ತಿದೆ.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ