• Home
 • »
 • News
 • »
 • national-international
 • »
 • ತಾಲಿಬಾನ್​ ರೀತಿ ಟಿಎಂಸಿ ನಾಯಕರನ್ನು ಹೊಡೆದುಹಾಕಿ ಎಂದ ತ್ರಿಪುರಾ ಬಿಜೆಪಿ ಶಾಸಕ

ತಾಲಿಬಾನ್​ ರೀತಿ ಟಿಎಂಸಿ ನಾಯಕರನ್ನು ಹೊಡೆದುಹಾಕಿ ಎಂದ ತ್ರಿಪುರಾ ಬಿಜೆಪಿ ಶಾಸಕ

ಬಿಜೆಪಿ ಶಾಸಕ ಅರುಣ್ ಚಂದ್ರ ಭೌಮಿಕ್

ಬಿಜೆಪಿ ಶಾಸಕ ಅರುಣ್ ಚಂದ್ರ ಭೌಮಿಕ್

ಪಶ್ಚಿಮ ಬಂಗಾಳ ಟಿಎಂಸಿ ನಾಯಕರಿಗೆ ನಿನ್ನೆ ರಾತ್ರಿ ಅಗರ್ತಲಾದ ಖಾಸಗಿ ಹೋಟೆಲ್ ನಲ್ಲಿ ಕಿರುಕುಳ ನೀಡಲಾಯಿತು. ಶಾಸಕರು ಈ ಪ್ರಚೋದನಕಾರಿ ಹೇಳಿಕೆ ನೀಡಿದ ನಂತರ ಈ ಘಟನೆ ಸಂಭವಿಸಿದೆ ಎಂದು ಅವರು ಹೇಳಿದ್ದಾರೆ.

 • Share this:

  ತ್ರಿಪುರಾದ ಆಡಳಿತಾರೂ ಬಿಜೆಪಿ ಶಾಸಕ ಅರುಣ್ ಚಂದ್ರ ಭೌಮಿಕ್, ಬಿಜೆಪಿ ಪಕ್ಷದ ಕಾರ್ಯಕರ್ತರು ಅಗರ್ತಲಾ ವಿಮಾನ ನಿಲ್ದಾಣದಲ್ಲಿ ಬಂದಿಳಿದ ತೃಣಮೂಲ ಕಾಂಗ್ರೆಸ್ ನಾಯಕರನ್ನು ತಾಲಿಬಾನಿ ಶೈಲಿಯಲ್ಲಿ  ಹೊಡೆಯಬೇಕು ಎಂದು ಹೇಳುವ ಮೂಲಕ ವಿವಾದವನ್ನು ಹುಟ್ಟುಹಾಕಿದ್ದಾರೆ.


  ಕೇಸರಿ ಪಕ್ಷವು, ಇದು ಶಾಸಕರ ಅಭಿಪ್ರಾಯವಾಗಿದೆಯೇ ಹೊರತು ಬಿಜೆಪಿಯದ್ದಲ್ಲ ಎಂದು ಹೇಳಿದೆ.


  2023 ರಲ್ಲಿ ತ್ರಿಪುರಾ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು, ಟಿಎಂಸಿ ನಾಯಕರು, ಅದರ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಸೇರಿದಂತೆ ಅನೇಕ ನಾಯಕರುಗಳು ಗುಡ್ಡಗಾಡು ರಾಜ್ಯಕ್ಕೆ ಆಗಾಗ್ಗೆ ಭೇಟಿ ನೀಡುತ್ತಿದ್ದಾರೆ ಮತ್ತು ಟಿಎಂಸಿ ಪಕ್ಷಕ್ಕಾಗಿ ಒಂದು ತಳಹದಿ ಮತ್ತು ಸಂಘಟನೆಯನ್ನು ನಿರ್ಮಿಸಲು ಪ್ರಯತ್ನಿಸುತ್ತಿದ್ದಾರೆ.


  25 ವರ್ಷಗಳ ಕಮ್ಯುನಿಸ್ಟ್ ಆಡಳಿತವನ್ನು ಕೊನೆಗೊಳಿಸುವ ಮೂಲಕ ಅಧಿಕಾರಕ್ಕೆ ಬಂದ ತ್ರಿಪುರಾದ ಬಿಪ್ಲಬ್ ಕುಮಾರ್ ದೇಬ್ ನೇತೃತ್ವದ ಸರ್ಕಾರಕ್ಕೆ ಟಿಎಂಸಿ ಹಾನಿ ಮಾಡಲು ಪ್ರಯತ್ನಿಸುತ್ತಿದೆ. ಇವೆಲ್ಲವೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಪ್ರೇರಣೆಯಿಂದ ನಡೆಯುತ್ತಿದೆ ಎಂದು ಬೆಲೋನಿಯಾ ಕ್ಷೇತ್ರವನ್ನು ಪ್ರತಿನಿಧಿಸುವ ಶಾಸಕರು ಹೇಳಿದರು.


  ದಕ್ಷಿಣ ತ್ರಿಪುರಾ ಜಿಲ್ಲೆಯ ಬೆಲೋನಿಯಾದ ಹಳೆಯ ಟೌನ್ ಹಾಲ್‌ನಲ್ಲಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ನೂತನ ರಾಜ್ಯ ಸಚಿವರಾದ ಪ್ರತಿಮಾ ಭೌಮಿಕ್ ಅವರಿಗೆ ಅಭಿನಂದನಾ ಸಮಾರಂಭದಲ್ಲಿ ಬುಧವಾರ ಬೌಮಿಕ್ ಈ ಹೇಳಿಕೆ ನೀಡಿದ್ದಾರೆ.

  ತಾಲಿಬಾನಿ ಶೈಲಿಯಲ್ಲಿ ನಾವು ಟಿಎಂಸಿಯವರ ಮೇಲೆ ದಾಳಿ ನಡೆಸಬೇಕು ಎಂದು ನಾನು ನಿಮ್ಮೆಲ್ಲರಿಗೂ ಮನವಿ ಮಾಡುತ್ತೇನೆ. ಅವರು ವಿಮಾನ ನಿಲ್ದಾಣದಲ್ಲಿ ಇಳಿದ ತಕ್ಷಣ ನಾವು ಅವರ ಮೇಲೆ ದಾಳಿ ನಡೆಸಬೇಕು. ಬಿಪ್ಲಬ್ ಕುಮಾರ್ ದೇಬ್ ನೇತೃತ್ವದ ನಮ್ಮ ಸರ್ಕಾರವನ್ನು ನಾವು ನಮ್ಮ ಪ್ರತಿ ಹನಿ ರಕ್ತದಿಂದ ರಕ್ಷಿಸುತ್ತೇವೆ ಎಂದು ಅವರು ಹೇಳಿದರು. ಅವರ ಈ ರೀತಿ ಹೇಳಿರುವ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ವ್ಯಾಪಕ ಟೀಕೆಗೆ ಒಳಗಾಗಿದೆ.


  ಅವರ ಈ ಹೇಳಿಕೆಗೆ ಪ್ರತಿಕ್ರಿಯಿಸಿದ ತ್ರಿಪುರಾ ಟಿಎಂಸಿ ನಾಯಕ ಸುಬಲ್ ಭೌಮಿಕ್ ಬಿಜೆಪಿ ಶಾಸಕರ ಬಂಧನಕ್ಕೆ ಒತ್ತಾಯಿಸಿದರು. ಪಶ್ಚಿಮ ಬಂಗಾಳ ಟಿಎಂಸಿ ನಾಯಕರಿಗೆ ನಿನ್ನೆ ರಾತ್ರಿ ಅಗರ್ತಲಾದ ಖಾಸಗಿ ಹೋಟೆಲ್ ನಲ್ಲಿ ಕಿರುಕುಳ ನೀಡಲಾಯಿತು. ಶಾಸಕರು ಈ ಪ್ರಚೋದನಕಾರಿ ಹೇಳಿಕೆ ನೀಡಿದ ನಂತರ ಈ ಘಟನೆ ಸಂಭವಿಸಿದೆ ಎಂದು ಅವರು ಹೇಳಿದ್ದಾರೆ.


  ಬಿಜೆಪಿ ತ್ರಿಪುರಾದ ಮುಖ್ಯ ವಕ್ತಾರ ಸುಬ್ರತ ಚಕ್ರವರ್ತಿ ಅವರು, ಭೌಮಿಕ್ ಅವರು ಮಾಡಿರುವ ಆರೋಪ ನಿರಾಧಾರ. ಶಾಸಕರ ಹೇಳಿಕೆಗೆ ಪಕ್ಷವು ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ. ಇದು ಸಂಪೂರ್ಣವಾಗಿ ಅವರ ಜವಾಬ್ದಾರಿ. ಇದು ಬಿಜೆಪಿಯ ಸಂಸ್ಕೃತಿಯಲ್ಲ ಎಂದು ಚಕ್ರವರ್ತಿ ಪಿಟಿಐಗೆ ತಿಳಿಸಿದ್ದಾರೆ.

  ಭೌಮಿಕ್ ಅವರನ್ನು ಸಂಪರ್ಕಿಸಿದಾಗ, ಟಿಎಂಸಿಯನ್ನು ಗಂಭೀರವಾಗಿ ಎದುರಿಸುವುದು ಹೇಗೆ ಎಂದು ಸಮರ್ಥಿಸಲು ಉದಾಹರಣೆಯಾಗಿ ಈ ಹೇಳಿಕೆಯನ್ನು ನೀಡಿದ್ದಾರೆ ಎಂದು ಹೇಳಿದರು.


  ತ್ರಿಪುರಾದಲ್ಲಿ ಬಿಜೆಪಿ ಸರ್ಕಾರಕ್ಕೆ ಹಾನಿ ಮಾಡಲು ತೃಣಮೂಲ ಕಾಂಗ್ರೆಸ್ ಪ್ರಯತ್ನಿಸುತ್ತಿರುವ ರೀತಿಯಲ್ಲಿ ಅದಕ್ಕೆ ಬಲವಾದ ಪ್ರತಿಕ್ರಿಯೆಯ ಅಗತ್ಯವಿದೆ ಎಂಬುದನ್ನು ಸ್ಪಷ್ಟಪಡಿಸಲು ನಾನು 'ತಾಲಿಬಾನಿ' ಪದವನ್ನು ಬಳಸಿದ್ದೇನೆ. ತಾಲಿಬಾನಿ ಪದದ ಬಳಕೆಯು ತಪ್ಪು ಸಂದೇಶವನ್ನು ರವಾನಿಸಿರಬಹುದು, ಆದರೆ ಅವುಗಳನ್ನು ಗಂಭೀರವಾಗಿ ಎದುರಿಸುವುದು ಹೇಗೆ ಎಂಬುದನ್ನು ವಿವರಿಸುವುದು ನನ್ನ ಉದ್ದೇಶವಾಗಿತ್ತು ಎಂದು ಬಿಜೆಪಿ ಶಾಸಕ ಹೇಳಿದರು.


  ಇದನ್ನೂ ಓದಿ: ಬಿಜೆಪಿ ಜಿಲ್ಲಾ ಅಧ್ಯಕ್ಷರ ಜೇಬಿಗೆ ಕತ್ತರಿ ಹಾಕಿದ ಕಳ್ಳರು...! ಕಿಸೆಯಲ್ಲಿದ್ದ ಹಣ, ಮೊಬೈಲ್​ ಎಲ್ಲಾ ಮಾಯ

  ಕಳೆದ ಕೆಲವು ವಾರಗಳಿಂದ ತ್ರಿಪುರಾದಿಂದ ಟಿಎಂಸಿ ಮತ್ತು ಬಿಜೆಪಿ ನಡುವೆ ಘರ್ಷಣೆಗಳು ವರದಿಯಾಗಿವೆ. ಮೊದಲ ಭೇಟಿಯಲ್ಲಿ, ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿಯವರ ಬೆಂಗಾವಲಿನ ಮೇಲೆ ಆಗಸ್ಟ್ 3 ರಂದು ಬಿಜೆಪಿ ಕಾರ್ಯಕರ್ತರು ತ್ರಿಪುರದಲ್ಲಿ ದಾಳಿ ನಡೆಸಿದ್ದಾರೆ ಎಂದು ಹೇಳಲಾಗಿದೆ.  ಆಗಸ್ಟ್ 7 ರಂದು ಟಿಎಂಸಿ ತನ್ನ ಇಬ್ಬರು ಸಂಸದರಾದ ದೋಲಾ ಸೇನ್ ಮತ್ತು ಅಪರೂಪಾ ಪೊದ್ದರ್ ಮೇಲೆ ಸ್ವಾತಂತ್ರ್ಯ ದಿನಾಚರಣೆಯಂದು ದಕ್ಷಿಣ ತ್ರಿಪುರಾ ಜಿಲ್ಲೆಯಲ್ಲಿ ಬಿಜೆಪಿ ಬೆಂಬಲಿಗರು ಎರಡು ಬಾರಿ ದಾಳಿ ನಡೆಸಿದ್ದಾರೆ ಎಂದು ಆರೋಪಿಸಿದೆ. ಕೇಸರಿ ಪಕ್ಷವು ಆರೋಪಗಳನ್ನು ನಿರಾಕರಿಸಿದೆ, ಟಿಎಂಸಿ ಅವರಿಗೆ ಈ ರಾಜ್ಯದಲ್ಲಿ ಯಾವುದೇ ಅಪಾಯವಿಲ್ಲ ಎಂದು ಹೇಳಿದೆ.
  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.

  Published by:HR Ramesh
  First published: