Bhabesh Kalita| ಪೆಟ್ರೋಲ್ ಬೆಲೆ 200ಕ್ಕೆ ಏರಿದರೆ ಟ್ರಿಪಲ್ ರೈಡಿಂಗ್​ಗೆ ಅವಕಾಶ; ಅಸ್ಸಾಂ ಬಿಜೆಪಿ ಅಧ್ಯಕ್ಷನ ವಿಲಕ್ಷಣ ಹೇಳಿಕೆ!

ಆಡಳಿತಾರೂಢ ಬಿಜೆಪಿಯ ಅಧ್ಯಕ್ಷರಾದ ಭಾಬೇಶ್ ಕಲಿತಾ ಇಂತಹ ವಿಲಕ್ಷಣವಾದ ಹೇಳಿಕೆಯನ್ನು ನೀಡುತ್ತಿರುವುದು ಅತ್ಯಂತ ಕಳವಳಕಾರಿ ಸಂಗತಿಯಾಗಿದೆ ಎಂದು ಅಸ್ಸಾಂ ಕಾಂಗ್ರೆಸ್​ ಕಿಡಿಕಾರಿದೆ.

ಅಸ್ಸಾಂ ಬಿಜೆಪಿ ಅಧ್ಯಕ್ಷ ಭಾಬೇಶ್ ಕಲಿತಾ.

ಅಸ್ಸಾಂ ಬಿಜೆಪಿ ಅಧ್ಯಕ್ಷ ಭಾಬೇಶ್ ಕಲಿತಾ.

 • Share this:
  ಅಸ್ಸಾಂ: ದೇಶದಲ್ಲಿ ಪೆಟ್ರೋಲ್​ ಮತ್ತು ಡೀಸೆಲ್ ಬೆಲೆ (Petrol-Diesel Price) ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಪೆಟ್ರೋಲ್ ಈಗಾಗಲೇ 113 ರೂ ಗಡಿದಾಟಿದ್ದರೆ, ಡೀಸೆಲ್ 102 ರೂ.ಗೆ ಮಾರಾಟ ಮಾಡಲಾಗುತ್ತಿದೆ. ತೈಲ ಬೆಲೆ (Oil Price Hike) ಏರಿಕೆಯ ಪರಿಣಾಮ ದಿನೋಪಯೋಗಿ ವಸ್ತುಗಳ ಬೆಲೆಯೂ ಏರುತ್ತಲೇ ಇದೆ. ಪರಿಣಾಮ ಜನ ಸಾಮಾನ್ಯರು ಬೆಲೆ ಏರಿಕೆ ಬಿಸಿಗೆ ಸಾಕಷ್ಟು ಸಂಕಷ್ಟ ಎದುರಿಸುವಂತಾಗಿದೆ. ಹೀಗಾಗಿ ಕೇಂದ್ರ ಬಿಜೆಪಿ (BJP) ಸರ್ಕಾರ ತೈಲ ಬೆಲೆ ಇಳಿಸೇಕು ಎಂಬ ಕೂಗು ಕೇಳಿಬರುತ್ತಿದೆ. ಆದರೆ, ಈ ಬಗ್ಗೆ ಉಡಾಫೆ ಹೇಳಿಕೆ ನೀಡಿ ಅಸ್ಸಾಂ ಬಿಜೆಪಿ ಅಧ್ಯಕ್ಷ ಭಾಬೇಶ್ ಕಲಿತಾ (Bhabesh Kalita), "ಅಸ್ಸಾಂ (Assam) ರಾಜ್ಯದಲ್ಲಿ ಪೆಟ್ರೋಲ್ ಬೆಲೆ 200 ರೂಪಾಯಿಗೆ ಏರಿದಾಗ ದ್ವಿಚಕ್ರ ವಾಹನಗಳಲ್ಲಿ ಟ್ರಿಪಲ್ ರೈಡಿಂಗ್‌ಗೆ ಅವಕಾಶ ನೀಡಲಾಗುವುದು" ಎಂದು ಹೇಳುವ ಮೂಲಕ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

  ಅಸ್ಸಾಂನ ತಾಮುಲ್ಪುರದಲ್ಲಿ ಮಂಗಳವಾರ ನಡೆದ ಸಮಾರಂಭದಲ್ಲಿ ಮಾತನಾಡಿರುವ ಮಾಜಿ ಸಚಿವರೂ ಆಗಿದ್ದ ಭಾಬೇಶ್ ಕಲಿತಾ, "ರಾಜ್ಯದಲ್ಲಿ ಪೆಟ್ರೋಲ್ ಬೆಲೆ ರೂ. 200 ಕ್ಕೆ ಏರಿಕೆಯಾದ ನಂತರ ದ್ವಿಚಕ್ರ ವಾಹನದಲ್ಲಿ ಮೂವರು ಸವಾರಿ ಮಾಡಲು ಅವಕಾಶ ನೀಡಲಾಗುವುದು. ಆದರೆ, ಸರ್ಕಾರದಿಂದ ಅದಕ್ಕೆ ಅನುಮತಿ ಪಡೆಯಬೇಕು" ಎಂದು ಹೇಳೀಕೆ ನೀಡಿದ್ದಾರೆ. ಈ ಹೇಳಿಕೆ ವೈರಲ್ ಆಗಿದ್ದು ಬಿಜೆಪಿ ಅಧ್ಯಕ್ಷನ ಮಾತಿಗೆ ಇಡೀ ದೇಶದ ಜನ ಕಿಡಿಕಾರುತ್ತಿದ್ದಾರೆ. ಅಲ್ಲದೆ, ವಿರೋಧ ಪಕ್ಷಗಳೂ ಸಹ ಬಿಜೆಪಿ ವಿರುದ್ಧ ಟೀಕಾಸ್ತ್ರ ಪ್ರಯೋಗಿಸುತ್ತಿದ್ದಾರೆ.

  ಪೆಟ್ರೋಲ್ ಡೀಸೆಲ್ ಬೆಲೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಜನರು ವಾಹನಗಳನ್ನು ರೋಡಿಗಿಳಿಸಲು ಹಿಂದೇಟು ಹಾಕುವಂತಹ ಸ್ಥಿತಿ ಎದುರಾಗಿದೆ. ತೈಲಗಳು ಬಡವರ ಕೈಗೆಟುಕದಂತಾಗಿದೆ. ಇಂತಹ ಸಮಯದಲ್ಲಿ ಬಿಜೆಪಿ ಮುಖ್ಯಸ್ಥರ ಹೇಳಿಕೆ ರಾಜ್ಯದಲ್ಲಿ ಆರೋಪ-ಪ್ರತ್ಯಾರೋಪಗಳಿಗೆ ಕಾರಣವಾಗಿದೆ.

  ಬಿಜೆಪಿ ನಾಯಕನ ಹೇಳಿಕೆಯ ವಿರುದ್ಧ ಕಾಂಗ್ರೆಸ್​ ವಾಗ್ದಾಳಿ:

  ಅಸ್ಸಾಂ ಬಿಜೆಪಿ ಅಧ್ಯಕ್ಷ ಭಾಬೇಶ್ ಕಲಿತಾ ಅವರ  ಟ್ರಿಪಲ್ ರೈಡಿಂಗ್‌ಗೆ ಅವಕಾಶ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್, "ಆಡಳಿತಾರೂಢ ಬಿಜೆಪಿಯ ಅಧ್ಯಕ್ಷರಾದ ಭಾಬೇಶ್ ಕಲಿತಾ ಇಂತಹ ವಿಲಕ್ಷಣವಾದ ಹೇಳಿಕೆಯನ್ನು ನೀಡುತ್ತಿರುವುದು ಅತ್ಯಂತ ಕಳವಳಕಾರಿ ಸಂಗತಿಯಾಗಿದೆ. ಅವರು ಈ ಹೇಳಿಕೆಯನ್ನು ತಮಾಷೆಗಾಗಿ ಹೇಳಿದ್ದಾರೋ ಅಥವಾ ನಿಜವಾಗಿಯೂ ಗಂಭೀರವಾಗಿ ಹೇಳಿದ್ದಾರೋ?" ಎಂದು ಅಸ್ಸಾಂ ಕಾಂಗ್ರೆಸ್‌ನ ಮಾಧ್ಯಮ ವಿಭಾಗದ ಅಧ್ಯಕ್ಷರಾದ ಬೊಬೀತಾ ಶರ್ಮಾ ಪ್ರಶ್ನಿಸಿದ್ದಾರೆ.

  ಇದನ್ನೂ ಓದಿ: Savarkar Controversy| ಸಾವರ್ಕರ್​ ಕ್ಷಮಾಪಣೆಗೆ ಗಾಂಧಿ ಸಲಹೆ ನೀಡಿದ್ದರೇ? ನಿಜಕ್ಕೂ ಇದೊಂದು ಹಾಸ್ಯಾಸ್ಪದ ಹೇಳಿಕೆ; ರಾಜಮೋಹನ್ ಗಾಂಧಿ

  "ಅವರ ಹೇಳಿಕೆಗೆ ಕಾರಣ ಏನಾದರೂ ಇರಲಿ, ಇಂಧನ ಬೆಲೆ ಏರಿಕೆಯ ಬಗ್ಗೆ ಅವರು ಇಂತಹ ವಿಚಿತ್ರ ಹೇಳಿಕೆಗಳನ್ನು ನೀಡುತ್ತಿರುವುದು ಇಂಧನ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಸಂಕಷ್ಟ ಎದುರಿಸುತ್ತಿರುವ ಸಾಮಾನ್ಯ ಜನರ ಬಗೆಗಿನ ಅಗೌರವ ಮತ್ತು ಅಸೂಕ್ಷ್ಮತೆಯನ್ನು ವ್ಯಕ್ತಪಡಿಸುತ್ತದೆ" ಎಂದು ಶರ್ಮಾ ಕಿಡಿಕಾರಿದ್ದಾರೆ. ಅಸ್ಸಾಂನ ಗುವಾಹಟಿಯಲ್ಲಿ ಮಂಗಳವಾರ ಪೆಟ್ರೋಲ್ ಬೆಲೆ 101.80 ರೂಪಾಯಿ ಮತ್ತು ಡೀಸೆಲ್ 94.27 ರೂಪಾಯಿಯಾಗಿದೆ.

  ಇದನ್ನೂ ಓದಿ: ಭಾರೀ ಮಳೆ ಪ್ರವಾಹಕ್ಕೆ ಉತ್ತರಾಖಂಡ್ ತತ್ತರ; 23 ಜನರ ಸಾವು, 100ಕ್ಕೂ ಹೆಚ್ಚು ಪ್ರವಾಸಿಗರ ರಕ್ಷಣೆ, ಹಲವರು ನಾಪತ್ತೆ!

  ನಿಲ್ಲದ ಪೆಟ್ರೋಲ್ ಬೆಲೆ ಏರಿಕೆ:

  ಬಿಜೆಪಿ ನಾಯಕರು ಕೇಂದ್ರದಲ್ಲಿ ತಾವು ಅಧಿಕಾರಕ್ಕೆ ಬಂದರೆ ಪೆಟ್ರೋಲ್ ಮತ್ತು ಡೀಸೆಲ್​ ಬೆಲೆಯನ್ನು 40 ರೂ.ಗೆ ಇಳಿಸುವ ಭರವಸೆ ನೀಡಿದ್ದರು. ಆದರೆ, ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಕಳೆದ 7 ವರ್ಷದಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಕನಿಷ್ಟ ಲೀಟರ್​ಗೆ 40 ರೂ. ಏರಿಕೆಯಾಗಿದೆ. ಅದರಲ್ಲೂ ತೈಲ ಬೆಲೆ ಪ್ರತಿದಿನ ಏರಿಕೆಯಾಗುತ್ತಿರುವುದು ಜನರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಈ ರೀತಿಯ ಬೆಲೆ ಏರಿಕೆಯಿಂದಾಗಿ ಈಗಾಗಲೇ ಜನ ಸಾಮಾನ್ಯರು ಬಸವಳಿದಿದ್ದು, ಮುಂದಿನ ಚುನಾವಣೆಗಳಲ್ಲಿ ಬಿಜೆಪಿ ಇದರ ಫಲಿತಾಂಶವನ್ನು ಪಡೆಯಲಿದೆ ಎಂದು ರಾಜಕೀಯ ತಜ್ಞರು ವಿಶ್ಲೇಷಣೆ ಮಾಡುತ್ತಿದ್ದಾರೆ.
  Published by:MAshok Kumar
  First published: