ನವದೆಹಲಿ(ಜುಲೈ.30): ಲೋಕಸಭೆ ಬೆನ್ನಲ್ಲೇ ರಾಜ್ಯಸಭೆಯಲ್ಲೂ ತ್ರಿವಳಿ ತಲಾಖ್ ಮಸೂದೆ ಅಂಗೀಕಾರ ಮಾಡಲಾಗಿದೆ. ಕಳೆದ ಎರಡು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಲೋಕಸಭೆಯಲ್ಲಿ ಎರಡು ಬಾರಿ ಮಸೂದೆ ಅಂಗೀಕರವಾಗಿತ್ತು. 2017 ಮತ್ತು 2018ರಲ್ಲಿ ಮಸೂದೆ ಅಂಗೀಕಾರ ಪಡೆದುಕೊಂಡಿತ್ತು. ಆದರೆ, ಮಸೂದೆ ಪಾಸ್ ಬೇಕಾದ ಸದಸ್ಯ ಬಲವನ್ನು ಎನ್ಡಿಎ ಹೊಂದಿಲ್ಲದ ಕಾರಣ ರಾಜ್ಯಸಭೆಯಲ್ಲಿ ಬೆಂಬಲ ಸಿಕ್ಕಿರಲಿಲ್ಲ. ಸದ್ಯವೀಗ ಎನ್ಡಿಎಗೆ ಲೋಕಸಭೆಯಲ್ಲಿ ಭಾರೀ ಬಹುಮತವಿದೆ. ಇದರ ಪರಿಣಾಮ ರಾಜ್ಯಸಭೆ ಕಲಾಪದಲ್ಲೂ ತ್ರಿವಳಿ ತಲಾಖ್ ಮಸೂದೆ ಅಂಗೀಕಾರವಾಗಿದೆ. ತ್ರಿವಳಿ ತಲಾಖ್ ಮಸೂದೆ ಪರವಾಗಿ ಒಟ್ಟು 99 ಮತಗಳು, ವಿರೋಧವಾಗಿ 84 ಮತಗಳು ಬಿದ್ದಿವೆ.
ಕಳೆದ ಗುರುವಾರ(ಜು.25) ತ್ರಿವಳಿ ತಲಾಖ್ ತಿದ್ದುಪಡಿ ವಿಧೇಯಕಕ್ಕೆ ಲೋಕಸಭೆಯಲ್ಲಿ ಅಂಗೀಕಾರ ಸಿಕ್ಕಿತ್ತು. ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರೇ ಮೂರನೇ ಬಾರಿಗೆ ಸಂಸತ್ನಲ್ಲಿ ತ್ರಿವಳಿ ತಲಾಖ್ ಮಸೂದೆ ಮಂಡಿಸಿದ್ದರು. ಅಲ್ಲದೇ "ಈ ಬಿಲ್ಧರ್ಮಾಧಾರಿತ ಅಲ್ಲ, ಬದಲಿಗೆ ಮಹಿಳೆಯರ ಸುರಕ್ಷತೆ ಮತ್ತು ಸಮಾನತೆಗಾಗಿ ಜಾರಿಯಾಗಬೇಕಿದೆ" ಎಂದಿದ್ದರು.
ತ್ರಿವಳಿ ತಲಾಖೆ ಮಸೂದೆಯಲ್ಲಿ ಕೆಲವು ಅಂಶಗಳು ಅಸಾಂವಿಧಾನಿಕವಾಗಿವೆ. ಈ ಕರಡು ಕಾನೂನನ್ನು ಇನ್ನಷ್ಟು ಆಳವಾಗಿ ಅವಲೋಕಿಸಬೇಕಾದ ಅಗತ್ಯವಿದೆ. ಹೀಗಾಗಿ ಮುಸ್ಲಿಂ ಮಹಿಳೆಯರ ವೈವಾಹಿಕ ಹಕ್ಕುಗಳ ರಕ್ಷಣೆ ಮಸೂದೆ ಒಳಗೊಂಡಿರುವ ಅಸಾಂವಿಧಾನಿಕ ಅಂಶಗಳನ್ನು ಮತ್ತೊಮ್ಮೆ ಪರಿಶೀಲಿಸಬೇಕಿದೆ ಎಂದು ಈ ಬಾರಿಯೂ ವಿಧೇಯಕಕ್ಕೆ ಪ್ರಾದೇಶಿಕ ಪಕ್ಷಗಳು ಭಾರಿ ವಿರೋಧ ವ್ಯಕ್ತಪಡಿಸಿವೆ.
ಮುಸ್ಲಿಂ ಮಹಿಳೆಯರಿಗೆ ಭದ್ರತೆ ನೀಡುವ ಸಲುವಾಗಿ ಬಿಲ್ ಜಾರಿಗೊಳಿಸಲಾಗುತ್ತಿದೆ. ಯಾವುದೇ ಸಮುದಾಯವಾಗಲೀ ನಾವು ಮಹಿಳೆಯರಿಗೆ ಒಳ್ಳೆಯದನ್ನು ಮಾಡುತ್ತೇವೆ. ಭಾರತ ಮಾತ್ರವಲ್ಲದೆ ಪ್ರಪಂಚದ ಅನೇಕ ರಾಷ್ಟ್ರಗಳು ತ್ರಿವಳಿ ತಲಾಖ್ ವಿರುದ್ಧ ಕಾನೂನು ತಂದಿವೆ ಎಂದಿದ್ದರು ರವಿಶಂಕರ್ ಪ್ರಸಾದ್.
ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದ್ದ ಟಿಪ್ಪು ಜಯಂತಿ ರದ್ದು; ಸಿಎಂ ಬಿಎಸ್ವೈ ಸರ್ಕಾರ ಆದೇಶ
ಏನಿದು ತಲಾಖೆ ಕಾಯ್ದೆ?: ಮುಸ್ಲಿಂ ವೈಯಕ್ತಿಕ ಕಾನೂನಿನಲ್ಲಿ ತ್ರಿವಳಿ ತಲಾಖ್ ಪದ್ಧತಿಗೆ ಸಮ್ಮತಿ ಇದೆ. ಮೂರು ಬಾರಿ ತಲಾಖ್ ಹೇಳುವ ಮೂಲಕ ಪತ್ನಿಗೆ ವಿಚ್ಛೇದನ ಕೊಡಬಹುದಾಗಿದೆ. ಇಸ್ಲಾಮ್ನ ಮೂಲ ಕಾನೂನಿನಲ್ಲಿ ತ್ರಿವಳಿ ತಲಾಖ್ಗೆ ಬೇರೆಯೇ ವಿಧಿವಿಧಾನಗಳು ಇವೆ. ಆದರೂ ಈಗೀಗ ಈ ಕಾನೂನು ದುರ್ಬಳಕೆಯಾಗಿ ಇನ್ಸ್ಟಂಟ್ ತಲಾಖ್ ಆಗಿಬಿಟ್ಟಿದೆ. ನಿಂತಲ್ಲೇ ಮೂರು ಬಾರಿ ತಲಾಖ್ ಎಂದು ಹೇಳುವುದು; ಮೊಬೈಲ್ ಫೋನಲ್ಲೇ ಮೂರು ಬಾರಿ ತಲಾಖ್ ಎಂದು ಹೇಳುವುದು; ವಾಟ್ಸಾಪ್ ಅಥವಾ ಮೆಸೇಜ್ ಮೂಲಕ ಮೂರು ಬಾರಿ ತಲಾಖ್ ಎಂದು ಹೇಳುವುದು; ಪತ್ರವೊಂದರಲ್ಲಿ ಮೂರು ಬಾರಿ ತಲಾಖ್ ಎಂದು ಬರೆಯುವುದು ಇತ್ಯಾದಿ ಅಕ್ರಮ ತಲಾಖ್ ಪದ್ಧತಿಗಳು ಚಾಲ್ತಿಯಲ್ಲಿವೆ. ಮುಸ್ಲಿಮ್ ಮಹಿಳೆಯರು ತಲಾಖ್ಗೆ ತುತ್ತಾಗಿ ನಿಕೃಷ್ಟಕ್ಕೊಳಗಾಗುತ್ತಿದ್ದಾರೆನ್ನಲಾಗಿದೆ.
ಕೇಂದ್ರ ಸರಕಾರ ಇದೇ ಕಾರಣ ಕೊಟ್ಟು ತ್ರಿವಳಿ ತಲಾಖ್ ಪದ್ಧತಿಯನ್ನು ರದ್ದುಗೊಳಿಸಲು ತೀರ್ಮಾನಿಸಿ ಹೊಸ ಕಾಯ್ದೆ ಜಾರಿಗೆ ತರಲು ಮಸೂದೆ ಹೊರಡಿಸಿತು. ಈ ಮಸೂದೆಯು ಲೋಕಸಭೆಯಲ್ಲಿ ಅನುಮೋದನೆ ಪಡೆದರೂ ರಾಜ್ಯಸಭೆಯಲ್ಲಿ ವಿಫಲವಾಯಿತು. ಕಾಂಗ್ರೆಸ್ ಸೇರಿದಂತೆ ಹಲವು ವಿಪಕ್ಷಗಳು ಈ ಮಸೂದೆಯನ್ನು ವಿರೋಧಿಸಿವೆ.
-------------
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ