• Home
 • »
 • News
 • »
 • national-international
 • »
 • ಪರಿವರ್ತನೆಯ ಹಾದಿಯಲ್ಲಿ ರೈಲ್ವೆ; ದುಬಾರಿಯಾಗಲಿದೆ ರೈಲು ಪ್ರಯಾಣ

ಪರಿವರ್ತನೆಯ ಹಾದಿಯಲ್ಲಿ ರೈಲ್ವೆ; ದುಬಾರಿಯಾಗಲಿದೆ ರೈಲು ಪ್ರಯಾಣ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಭಾರತದಲ್ಲಿ ರೈಲು ಪ್ರಯಾಣಕ್ಕೆ ಭಾರೀ ಸಬ್ಸಿಡಿ ಇದೆ. ಇದೇ ಕಾರಣಕ್ಕೆ ಪ್ರಯಾಣದ ದರ ಅತ್ಯಂತ ಅಗ್ಗ ಇದೆ. ನಷ್ಟದಲ್ಲಿ ನಡೆಯುತ್ತಿರುವ ಸಾರಿಗೆ ವ್ಯವಸ್ಥೆ ಆಗಿದೆ. ಈಗ ಈ ನಷ್ಟದ ಜಾಲದಿಂದ ಬಿಡಿಸಿಕೊಳ್ಳಲು ಕ್ರಮ ತೆಗೆದುಕೊಳ್ಳಲಾಗುತ್ತಿದ್ದು, ಪ್ರಯಾಣ ದರ ಏರಿಕೆ ನಿರೀಕ್ಷಿತವೇ ಆಗಿದೆ.

 • moneycontrol
 • 3-MIN READ
 • Last Updated :
 • Share this:

  ನವದೆಹಲಿ(ಅ. 27): ರೈಲು ಪ್ರಯಾಣ ಎಂದರೆ ಎಂಥವರಿಗೂ ಕೈಗೆಟುಕುವಂಥದ್ದು. ಭಾರತದಲ್ಲಿರುವ ಅತ್ಯಂತ ಅಗ್ಗದ ಸಾರಿಗೆ ವ್ಯವಸ್ಥೆ ಅದಾಗಿದೆ. ಸಾಕಷ್ಟು ಬಡ-ಬಗ್ಗರು, ನಿಯಮಿತ ಪ್ರಯಾಣಿಕರಿಗೆ ರೈಲು ಬಂಡಿ ವರದಾನವೇ ಸರಿ. ಇದರ ಜೊತೆಗೆ ಹೆಚ್ಚು ಸವಲತ್ತುಗಳಿಲ್ಲದ, ವೃತ್ತಿಪರತೆ ಇಲ್ಲದ ವ್ಯವಸ್ಥೆಯೂ ಹೌದು. ಇದೀಗ, ಭಾರತೀಯ ರೈಲ್ವೆ ಬದಲಾವಣೆಯ ಪಥದಲ್ಲಿದೆ. ಮುಂದಿನ ದಿನಗಳಲ್ಲಿ ರೈಲ್ವೆಯ ಹಳೆಯ ಪೊರೆ ಕಳಚಿ ಹೊಸ ಪೊರೆ ಬರುವುದನ್ನು ಕಾಣಬಹುದು. ಈಗಾಗಲೇ ಪ್ರಕ್ರಿಯೆಗಳು ಪ್ರಾರಂಭವಾಗಿವೆ. ಸಾಂಪ್ರದಾಯಿಕ ರೈಲು ಪ್ರಯಾಣಿಕರಿಗೆ ಎಲ್ಲಕ್ಕಿಂತ ಹೆಚ್ಚು ಕಣ್ಣು ಕುಕ್ಕುವ ಬದಲಾವಣೆ ಎಂದರೆ ಅದು ಪ್ರಯಾಣ ದರ. ರೈಲು ಪ್ರಯಾಣ ಮುಂದೆ ತುಟ್ಟಿಯಾಗುವುದು ಬಹುತೇಕ ನಿಶ್ಚಿತವೆನಿಸಿದೆ. ಕೆಲ ರೈಲು ಮಾರ್ಗಗಳ ಖಾಸಗೀಕರಣ, ಬಳಕೆದಾರ ಶುಲ್ಕ ಇತ್ಯಾದಿ ಕ್ರಮಗಳು ಈ ನಿಟ್ಟಿನಲ್ಲಿ ಸ್ಪಷ್ಟ ಸುಳಿವು ನೀಡುತ್ತಿವೆ. ನಷ್ಟದಲ್ಲಿರುವ ರೈಲ್ವೆ ಇಲಾಖೆಗೆ ಲಾಭದ ಕಾಯಕಲ್ಪ ಕೊಡುವ ಪ್ರಯತ್ನಗಳಿವು.


  ಭಾರತೀಯ ರೈಲ್ವೆ ಅತ್ಯಂತ ಅಗ್ಗದ ಸಾರಿಗೆ ವ್ಯವಸ್ಥೆ ಆಗಲು ಅದರದ್ದೇ ಕಾರಣಗಳಿವೆ. ಇಲ್ಲಿ ಎಲ್ಲಾ ಹಂತದಲ್ಲೂ ಪ್ರಯಾಣಿಕರಿಗೆ ಸರ್ಕಾರದಿಂದ ಭಾರೀ ಸಬ್ಸಿಡಿ ನೀಡಲಾಗುತ್ತಿತ್ತು. ಇದರಿಂದಾಗಿ ಇಲಾಖೆ ಬಹಳ ವರ್ಷಗಳಿಂದಲೂ ನಷ್ಟದಲ್ಲೇ ನಡೆಯುತ್ತಾ ಬಂದಿದೆ. ಪ್ರತಿಯೊಬ್ಬ ಪ್ರಯಾಣಿಕರ ಪ್ರಯಾಣ ಹೊರೆ ಇಲಾಖೆ ಮೇಲೆ ಬೀಳುತ್ತದೆ. ಈಗ ಕೇಂದ್ರ ಸರ್ಕಾರ ತರುತ್ತಿರುವ ಪರಿವರ್ತನೆಗಳಲ್ಲಿ ಈ ಸಬ್ಸಿಡಿ ಹಿಂಪಡೆಯುವ ಕ್ರಮವೂ ಸೇರಲಿದೆ. ಈಗಾಗಲೇ ಹಬ್ಬದ ಪ್ರಯುಕ್ತ ಬಿಡಲಾಗಿರುವ ಸ್ಪೆಷಲ್ ಟ್ರೈನುಗಳಲ್ಲಿ ಈ ಸಬ್ಸಿಡಿಗೆ ಗುಡ್​ಬೈ ಹೇಳಲಾಗಿದೆ. ಈ ವಿಶೇಷ ರೈಲುಗಳಲ್ಲಿ ಪ್ರಯಾಣಕ್ಕೆ ಮೂಲ ದರಕ್ಕಿಂತ ಶೇ. 30ರವರೆಗೆ ಹೆಚ್ಚುವರಿ ಬೆಲೆ ನಿಗದಿ ಮಾಡಲಾಗಿದೆ. ಇದು ಭಾರತೀಯ ರೈಲ್ವೆಯ ಭವಿಷ್ಯದ ಪಥದ ದ್ಯೋತಕವಾಗಿದೆ.


  ಇದನ್ನೂ ಓದಿ: ಭಾರತದಲ್ಲಿ ಮಾನವ ಹಕ್ಕು ಹೋರಾಟಗಾರರನ್ನು ಕಾನೂನುಬಾಹಿರವಾಗಿ ಬಂಧಿಸಲಾಗುತ್ತಿದೆ: ವಿಶ್ವಸಂಸ್ಥೆ ಕಳವಳ


  ಖಾಸಗಿ ರೈಲುಗಳು:


  ಭಾರತೀಯ ರೈಲ್ವೆಯನ್ನು ಖಾಸಗೀಕರಣಗೊಳಿಸುವ ನಿಟ್ಟಿನಲ್ಲಿ ಈಗ ಕೆಲ ಆಯ್ದ ಮಾರ್ಗಗಳನ್ನ ಖಾಸಗಿ ಸಂಸ್ಥೆಯವರಿಗೆ ವಹಿಸಲಾಗುತ್ತಿದೆ. ದೇಶಾದ್ಯಮತ 109 ಮಾರ್ಗಗಳನ್ನ ಖಾಸಗಿಯವರಿಗೆ ನೀಡಲಾಗುತ್ತಿದೆ. ಇಲ್ಲಿ ರೈಲು ಪ್ರಯಾಣ ದರವನ್ನು ನಿಗದಿಪಡಿಸುವ ಸಂಪೂರ್ಣ ಸ್ವಾತಂತ್ರ್ಯವನ್ನು ಖಾಸಗಿಯವರಿಗೆ ಬಿಡಲಾಗುತ್ತಿದೆ. ರೈಲ್ವೆ ಇಲಾಖೆಗೆ ಲಾಭಾಂಶ ನೀಡಬೇಕಾಗಿರುವ ಖಾಸಗಿ ಕಂಪನಿಗಳು ಪ್ರಯಾಣ ದರವನ್ನು ಹೆಚ್ಚಿಸುವುದು ಸಹಜ. ಇಲ್ಲಿ ರೈಲು ಪ್ರಯಾಣಿಕನಿಗೆ ಕಾಸಿಗೆ ತಕ್ಕಂಥ ಕಜ್ಜಾಯ ಸಿಗುತ್ತದೋ ಅಥವಾ ಸೌಲಭ್ಯದ ಹೆಸರಿನಲ್ಲಿ ಹಣದ ಲೂಟಿ ಆಗುತ್ತದೋ ಎಂಬುದು ಮುಂದಿನ ದಿನಗಳಲ್ಲಿ ಕಾದುನೋಡಬೇಕಷ್ಟೇ.


  ಬಳಕೆದಾರ ಶುಲ್ಕ:


  ಕೆಲ ಆಯ್ದ ರೈಲ್ವೆ ನಿಲ್ದಾಣಗಳಲ್ಲಿ ಪ್ರಯಾಣಿಕರ ನಿರ್ವಹಣೆಗಾಗಿ ಬಳಕೆದಾರ ಶುಲ್ಕವನ್ನು ನಿಗದಿ ಮಾಡುವ ಪ್ರಸ್ತಾವ ಇದೆ. ನ್ಯೂ ಡೆಲ್ಲಿ ರೈಲ್ವೆ ಸ್ಟೇಷನ್​ನ ಮರುಅಭಿವೃದ್ಧಿಗೆ ಸಲ್ಲಿಸಲಾಗಿರುವ ಪೂರ್ವಭಾವಿ ಮಾಹಿತಿ ದಾಖಲೆ (ಪಿಐಎಂ) ಪ್ರಕಾರ, ಪ್ರಯಾನಿಕರಿಗೆ ಎರಡು ರೀತಿಯ ಶುಲ್ಕವನ್ನು ವಿಧಿಸಲಾಗುತ್ತದೆ. ನಿಲ್ದಾಣಕ್ಕೆ ಬಂದು ಹೋಗುವ ಪ್ರಯಾಣಿಕರ ಸಂಖ್ಯೆ ಆಧಾರದ ಮೇಲೆ ಪ್ರತಿಯೊಬ್ಬ ಪ್ರಯಾಣಿಕನಿಗೂ ಇಂತಿಷ್ಟು ಶುಲ್ಕ ವಿಧಿಸಲಾಗುತ್ತದೆ. ಭಾರತೀಯ ರೈಲ್ವೆ ಈ ದರವನ್ನು ನಿಗದಿಪಡಿಸುತ್ತದೆ.


  ಇದನ್ನೂ ಓದಿ: ಅಸ್ಸಾಂನಲ್ಲಿ ರೈಲು ಹರಿದು ಎರಡು ಆನೆ ಸಾವು; ರೈಲ್ವೆ ಎಂಜಿನ್​ ವಶಪಡಿಸಿಕೊಂಡ ಅರಣ್ಯ ಅಧಿಕಾರಿಗಳು


  ಹಾಗೆಯೇ, ಪ್ರಸ್ತಾಪವಾಗಿರುವ ಮತ್ತೊಂದು ಶುಲ್ಕವು ವಿಸಟರ್​ಗೆ ಸಂಬಂಧಿಸಿದ್ದು. ಪ್ರಯಾಣಿಕರ ಭೇಟಿ ಬರುವವರಿಗೆ ಶುಲ್ಕ ವಿಧಿಸಲಾಗುತ್ತದೆ. ಪ್ಲಾಟ್​ಫಾರ್ಮ್ ಟಿಕೆಟ್, ಪಾರ್ಕಿಂಗ್ ಶುಲ್ಕ ಇವೆಲ್ಲವೂ ಒಳಗೊಂಡಿದೆ. ಪ್ಲಾಟ್​ಫಾರ್ಮ್ ಟಿಕೆಟ್ ದರವನ್ನು ಇಲಾಖೆ ನಿರ್ಧರಿಸುತ್ತದೆ. ಆದರೆ, ನಿಲ್ದಾಣದಲ್ಲಿನ ಪಾರ್ಕಿಂಗ್ ಶುಲ್ಕ ಖಾಸಗಿ ಸಂಸ್ಥೆಯಿಂದಲೇ ನಿಗದಿಯಾಗುತ್ತದೆ. ಈಗಾಗಲೇ ಪ್ಲಾಟ್​ಫಾರ್ಮ್ ಟಿಕೆಟ್ ಮತ್ತು ಪಾರ್ಕಿಂಗ್ ಶುಲ್ಕದ ವ್ಯವಸ್ಥೆ ಜಾರಿಯಲ್ಲೇ ಇದೆಯಾದರೂ ಮುಂದಿನ ದಿನಗಳಲ್ಲಿ ಇವು ತುಟ್ಟಿಯಾಗುವ ನಿರೀಕ್ಷೆ ಇದೆ.


  ಈ ವರ್ಷದ ಸಂಕಷ್ಟ:


  ಕೊರೋನಾ ವೈರಸ್​ನಿಂದಾಗಿ ಲಾಕ್​ಡೌನ್ ಘೋಷಣೆ ಮಾಡಿದ ಬಳಿಕ ಆರು ತಿಂಗಳು ಸ್ಥಗಿತಗೊಂಡಿದ್ದ ರೈಲುಗಳು ಈಗಲೂ ಸಂಪೂರ್ಣ ಸಾಮರ್ಥ್ಯದಲ್ಲಿ ಮರುಚಾಲನೆಗೊಂಡಿಲ್ಲ. ಕೆಲವೇ ವಿಶೇಷ ರೈಲುಗಳು ಓಡುತ್ತಿವೆ. ಆದರೆ, ಇಲಾಖೆಯ ಬೊಕ್ಕಸಕ್ಕೆ ಹಣ ಬರುತ್ತಿರುವುದು ಸರಕು ಸಾಗಣೆ ರೈಲುಗಳಿಂದ. ಸರಕು ಸಾಗಣೆ ದರವನ್ನು ಕಡಿಮೆಗೊಳಿಸಲಾಗಿದ್ದರೂ ಹೆಚ್ಚು ವಹಿವಾಟಿನಿಂದಾಗಿ ಆದಾಯ ಹರಿದುಬರುತ್ತಿದೆ. ಪ್ರಯಾಣಿಕ ರೈಲುಗಳಲ್ಲಿ ಆಗುತ್ತಿರುವ ನಷ್ಟವನ್ನು ಸರಕು ಸಾಗಣೆ ಮೂಲಕ ಭರಿಸಲಾಗುತ್ತಿದೆ. ಹಾಗೆಯೇ, ಇತರ ವೆಚ್ಚಗಳನ್ನ ಕಡಿಮೆ ಮಾಡಿ ನಷ್ಟವನ್ನು ಸರಿದೂಗಿಸುವ ಕಾರ್ಯ ಆಗುತ್ತಿದೆ.


  ಇದನ್ನೂ ಓದಿ: ಅಸ್ಟ್ರಾಜೆನೆಕಾ ಕೋವಿಡ್-19 ಲಸಿಕೆ ಪ್ರಯೋಗ; ಕ್ಲಿನಿಕಲ್ ಟ್ರಯಲ್​ನಲ್ಲಿ ಸ್ವಯಂಸೇವಕ ಸಾವು!


  ಇದೇ ವೇಳೆ, ರೈಲ್ವೆ ಪ್ರಯಾಣ ದರದಲ್ಲಿ ಹೆಚ್ಚಳ ಆಗಲಿರುವುದನ್ನು ಹಲವು ತಜ್ಞರು ಸ್ವಾಗತಿಸಿದ್ದಾರಾದರೂ ರೈಲ್ವೆ ಸೇವೆಯ ಗುಣಮಟ್ಟದಲ್ಲಿ ಏನು ಪರಿವರ್ತನೆ ಆಗುತ್ತದೆ ಎಂಬ ಪ್ರಶ್ನೆ ಮುಂದಿಟ್ಟಿದ್ದಾರೆ. “ಭಾರತೀಯ ರೈಲ್ವೇಸ್ ಇಡೀ ವಿಶ್ವದ ಅತ್ಯಂತ ಅಸಮರ್ಥ ವ್ಯವಸ್ಥೆ ಆಗಿದೆ. ತನ್ನ ಸಿಬ್ಬಂದಿ ಮತ್ತು ವಸ್ತುಗಳಿಗೆ ಭಾರೀ ವೆಚ್ಚ ಮಾಡುತ್ತದೆ. ಇದರಿಂದಾಗಿ ಪ್ರಯಾಣಿಕರಿಗೆ ತಕ್ಕ ಸೌಲಭ್ಯ ಸಿಗದಂತಾಗಿದೆ. ಈಗಾಗಲೇ ಕೆಲ ಎಸಿ-2 ರೈಲುಗಳ ಪ್ರಯಾಣ ದರ ಹೆಚ್ಚೂಕಡಿಮೆ ವಿಮಾನ ಪ್ರಯಾಣಕ್ಕೆ ಸಮವಾಗಿದೆ. ರೈಲ್ವೆಯ ಸರಕು ಸಾಗಣೆ ಕೂಡ ಕಳಪೆ ಹಾಗೂ ದುಬಾರಿಯಾಗಿದೆ” ಎಂದು ರೈಲ್ವೆ ಮಂಡಳಿಯ ಮಾಜಿ ಸದಸ್ಯ ಅಜಯ್ ಶುಕ್ಲಾ ಹೇಳುತ್ತಾರೆ.


  ತಜ್ಞರ ಆತಂಕ ಸಹಜ. ಕೇಂದ್ರ ಸರ್ಕಾರ ಮತ್ತು ರೈಲ್ವೆ ಇಲಾಖೆ ಮುಂದಿನ ದಿನಗಳಲ್ಲಿ ಏನೇನು ಬದಲಾವಣೆ ಮಾಡುತ್ತದೆ, ಖಾಸಗಿಯವರಿಗೆ ವಹಿಸಿದ ಬಳಿಕ ಆ ಮಾರ್ಗದಲ್ಲಿ ಪ್ರಯಾಣಿಕರಿಗೆ ಅವಶ್ಯ ಸವಲತ್ತು, ಸೌಕರ್ಯಗಳು ಎಷ್ಟರಮಟ್ಟಿಗೆ ಸಿಗುತ್ತದೆ ಎಂದು ಕಾದುನೋಡಬೇಕು.


  ಲೇಖನ ನೆರವು: ಸಿಂಧು ಭಟ್ಟಾಚಾರ್ಯ, ನ್ಯೂಡೆಲ್ಲಿ

  Published by:Vijayasarthy SN
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು