ತಿರುವನಂತಪುರಂ (ಏ. 2): ಹರಿಕೃಷ್ಣ ಜೆ ಮತ್ತು ಲಕ್ಷ್ಮಿ ಕೃಷ್ಣ ಮೂಲತಃ ಕೇರಳದ ತ್ರಿಶೂರಿನವರು. ಬೆಂಗಳೂರಿನಲ್ಲಿ ಸಾಫ್ಟ್ವೇರ್ ಸಂಸ್ಥೆಯೊಂದರ ಸೇಲ್ಸ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಹರಿಕೃಷ್ಣ ಮತ್ತು ಗ್ರಾಫಿಕ್ ಡಿಸೈನರ್ ಆಗಿರುವ ಅವರ ಪತ್ನಿ ಲಕ್ಷ್ಮಿ ಕೃಷ್ಣ ಇಬ್ಬರೂ ಕೈತುಂಬಾ ಸಂಬಳ ಬರುವ ಒಳ್ಳೆ ಕೆಲಸಗಳಲ್ಲೇ ಇದ್ದರು. ಇಬ್ಬರಿಗೂ ಟ್ರಾವೆಲ್ ಮಾಡೋದು ಅಂದರೆ ಬಹಳ ಇಷ್ಟ. ಎಷ್ಟರಮಟ್ಟಿಗೆ ಅಂದ್ರೆ 2019ರಲ್ಲಿ ತಮ್ಮ honeymoonಗೂ ಬ್ಯಾಕ್ ಪ್ಯಾಕ್ ಏರಿಸಿಕೊಂಡು ಬೈಕಲ್ಲಿ ಹೋಗಿದ್ದರಿವರು. ಆಗಲೇ ತಮ್ಮ ಪ್ರಯಾಣದ ಕತೆಗಳನ್ನ ಹೇಳೋಕೆ Tinpin stories ಎನ್ನುವ ಯೂಟ್ಯೂಬ್ ಚಾನೆಲ್ ಆರಂಭಿಸಿದ್ರು. ಆದರೆ ಕೊರೊನಾ, ಲಾಕ್ ಡೌನ್ ಎಲ್ಲಾ ಶುರುವಾದ ನಂತರ ಅಂತಾರಾಷ್ಟ್ರೀಯ ಪ್ರಯಾಣ ಸಂಪೂರ್ಣವಾಗಿ ನಿಂತು ಹೋಗಿದ್ದರಿಂದ ದೇಶದೊಳಗೇ ಸುತ್ತಾಡೋಕೆ ನಿರ್ಧರಿಸಿತು ಈ ಜೋಡಿ.
ಆರಂಭದಲ್ಲಿ ಚಿಕ್ಕಮಗಳೂರು, ಹಂಪಿ, ಹೃಷಿಕೇಶ ಮುಂತಾದ ಗೊತ್ತಿರುವ ಸ್ಥಳಗಳಿಗೆ ಭೇಟಿ ಕೊಟ್ಟದ್ದರು. ನಂತರ, ಅಕ್ಟೋಬರ್ 2020ರಲ್ಲಿ ತಮ್ಮ ಹುಂಡೈ ಕ್ರೆಟಾ ಕಾರನ್ನು ರೆಡಿ ಮಾಡ್ಕೊಂಡು ಪರ್ಯಟನೆ ಶುರು ಮಾಡೇಬಿಟ್ರು. ಕೈಯಲ್ಲಿದ್ದ ಕೆಲಸಕ್ಕೆ ರಾಜೀನಾಮೆ ಬರೆದು ದೇಶ ಸುತ್ತುವ ಇವರ ಅಭಿಲಾಷೆಗೆ ಕುಟುಂಬದ ಬೆಂಬಲ ಇದ್ದಿದ್ರಿಂದಲೇ ಅದು ಯಶಸ್ವಿಯಾಯ್ತು ಎನ್ನುತ್ತದೆ ಈ ಜೋಡಿ.
ಇಬ್ಬರೂ ತಲಾ 10 ಜೊತೆ ಬಟ್ಟೆಗಳನ್ನು ಪ್ಯಾಕ್ ಮಾಡ್ಕೊಂಡ್ರು. ಜೊತೆಗೆ ಅಗತ್ಯವಿರುವ ಕೆಲವೇ ಕೆಲವು ಪಾತ್ರೆಗಳು, ಒಂದು ಬಕೆಟ್ ಮತ್ತು ಮಗ್, ತಮ್ಮ ಪ್ರಯಾಣದ ವಿಡಿಯೋಗಳನ್ನು ಎಡಿಟ್ ಮಾಡಿ ಪಬ್ಲಿಶ್ ಮಾಡೋಕೆ ಒಂದು ಲ್ಯಾಪ್ ಟಾಪ್ ತೆಗೆದುಕೊಂಡರು. ತಮ್ಮ ಕಾರಿನ ಸೀಟಿಗೆ ಹೆಡ್ ರೆಸ್ಟ್ ಫಿಕ್ಸ್ ಮಾಡಿಸಿ, ಕಾರಿನ ಹಿಂಬದಿಯಲ್ಲೇ ಮಲಗಲು ಸಾಕೆನಿವಷ್ಟು ಸ್ಥಳವನ್ನೂ ರೆಡಿ ಮಾಡಿಕೊಂಡರು. ಕುಡಿಯಲು 2 ಕ್ಯಾನ್ ಮತ್ತು ಇತರೆ ಕೆಲಸಗಳಿಗೆ 1 ಕ್ಯಾನ್ ಎಂದು ಒಟ್ಟು 3 ಕ್ಯಾನ್ ಗಳನ್ನು ಕಾರಿನಲ್ಲಿ ಇಟ್ಟುಕೊಂಡಿದ್ದಾರೆ. ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲಾ ಆರ್ ಒ ವಾಟರ್ ಪಾಯಿಂಟ್ ಗಳಿಂದ ನೀರು ತುಂಬಿಸಿಕೊಳ್ತಾರೆ. ಅಡುಗೆ ಕೆಲಸವನ್ನ ಇಬ್ಬರೂ ಸಮನಾಗಿ ಹಂಚಿಕೊಂಡಿದ್ದಾರೆ, ಹಾಗಾಗಿ ಸರಾಗವಾಗಿ ನಡೆಯುತ್ತಿದೆ ಎನ್ನುತ್ತಾರಿವರು.
ಅಕ್ಟೋಬರ್ 28, 2020ರಿಂದ ಇವರ ಪ್ರಯಾಣ ಶುರುವಾಯ್ತು. ಮೊದಲು ಬೆಂಗಳೂರಿಗೆ ಬಂದು ನಂತರ ಇಲ್ಲಿಂದ ಉಡುಪಿಗೆ ತೆರಳಿದರು. ಮೊದಲಿಗೆ ಕೇವಲ 60 ದಿನಗಳ ರೋಡ್ ಟ್ರಿಪ್ ಎಂದುಕೊಂಡದ್ದು ಈಗ 130 ದಿನಗಳವರಗೆ ತಲುಪಿದೆ. 2.5 ಲಕ್ಷ ರೂಪಾಯಿಗಳ ಬಜೆಟ್ ಪ್ಲಾನ್ ಮಾಡಿಕೊಂಡು ತಮ್ಮ ಸೇವಿಂಗ್ಸ್ ನಿಂದ ಅದನ್ನು ತೆಗೆದಿದ್ದರು. ಆದ್ರೆ ತಾವು ಅಂದುಕೊಂಡದ್ದಕ್ಕಿಂತ ಕಡಿಮೆಯೇ ಖರ್ಚಾಗ್ತಿದೆ ಎಂದು ಖುಷಿಯಿಂದ ಹೇಳುತ್ತಾರೆ ಲಕ್ಷ್ಮಿ ಕೃಷ್ಣ. ಇಷ್ಟು ದಿನಗಳಲ್ಲಿ ಒಂದೆರಡು ಬಾರಿ ಮಾತ್ರ ಕೋವಿಡ್ ನಿಂದ ಸಮಸ್ಯೆಯಾಗಿದೆ, ಅದನ್ನು ಹೊರತುಪಡಿಸಿದ್ರೆ ಪ್ರಯಾಣ ಉತ್ತಮವಾಗೇ ಸಾಗ್ತಿದೆ ಎನ್ನುತ್ತಾರವರು. ಅಂದ್ಹಾಗೆ ರಾತ್ರಿಗಳಲ್ಲಿ ಹೆಚ್ಚಾಗಿ ಪೆಟ್ರೋಲ್ ಬಂಕ್ ಗಳಲ್ಲಿ ತಮ್ಮ ಕಾರನ್ನು ನಿಲ್ಲಿಸಿ ಮಲಗುತ್ತಾರೆ. ಬೆಳಗ್ಗೆ ಅದೇ ಪೆಟ್ರೋಲ್ ಬಂಕ್ನ ವಾಶ್ರೂಂ ಬಳಸುತ್ತಾರೆ. ಆರಂಭದಲ್ಲಿ ಲಕ್ಷ್ಮಿ ಕೃಷ್ಣಗೆ ಬಕೆಟ್ ತೆಗೆದುಕೊಂಡು ಆ ವಾಶ್ರೂಂಗೆ ಹೋಗೋದೇ ಕಷ್ಟವಾಗ್ತಿತ್ತಂತೆ. ಆದ್ರೆ ಈಗ ಎಲ್ಲವೂ ಅಭ್ಯಾಸವಾಗಿದೆ…ಒಂದು ವೇಳೆ ಶೌಚಾಲಯ ಕ್ಲೀನ್ ಆಗಿಲ್ಲ ಎನಿಸಿದರೆ ಬೇರೆಯದನ್ನು ಹುಡುಕಿಕೊಂಡು ಹೋಗುತ್ತಾರಂತೆ.
ಕರ್ನಾಟಕದ ನಾನಾ ಊರುಗಳು, ಕೊಲ್ಹಾಪುರ, ಮುಂಬೈ, ಔರಂಗಾಬಾದ್, ಭುಜ್, ಉದಯಪುರ, ಜೈಪುರ, ಜೈಸಲ್ಮೇರ್ ಗಳಿಗೆಲ್ಲಾ ಹೋಗಿ ಈಗ ಜಮ್ಮು ಕಾಶ್ಮೀರದಲ್ಲಿ ಸಾಗುತ್ತಾ ಇದ್ದಾರೆ. ಇದುವರಗೆ 10 ಸಾವಿರ ಕಿಲೋಮೀಟರ್ ಪ್ರಯಾಣಿಸಿರುವ ಈ ಜೋಡಿ ಇನ್ನೂ ಈ ಸಾಹಸವನ್ನ ಮುಂದುವರೆಸುವ ನಿರ್ಧಾರ ಮಾಡಿದ್ದಾರೆ. ಇಷ್ಟು ದೂರದ ಪರಯಾಣದಲ್ಲಿ ನಿಮ್ಮ ನೆಚ್ಚಿನ ಘಳಿಗೆಗಳೇನು ಅಂತ ಕೇಳಿದ್ರೆ, ಸಾಕಷ್ಟಿವೆ ಎನ್ನುತ್ತಾರವರು. ಉಡುಪಿಯ ಸುವರ್ಣ ನದಿಯ ದಂಡೆಯ ಮೇಲೆ ಫೋಟೋ ಕ್ಲಿಕ್ಕಿಸುತ್ತಿದ್ದಾಗ ಇವರನ್ನು ನೋಡಿದ ಅಂಬಿಗನೊಬ್ಬ ತನ್ನ 10 ವರ್ಷದ ಮಗನ ಜೊತೆ ದೋಣಿಯಲ್ಲಿ ಬಂದು ಉಚಿತವಾಗಿ ನದಿಯಲ್ಲೊಂದು ಸುತ್ತು ಹಾಕಿಸಿದ್ದನಂತೆ. ಅದೇ ರೀತಿ ಯಲ್ಲಾಪುರದಲ್ಲಿ ಆಫ್ರಿಕಾ ಮೂಲದವರು ಎನ್ನಲಾದ ಸಿದ್ಧಿ ಜನಾಂಗದ ಜೊತೆಗೆ ಕಳೆದ ಸಮಯವೂ ಅದ್ಭುತವಾಗಿತ್ತು ಎನ್ನುತ್ತಾರೆ ಹರಿಕೃಷ್ಣ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ