HOME » NEWS » National-international » TRANSPORTERS SUPPORT FARMERS PROTEST AND CALL FOR NATION WIDE STRIKE AND THREATEN TO HALT SUPPLY OF ESSENTIAL GOODS MAK

Farmers Protest: ರೈತರ ಬೇಡಿಕೆ ಈಡೇರದಿದ್ದರೆ ರಾಷ್ಟ್ರವ್ಯಾಪಿ ಸರಕು ಸಾಗಾಣೆ ಮುಷ್ಕರ; ಕೇಂದ್ರಕ್ಕೆ ಸಾರಿಗೆದಾರರ ಎಚ್ಚರಿಕೆ !

ನಾವು ಹೋರಾಟನಿರತ ರೈತರಿಗೆ ಬೆಂಬಲ ಸೂಚಿಸುತ್ತೇವೆ. ಸರ್ಕಾರ ರೈತರ ಬೇಡಿಕೆಗಳನ್ನು ಈಡೇರಿಸದಿದ್ದರೆ ಡಿಸೆಂಬರ್ 08 ರಂದು ಬಂದ್‌ಗೆ ಕರೆ ನೀಡಲಿದ್ದೇವೆ ಎಂದು ಆಲ್​ ಇಂಡಿಯಾ ಮೊಟಾರ್​ ಟ್ರಾನ್ಸ್​ಪೋರ್ಟ್​ ಕಾಂಗ್ರೆಸ್ ಅಧ್ಯಕ್ಷ ಕುಲ್ತರಣ್ ಸಿಂಗ್ ಅತ್ವಲ್ ತಿಳಿಸಿದ್ದಾರೆ.

news18-kannada
Updated:December 3, 2020, 10:13 PM IST
Farmers Protest: ರೈತರ ಬೇಡಿಕೆ ಈಡೇರದಿದ್ದರೆ ರಾಷ್ಟ್ರವ್ಯಾಪಿ ಸರಕು ಸಾಗಾಣೆ ಮುಷ್ಕರ; ಕೇಂದ್ರಕ್ಕೆ ಸಾರಿಗೆದಾರರ ಎಚ್ಚರಿಕೆ !
ರೈತರ ಬೃಹತ್ ಪ್ರತಿಭಟನೆ.
  • Share this:
ನವ ದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಗಡಿಯಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುತ್ತಿರುವ ರೈತರು ಮತ್ತು ಕೇಂದ್ರ ಸರ್ಕಾರದ ನಡುವೆ ನಡೆದ ಮಾತುಕತೆ ವಿಫಲವಾಗಿದ್ದು, ರೈತರು ತಮ್ಮ ಪ್ರತಿಭಟನೆಯನ್ನು ಮುಂದುವರೆಸಲು ನಿರ್ಧರಿಸಿದ್ದಾರೆ. ಇದರಿಂದ ದೆಹಲಿ ಗಡಿಯಲ್ಲಿ ರೈತರು ನಡೆಸುತ್ತಿದ್ದ ಪ್ರತಿಭಟನೆ 8ನೇ ದಿನಕ್ಕೆ ಕಾಲಿಟ್ಟಿದೆ. ಅಲ್ಲದೆ, ರಾಷ್ಟ್ರವ್ಯಾಪಿ ರೈತ ಹೋರಾಟಕ್ಕೆ ವಿವಿಧ ಸಂಘಟನೆಗಳು ಮತ್ತು ಸಾರ್ವಜನಿಕರ ಬೆಂಬಲ ವ್ಯಕ್ತವಾಗುತ್ತಿದೆ. ಈ ನಡುವೆ ವಿವಾದಾತ್ಮಕ ಮೂರು ಕೃಷಿ ಮಸೂದೆಗಳು ರದ್ಧಾಗಬೇಕೆಂದು ದೆಹಲಿಯ ಕೊರೆಯುವ ಚಳಿಯಲ್ಲಿ ಒಂದು ವಾರದಿಂದ ಹೋರಾಟ ನಡೆಸುತ್ತಿರುವ ರೈತರ ಬೇಡಿಕೆ ಈಡೇರದಿದ್ದರೆ ಡಿಸೆಂಬರ್ 08 ರಿಂದ ದೇಶಾದ್ಯಂತ ಅಗತ್ಯ ಸರಕುಗಳ ಸಾಗಾಣಿಕೆ ನಿಲ್ಲಿಸುತ್ತೇವೆ ಎಂದು ಆಲ್ ಇಂಡಿಯಾ ಮೋಟಾರ್ ಟ್ರಾನ್ಸ್‌ಪೋರ್ಟ್ ಕಾಂಗ್ರೆಸ್ (AIMTC) ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.

ರೈತರ ಹೋರಾಟವನ್ನು ಬೆಂಬಲಿಸಿ ಪ್ರಕಟಣೆ ಹೊರಡಿಸಿರುವ ಆಲ್​ ಇಂಡಿಯಾ ಮೊಟಾರ್​ ಟ್ರಾನ್ಸ್​ಪೋರ್ಟ್​ ಕಾಂಗ್ರೆಸ್ ಅಧ್ಯಕ್ಷ ಕುಲ್ತರಣ್ ಸಿಂಗ್ ಅತ್ವಲ್ ​, "ನಾವು ಹೋರಾಟನಿರತ ರೈತರಿಗೆ ಬೆಂಬಲ ಸೂಚಿಸುತ್ತೇವೆ. ಸರ್ಕಾರ ರೈತರ ಬೇಡಿಕೆಗಳನ್ನು ಈಡೇರಿಸದಿದ್ದರೆ ಡಿಸೆಂಬರ್ 08 ರಂದು ಬಂದ್‌ಗೆ ಕರೆ ನೀಡಲಿದ್ದೇವೆ. ಉತ್ತರ ಭಾರತದ ಹಲವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಮ್ಮ ವಾಹನಗಳ ಸಂಚಾರವನ್ನು ಬಂದ್‌ ಮಾಡಿ ಅಗತ್ಯ ಸರಕುಗಳ ಸಾಗಾಣಿಕೆಯನ್ನು ನಿಲ್ಲುಸುತ್ತೇವೆ" ಎಂದು ತಿಳಿಸಿದ್ದಾರೆ.

AIMTC ಎಂಬುದು ದೇಶಾದ್ಯಂತ ಸರಕು ಸಾಗಾಣಿಗೆ ಮಾಡುವ ಸುಮಾರು 1 ಕೋಟಿ ಗೂಡ್ಸ್‌ ವಾಹನಗಳ ಮಾಲೀಕರ ಒಕ್ಕೂಟವಾಗಿದೆ. "ನಮ್ಮ ಶೇ.65 ರಷ್ಟು ವಾಹನ ಮಾಲೀಕರು ಕೃಷಿ ಉತ್ಪನ್ನಗಳನ್ನು ಸಾಗಾಣಿಕೆ ಮಾಡುವ ಮೂಲಕ ಜೀವನ ಕಟ್ಟಿಕೊಂಡಿದ್ದೇವೆ. ನಮಗೆ ಅನ್ನ ನೀಡುವ ರೈತರು ತಮ್ಮ ನ್ಯಾಯಸಮ್ಮತ ಹಕ್ಕುಗಳಿಗಾಗಿ ಹೋರಾಟಕ್ಕಿಳಿದಿದ್ದಾರೆ. ಹಾಗಾಗಿ ಸರ್ಕಾರ ಅವರ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲದಿದ್ದಲ್ಲಿ ಹಾಲು, ತರಕಾರಿ, ಔಷಧಿ ಸೇರಿದಂತೆ ದಿನನಿತ್ಯದ ಅಗತ್ಯ ವಸ್ತುಗಳ ಸಾಗಾಣಿಕೆಯನ್ನು ನಿಲ್ಲಿಸಬೇಕಾಗುತ್ತದೆ. ಇದಕ್ಕೆ ಕೇಂದ್ರ ಸರ್ಕಾರ ಅವಕಾಶ ಮಾಡಿಕೊಡಬಾರದು" ಎಂದು AIMTC ಹೇಳಿಕೆಯಲ್ಲಿ ತಿಳಿಸಿದೆ.

ಇದನ್ನೂ ಓದಿ : ಪತಂಜಲಿ, ಡಾಬರ್, ಇಮಾಮಿ ಸೇರಿ ಹಲವು ಕಂಪೆನಿಗಳ ಜೇನುತುಪ್ಪ ಕಲಬೆರಕೆಯದ್ದು; ಕೇಂದ್ರ ಸರ್ಕಾರ

ಈ ನಡುವೆ ಕೇಂದ್ರ ಹಾಗೂ ಪ್ರತಿಭಟನಾ ನಿರತ ರೈತರೊಂದಿಗೆ ಸತತ ಏಳು ಗಂಟೆಗಳ ಕಾಲ ಇಂದು ನಡೆದ ಸಭೆ ವಿಫಲಗೊಂಡಿದ್ದು, ಇನ್ನೆರಡು ದಿನ ಬಿಟ್ಟು ಮತ್ತೆ ಸಭೆ ನಡೆಸಲು ನಿರ್ಧರಿಸಲಾಗಿದೆ. ಕೃಷಿ ಕಾಯ್ದೆ ರದ್ದುಗೊಳಿಸುವಂತೆ ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳಿಗೆ ರೈತರು ಬಿಗಿ ಪಟ್ಟು ಹಿಡಿದಿದ್ದಾರೆ. ಈ ಹಿನ್ನಲೆ ರಾಷ್ಟ್ರ ರಾಜಧಾನಿಯಲ್ಲಿ ರೈತರ ಪ್ರತಿಭಟನೆ ಮುಂದುವರೆಯಲಿದೆ. ಡಿ. 5ರಂದು ಕೇಂದ್ರ ಸರ್ಕಾರ ರೈತರೊಂದಿಗೆ ಐದನೇ ಸುತ್ತಿನ ಮಾತುಕತೆ ನಡೆಸಲಿದೆ.
Youtube Video

ಇನ್ನು ಸಭೆ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್​ ಥೋಮರ್​, ಸಭೆಯ ವೇಳೆ ಪ್ರಸ್ತಾಪಿತವಾದ ವಿಷಯಗಳನ್ನು ಬಗೆಹರಿಸಲು ಸರ್ಕಾರ ಖಂಡಿತವಾಗಿ ಕಾರ್ಯನಿರ್ವಹಿಸಲಿದೆ, ಅದೇ ರೀತಿ ರೈತರಿಗೆ ತಮ್ಮ ಹೋರಾಟ ಕೈಬಿಡುವಂತೆ ನಾವು ಮನವಿ ಮಾಡುತ್ತೇವೆ. ರೈತರ ಪ್ರತಿಭಟನೆಯಿಂದ ದೆಹಲಿ ಜನರು ತೊಂದರೆ ಪಡುವುದು ಬೇಡ. ಕನಿಷ್ಠ ಬೆಂಬಲ ಬೆಲೆ ಮುಂದುವರೆಯಲಿದೆ ಎಂಬ ಭರವಸೆ ನೀಡುತ್ತೇವೆ. ಪ್ರತಿಭಟನೆಯನ್ನು ಸಾಧ್ಯವಾದರೆ ಹಿಂದೆಗೆದುಕೊಳ್ಳುವುದು ಉತ್ತಮ ಎಂದು ತಿಳಿಸಿದರು.
Published by: MAshok Kumar
First published: December 3, 2020, 10:11 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories