ಸೆಕ್ಷನ್ 377 ರದ್ದತಿ ಬಳಿಕ ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆಗೆ ಭಾರೀ ಡಿಮ್ಯಾಂಡ್..!

ಲಿಂಗ ಪರಿವರ್ತನಾ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವವರಲ್ಲಿ ಮಹಿಳೆಯರಿಗಿಂತ ಪುರುಷರೇ ಹೆಚ್ಚು. ಅಂದರೆ ಗಂಡಾಗಿದ್ದವರು ಹೆಣ್ಣಾಗಿ ಬದಲಾಗಲು ಬೇಕಾದ ಸರ್ಜರಿಗಳನ್ನು ಮಾಡಿಸಿಕೊಳ್ಳುತ್ತಿದ್ದಾರೆ. ಇದು ಹೆಣ್ಣು ಗಂಡಾಗಿ ಪರಿವರ್ತನೆ ಆಗುವ ಶಸ್ತ್ರಚಿಕಿತ್ಸೆಗಿಂತ ಸ್ವಲ್ಪ ಸುಲಭದ್ದು.

zahir | news18
Updated:June 12, 2019, 3:32 PM IST
ಸೆಕ್ಷನ್ 377 ರದ್ದತಿ ಬಳಿಕ ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆಗೆ ಭಾರೀ ಡಿಮ್ಯಾಂಡ್..!
REUTERS/Abhishek N. Chinnappa
  • News18
  • Last Updated: June 12, 2019, 3:32 PM IST
  • Share this:
ಭಾರತದಲ್ಲಿ ಸಲಿಂಗಕಾಮ ಅಪರಾಧವಲ್ಲ ಎಂಬ ಸುಪ್ರೀಂ ಕೋರ್ಟ್​ ತೀರ್ಪಿನ ಬಳಿಕ, ಕೇಂದ್ರ ಸರ್ಕಾರ ಸೆಕ್ಷನ್ 377 ರದ್ದು ಮಾಡಿದೆ. ಈ ಮಹತ್ವದ ತೀರ್ಪಿನ ನಂತರ ಇದೀಗ ದೇಶದ ಅನೇಕ ಲೈಂಗಿಕ ಅಲ್ಪಸಂಖ್ಯಾತರು ಧೈರ್ಯವಾಗಿ ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆಗಳನ್ನು ಮಾಡಿಸಿಕೊಳ್ಳುತ್ತಿದ್ದಾರೆ. ಈ ಚಿಕಿತ್ಸೆಯ ಲಭ್ಯತೆ ಇರುವ ಪ್ರತಿ ಆಸ್ಪತ್ರೆಯಲ್ಲಿ ವಾರಕ್ಕೆ ಕನಿಷ್ಟ ಐದಾರು ಮಂದಿಯಾದರೂ ಲಿಂಗ ಪರಿವರ್ತನಾ ಶಸ್ತ್ರಚಿಕಿತ್ಸೆಗೆ ಮುಂದಾಗುತ್ತಿದ್ದಾರೆ.

ಈ ಹಿಂದೆ ಸೆಕ್ಷನ್ 377 ಪ್ರಕಾರ ನಿಸರ್ಗದ ನಿಯಮಕ್ಕೆ ವಿರುದ್ಧವಾಗಿ ಪುರುಷ, ಮಹಿಳೆ ಅಥವಾ ಪ್ರಾಣಿಯ ಜೊತೆ ಲೈಂಗಿಕ ಸಂಪರ್ಕ ಹೊಂದುವುದು ಶಿಕ್ಷಾರ್ಹ ಅಪರಾಧ ಎನ್ನಲಾಗಿತ್ತು. ಇದಕ್ಕೆ 10 ವರ್ಷಗಳವರಗೆ ಕಠಿಣ ಸಜೆ ಕೂಡಾ ವಿಧಿಸಬಹುದಾಗಿತ್ತು. ಆದರೆ ಅನೇಕ ಸಂಘಟನೆಗಳು 2001ರಿಂದ ನಡೆಸಿದ್ದ ನ್ಯಾಯಾಂಗ ಹೋರಾಟಕ್ಕೆ ಸಿಕ್ಕ ಜಯದ ಪರಿಣಾಮವಾಗಿ ಸೆಪ್ಟೆಂಬರ್ 6, 2018ರ ತನ್ನ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ಸಲಿಂಗಿಗಳು, ದ್ವಿಲಿಂಗಿಗಳು, ಅಥವಾ ಲಿಂಗ ಪರಿವರ್ತನೆ ಮಾಡಿಕೊಂಡವರು ಇತರ ನಾಗರಿಕರು ಹೊಂದಿರುವಂತೆ ಸಮಾನ ಹಕ್ಕು ಪಡೆದಿರುತ್ತಾರೆ ಎಂದಿದೆ.

158 ವರ್ಷಗಳಿಂದ ಸಲಿಂಗಕಾಮವನ್ನು ಅಪರಾಧ ಎಂದಿದ್ದ ಸೆಕ್ಷನ್ 377ನ್ನು ಸರ್ವೋಚ್ಛ ನ್ಯಾಯಾಲಯದ ತೀರ್ಪು ತೊಡೆದುಹಾಕಿತ್ತು. ಇದೆಲ್ಲಾ ಬೆಳವಣಿಗೆಗಳಾದ ನಂತರ ಸಮಾಜವನ್ನು ಎದುರಿಸಲು ಭಯಪಡುತ್ತಿದ್ದ ಅನೇಕ ಲೈಂಗಿಕ ಅಲ್ಪಸಂಖ್ಯಾತರು ಧೈರ್ಯವಾಗಿ ಲಿಂಗ ಪರಿವರ್ತನಾ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುತ್ತಿದ್ದಾರೆ. ಅನೇಕ ಸಣ್ಣ ಪುಟ್ಟ ಚಿಕಿತ್ಸಾಲಯಗಳು ಈ ಸರ್ಜರಿಗಳನ್ನು ಸರಿಯಾಗಿ ಮಾಡದೇ ಅವಾಂತರ ಮಾಡುತ್ತಿದ್ದವು. ಆದರೆ ಈಗ ಹಲವು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು ಲಿಂಗ ಪರಿವರ್ತನಾ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ಮಾಡುತ್ತಿವೆ. ಬೆಂಗಳೂರಿನ ಎಂ ಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಕೂಡಾ ಈ ಚಿಕಿತ್ಸೆಯ ಸೌಲಭ್ಯ ಇರುವುದರಿಂದ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನ ಈ ಚಿಕಿತ್ಸೆ ಪಡೆಯುತ್ತಿದ್ದಾರೆ.

ಲಿಂಗ ಪರಿವರ್ತನಾ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವವರಲ್ಲಿ ಮಹಿಳೆಯರಿಗಿಂತ ಪುರುಷರೇ ಹೆಚ್ಚು. ಅಂದರೆ ಗಂಡಾಗಿದ್ದವರು ಹೆಣ್ಣಾಗಿ ಬದಲಾಗಲು ಬೇಕಾದ ಸರ್ಜರಿಗಳನ್ನು ಮಾಡಿಸಿಕೊಳ್ಳುತ್ತಿದ್ದಾರೆ. ಇದು ಹೆಣ್ಣು ಗಂಡಾಗಿ ಪರಿವರ್ತನೆ ಆಗುವ ಶಸ್ತ್ರಚಿಕಿತ್ಸೆಗಿಂತ ಸ್ವಲ್ಪ ಸುಲಭದ್ದು. ಯಾವುದೇ ವ್ಯಕ್ತಿ ಲಿಂಗ ಪರಿವರ್ತನಾ ಸರ್ಜರಿ ಮಾಡಿಸಿಕೊಳ್ಳಬೇಕಾದರೆ ಅವರಿಗೆ 21 ವರ್ಷ ವಯಸ್ಸಾಗಿರಬೇಕು. ಚಿಕಿತ್ಸೆಗೆ ಆಸ್ಪತ್ರೆಗೆ ಬಂದಾಗ ಮೊದಲಿಗೆ ಒಬ್ಬ ಮನಃಶಾಸ್ತ್ರಜ್ಞರನ್ನು ಅವರು ಭೇಟಿಯಾಗಬೇಕು. ಅವರಿಗೆ ನಿಜಕ್ಕೂ ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವ ಇಚ್ಛೆಯಿದೆ ಮತ್ತು ಮಾನಸಿಕವಾಗಿ ಆ ವ್ಯಕ್ತಿ ಬೇರೆ ಲಿಂಗದಂತೆಯೇ ಚಿಂತಿಸುತ್ತಿದ್ದಾರೆ ಎನ್ನುವುದು ದೃಢಪಟ್ಟಮೇಲಷ್ಟೇ ಶಸ್ತ್ರಚಿಕಿತ್ಸೆಗೆ ತಯಾರಿ ಮಾಡಿಕೊಳ್ಳಲಾಗುತ್ತೆ ಎನ್ನುತ್ತಾರೆ ಎಂ.ಎಸ್ ರಾಮಯ್ಯ ಆಸ್ಪತ್ರೆಯ ಡಾ. ಎಚ್.ಕೆ ನಾಗರಾಜ್ ವೈದ್ಯರು.

ಗಂಡು ಹೆಣ್ಣಾಗಿ ಬದಲಾಗುವ ಚಿಕಿತ್ಸೆಯಲ್ಲಿ ಬ್ರೆಸ್ಟ್ ಇಂಪ್ಲಾಂಟ್​ಗಳನ ಅಳವಡಿಕೆ ಸೇರಿದಂತೆ ದೈಹಿಕವಾಗಿ ಒಂದಷ್ಟು ಅಂಗಗಳನ್ನು ಬದಲಿಸಲಾಗುತ್ತದೆ. ಇದರ ಜೊತೆ ಜೊತೆಗೇ ಜೀವನವಿಡೀ ಅವರು ಹೆಣ್ಣಿನಲ್ಲಿ ಉತ್ಪತ್ತಿಯಾಗೋ ಅನೇಕ ಹಾರ್ಮೋನುಗಳನ್ನು ನಿಯಮಿತವಾಗಿ ಪಡೆಯಬೇಕಾಗುತ್ತದೆ. ಎಲ್ಲಾ ಸರ್ಜರಿಗಳೂ ಮುಗಿಯಲು ಸುಮಾರು 6 ತಿಂಗಳ ಕಾಲಾವಕಾಶ ತಗಲುತ್ತದೆ. ಅದೇ ಹೆಣ್ಣು ಗಂಡಾಗಿ ಬದಲಾಗುವ ಸರ್ಜರಿಗಳಾದರೆ ಅವು ಅನೇಕ ಹಂತಗಳಲ್ಲಿ ನಡೆಯುತ್ತವೆ ಮತ್ತು ಹೆಚ್ಚು ಕ್ಲಿಷ್ಟಕರವಾಗಿರುತ್ತವೆ. ಒಟ್ಟಾರೆಯಾಗಿ ಮನಃಶಾಸ್ತ್ರಜ್ಞರು, ಪ್ಲಾಸ್ಟಿಕ್ ಸರ್ಜನ್​ಗಳು, ಯುರಾಲಜಿ ವಿಭಾಗ ಮತ್ತು ಎಂಡೋಕ್ರೈನ್ ವಿಭಾಗದ ತಜ್ಞರು ಸೇರಿ ಲಿಂಗ ಪರಿವರ್ತನಾ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ಮಾಡುತ್ತಾರೆ.

ಇಷ್ಟೆಲ್ಲಾ ಸರ್ಜರಿಗಳು, ಚಿಕಿತ್ಸೆಗಳು ಮುಗಿದ ನಂತರ ವ್ಯಕ್ತಿ ತನ್ನಿಷ್ಟದ ಲಿಂಗವನ್ನು ಪಡೆಯುತ್ತಾರೆ. ಪಾಶ್ಚಾತ್ಯ ದೇಶಗಳಲ್ಲಿ ಧ್ವನಿಪೆಟ್ಟಿಗೆಯಲ್ಲೂ ಮಾರ್ಪಾಡು ಮಾಡುವ ಸರ್ಜರಿಗಳನ್ನು ಮಾಡಿಸಿಕೊಳ್ಳುತ್ತಾರೆ. ಆದರೆ ಇಲ್ಲಿ ಹಾರ್ಮೋನುಗಳನ್ನು ನೀಡಿದಾಗಲೇ ಧ್ವನಿಯಲ್ಲಿ ಉಂಟಾಗುವ ಬದಲಾವಣೆಗಳನ್ನು ಸಾಕು ಎಂದು ಒಪ್ಪಿಕೊಳ್ಳುತ್ತಾರೆ. ಊಟ, ಜಾತಿ, ಆಚರಣೆ, ಭಾಷೆಯ ಆಯ್ಕೆಯ ಹಕ್ಕಿನಂತೆ ಲಿಂಗವೂ ತಮ್ಮ ಆಯ್ಕೆ ಎನ್ನುವುದಕ್ಕೆ ಇವರು ವೈದ್ಯಕೀಯ ಕ್ಷೇತ್ರದ ನೆರವು ಪಡೆಯುತ್ತಿದ್ದಾರೆ. ದಿನೇ ದಿನೇ ಹೆಚ್ಚುತ್ತಿರುವ ಲಿಂಗ ಪರಿವರ್ತನಾ ಶಸ್ತ್ರಚಿಕಿತ್ಸೆಯ ಸಂಖ್ಯೆ ಜನರ ಸ್ವತಂತ್ರ ಬದುಕಿನ ಸೂಚಕವೂ ಹೌದು.

(ವರದಿ - ಸೌಮ್ಯ ಕಳಸ)
First published:June 12, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading