ಟಿವಿ ಚಾನೆಲ್ ಆಯ್ಕೆ ಸ್ವಾತಂತ್ರ್ಯ: ಮತ್ತೊಮ್ಮೆ ಗ್ರಾಹಕರಿಗೆ ಗಡುವು ನೀಡಿದ ಟ್ರಾಯ್​..!

ಟ್ರಾಯ್ ಬಿಡುಗಡೆ ಮಾಡಿದ ವರದಿ ಪ್ರಕಾರ 17 ಕೋಟಿ ಟಿವಿ ಚಾನೆಲ್​ ಗ್ರಾಹಕರಲ್ಲಿ ಇದುವರೆಗೆ ಕೇವಲ 9 ಕೋಟಿ ಮಂದಿ ಮಾತ್ರ ಚಾನೆಲ್​ಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ.

zahir
Updated:February 12, 2019, 9:39 PM IST
ಟಿವಿ ಚಾನೆಲ್ ಆಯ್ಕೆ ಸ್ವಾತಂತ್ರ್ಯ: ಮತ್ತೊಮ್ಮೆ ಗ್ರಾಹಕರಿಗೆ ಗಡುವು ನೀಡಿದ ಟ್ರಾಯ್​..!
ಸಾಂದರ್ಭಿಕ ಚಿತ್ರ
zahir
Updated: February 12, 2019, 9:39 PM IST
ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರದ (TRAI) ಹೊಸ ನಿಯಮದ ಪ್ರಕಾರ ಕೇಬಲ್ ಹಾಗೂ ಡಿಟಿಎಚ್ ಟಿವಿ ಚಾನೆಲ್​ಗಳ​ ಮಾಸಿಕ ದರ ಬದಲಾಗಿದೆ. ಅಲ್ಲದೆ ಫೆಬ್ರವರಿ 1 ರಿಂದ ಹೊಸ ನಿಯಮ ಜಾರಿಯಲ್ಲಿದ್ದು, ವೀಕ್ಷಕರು ತಮ್ಮ ನೆಚ್ಚಿನ ಚಾನೆಲ್​ಗಳನ್ನು ಆರಿಸಿಕೊಳ್ಳುವ ಅವಕಾಶ ಪಡೆದಿದ್ದಾರೆ. ಆದರೆ ಈ ನಿಯಮ ಜಾರಿಗೆ ಬಂದರೂ, ಗ್ರಾಹಕರು ಇದರ ಬಗ್ಗೆ ಹೆಚ್ಚಿನ ಆಸಕ್ತಿವಹಿಸುತ್ತಿಲ್ಲ ಎಂಬ ಮಾತುಗಳು ಕೇಳಿಬರುತ್ತಿದೆ.

ಈ ಹಿನ್ನೆಲೆಯಲ್ಲಿ ಟ್ರಾಯ್​ ಮತ್ತೊಮ್ಮೆ ಹೊಸ ನಿಯಮದ ಗಡುವನ್ನು ಮಾರ್ಚ್​​ 31ರವರೆಗೆ ವಿಸ್ತರಿಸಿದೆ. ಈ ಹಿಂದೆ ಡಿಸೆಂಬರ್​ 29 ರೊಳಗೆ ಚಾನೆಲ್​ಗಳನ್ನು ಆಯ್ಕೆ ಮಾಡಿಕೊಳ್ಳುವಂತೆ ಟ್ರಾಯ್ ತಿಳಿಸಿತ್ತು. ಆದರೆ ಮಾಹಿತಿಯ ಕೊರತೆಯಿಂದ ಗ್ರಾಹಕರಿಗೆ ಗೊಂದಲವುಂಟಾಗಿತ್ತು. ಹೀಗಾಗಿ ಜನವರಿ 31 ರವರೆಗೆ ಗಡುವು ನೀಡಲಾಗಿತ್ತು.

2019ರಲ್ಲಿಯೇ ಟ್ರಾಯ್​ ಎಂಟು ಬಾರಿ ಪತ್ರಿಕಾ ಪ್ರಕಟಣೆ ಹೊರಡಿಸುವ ಮೂಲಕ ಜನರಲ್ಲಿ ಈ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಮಾಡಿತ್ತು. ಆದರೆ ಚಾನೆಲ್ ಆಯ್ಕೆ ಸ್ವಾತಂತ್ರ್ಯ ಸರಳ ಸೂತ್ರ ಎನ್ನಲಾಗಿದ್ದರೂ, ಜಾರಿಯಲ್ಲಿರುವ ಸಮಸ್ಯೆಯಿಂದ ಗ್ರಾಹಕರು ಚಾನೆಲ್​ಗಳನ್ನು ಆಯ್ಕೆ ಮಾಡುತ್ತಿಲ್ಲ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಮತ್ತೊಮ್ಮೆ ಚಾನೆಲ್​ ಆಯ್ಕಾ ಸ್ವಾತಂತ್ರ್ಯಕ್ಕೆ ಗಡುವು ನೀಡಲಾಗಿದೆ.

ಏನಿದು ಹೊಸ ನಿಯಮ?

ಟ್ರಾಯ್​ ಹೊರಡಿಸಿರುವ ಹೊಸ ನಿಯಮದಲ್ಲಿ ನೀವು ನೋಡುವ ಚಾನೆಲ್​ಗಳಿಗೆ ಮಾತ್ರ ಹಣ ಪಾವತಿಸಿದರೆ ಸಾಕು. ಕೆಲ ವರ್ಷಗಳ ಹಿಂದೆಯೇ ಪ್ರೇಕ್ಷಕರಿಗೆ ಡೈರೆಕ್ಟ್​ ಟು ಹೋಮ್​(DTH) ಮೂಲಕ ಸರ್ಕಾರ ಹಲವು ಚಾನೆಲ್​ಗಳನ್ನು ವೀಕ್ಷಿಸುವ ಅವಕಾಶ ಒದಗಿಸಿತ್ತು. ಆದರೆ ಮನರಂಜನೆ, ಕ್ರೀಡೆ ಮತ್ತು ಮಕ್ಕಳಿಗೆ ಸಂಬಂಧಿಸಿದ ಚಾನೆಲ್​ಗಳನ್ನು ಪಡೆಯಲು ದುಬಾರಿ ಹೆಚ್ಚುವರಿ ಪ್ಯಾಕ್​ಗಳನ್ನು ಸಕ್ರಿಯಗೊಳಿಸಬೇಕಿತ್ತು. ಇದರಿಂದ ಚಾನೆಲ್​ ವೀಕ್ಷಣೆಯು ದುಬಾರಿಯಾಗುತ್ತಿದೆ ಎಂಬ ದೂರುಗಳು ಕೇಳಿ ಬಂದಿದ್ದವು. ಈ ನಿಟ್ಟಿನಲ್ಲಿ ಟ್ರಾಯ್​ ಹೊಸ ನಿಯಮವನ್ನು ಜಾರಿಗೊಳಿಸಿದ್ದು, ಎಲ್ಲಾ ಮಲ್ಟಿ ಸರ್ವೀಸ್ ಆಪರೇಟರ್ಸ್​ (MSOs)ಮತ್ತು ಲೋಕಲ್ ಕೇಬಲ್ ಆಪರೇಟರ್ಸ್​ಗಳು ಈ ನಿಯಮ ಪಾಲಿಸುವಂತೆ ಸೂಚಿಸಿತ್ತು. ಅದರಂತೆ ಡಿಸೆಂಬರ್​ 29 ರಿಂದ ತಮ್ಮ ನೆಟ್​ವರ್ಕ್​ನಲ್ಲಿ ಚಾನೆಲ್​ಗಳ ಹೊಸ ದರಗಳನ್ನು ಪ್ರದರ್ಶಿಸಬೇಕೆಂದು ಹೇಳಲಾಗಿತ್ತು.

ಸ್ಕ್ರೀನ್ ಮೇಲೆ ಚಾನೆಲ್ ದರ: ಹೊಸ ನಿಯಮಾವಳಿಯಂತೆ ಎಲ್ಲಾ ನೆಟ್​ವರ್ಕ್​ಗಳು ತಮ್ಮಲ್ಲಿನ ಚಾನೆಲ್​ಗಳ ದರಗಳನ್ನು ಪರದೆಯಲ್ಲಿ ಪ್ರದರ್ಶಿಸಬೇಕಿದೆ. ಇಲ್ಲಿ ಗ್ರಾಹಕರಿಗೆ ಬೇಕಾದ ಚಾನೆಲ್​ಗಳನ್ನು ಆರಿಸಿಕೊಳ್ಳುವ ಅವಕಾಶವಿರಲಿದೆ. ಹೊಸ ನಿಯಮದ ಅನ್ವಯ ಪತ್ಯೇಕವಾಗಿ ಅಥವಾ ಪ್ಯಾಕ್​ ರೀತಿಯಲ್ಲಿ ಚಾನೆಲ್​ಗಳಿಗೆ ದರ ನಿಗದಿ ಪಡಿಸಲಾಗಿರುತ್ತದೆ . ಎಲೆಕ್ಟ್ರಾನಿಕ್ ಪ್ರೊಗ್ರಾಮ್ ಗೈಡ್ (EPG) ಮೂಲಕ, ಟಿವಿ ಪರದೆಯಲ್ಲಿ ಪ್ರತಿ ಚಾನೆಲ್​ಗಳ MRP ಅನ್ನು ತಿಳಿಸಲಾಗುತ್ತದೆ. ಈ ದರಕ್ಕಿಂತ ಹೆಚ್ಚಿನ ದರವನ್ನು ಕೇಬಲ್​ ಆಪರೇಟರ್​ ಅಥವಾ ವಿತರಕರು ವೀಕ್ಷಕರಿಗೆ ವಿಧಿಸುವಂತಿಲ್ಲ ಎಂದು ಟ್ರಾಯ್​ ತಿಳಿಸಿದೆ.

ಪ್ರತಿ ತಿಂಗಳ ರಿಚಾರ್ಜ್​ ಎಷ್ಟು?
Loading...

ಗ್ರಾಹಕರು ಹೊಸ ನಿಯಮದ ಅನುಸಾರ ಪ್ರತಿ ತಿಂಗಳು 100 ಚಾನೆಲ್​ಗಳಿಗೆ 153 ರೂ. ಪಾವತಿಸಬೇಕಾಗುತ್ತದೆ. ನೀವು 100 ಚಾನೆಲ್​ಗಳನ್ನು ಆರಿಸಿಕೊಂಡು, ಬಳಿಕ ಹೆಚ್ಚುವರಿ 25 ಚಾನೆಲ್​ಗಳಿಗಾಗಿ 20 ರೂ. ಪಾವತಿಸಬೇಕು. ಇನ್ನು ಪೇ-ಚಾನೆಲ್​ಗಳಿಗೆ ಸ್ಥಿರ ಬೆಲೆಯನ್ನು ನಿಗದಿ ಮಾಡಲಾಗಿದ್ದು, ಅದರಂತೆ ಹಣ ನೀಡಬೇಕು. ಟ್ರಾಯ್​ ನೀಡಿರುವ ಹೊಸ ನಿಯಮದಂತೆ ಈ ದರಗಳು 1 ರೂ. ನಿಂದ 19 ರೂ. ಒಳಗಿರಲಿದೆ.

ಈ ಹೊಸ ನಿಯಮದಿಂದ ತಿಂಗಳ ದರದಲ್ಲಿ ಹೆಚ್ಚಳ?
ಇದು ನೀವು ಯಾವ ಚಾನೆಲ್​ಗಳನ್ನು ವೀಕ್ಷಿಸುತ್ತೀರಾ ಎಂಬುದರ ಮೇಲೆ ನಿರ್ಧಾರವಾಗಲಿದೆ. ಟ್ರಾಯ್​ ಹೇಳಿರುವಂತೆ BARC ನೀಡಿದ ವೀಕ್ಷಕರ ವಿವರಣೆ ಪ್ರಕಾರ, ದೇಶದ ಶೇಕಡ 80ರಷ್ಟು ವೀಕ್ಷಕರು 40 ಅಥವಾ ಅದಕ್ಕಿಂತ ಕಡಿಮೆ ಚಾನೆಲ್​ಗಳನ್ನು ವೀಕ್ಷಿಸುತ್ತಿದ್ದಾರೆ. ಈ ಆಧಾರದ ಮೇಲೆ ಗ್ರಾಹಕರು ಚಾನೆಲ್​ಗಳ ಆಯ್ಕೆ ವೇಳೆ ಸ್ವಲ್ಪ ಎಚ್ಚರವಹಿಸಿದರೆ ಪ್ರಸ್ತುತ ಪಾವತಿಸುವ ಬಿಲ್​ಗಿಂತ ಕಡಿಮೆ ದರದಲ್ಲಿ ಹೆಚ್ಚು ಚಾನೆಲ್​ಗಳನ್ನು ವೀಕ್ಷಿಸಬಹುದು ಎಂದು ತಿಳಿಸಿದೆ.

ಉಚಿತ ಚಾನೆಲ್​ಗಳು ಯಾವುವು?
ಗ್ರಾಹಕರಿಗೆ ಫ್ರಿ ಟು ಏರ್​ (FTA)ಚಾನೆಲ್​ಗಳನ್ನು ಸಂಪೂರ್ಣವಾಗಿ ಮುಕ್ತಗೊಳಿಸಲು ಟ್ರಾಯ್​ ತನ್ನ ಹೊಸ ನಿಯಮದಲ್ಲಿ ತಿಳಿಸಿದೆ. ಈ ಚಾನೆಲ್​ಗಳಿಗೆ ಯಾವುದೇ ರೀತಿ ಚಾರ್ಜ್​ ವಿಧಿಸಲಾಗುವುದಿಲ್ಲ. ಅದಾಗ್ಯೂ ಎಲ್ಲಾ ಎಫ್​ಟಿಎ ಚಾನೆಲ್​ಗಳ ಪಡೆಯುವುದು ಕೂಡ ಕಡ್ಡಾಯವಲ್ಲ. ಆದರೆ ದೂರದರ್ಶನದ ಎಲ್ಲ ಚಾನೆಲ್​ಗಳನ್ನು ನೀಡುವುದು ಕಡ್ಡಾಯ ಮಾಡಲಾಗಿದೆ.

153 ರೂ.ನಲ್ಲಿ ಯಾವ ಚಾನೆಲ್​ಗಳು ಸಿಗಲಿದೆ?
153 ರೂ.ನಲ್ಲಿ ನಿಮ್ಮ ಇಷ್ಟದ ಎಫ್​ಟಿಎ ಚಾನೆಲ್​ಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಆದರೆ ಪೇ ಚಾನೆಲ್​ಗಳಿಗೆ ಹೆಚ್ಚುವರಿ ಹಣ ಪಾವತಿಸಬೇಕಾಗುತ್ತದೆ. ಅಂದರೆ ನೀವು 100 ಫ್ರೀ-ಟು-ಏರ್ ಚಾನೆಲ್​ಗಳನ್ನು 153 ರೂಪಾಯಿಗಳಲ್ಲಿ ಆಯ್ಕೆ ಮಾಡಿಕೊಂಡಿರಿ ಅಂದುಕೊಳ್ಳಿ. ಬಳಿಕ ನಿಮಗೆ ಚಾನೆಲ್​ ಬೇಕಿದ್ದರೆ (100 ಕ್ಕಿಂತ ಹೆಚ್ಚು) 25 ಚಾನೆಲ್​ಗಳಿಗೆ 20 ರೂ. ಹೆಚ್ಚುವರಿ ಪಾವತಿಸಬೇಕಾಗುತ್ತದೆ. ದೇಶದಲ್ಲಿ 534 ಫ್ರೀ-ಟು ಏರ್​ ಚಾನೆಲ್​ಗಳು ಲಭ್ಯವಿದ್ದು, ಇವುಗಳಲ್ಲಿ ನಿಮಗೆ ಬೇಕಾದ ಚಾನೆಲ್​ಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೇಬಲ್​ ನೆಟ್​ವರ್ಕ್​ನ #999 ಚಾನೆಲ್​ ವೀಕ್ಷಿಸಬಹುದು.

ಚಾನೆಲ್​ಗಳ ಲೀಸ್ಟ್​ ಪಡೆಯುವುದೆಲ್ಲಿ?
ಟ್ರಾಯ್​ ಮಾರ್ಗಸೂಚಿ ಪ್ರಕಾರ ಎಲ್ಲಾ DTH ಕಂಪೆನಿಗಳು ಗ್ರಾಹಕರಿಗೆ ತಮ್ಮ ವೆಬ್​ಸೈಟ್​ನಲ್ಲಿ ಚಾನೆಲ್​ ದರಗಳ ಪಟ್ಟಿ ಹಾಕುವಂತೆ ತಿಳಿಸಿದೆ. ನಿಮ್ಮ DTH ಕಂಪೆನಿಯ ವೆಬ್​ಸೈಟ್​ ಅಥವಾ ಆ್ಯಪ್​ಗೆ ಭೇಟಿ ನೀಡುವ ಮೂಲಕ ಪತ್ಯೇಕ ಮತ್ತು ಪ್ಯಾಕ್​ ಚಾನೆಲ್​ಗಳನ್ನು ಆರಿಸಿಕೊಳ್ಳಬಹುದು. ಅದೇ ರೀತಿ 342 ಚಾನೆಲ್​ಗಳ ದರ ಪಟ್ಟಿಯನ್ನು ಟ್ರಾಯ್​ ತನ್ನ ವೆಬ್​ಸೈಟ್​ನಲ್ಲಿ ಪ್ರಕಟಿಸಿದೆ.

ಚಾನೆಲ್​ಗಳ ಆಯ್ಕೆ ಹೇಗೆ?
ಎಲ್ಲಾ ಕೇಬಲ್​ ಮತ್ತು ಡಿಟಿಹೆಚ್​ ಕಂಪೆನಿಗಳು ತಮ್ಮ ವೆಬ್​ಸೈಟ್​ನಲ್ಲಿ ಗ್ರಾಹಕರಿಗೆ ಬೇಕಾದ ಚಾನೆಲ್​ಗಳ ಪಟ್ಟಿಯನ್ನು ಪ್ರಕಟಿಸಿರುತ್ತದೆ. ಇಲ್ಲಿ ಚಾನೆಲ್​ಗಳನ್ನು ಆಯ್ಕೆ ಮಾಡಿ, ಆನ್​ಲೈನ್​ ಮೂಲಕವೇ ಪಾವತಿ ಮಾಡಿಕೊಳ್ಳಬಹುದು. ಇದರ ಹೊರತಾಗಿ ಗ್ರಾಹಕರು ಕಸ್ಟಮರ್ ಕೇರ್​ ನಂಬರ್​ಗೆ ಕರೆ ಮಾಡಿ ಅಥವಾ ಕೇಬಲ್​ ಆಪರೇಟರ್​ಗಳನ್ನು ಸಂಪರ್ಕಿಸಿ ಚಾನೆಲ್​ಗಳನ್ನು ಆರಿಸಿಕೊಳ್ಳಬಹುದಾಗಿದೆ.

ಎಷ್ಟು ಮಂದಿ ಚಾನೆಲ್​ ಆರಿಸಿಕೊಂಡಿದ್ದಾರೆ?
ಟ್ರಾಯ್ ಬಿಡುಗಡೆ ಮಾಡಿದ ವರದಿ ಪ್ರಕಾರ 17 ಕೋಟಿ ಟಿವಿ ಚಾನೆಲ್​ ಗ್ರಾಹಕರಲ್ಲಿ ಇದುವರೆಗೆ ಕೇವಲ 9 ಕೋಟಿ ಮಂದಿ ಮಾತ್ರ ಚಾನೆಲ್​ಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇದರಲ್ಲಿ 6.5 ಕೋಟಿ ಕೇಬಲ್ ಟಿವಿ ಗ್ರಾಹಕರು ಹಾಗೂ 2.5 ಡಿಟಿಹೆಚ್ ಟಿವಿ ಗ್ರಾಹಕರು ಸೇರಿದ್ದಾರೆ. ಆದರೆ ಉಳಿದ ಗ್ರಾಹಕರು ಚಾನೆಲ್​ಗಳ ಆಯ್ಕೆಯಲ್ಲಿ ನಿರಾಸಕ್ತಿ ತೋರಿಸುತ್ತಿದ್ದಾರೆ ಎನ್ನಲಾಗಿದೆ. ಇದಕ್ಕೆ ಮುಖ್ಯ ಕಾರಣ ಹೊಸ ಸ್ವಾತಂತ್ರ್ಯದಿಂದ ಈ ಹಿಂದೆಗಿಂತ ಹೆಚ್ಚುವರಿ ಹಣ ಪಾವತಿಸಬೇಕಿರುವುದು. ಒಟ್ಟಿನಲ್ಲಿ ಹೊಸ ನಿಯಮ ಗ್ರಾಹಕ ಸ್ನೇಹಿಯಾಗಿದ್ದರೂ, ಬಡವರಿಗೆ ಬರೆಯಾಗಿ ಪರಿಣಮಿಸಿರುವುದು ಸುಳ್ಳಲ್ಲ.

ಇದನ್ನೂ ಓದಿ: ವಿನ್ಯಾಸ ಬದಲಿಸಿದ ವಾಟ್ಸ್​​ಆ್ಯಪ್​: ಹೊಸ ಅಪ್​ಡೇಟ್​ನಲ್ಲಿ ಸಿಗಲಿದೆ ಮತ್ತಷ್ಟು ಆಯ್ಕೆ
First published:February 12, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ