ತಿರುವನಂತಪುರ: ಎಷ್ಟೋ ಸಾರಿ ನಾವು ನಮ್ಮ ತಲೆಯ ಕೂದಲು (Hair) ಹಾಳಾಗುತ್ತೆ ಅಂತ ಮತ್ತು ನಿರ್ಲಕ್ಷ್ಯತನದಿಂದ ಬೈಕ್ (bike) ಮೇಲೆ ಕೂತು ಹೆಲ್ಮೆಟ್ (Helmet) ಧರಿಸದೆ ಹೊರಗೆ ಹೋದಾಗ ಪೊಲೀಸರು (Police) ಇಲ್ಲದಿರುವ ಮಾರ್ಗಗಳನ್ನು ಹುಡುಕಿಕೊಂಡು ನಮ್ಮ ಕೆಲಸವನ್ನು ಮುಗಿಸಿಕೊಂಡು ಹಿಂತಿರುಗಿ ಮನೆಗೆ ಬಂದು ಮನೆಯವರ ಎದುರಿಗೆ ‘ನೋಡು ಹೆಲ್ಮೆಟ್ ಹಾಕಿಕೊಳ್ಳದೇ ಹೋದರೂ ನನ್ನ ಬೈಕ್ ಅನ್ನು ಯಾರೊಬ್ಬ ಪೊಲೀಸರು ನಿಲ್ಲಿಸಿಲ್ಲ’ ಅಂತ ದೊಡ್ಡದಾಗಿ ಬೀಗಿರುತ್ತೇವೆ. ಅದೇ ಕೆಲವು ದಿನಗಳ ನಂತರ ನಮ್ಮ ಬೈಕ್ ಟ್ರಾಫಿಕ್ ನಿಯಮವನ್ನು (Traffic Rules) ಗಾಳಿಗೆ ತೂರಿದೆ, ದಂಡ ಕಟ್ಟಿ ಅಂತ ಸಾಕ್ಷಿಗೆ ಇರಲಿ ಅಂತ ಫೋಟೋ ಸಹ ಆನ್ಲೈನ್ ನಲ್ಲಿ ಹಾಕಿರುತ್ತಾರೆ ಅಥವಾ ಗಾಡಿಯ ಮಾಲೀಕರಿಗೆ ಮೆಸೇಜ್ ಬಂದಿರುತ್ತದೆ.
ಇಂತಹ ಟ್ರಾಫಿಕ್ ನಿಯಮಗಳ ಉಲ್ಲಂಘನೆಯನ್ನು ಮತ್ತು ದಂಡದ ಚಲನ್ ಅನ್ನು ಫೋಟೋಗಳ ಸಮೇತ ಆನ್ಲೈನ್ ನಲ್ಲಿ ಪೊಲೀಸ್ ಇಲಾಖೆ ಅಪ್ಲೋಡ್ ಮಾಡಿರುತ್ತೆ. ಇದೆಲ್ಲಾ ಹೇಗಾಯ್ತು ಅಂತ ಸ್ವಲ್ಪ ಯೋಚಿಸಿದರೆ ನಮ್ಮ ಸಂದೇಹ ಮೊದಲಿಗೆ ಹೋಗುವುದೇ ಈ ಟ್ರಾಫಿಕ್ ಸಿಗ್ನಲ್ ಗಳಲ್ಲಿ ಮತ್ತು ಮುಖ್ಯ ರಸ್ತೆಗಳಲ್ಲಿ ಕಂಬಗಳಿಗೆ ಅಳವಡಿಸಿರುವಂತಹ ಕ್ಯಾಮೆರಾಗಳ ಮೇಲೆ.
ಈಗಂತೂ ಬಹುತೇಕ ಎಲ್ಲಾ ನಗರಗಳಲ್ಲಿ ಮುಖ್ಯರಸ್ತೆಗಳಲ್ಲಿ ಟ್ರಾಫಿಕ್ ನಿಯಮಗಳನ್ನು ಉಲ್ಲಂಘನೆ ಮಾಡುವವರನ್ನು ಮತ್ತು ಅಲ್ಲಿ ನಡೆಯುವ ಅನೇಕ ರೀತಿಯ ಕ್ರೈಂ ಗಳ ಬಗ್ಗೆ ಮಾಹಿತಿ ಪಡೆಯಲು ಹೈ-ಎಂಡ್ ಕ್ಯಾಮೆರಾಗಳನ್ನು ಅಳವಡಿಸಿರುತ್ತಾರೆ.
ಪತಿರಾಯನ ನಿಜವಾದ ಬಣ್ಣ ಬಯಲು
ಇದೆಲ್ಲಾ ಈಗೇಕೆ ಹೇಳುತ್ತಿದ್ದೇವೆ ನಾವು ಅಂತ ನಿಮಗೆ ಅನ್ನಿಸಬಹುದು. ಹೀಗೆ ಅಳವಡಿಸಲಾದ ಕ್ಯಾಮೆರಾಗಳು ಸೆರೆ ಹಿಡಿದ ಫೋಟೋಗಳಿಂದ ಒಬ್ಬ ಪತಿರಾಯನ ಅಸಲಿ ಬಣ್ಣ ತನ್ನ ಹೆಂಡತಿಯ ಮುಂದೆ ಬಯಲಾಗಿದೆ ನೋಡಿ.
ಕೇರಳದ ರಸ್ತೆಗಳಲ್ಲಿ ಅಳವಡಿಸಲಾದ ರಸ್ತೆ ಸುರಕ್ಷತಾ ಕ್ಯಾಮೆರಾಗಳು ಕೇವಲ ರಾಜ್ಯ ಸರ್ಕಾರಕ್ಕೆ ತಲೆ ನೋವು ಆಗುವುದಲ್ಲದೆ, ರಾಜ್ಯದಲ್ಲಿ ಹೆಲ್ಮೆಟ್ ಧರಿಸದೆ ತನ್ನ ಮಹಿಳಾ ಸ್ನೇಹಿತೆಯೊಂದಿಗೆ ಸ್ಕೂಟರ್ ನಲ್ಲಿ ಆರಾಮಾಗಿ ಸುತ್ತಾಡಿದ ವ್ಯಕ್ತಿಗೂ ಸಹ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಪತ್ನಿಯ ಮೊಬೈಲ್‌ಗೆ ಬಂದ ಫೋಟೋಗಳು
ಆ ವ್ಯಕ್ತಿಯ ಸಂಚಾರ ನಿಯಮ ಉಲ್ಲಂಘನೆಯ ವಿವರಗಳು ಮತ್ತು ಈ ಹೈ-ಎಂಡ್ ಕ್ಯಾಮೆರಾಗಳು ತೆಗೆದ ಛಾಯಾಚಿತ್ರಗಳನ್ನು ಮೋಟಾರು ವಾಹನ ಇಲಾಖೆ ವ್ಯಕ್ತಿಯ ಹೆಂಡತಿಗೆ ಕಳುಹಿಸಿದೆ.
ಆ ಫೋಟೋಗಳು ಈಗ ಆ ವ್ಯಕ್ತಿಯ ಕುಟುಂಬದಲ್ಲಿ ದೊಡ್ಡ ಸಮಸ್ಯೆಗಳನ್ನೇ ಹುಟ್ಟುಹಾಕಿದ್ದು, ಇದು ಅಂತಿಮವಾಗಿ ಪೊಲೀಸ್ ಪ್ರಕರಣ ಮತ್ತು ಆ ವ್ಯಕ್ತಿಯ ಬಂಧನಕ್ಕೂ ಸಹ ಕಾರಣವಾಗಿದೆ.
ಸ್ನೇಹಿತೆಯೊಂದಿಗೆ ಸ್ಕೂಟರ್ ನಲ್ಲಿ ಸುತ್ತಾಡಿದ್ದ!
ಇಡುಕ್ಕಿ ಮೂಲದ ಈ ವ್ಯಕ್ತಿ ಏಪ್ರಿಲ್ 25 ರಂದು ಹೆಲ್ಮೆಟ್ ಧರಿಸದೇ ತನ್ನ ಮಹಿಳಾ ಸ್ನೇಹಿತೆಯೊಂದಿಗೆ ನಗರದ ರಸ್ತೆಗಳಲ್ಲಿ ಸ್ಕೂಟರ್ ನಲ್ಲಿ ಜಮ್ ಅಂತ ಸುತ್ತಾಡಿದ್ದಾನೆ.
ನೋಂದಣಿ ಪ್ರಮಾಣಪತ್ರದ ಪ್ರಕಾರ ವ್ಯಕ್ತಿಯ ಪತ್ನಿಯು ಆ ಸ್ಕೂಟರ್‌ನ ಮಾಲೀಕರಾಗಿದ್ದರಿಂದ, ವ್ಯಕ್ತಿಯ ಟ್ರಾಫಿಕ್ ನಿಯಮ ಉಲ್ಲಂಘನೆಯ ವಿವರಗಳು ಮತ್ತು ಪಾವತಿಸಬೇಕಾದ ದಂಡವನ್ನು ಆಕೆಯ ಮೊಬೈಲ್ ಫೋನ್ ಗೆ ಸಂದೇಶವಾಗಿ ಕಳುಹಿಸಲಾಗಿದೆ.
ಮೊಬೈಲ್‌ಗೆ ಏನೋ ಮೆಸೇಜ್ ಬಂದಿದೆ ಅಂತ ಓಪನ್ ಮಾಡಿ ನೋಡಿದರೆ, ಫೋಟೋದಲ್ಲಿ ತನ್ನ ಗಂಡ ಯಾವುದೋ ಹುಡುಗಿ ಜೊತೆಗೆ ಸ್ಕೂಟರ್ ಮೇಲೆ ಕೂತು ಹೋಗುತ್ತಿರುವುದು ತಿಳಿದಿದೆ. ಫೋಟೋದಲ್ಲಿ ಕಂಡು ಬರುವ ಮಹಿಳಾ ಹಿಂಬದಿ ಸವಾರ ಯಾರು ಎಂದು ಪತ್ನಿ ತನ್ನ ಪತಿಯನ್ನು ಪ್ರಶ್ನಿಸಿದ್ದಾರೆ.
ಲಿಫ್ಟ್ ನೀಡಿದ್ದೆ ಎಂದ ಪತಿ
ಇಲ್ಲಿನ ಜವಳಿ ಅಂಗಡಿಯೊಂದರಲ್ಲಿ ಉದ್ಯೋಗಿಯಾಗಿರುವ 32 ವರ್ಷದ ವ್ಯಕ್ತಿ, ಆ ಮಹಿಳೆಯೊಂದಿಗೆ ತನಗೆ ಯಾವುದೇ ಸಂಬಂಧವಿಲ್ಲ ಮತ್ತು ಸ್ಕೂಟರ್ ನಲ್ಲಿ ಅವಳಿಗೆ ಲಿಫ್ಟ್ ನೀಡಿದ್ದೇನೆ ಎಂದು ಹೇಳಿಕೊಂಡರೂ, ಪತ್ನಿ ಅವನನ್ನು ನಂಬಲಿಲ್ಲ. ಇದು ದಂಪತಿಗಳ ನಡುವೆ ವಾಗ್ವಾದಕ್ಕೂ ಕಾರಣವಾಯಿತು.
ಇದನ್ನು ಪ್ರಶ್ನಿಸಿದ್ದಕ್ಕೆ ಪತಿ ತನ್ನ ಮೇಲೆ ಮತ್ತು ತಮ್ಮ ಮೂರು ವರ್ಷದ ಮಗುವಿನ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಿ ಮೇ 5 ರಂದು ಕರಮನ ಪೊಲೀಸರಿಗೆ ದೂರು ನೀಡಿದ್ದರು.
ಆಕೆಯ ಹೇಳಿಕೆಯ ಆಧಾರದ ಮೇಲೆ ಪೊಲೀಸರು ಈಗಾಗಲೇ ಆತನನ್ನು ವಶಕ್ಕೆ ಪಡೆದಿದ್ದಾರೆ. ಐಪಿಸಿ ಸೆಕ್ಷನ್ 321 (ಸ್ವಯಂ-ಪ್ರೇರಣೆಯಿಂದ ನೋವುಂಟು ಮಾಡುವುದು), 341 (ತಪ್ಪಾದ ಸಂಯಮ) ಮತ್ತು 294 (ಅಶ್ಲೀಲ ಕೃತ್ಯಗಳು) ಮತ್ತು ಬಾಲನ್ಯಾಯ ಕಾಯ್ದೆಯ ಸೆಕ್ಷನ್ 75 (ಮಗುವಿನ ಮೇಲೆ ಹಲ್ಲೆ ಅಥವಾ ನಿರ್ಲಕ್ಷ್ಯ) ಅಡಿಯಲ್ಲಿ ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಆ ವ್ಯಕ್ತಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು, ನಂತರ ನ್ಯಾಯಾಲಯವು ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತು ಎಂದು ಅವರು ಹೇಳಿದರು.
ಸೇಫ್ ಕೇರಳ
ರಸ್ತೆ ಸುರಕ್ಷತಾ ಯೋಜನೆ 'ಸೇಫ್ ಕೇರಳ' ದ ಭಾಗವಾಗಿ ರಾಜ್ಯ ರಸ್ತೆಗಳಲ್ಲಿ ಕ್ಯಾಮೆರಾಗಳನ್ನು ಅಳವಡಿಸುವ ಬಗ್ಗೆ ಕೇರಳವು ತೀವ್ರ ರಾಜಕೀಯ ವಿವಾದಕ್ಕೆ ಸಾಕ್ಷಿಯಾಗಿತ್ತು.
ಇದನ್ನೂ ಓದಿ: Mystery: ಗಂಡ ಸತ್ತ ನೋವಿನಿಂದ ಚೇತರಿಸಿಕೊಳ್ಳಲು ಪುಸ್ತಕ ಬರೆದ ಮಹಿಳೆ, ತನಿಖೆಯಲ್ಲಿ ಬಯಲಾಯ್ತು ಆಕೆಯ ಕಳ್ಳಾಟ!
ಈ ಕ್ಯಾಮೆರಾಗಳ ಸ್ಥಾಪನೆಗೆ ಸಂಬಂಧಿಸಿದ ಒಪ್ಪಂದಗಳಿಗೆ ಸಂಬಂಧಿಸಿದಂತೆ ಪ್ರತಿಪಕ್ಷ ಕಾಂಗ್ರೆಸ್ ಎಲ್‌ಡಿಎಫ್ ಸರ್ಕಾರದ ವಿರುದ್ಧ ಗಂಭೀರ ಭ್ರಷ್ಟಾಚಾರದ ಆರೋಪಗಳನ್ನು ಮಾಡಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ