ನವದೆಹಲಿ(ಮಾ. 04): ರಿಲಾಯನ್ಸ್ ರೀಟೇಲ್ ಮತ್ತು ಫ್ಯೂಚರ್ ಗ್ರೂಪ್ ನಡುವಿನ ಒಪ್ಪಂದಕ್ಕೆ ತಡೆ ಹಾಕಬೇಡಿ ಎಂದು ವರ್ತಕರ ಸಂಘವೊಂದು ಅಮೇಜಾನ್ ಮುಖ್ಯಸ್ಥ ಜೆಫ್ ಬೆಜೋಸ್ ಅವರಿಗೆ ಮನವಿ ಮಾಡಿಕೊಂಡಿದೆ. ಈ ಒಪ್ಪಂದವನ್ನು ಅಮೇಜಾನ್ ವಿರೋಧಿಸಿ ತಡೆಯೊಡ್ಡುತ್ತಿರುವುದರಿಂದ ಅನಿಶ್ಚಿತ ಸ್ಥಿತಿ ನಿರ್ಮಾಣವಾಗಿದ್ದು, ಇದರಿಂದ ಹಲವಾರು ವ್ಯಾಪಾರಿಗಳು ಹಾಗೂ ಅವರ ಕುಟುಂಬಗಳು ಹಣಕಾಸು ಸಂಕಷ್ಟಕ್ಕೆ ಸಿಲುಕುವಂತಾಗಿದೆ ಎಂದು ಅಖಿಲ ಭಾರತ ಗ್ರಾಹಕ ಉತ್ಪನ್ನ ವಿತರಣಾ ಒಕ್ಕೂಟ (AICPD – All India Consumer Products Distributors Federation) ಸಂಘಟನೆಯು ಅಮೇಜಾನ್ ಸಂಸ್ಥಾಪಕರಿಗೆ ಬಹಿರಂಗ ಪತ್ರ ಬರೆದು ಒತ್ತಾಯ ಮಾಡಿದೆ.
2020ರ ಮಾರ್ಚ್ ತಿಂಗಳಿನಿಂದೀಚೆ 6 ಸಾವಿರ ಸಣ್ಣ ವರ್ತಕರು ಮತ್ತು ಸರಬರಾಜುದಾರರಿಗೆ ಫ್ಯೂಚರ್ ಗ್ರೂಪ್ ಸಂಸ್ಥೆಯಿಂದ 6 ಸಾವಿರ ಕೋಟಿ ರೂಪಾಯಿ ಬರುವುದು ಬಾಕಿ ಇದೆ. ಈಗ ರಿಲಾಯನ್ಸ್ ಸಂಸ್ಥೆಯೊಂದಿಗಿನ ಒಪ್ಪಂದ ಇನ್ನಷ್ಟು ವಿಳಂಬವಾದರೆ ಈ ವ್ಯಾಪಾರಿಗಳ ಕುಟುಂಬಗಳಿಗೆ ಆರ್ಥಿಕ ಸಂಕಷ್ಟ ಎದುರಾಗುತ್ತದೆ ಎಂದು ಈ ಪತ್ರದಲ್ಲಿ ನಿವೇದಿಸಿಕೊಳ್ಳಲಾಗಿದೆ.
“ನೀವು ಜಾಗತಿಕವಾಗಿ ಅಧಿಪತ್ಯ ಸಾಧಿಸುವ ಆಟದಲ್ಲಿ ನಿರತರಾಗುತ್ತಿದ್ದೀರಿ. ಇಲ್ಲಿ ನಮಗೆ ಸಂಕಷ್ಟ ಉಂಟಾಗಿದೆ. ನಮ್ಮ ಸದಸ್ಯರಿಗೆ ಬರಬೇಕಾದ ಪಾವತಿ ನಿಂತುಹೋಗಿದೆ. ನಮ್ಮ ಕುಟುಂಬಗಳು ಹಣಕಾಸು ಸಂಕಷ್ಟದಲ್ಲಿವೆ. ಮಾನಸಿಕ ಹಾಗೂ ಭಾವನಾತ್ಮಕ ದುರವಸ್ಥೆಯಲ್ಲಿ ಬಳಲುತ್ತಿವೆ” ಎಂದು ಹೇಳಿರುವ ಈ ಒಕ್ಕೂಟವು, ಸಣ್ಣ ವರ್ತಕರಿಗೆ ಸಿಗಬೇಕಿರುವ ಪಾವತಿಯನ್ನು ಪಾವತಿಸಿ ಇಲ್ಲವೇ ಒಪ್ಪಂದದಿಂದ ದೂರ ಉಳಿಯಿರಿ ಎಂದು ಜೆಫ್ ಬೇಜೋಸ್ಗೆ ತಾಕೀತು ಮಾಡಿದೆ.
ಇದನ್ನೂ ಓದಿ: Explainer: ಭಾರತದ ಸಂಸತ್ ಕಲಾಪದ ನೇರ ಪ್ರಸಾರ ಆರಂಭವಾಗಿದ್ದು ಹೀಗೆ..!
ಆರ್ಥಿಕ ಸಂಕಷ್ಟದಲ್ಲಿರುವ ಫ್ಯೂಚರ್ ಗ್ರೂಪ್ ಸಂಸ್ಥೆ ತನ್ನ ರೀಟೇಲ್, ಲಾಜಿಸ್ಟಿಕ್ಸ್, ಮಳಿಗೆ ಆಸ್ತಿಗಳನ್ನ ರಿಲಾಯನ್ಸ್ ಗ್ರೂಪ್ಗೆ ಸೇರಿದ ಆರ್ಆರ್ವಿಎಲ್ ಸಂಸ್ಥೆಗೆ ಮಾರಾಟ ಮಾಡಲು ಒಪ್ಪಂದ ಮಾಡಿಕೊಂಡಿತ್ತು. 24,713 ಕೋಟಿ ರೂ ಮೊತ್ತದ ಈ ಒಪ್ಪಂದಕ್ಕೆ ಆಗಸ್ಟ್ 2020ರಲ್ಲಿ ಫ್ಯೂಚರ್ ಗ್ರೂಪ್ ಒಪ್ಪಿಕೊಂಡಿತ್ತು. ಆದರೆ, ಫ್ಯೂಚರ್ ಗ್ರೂಪ್ನ ಒಂದು ಅಂಗ ಸಂಸ್ಥೆಯಲ್ಲಿ ಶೇ. 49ರಷ್ಟು ಹೂಡಿಕೆ ಹಾಕಿರುವ ಅಮೇಜಾನ್ ಸಂಸ್ಥೆ ಈ ಒಪ್ಪಂದವನ್ನು ವಿರೋಧಿಸಿದೆ. ತನ್ನೊಂದಿಗೆ ಸಮಾಲೋಚನೆ ನಡೆಸದೆಯೇ ಫ್ಯೂಚರ್ ಗ್ರೂಪ್ ಈ ನಿರ್ಧಾರ ಕೈಗೊಂಡಿದೆ. ಇದು ತಮ್ಮೊಳಗಿನ ಒಪ್ಪಂದದ ನಿಯಮಗಳ ಉಲ್ಲಂಘನೆಯಾಗಿದೆ ಎಂಬುದು ಅಮೇಜಾನ್ ವಾದ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ