ತಮಿಳುನಾಡಿನ ದೇವಾಲಯವೊಂದರಲ್ಲಿ (Temple) ಅಸ್ಸಾಂನ ಜೋಯ್ಮಾಲಾ ಹೆಸರಿನ ಆನೆಯ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ ಎಂದು ಪ್ರಾಣಿ ಹಕ್ಕುಗಳ (Animal Rights) ಕಾರ್ಯಕರ್ತ ಗುಂಪು ಆಪಾದಿಸಿದ್ದು, ಕರಾವಳಿ ರಾಜ್ಯದಲ್ಲಿ ಆನೆಯನ್ನು ಸರಪಣಿಗಳಲ್ಲಿ ಬಂಧಿಸಲಾಗಿದೆ ಎಂದು ತಿಳಿಸಿದೆ. ಈ ಆರೋಪವನ್ನು ತಮಿಳುನಾಡು ಸರಕಾರದ ಹಿರಿಯ ಅಧಿಕಾರಿಯೊಬ್ಬರು ನಿರಾಕರಿಸಿದ್ದಾರೆ.
ಪೇಟಾ ಮಾಡಿದ ಆಪಾದನೆ ಏನು?
ಪೀಪಲ್ ಫಾರ್ ದಿ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್ (PETA) ಇಂಡಿಯಾ ತಿಳಿಸಿರುವಂತೆ ತಮಿಳುನಾಡು ಸರಕಾರವು ಸಪ್ಟೆಂಬರ್ನಲ್ಲಿ ಜೋಯ್ಮಾಲಾ ಹೆಸರಿನ ಹೆಣ್ಣಾನೆಯು ಸರಪಳಿಗಳಿಂದ ಬಂಧಿತವಾಗಿರದೆ ಆನಂದವಾಗಿ ಹೊರಾಂಗಣ ಪ್ರದೇಶದಲ್ಲಿ ಓಡಾಡಿಕೊಂಡಿರುವ ಹಾಗೂ ಕೊಳದಲ್ಲಿ ಆನಂದವಾಗಿ ನೀರಾಡುವ ವಿಡಿಯೋವನ್ನು ಬಿಡುಗಡೆ ಮಾಡಿತ್ತು ಆದರೆ ಪೇಟಾ ಈ ವಿಡಿಯೋ ನಿಜವಲ್ಲ ಎಂದು ಆರೋಪಿಸಿದೆ.
ರಾಧಿಕಾ ಸೂರ್ಯವಂಶಿ ಹೇಳಿಕೆ
ಗುವಾಹಟಿಯಲ್ಲಿ ಮಾಧ್ಯಮ ಪ್ರತಿನಿಧಿಗಳನ್ನುದ್ದೇಶಿಸಿ ಮಾತನಾಡಿನ ಪೇಟಾ ಇಂಡಿಯಾದ ಪ್ರಚಾರದ ವ್ಯವಸ್ಥಾಪಕಿ ರಾಧಿಕಾ ಸೂರ್ಯವಂಶಿ ತಿಳಿಸಿರುವಂತೆ, ಅಕ್ಟೋಬರ್ 20 ರಿಂದ ನವೆಂಬರ್ 13 ರವರೆಗೆ ಜೋಯ್ಮಾಲಾಳ ದೈನಂದಿನ ದಿನಚರಿಯನ್ನು ಆಯೋಗವು ಮೇಲ್ವಿಚಾರಣೆ ಮಾಡಿದ್ದು ಶೆಡ್ನೊಳಗಿನ ಕಾಂಕ್ರೀಟು ನೆಲದಲ್ಲಿ ಸರಪಳಿಗಳಿಂದ ಆನೆಯು ಬಂಧಿತಳಾಗಿರುವುದಾಗಿ ಕಂಡುಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.
ವಿಡಿಯೋದಲ್ಲಿ ಆಕೆ ಆನಂದದಿಂದ ಆಟವಾಡುತ್ತಿದ್ದ ಕೊಳ ಇದೀಗ ಬತ್ತಿಹೋಗಿದೆ ಹಾಗೂ ಜೋಯ್ಮಾಲಾ ಏಕಾಂಗಿಯಾಗಿ ಬಂಧನದಲ್ಲಿದೆ. ಜೋಯ್ಮಾಲಾಳ ಕಾಲುಗಳಲ್ಲಿ ಉಂಟಾಗಿರುವ ಗಾಯವನ್ನು ಪೇಟಾ ಇಂಡಿಯಾ ತೋರಿಸಿದ್ದು, ಶೆಡ್ನಲ್ಲಿ ಬಂಧಿತವಾಗಿರುವ ಆನೆ, ಖಾಲಿ ಕೊಳದ ವಿಡಿಯೋವನ್ನು ಪ್ರದರ್ಶಿಸಿದೆ. ಹೀಗೆ ಪೇಟಾ ಇಂಡಿಯಾ ತನ್ನ ಹೇಳಿಕೆಗಳನ್ನು ಸಾಕ್ಷಿಸಮೇತ ಪ್ರಸ್ತುತಪಡಿಸಿದೆ.
ಪೇಟಾದ ಇಂಗಿತ ದುರುದ್ದೇಶದಿಂದ ಕೂಡಿದೆ; ದತ್ತಿ ಇಲಾಖೆ
ಆದರೆ, ತಮಿಳುನಾಡು ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯ ಆಯುಕ್ತ ಜೆ ಕುಮಾರಗುರುಬರನ್ ಅವರು ಆನೆ ಸಂಪೂರ್ಣವಾಗಿ ಚೇತರಿಸಿಕೊಂಡಿದೆ ಎಂದು ತಿಳಿಸಿದ್ದು, ಪೇಟಾ ಹೇಳಿಕೆಗಳು ನಿಜವಲ್ಲ ಎಂದು ನಿರಾಕರಿಸಿದ್ದಾರೆ.
ಆನೆಯನ್ನು ನಿತ್ಯವೂ ಸ್ನಾನಮಾಡಿಸುತ್ತಿದ್ದು ಒಳ್ಳೆಯ ಮಾವುತನ ಆರೈಕೆಯಲ್ಲಿ ಆನೆ ಚೇತರಿಸಿಕೊಳ್ಳುತ್ತಿದೆ. ಇತ್ತೀಚೆಗೆ ದೇವಳದ ಟ್ವಿಟರ್ ಸೈಟ್ನಲ್ಲಿ ಆನೆಯ ಫೋಟೋ ಹಾಗೂ ವಿಡಿಯೋಗಳನ್ನು ಹಾಕಿದ್ದೇವೆ. ಭಾರತ ಸರಕಾರವು ಈ ದಾಖಲೆಗಳನ್ನು ಅಂಗೀಕರಿಸಿದೆ ಎಂದು ಕುಮಾರ್ ತಿಳಿಸಿದ್ದಾರೆ.
ಮಾನಹಾನಿಯ ವಿರುದ್ಧ ಕ್ರಮಕೈಗೊಳ್ಳಲಿರುವ ದತ್ತಿ ಇಲಾಖೆ
ಪೇಟಾ ಪ್ರಸ್ತುತಪಡಿಸಿರುವ ವಿಡಿಯೋ ಹಳೆಯದಾಗಿದ್ದು ಪೇಟಾದ ಇಂಗಿತವು ದುರುದ್ದೇಶವಾಗಿದೆ ಎಂದು ತೋರುತ್ತಿದ್ದು, ಪೇಟಾ ಯಾವ ಉದ್ದೇಶವನ್ನು ಮುಂದಿಟ್ಟುಕೊಂಡು ಇಂತಹ ಹೇಳಿಕೆಗಳನ್ನು ಮಾಡುತ್ತಿದೆ ಎಂಬುದು ತಿಳಿದಿಲ್ಲ ಹಾಗಾಗಿ ಪೇಟಾದ ಉದ್ದೇಶದ ಬಗ್ಗೆ ಪ್ರತಿಕ್ರಿಯಿಸಲು ಬಯಸುವುದಿಲ್ಲ ಎಂದು ತಿಳಿಸಿದ್ದಾರೆ.
ತಮಿಳುನಾಡಿನ ದೇವಾಲಯ ಹಾಗೂ ಆನೆಗಳನ್ನು ಗುರಿಯಾಗಿಸಿಕೊಂಡು ಒಂದೇ ವಿಡಿಯೋವನ್ನು ಮತ್ತೆ ಮತ್ತೆ ಮರುಕಳಿಸಲಾಗುತ್ತಿದ್ದು, ಪೇಟಾ ಮಾನಹಾನಿ ಮಾಡುವುದನ್ನು ಮುಂದುವರಿಸಿದರೆ ನಾವು ಅವರನ್ನು ಕಾನೂನು ಬದ್ಧವಾಗಿ ನಿಭಾಯಿಸುವುದಾಗಿ ಕುಮಾರ್ ತಿಳಿಸಿದ್ದಾರೆ.
ಅಸ್ಸಾಂನ ಅರಣ್ಯ ಇಲಾಖೆ ನೀಡಿರುವ ಮಾಹಿತಿ ಏನು?
ಜೋಯ್ಮಾಲಾ ಆನೆಯ ಸುರಕ್ಷತೆ ಮತ್ತು ಮರಳುವಿಕೆಯನ್ನು ಖಚಿತಪಡಿಸಿಕೊಳ್ಳಲು ರಾಜ್ಯ ಸರಕಾರವು ಎಲ್ಲಾ ಕ್ರಮಗಳನ್ನು ಅನುಸರಿಸುತ್ತಿದೆ ಎಂದು ಅಸ್ಸಾಂನ ಹಿರಿಯ ಅರಣ್ಯ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ದಕ್ಷಿಣ ರಾಜ್ಯದಲ್ಲಿ ಜೇಮಲ್ಯತಾ ಎಂದು ಕರೆಯಲ್ಪಡುವ ಜೋಯ್ಮಾಲಾಳನ್ನು 2008 ರಲ್ಲಿ ಅಸ್ಸಾಂನಿಂದ ತಮಿಳುನಾಡಿಗೆ ಐದು ವರ್ಷಗಳ ಕಾಲ ಧಾರ್ಮಿಕ ಮೆರವಣಿಗೆಗಳು ಮತ್ತು ಸಮಾರಂಭಗಳಲ್ಲಿ ತೊಡಗಿಸಿಕೊಳ್ಳಲು ಕರೆದೊಯ್ಯಲಾಯಿತು, ಆದರೂ ಆನೆಯನ್ನು ಇನ್ನೂ ತನ್ನ ತವರು ರಾಜ್ಯಕ್ಕೆ ಹಿಂತಿರುಗಿಸಲಾಗಿಲ್ಲ.
ಕೃಷ್ಣನ್ ಕೋವಿಲ್ ದೇವಾಲಯದಲ್ಲಿ ಅಂಕುಶದಂತಹ ಆಯುಧಗಳಿಂದ ಆನೆಯನ್ನು ಬೆದರಿಸಲಾಗುತ್ತಿದೆ ಹಾಗೂ ಆನೆಯನ್ನು ನಿಯಂತ್ರಿಸಲಾಗುತ್ತಿದೆ ಎಂದು ಪೇಟಾ ಕಾರ್ಯನಿರ್ವಾಹಕರು ಆಪಾದಿಸಿದ್ದಾರೆ.
ಆನೆಯ ಮೇಲೆ ಮಾವುತನಿಂದ ಹಲ್ಲೆ
ಪುನರುಜ್ಜೀವನ ಶಿಬಿರದಲ್ಲಿ ಆನೆಯನ್ನು ಆಯುಧಗಳಿಂದ ಹೊಡೆಯುವ ಮೊದಲ ವಿಡಿಯೋ ಫೆಬ್ರವರಿ 2021 ರಲ್ಲಿ ಬಿಡುಗಡೆಗೊಂಡಿತು ಹಾಗೂ ತಮಿಳುನಾಡು ಸರಕಾವು ಈ ಹಿನ್ನಲೆಯಲ್ಲಿ ಒಬ್ಬ ಮಾವುತ ಹಾಗೂ ಕಾವಡಿಯನ್ನು ಬಂಧಿಸಿದೆ ಎಂದು ಪೇಟಾ ತಿಳಿಸಿದೆ.
ಈ ವರ್ಷದ ಜೂನ್ನಲ್ಲಿ ದೇವಸ್ಥಾನದಲ್ಲಿ ಮತ್ತೊಬ್ಬ ಮಾವುತನಿಂದ ಇದೇ ರೀತಿಯ ಹಲ್ಲೆಯ ಎರಡನೇ ವೀಡಿಯೊ ಬಹಿರಂಗವಾಯಿತು, ಇದು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಯಿತು.
ಆನೆಯ ಪರಿಶೀಲನೆಗೆ ಅಸ್ಸಾಂ ಅಧಿಕಾರಿಗಳಿಗೆ ಪ್ರವೇಶ ನಿರಾಕರಿಸಿದ ತಮಿಳುನಾಡು ಸರಕಾರ
ಆನೆಯ ಸ್ಥಿತಿಯನ್ನು ಪರಿಶೀಲಿಸಲು ಮತ್ತು ಮರಳಿ ಅಸ್ಸಾಂಗೆ ಮರಳಲು ಅನುವು ಮಾಡಿಕೊಡಲು ಆನೆ ತಜ್ಞರು ಮತ್ತು ಅರಣ್ಯ ಮತ್ತು ಪೊಲೀಸ್ ಅಧಿಕಾರಿಗಳನ್ನು ಒಳಗೊಂಡ ನಾಲ್ಕು ಸದಸ್ಯರ ತಂಡವನ್ನು ಅಸ್ಸಾಂ ಸರಕಾರ ಕಳುಹಿಸಿತ್ತು, ಆದರೆ ಅಧಿಕಾರಿಗಳ ಪ್ರವೇಶವನ್ನು ತಮಿಳುನಾಡು ಸರಕಾರ ನಿರಾಕರಿಸಿದೆ ಎಂಬುದು ತಿಳಿದುಬಂದಿದೆ.
ಈಶಾನ್ಯ ರಾಜ್ಯದಿಂದ ತಮಿಳುನಾಡಿಗೆ ಕೊಂಡೊಯ್ಯಲಾದ ಆನೆಗಳ ತಪಾಸಣೆಗೆ ಅಸ್ಸಾಂ ಸರಕಾರವು ಗೌಹಾಟಿ ಹೈಕೋರ್ಟ್ನಿಂದ ಮಧ್ಯಂತರ ಆದೇಶವನ್ನು ಪಡೆದಿತ್ತು.
ಈಗ ಜೋಯ್ಮಾಲಾಳನ್ನು ಇರಿಸಲಾಗಿರುವ ಪ್ರದೇಶಕ್ಕೆ ಯಾವುದೇ ಸಂದರ್ಶಕರನ್ನು ಪ್ರವೇಶಿಸಲು ಅನುಮತಿಸಲಾಗುವುದಿಲ್ಲ ಎಂದು ಸೂರ್ಯವಂಶಿ ಸಮರ್ಥಿಸಿಕೊಂಡಿದ್ದರೆ ಇತ್ತ, ಆಕೆಯನ್ನು ಒಂಟಿತನದಲ್ಲಿರಿಸಲು ಹಾಗೂ ಆಕೆಯ ಮೇಲೆ ನಡೆಸಲಾದ ನಿಂದನೆಯನ್ನು ಮರೆಮಾಡಲು ತಮಿಳುನಾಡು ಸರಕಾರ ಹೀಗೆ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ