ನವ ದೆಹಲಿ (ಮೇ 25); "ಕಾಂಗ್ರೆಸ್ ಟೂಲ್ಕಿಟ್" ಎಂದು ಬಿಜೆಪಿ ನಾಯಕ ಸಂಬಿತ್ ಪಾತ್ರಾ ಮಾಡಿದ್ದ ಟ್ವೀಟ್ಗೆ "ತಿರುಚಿದ ಮಾಧ್ಯಮ" (ಮ್ಯಾನಿಪುಲೆಟೆಡ್ ಮೀಡಿಯಾ) ಎಂದು ಟ್ವಿಟರ್ ಟ್ಯಾಗ್ ಮಾಡಿದ್ದಕ್ಕೆ ವಿವರಣೆ ಪಡೆಯಲು ದೆಹಲಿ ಪೊಲೀಸರು ಸೋಮವಾರ ಸಂಜೆ ದೆಹಲಿಯ ಟ್ವಿಟರ್ ಕಚೇರಿಗೆ ಭೇಟಿ ನೀಡಿದ್ದರು. ಆದರೆ, ಕೋವಿಡ್ ಲಾಕ್ಡೌನ್ ಕಾರಣದಿಂದ ಎಲ್ಲರೂ ಮನೆಯಿಂದ ಕೆಲಸ ಮಾಡುತ್ತಿರುವ ಕಾರಣಕ್ಕೆ ಟ್ವಿಟರ್ ಕಚೇರಿಯಲ್ಲಿ ಯಾರೂ ಪೊಲೀಸರಿಗೆ ಲಭ್ಯವಾಗಿಲ್ಲ ಎಂದು ಎನ್ಡಿಟಿವಿ ವರದಿ ಮಾಡಿದೆ.
ಮ್ಯಾನಿಪುಲೆಟೆಡ್ ಮೀಡಿಯಾ ಎಂದು ಟ್ಯಾಗ್ ಮಾಡಿದ್ದು ಪೂರ್ವಗ್ರಹಪೀಡಿತ ಎಂದು ಸರ್ಕಾರ ಆರೋಪಿಸಿತ್ತು. ನಂತರ ಟ್ವಿಟರ್ ಕಚೇರಿಗೆ ವಿವರ ಕೇಳಿ ನೋಟಿಸ್ ನಿಡಿದ್ದ ದೆಹಲಿ ಪೊಲೀಸರು ಸೋಮವಾರ ಸಂಜೆ ಟ್ವಿಟರ್ ಇಂಡಿಯಾ ಕಚೇರಿಗೆ ಭೇಟಿ ನೀಡಿದ್ದಾರೆ. ಆದರೆ ಲಾಕ್ಡೌನ್ ಕಾರಣ ಕಚೇರಿಯಲ್ಲಿ ಯಾರು ಸಿಕ್ಕಿಲ್ಲ.
ಸಂಬಿತ್ ಪಾತ್ರಾ ಟ್ವೀಟ್ಗೆ "ತಿರುಚಿದ ಮಾಧ್ಯಮ" (ಮ್ಯಾನಿಪುಲೆಟೆಡ್ ಮೀಡಿಯಾ) ಟ್ಯಾಗ್ ಹಾಕಿದ್ದಕ್ಕೆ ಕಂಪನಿ ನೀಡಿರುವ ವಿವರಣೆ ಅಸ್ಪಷ್ಟ ಎಂದು ಹೇಳಿದ್ದ ಪೊಲೀಸರು, ನೋಟಿಸ್ ಅನ್ನು ಖುದ್ದಾಗಿ ಹಸ್ತಾಂತರಿಸಲು ಟ್ವಿಟರ್ ಇಂಡಿಯಾ ಕಚೇರಿಗೆ ಹೋಗಿದ್ದಾಗಿ ತಿಳಿಸಿದ್ದಾರೆ. ಈ ಕ್ರಮದ ಬಗ್ಗೆ ಬಂದ ಟೀಕೆಗಳನ್ನು ಸಮರ್ಥಿಸಿಕೊಂಡಿರುವ ಸರ್ಕಾರವು, “ಮೂರು ನೋಟಿಸ್ ನೀಡಿದರೂ ಟ್ವಿಟರ್ ಸ್ಪಷ್ಟ ಉತ್ತರ ನೀಡದೇ ಹುಡುಗಾಟ ಆಡುತ್ತ ತಾನೇ ಬಲಿಪಶು ಎಂದು ತೋರಿಸಲು ಪ್ರಯತ್ನಿಸಿದೆ” ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಟ್ವಿಟರ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕರ ಉತ್ತರಗಳು ಬಹಳ ಅಸ್ಪಷ್ಟವಾಗಿರುವು ದರಿಂದ, ನೋಟಿಸ್ ನೀಡಲು ಸರಿಯಾದ ವ್ಯಕ್ತಿ ಯಾರು ಎಂದು ಗುರುತಿಸಲು ಈ ಭೇಟಿ ಅಗತ್ಯವಾಗಿತ್ತು ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: Navjot Singh Sidhu: ತಮ್ಮ ನಿವಾಸದ ಮೇಲೆ ಕಪ್ಪು ಬಾವುಟ ಹಾರಿಸಿ ರೈತರ ಹೋರಾಟಕ್ಕೆ ಬೆಂಬಲ ನೀಡಿದ ಪಂಜಾಬ್ ಶಾಸಕ ನವಜೋತ್ ಸಿಂಗ್ ಸಿಧು
ಈ ಪ್ರಕರಣದಲ್ಲಿ ಮೇ 18 ರಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಮಾಡಿದ ಟ್ವೀಟ್ ಅನ್ನು ಆಡಳಿತ ಪಕ್ಷದ ಹಲವಾರು ನಾಯಕರು ಹಂಚಿಕೊಂಡಿದ್ದಾರೆ. ಇದರಲ್ಲಿ ’ಕೋವಿಡ್ ನಿರ್ವಹಣೆ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡಿಸುವ ಮತ್ತು ಪ್ರಧಾನಿ ನರೇಂದ್ರ ಮೋದಿಯವರನ್ನು ಅಪಖ್ಯಾತಿಗೊಳಿಸುವ’ ಉದ್ದೇಶದಿಂದ ಕಾಂಗ್ರೆಸ್ ಟೂಲ್ಕಿಟ್ ರಚಿಸಿದೆ ಎಂದು ಆರೋಪಿಸಿದ್ದರು. “ಟೂಲ್ಕಿಟ್” ನಕಲಿ ಮತ್ತು ಇದನ್ನು ನಕಲಿ ಲೆಟರ್ ಹೆಡ್ ಬಳಸಿ ಮಾಡಲಾಗಿದೆ ಎಂದು ಕಾಂಗ್ರೆಸ್ ಟ್ವಿಟ್ರ್ಗೆ ಪತ್ರ ಬರೆದಿತ್ತು.
ಗುರುವಾರ ಸಂಜೆ, ಟ್ವಿಟರ್ ಸಂಬಿತ್ ಪಾತ್ರಾ ಅವರ ಟ್ವೀಟ್ ಅನ್ನು "ತಿರುಚಿದ ಮಾಧ್ಯಮ" (ಮ್ಯಾನಿಪುಲೆಟೆಡ್ ಮೀಡಿಯಾ) ಎಂದು ಟ್ಯಾಗ್ ಮಾಡಿತ್ತು. ಮರುದಿನ ಸರ್ಕಾರವು, "ಟೂಲ್ಕಿಟ್" ಬಗ್ಗೆ ಇನ್ನೂ ತನಿಖೆ ನಡೆಸುತ್ತಿರುವುದರಿಂದ ಟ್ಯಾಗ್ ಅನ್ನು ತೆಗೆದುಹಾಕುವಂತೆ ಟ್ವಿಟರ್ಗೆ ಕಠಿಣ ಪತ್ರ ಬರೆದಿತ್ತು. ಸೋಮವಾರ ದೆಹಲಿ ಪೊಲೀಸರ ವಿಶೇಷ ಘಟಕ ಸ್ಪಷ್ಟೀಕರಣ ಕೋರಿ ಟ್ವಿಟರ್ಗೆ ನೋಟಿಸ್ ಕಳುಹಿಸಿದೆ.
ಇದನ್ನೂ ಓದಿ: Lunar Eclipse 2021: ನಾಳೆ ಗೋಚರಿಸಲಿದೆ ಈ ವರ್ಷದ ಮೊದಲ ಚಂದ್ರಗ್ರಹಣ; ಸಮಯ, ಸ್ಥಳಗಳ ಮಾಹಿತಿ ಇಲ್ಲಿದೆ
"ದೆಹಲಿ ಪೊಲೀಸರು ದೂರಿನ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ. ಇದರಲ್ಲಿ ಸಂಬಿತ್ ಪಾತ್ರಾ ಅವರ ಟ್ವೀಟ್ ಅನ್ನು ’ಮ್ಯಾನಿಪ್ಯುಲೇಟಿವ್’ ಎಂದು ವರ್ಗೀಕರಿಸಿದ ಬಗ್ಗೆ ಟ್ವಿಟರ್ನಿಂದ ಸ್ಪಷ್ಟನೆ ಕೋರಲಾಗಿದೆ. ಟ್ವಿಟರ್ ನಮಗೆ ತಿಳಿದಿಲ್ಲದ ಕೆಲವು ಮಾಹಿತಿಯನ್ನು ಹೊಂದಿದೆ, ಅದರ ಆಧಾರದ ಮೇಲೆ ಅವರು ಅದನ್ನು ಈ ರೀತಿ ವರ್ಗೀಕರಿಸಿದ್ದಾರೆ. ಈ ಮಾಹಿತಿಯು ವಿಚಾರಣೆಗೆ ಸಂಬಂಧಿಸಿದೆ. ವಿಚಾರಣೆಯನ್ನು ನಡೆಸುತ್ತಿರುವ ವಿಶೇಷ ಘಟಕವು ಸತ್ಯವನ್ನು ಕಂಡುಹಿಡಿಯಲು ಬಯಸುತ್ತದೆ. ಟ್ಯಾಗ್ ನೀಡಲು ತಾನು ಕಂಡುಕೊಂಡ ಆಧಾರಗಳನ್ನು ಟ್ವಿಟರ್ ಸ್ಪಷ್ಟಪಡಿಸಬೇಕು" ಎಂದು ದೆಹಲಿ ಪೊಲೀಸ್ ವಕ್ತಾರರು ಹೇಳಿದ್ದಾರೆ. ಆದರೆ ಪೊಲೀಸರು ದೂರು ಅಥವಾ ದೂರುದಾರರ ವಿವರಗಳನ್ನು ಬಹಿರಂಗಪಡಿಸಲು ನಿರಾಕರಿಸಿದ್ದಾರೆ.
ದಾಖಲೆಗಳನ್ನು ಹಂಚಿಕೊಂಡಿದ್ದ ಬಿಜೆಪಿ ನಾಯಕರ ವಿರುದ್ಧ ಕಾಂಗ್ರೆಸ್ ದೂರುಗಳನ್ನು ದಾಖಲಿಸಿದೆ. ಛತ್ತೀಸಘಡದಲ್ಲಿ ಬಿಜೆಪಿ ನಾಯಕರಾದ ಸಂಬಿತ್ ಪಾತ್ರಾ ಮತ್ತು ರಮಣಸಿಂಗ್ ಅವರ ವಿರುದ್ಧ ಎಫ್ಐಆರ್ ದಾಖಲಿಸಿ, ಸಮನ್ಸ್ ನೀಡಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ