ಮುಂಬೈ (ಫೆಬ್ರವರಿ 16); ಗಣರಾಜ್ಯೋತ್ಸವ ಗಲಭೆಗೆ ಟೂಲ್ಕಿಟ್ ಬಳಸಿದ ಆರೋಪಕ್ಕೆ ಸಂಬಧಿಸಿದಂತೆ ಇತ್ತೀಚೆಗೆ ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನ ವಿದ್ಯಾರ್ಥಿನಿ ಹಾಗೂ ಪರಿಸರ ಕಾರ್ಯಕರ್ತೆ 21 ವರ್ಷದ ದಿಶಾ ರವಿ ಅವರನ್ನು ದೆಹಲಿ ಪೊಲೀಸರು ಬಂಧಿಸಿದ್ದರು. ಇದರ ಬೆನ್ನಿಗೆ ಇದೀಗ ಟೂಲ್ಕಿಟ್ ರಚಿಸುವಲ್ಲಿ ಭಾಗವಹಿಸಿದ್ದರು ಮತ್ತು ಪ್ರಮುಖ ಪಾತ್ರವಹಿಸಿದ್ದರು ಎಂಬ ಆರೋಪದ ಮೇಲೆ ಬಾಂಬೆ ಹೈಕೋರ್ಟ್ ವಕೀಲೆ ನಿಕಿತಾ ಜಾಕೋಬ್ ಹಾಗೂ ಸಮಾಜಪರ ಹೋರಾಟಗಾರ ಶಾಂತನೂ ಮುಲುಕ್ ಎಂಬಾತನ ವಿರುದ್ಧವೂ ದೆಹಲಿ ಪೊಲೀಸರು ಬಂಧನದ ವಾರೆಂಟ್ ಹೊರಡಿಸಿದ್ದರು. ಹೀಗಾಗಿ ಇಬ್ಬರೂ ನಿರೀಕ್ಷಣಾ ಜಾಮೀನಿಗೆ ಮನವಿ ಸಲ್ಲಿಸಿದ್ದರು. ಆದರೆ, ಇಂದು ಶಾಂತನೂ ಮುಲುಕ್ಗೆ ಜಾಮೀನು ಮಂಜೂರಾಗಿದ್ದರೆ ಮತ್ತೋರ್ವ ಆರೋಪಿ ನಿಕಿತಾ ಜಾಕೋಬ್ ಅರ್ಜಿಯ ವಿಚಾರಣೆಯನ್ನು ಬಾಂಬೆ ಹೈಕೋರ್ಟ್ ಮುಂದೂಡಿದೆ.
ಕೇಂದ್ರ ಸರ್ಕಾರದ ನೂತನ ಮೂರು ಕೃಷಿ ಕಾಯ್ದೆಗಳ ವಿರುದ್ಧ ಕಳೆದ 80 ದಿನಗಳಿಂದ ದೇಶದ ರೈತರು ದೆಹಲಿ ಹೊರ ವಲಯದಲ್ಲಿ ನಿರಂತರವಾಗಿ ಹೋರಾಟ ನಡೆಸುತ್ತಿದ್ದಾರೆ. ಇತ್ತೀಚೆಗೆ ಗಣರಾಜ್ಯೋತ್ಸವದ ದಿನ ನಡೆದ ಗಲಭೆಯ ಸಂದರ್ಭದಲ್ಲಿ ರೈತ ಹೋರಾಟವನ್ನು ಬೆಂಬಲಿಸಿ ಟ್ವೀಟ್ ಮಾಡಿದ್ದ, ಜಾಗತಿಕ ಪರಿಸರ ಹೋರಾಟಗಾರ್ತಿ ಗ್ರೇಟಾ ಥನ್ಬರ್ಗ್ ರೈತರ ಪ್ರತಿಭಟನೆಯಲ್ಲಿ ಜನರು ಭಾಗವಹಿಸಬಹುದಾದ ವಿಭಿನ್ನ ಮಾರ್ಗಗಳನ್ನು ತಿಳಿಸುವ ಟೂಲ್ಕಿಟ್ ಅನ್ನು ಶೇರ್ ಮಾಡಿದ್ದರು.
ಗಣರಾಜ್ಯೋತ್ಸವ ಗಲಭೆ ಸಂದರ್ಭದಲ್ಲಿ ಈ ಟೂಲ್ಕಿಟ್ ಪರಿಣಾಮಕಾರಿ ಪಾತ್ರ ನಿರ್ವಹಿಸಿದೆ ಎಂದು ಈಗಾಗಲೇ ಗ್ರೇಟಾ ಥನ್ಬರ್ಗ್ ವಿರುದ್ಧ ದೆಹಲಿಯಲ್ಲಿ ಎಫ್ಐಆರ್ ದಾಖಲು ಮಾಡಲಾಗಿದೆ. ಅಲ್ಲದೆ, ಗಣರಾಜ್ಯೋತ್ಸವದಂದು ಟ್ವೀಟ್ ಮೂಲಕ ಬಿರುಗಾಳಿ ಎಬ್ಬಿಸುವ ಉದ್ದೇಶದಿಂದ ಪೊಯೆಟಿಕ್ ಜಸ್ಟೀಸ್ ಫೌಂಡೇಶನ್ ಸಂಸ್ಥಾಪಕ ಎಂ.ಒ. ಧಲಿವಾಲ್ ತನ್ನ ಸಹೋದ್ಯೋಗಿ ಪುನೀತ್ ಮೂಲಕ ಜಾಕೋಬ್ ಅವರನ್ನು ಸಂಪರ್ಕಿಸಿದ್ದಾರೆ ಎಂದು ಮೂಲಗಳು ನ್ಯೂಸ್ 18 ಗೆ ತಿಳಿಸಿವೆ.
"ಜನವರಿ 26 ರ ಮೊದಲು ಜೂಮ್ ಸಭೆ ನಡೆದಿತ್ತು, ಇದರಲ್ಲಿ ಧಲಿವಾಲ್, ಜಾಕೋಬ್ ಮತ್ತು ದಿಶಾ ರವಿ ಇತರರು ಭಾಗವಹಿಸಿದ್ದರು. ಅವರು ಒಬ್ಬ ರೈತನ ಸಾವಿನ ಬಗ್ಗೆಯೂ ಮಾತನಾಡಿದ್ದರು. ದಿಶಾ ರವಿ ಅವರಿಗೆ ಥನ್‌ಬರ್ಗ್ ಬಗ್ಗೆ ತಿಳಿದಿದ್ದರಿಂದ ಅವರನ್ನು ವಿಮಾನದಲ್ಲಿ ಕರೆದೊಯ್ಯಲಾಯಿತು" ಎಂದು ಮೂಲಗಳು ತಿಳಿಸಿವೆ.
ನಾಲ್ಕು ದಿನಗಳ ಹಿಂದೆ ವಿಶೇಷ ಸೆಲ್ ಜಾಕೋಬ್ ಮನೆಯನ್ನು ಪರಿಶೀಲಿಸಿದ್ದು, ಆಕೆಯ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳನ್ನು ಪರೀಕ್ಷಿಸಿದೆ. ಹೀಗಾಗಿ ಆಕೆಯನ್ನು ವಿಚಾರಣೆಗೆ ಒಳಪಡಿಸುವ ಸಲುವಾಗಿ ದೆಹಲಿ ಪೊಲೀಸರು ಆಕೆಯನ್ನು ಸಂಪರ್ಕಿಸಲು ಯತ್ನಿಸಿದ್ದಾರೆ. ಆದರೆ, ನಿಕಿತಾ ಜಾಕೋಬ್ ಪರಾರಿಯಾಗಿದ್ದಾರೆ. ಹೀಗಾಗಿ ಸೋಮವಾರ ಅವರ ವಿರುದ್ಧ ಬಂಧನದ ವಾರೆಂಟ್ ಹೊರಡಿಸಲಾಗಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ