50 ವರ್ಷಗಳ ಬಳಿಕ ಡಿಎಂಕೆ ಅಧ್ಯಕ್ಷನಾಗಿ ಎಂ.ಕೆ. ಸ್ಟಾಲಿನ್ ಆಯ್ಕೆ

news18
Updated:August 28, 2018, 10:41 AM IST
50 ವರ್ಷಗಳ ಬಳಿಕ ಡಿಎಂಕೆ ಅಧ್ಯಕ್ಷನಾಗಿ ಎಂ.ಕೆ. ಸ್ಟಾಲಿನ್ ಆಯ್ಕೆ
news18
Updated: August 28, 2018, 10:41 AM IST
ನ್ಯೂಸ್ 18 ಕನ್ನಡ

ಚೆನ್ನೈ (ಆ.28): "ಒಂದು ಬಾರಿ, ನನ್ನ ಅಪ್ಪನಿಗೆ, ನನ್ನ ನಾಯಕನಿಗೆ ಕರೆ ಮಾಡಲೇ," ಹೀಗೆ ತಮ್ಮ ತಂದೆ ಹಾಗೂ ಡಿಎಂಕೆ ಪಕ್ಷದ ಮುಖ್ಯಸ್ಥ ಎಂ.ಕರುಣಾನಿಧಿ ನಿಧನದ ನಂತರ ಅವರ ಪುತ್ರ ಎಂ.ಕೆ. ಸ್ಟಾಲಿನ್ ಭಾವನಾತ್ಮಕ ಸಾಲುಗಳ ಪದ್ಯವನ್ನು ಬರೆದಿದ್ದರು. ಇದೀಗ ತಮ್ಮ ತಂದೆಯ ಸ್ಥಾನವನ್ನು ಅಲಂಕರಿಸಿದ್ದಾರೆ.

ಸುದೀರ್ಘ 50 ವರ್ಷಗಳ ನಂತರ ಡಿಎಂಕೆ ಅಧ್ಯಕ್ಷ ಪಟ್ಟಕ್ಕೆ ಮಂಗಳವಾರ ಚುನಾವಣೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಯಾರು ನಾಮಪತ್ರ ಸಲ್ಲಿಸದೆ ಇರುವುದರಿಂದ ಸ್ಟಾಲಿನ್ ಅವಿರೋಧವಾಗಿ ಆಯ್ಕೆಯಾದರು. ಈ ಮೂಲಕ 50 ವರ್ಷಗಳ ಬಳಿಕ ಪಕ್ಷದ ಅಧ್ಯಕ್ಷ ಸ್ಥಾನ ಅಲಂಕರಿಸಿದ್ದಾರೆ. 1969 ಜುಲೈ 29ರಲ್ಲಿ ಕರುಣಾನಿಧಿ ಅವರು ಡಿಎಂಕೆ ಪಕ್ಷದ ಅಧ್ಯಕ್ಷ ಪಟ್ಟ ಅಲಂಕರಿಸಿ, ನಿಧನರಾಗುವವರೆಗೂ ಅದೇ ಸ್ಥಾನದಲ್ಲಿ ಇದ್ದರು. ಇದೀಗ ಆ ಸ್ಥಾನಕ್ಕೆ ಅವರ ಕಿರಿಯ ಪುತ್ರ ಎಂ.ಕೆ.ಸ್ಟಾಲಿನ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇದರ ನಡುವೆ ಕರುಣಾನಿಧಿ ಅವರ ಹಿರಿಯ ಪುತ್ರ ಎಂ.ಕೆ. ಅಳಗಿರಿ ತಮ್ಮನ್ನು ಪಕ್ಷಕ್ಕೆಸೇರಿಸಿಕೊಳ್ಳದಿದ್ದರೆ ಮುಂದಿನ ಪರಿಣಾಮ ಎದುರಿಸಬೇಕಾಗುತ್ತದೆ ಎಂಬ ಎಚ್ಚರಿಕೆ ನೀಡಿದ್ದಾರೆ. ಕರುಣಾನಿಧಿ ನಿಧನರಾಗಿ 20 ದಿನ ಕಳೆದರೂ ಪಕ್ಷ ನನ್ನನ್ನು ಆಹ್ವಾನಿಸಿಲ್ಲ. ಪಕ್ಷ ಬಲಪಡಿಸುವ ಉದ್ದೇಶದಿಂದ ಪಕ್ಷಕ್ಕೆ ಮರಳಲು ನಾನು ಸಿದ್ಧನಿದ್ದೇನೆ. ಆದರೆ, ನನ್ನನ್ನು ಕಡೆಗಣಿಸಲಾಗಿದೆ. ಒಂದು ವೇಳೆ ಪಕ್ಷಕ್ಕೆ ಸೇರಿಸಿಕೊಳ್ಳದಿದ್ದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಎಂ.ಕೆ.ಅಳಗಿರಿ ಬಹಿರಂಗವಾಗಿ ಸವಾಲು ಹಾಕಿದ್ದಾರೆ.

ತಮ್ಮ 14 ವರ್ಷದಲ್ಲೇ ತಂದೆಯ ಪರ ಪ್ರಚಾರ ಕೆಲಸದಲ್ಲಿ ಭಾಗಿಯಾಗುವ ಮೂಲಕ ಸ್ಟಾಲಿನ್ ರಾಜಕೀಯ ಜೀವನ ಪ್ರವೇಶಿಸಿದರು. ತಂದೆಯ ನೆರಳಿನಲ್ಲಿಯೇ ರಾಜಕೀಯ ಆರಂಭಿಸಿದ ಸ್ಟಾಲಿನ್​ಗೆ ಡಿಎಂಕೆ ಪಕ್ಷದಲ್ಲಿ ಕರುಣಾನಿಧಿ ಒಂದು ಸ್ಥಾನ ಕಲ್ಪಿಸಿದ್ದರು.

1977ರ ತುರ್ತುಪರಿಸ್ಥಿತಿ ವೇಳೆ ಸ್ಟಾಲಿನ್ ಬಂಧನಕ್ಕೆ ಒಳಗಾಗಿದ್ದರು. ಆದಾದ 12 ವರ್ಷಗಳ ಬಳಿಕ 1989ರಲ್ಲಿ ವಿಧಾನಸಭೆ ಪ್ರವೇಶಿದರು. ನಂತರದ ಎರಡು ವರ್ಷದಲ್ಲೇ ನಡೆದ ಹಠಾತ್ ಚುನಾವಣೆಯಲ್ಲಿ ಸ್ಟಾಲಿನ್ ಸೋಲು ಕಂಡರು. ಆನಂತದಿಂದ ಈವರೆಗೂ ಅವರು ವಿಧಾನಸಭೆ ಚುನಾವಣೆಯಲ್ಲಿ ಸೋಲಿನ ಮುಖವನ್ನು ಕಂಡಿಲ್ಲ. ಸ್ಟಾಲಿನ್ ಅವರು ಚೆನ್ನೈ ಮೇಯರ್​ ಆಗಿದ್ದಾಗ ನಡೆಸಿದ ಅಧಿಕಾರ ಅವರ ಆಡಳಿತ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ. ಕರುಣಾನಿಧಿ ಮುಖ್ಯಮಂತ್ರಿಯಾಗಿದ್ದಾಗ ಸ್ಟಾಲಿನ್ ಉಪಮುಖ್ಯಮಂತ್ರಿಯಾಗಿಯೂ ಕೆಲಸ ಮಾಡಿದ ಅನುಭವವಿದೆ.

ಇದೀಗ 50 ವರ್ಷಗಳ ಬಳಿಕ ತಮ್ಮ ತಂದೆಯಿಂದ ಬಳುವಳಿಯಾಗಿ ಸ್ಟಾಲಿನ್ ಡಿಎಂಕೆ ಪಕ್ಷದ ಸಾರಥ್ಯ ವಹಿಸಿಕೊಂಡಿದ್ದಾರೆ.
First published:August 28, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...