ದೆಹಲಿ ವಿಧಾನಸಭೆ ಚುನಾವಣೆ; ಮತದಾನ ಆರಂಭ, ಯಾರ ಕೊರಳಿಗೆ ವಿಜಯಮಾಲೆ ಹಾಕಲಿದ್ದಾರೆ ಮತದಾರರು?

ಆಡಳಿತಾರೂಢ ಎಎಪಿ ಹ್ಯಾಟ್ರಿಕ್ ಗೆಲುವಿನ ಕನಸು ಕಾಣುತ್ತಿದ್ದರೆ, ಹೇಗಾದರೂ ಮಾಡಿ ರಾಷ್ಟ್ರ ರಾಜಧಾನಿಯ ಅಧಿಕಾರ ಕಸಿದುಕೊಳ್ಳಲು ಬಿಜೆಪಿ ಹರಸಾಹಸ ಪಡುತ್ತಿದೆ. ಇನ್ನು ಗೆಲವು ಮರೀಚಿಕೆ ಎಂಬ ಅರಿವಿದ್ದರೂ ಕಾಂಗ್ರೆಸ್​ ಕೂಡ ಅಸ್ತಿತ್ವ ಮರುಸ್ಥಾಪಿಸಿಕೊಳ್ಳಲು ಹೆಣಗಾಡುತ್ತಿದೆ.

ಅರವಿಂದ ಕೇಜ್ರಿವಾಲ್, ಪ್ರಧಾನಿ ಮೋದಿ, ಸೋನಿಯಾ ಗಾಂಧಿ.

ಅರವಿಂದ ಕೇಜ್ರಿವಾಲ್, ಪ್ರಧಾನಿ ಮೋದಿ, ಸೋನಿಯಾ ಗಾಂಧಿ.

  • Share this:
ನವದೆಹಲಿ: ಭಾರೀ ಕುತೂಹಲ ಮೂಡಿಸಿರುವ ದೆಹಲಿ ವಿಧಾನಸಭೆ ಚುನಾವಣೆ ಇಂದು ನಡೆಯಲಿದೆ. 70 ವಿಧಾನಸಭಾ ಕ್ಷೇತ್ರಗಳಿಗೆ ಬೆಳಗ್ಗೆ 7ಗಂಟೆಗೆ ಮತದಾನ ಆರಂಭವಾಗಿದ್ದು, ಸಂಜೆ ಆರು ಗಂಟೆವಗೆ ಮುಕ್ತಾಯವಾಗಲಿದೆ. ಫೆಬ್ರವರಿ 11ರಂದು ಫಲಿತಾಂಶ ಪ್ರಕಟವಾಗಲಿದೆ.

ಆಡಳಿತಾರೂಢ ಎಎಪಿ ಹ್ಯಾಟ್ರಿಕ್ ಗೆಲುವಿನ ಕನಸು ಕಾಣುತ್ತಿದ್ದರೆ, ಹೇಗಾದರೂ ಮಾಡಿ ರಾಷ್ಟ್ರ ರಾಜಧಾನಿಯ ಅಧಿಕಾರ ಕಸಿದುಕೊಳ್ಳಲು ಬಿಜೆಪಿ ಹರಸಾಹಸ ಪಡುತ್ತಿದೆ. ಇನ್ನು ಗೆಲವು ಮರೀಚಿಕೆ ಎಂಬ ಅರಿವಿದ್ದರೂ ಕಾಂಗ್ರೆಸ್​ ಕೂಡ ಅಸ್ತಿತ್ವ ಮರುಸ್ಥಾಪಿಸಿಕೊಳ್ಳಲು ಹೆಣಗಾಡುತ್ತಿದೆ.

70 ಸದಸ್ಯ ಬಲದ ವಿಧಾನಸಭೆಗೆ ಒಟ್ಟು 672 ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದಾರೆ. 67 ಲಕ್ಷ ಮಹಿಳಾ ಮತದಾರರು, 81 ಲಕ್ಷ ಪುರುಷ ಮತದಾರರು, 11,608 ಸೇವಾ ಮತದಾರರು, 869 ತೃತೀಯ ಲಿಂಗಿ ಮತದಾರರು ಸೇರಿ ಒಟ್ಟು 1.47 ಕೋಟಿ ಮಂದಿ ಮತದಾರರಿದ್ದಾರೆ. 2,04,830 ಮಂದಿ 80 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರಿದ್ದಾರೆ.

ಬಿಜೆಪಿ ಲೋಕ ಜನಶಕ್ತಿ ಪಕ್ಷ (ಎಲ್​ಜೆಪಿ) ಮತ್ತು ಜನತಾ ದಳ ಯುನೈಟೆಡ್​ (ಜೆಡಿಯು) ನೊಂದಿಗೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸುತ್ತಿದೆ. ಕಾಂಗ್ರೆಸ್ ಕೂಡ ರಾಷ್ಟ್ರೀಯ ಜನತಾ ದಳ (ಆರ್​ಜೆಡಿ) ಯೊಂದಿಗೆ ಮೈತ್ರಿಯೊಂದಿಗೆ ಚುನಾವಣೆ ಎದುರಿಸುತ್ತಿದೆ. ಆಡಳಿತಾರೂಢ ಆಮ್​ ಆದ್ಮಿ ಪಕ್ಷ ಸಿಎಂ ಅರವಿಂದ್ ಕೇಜ್ರಿವಾಲ್ ನೇತೃತ್ವದಲ್ಲಿ ಮೂರನೇ ಬಾರಿ ದೆಹಲಿ ಗದ್ದುಗೆ ಹಿಡಿಯಲು ಯತ್ನಿಸುತ್ತಿದೆ.

ಮುಖ್ಯಮಂತ್ರಿ ಅರವಿಂದ್​​ ಕೇಜ್ರಿವಾಲ್​​​​​ ನೇತೃತ್ವದ ಆಪ್​​ ತನ್ನ ಅಭಿವೃದ್ದಿ ಕೆಲಸಗಳನ್ನು ಮುಂದಿಟ್ಟುಕೊಂಡು ಅಬ್ಬರದ ಪ್ರಚಾರ ಮಾಡಿದೆ. ಹಾಗೆಯೇ ಇಲ್ಲಿನ ವಿಧಾನಸಭೆ ಚುನಾವಣೆ ಗೆಲ್ಲಲು ಕಾಂಗ್ರೆಸ್​​​​​​ನಂತೆಯೇ ಬಿಜೆಪಿ ಕೂಡ ಕಸರತ್ತು ನಡೆಸುತ್ತಿದೆ. ಸಿಎಂ ಅರವಿಂದ್​ ಕೇಜ್ರಿವಾಲ್​​ ಸೋಲಿಸಿ, ದೆಹಲಿ ಗದ್ದುಗೆ ಹಿಡಿಯಲು ಪ್ರಧಾನಿ ಮೋದಿಯಿಂದ ಹಿಡಿದು, ಪಕ್ಷದ 240 ಸಂಸದರು ದೆಹಲಿ ಪ್ರಚಾರದಲ್ಲಿ ಭಾಗಿಯಾಗಿದ್ದರು.

ಇದನ್ನು ಓದಿ: ದೆಹಲಿ ಚುನಾವಣೆ: ಬಿಜೆಪಿ, ಕಾಂಗ್ರೆಸ್, ಎಎಪಿಗೆ ಚಿಕ್ಕ ರಾಜ್ಯದ ಗೆಲುವು ಯಾವ್ಯಾವ ಕಾರಣಕ್ಕೆ ಮುಖ್ಯ?

ಇಲ್ಲಿನ ವಿಧಾನಸಭೆ 70 ಸದಸ್ಯರ ಬಲ ಹೊಂದಿದೆ. 2015ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದಲ್ಲಿ ಆಮ್ ಆದ್ಮಿ ಪಕ್ಷ ಬರೋಬ್ಬರಿ 67 ಸ್ಥಾನಗಳನ್ನು ಗೆದ್ದು ಭರ್ಜರಿ ಜಯ ಸಾಧಿಸಿತ್ತು. ಅದಕ್ಕೂ ಹಿಂದೆ 2013ರಲ್ಲಿ ನಡೆದ ಚುನಾವಣೆಯಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾಗಿತ್ತು. ಬಿಜೆಪಿ 31, ಆಪ್ ಪಕ್ಷ 28 ಹಾಗೂ ಕಾಂಗ್ರೆಸ್ 8 ಸ್ಥಾನ ಗಳಿಸಿದ್ದವು. ಬಿಜೆಪಿ ಸರ್ಕಾರ ರಚಿಸಲು ಮುಂದೆ ಬರಲಿಲ್ಲ. ರಾಷ್ಟ್ರಪತಿ ಆಳ್ವಿಕೆ ಸನ್ನಿಹಿತ ಎಂದನಿಸುತ್ತಿರುವಂತೆಯೇ ಕಾಂಗ್ರೆಸ್ ಪಕ್ಷದ ಬಾಹ್ಯ ಬೆಂಬಲದೊಂದಿಗೆ ಆಮ್ ಆದ್ಮಿ ಅಧಿಕಾರ ರಚಿಸಿತ್ತು. ಕೆಲವೇ ತಿಂಗಳ ಹಿಂದಷ್ಟೇ ಜನ್ಮ ತಾಳಿದ್ದ ಆಮ್ ಆದ್ಮಿ ಪಕ್ಷ ಒಂದೇ ವರ್ಷದ ಅಂತರದಲ್ಲಿ ರಾಜ್ಯವೊಂದರ ಅಧಿಕಾರ ಹಿಡಿದು ಹೊಸ ಇತಿಹಾಸ ಸೃಷ್ಟಿಸಿತು. ಅರವಿಂದ್ ಕೇಜ್ರಿವಾಲ್ ದಿಲ್ಲಿ ‘ದೊರೆ’ಯಾದರು.

 

 
First published: