• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Bihar Election Results 2020 | ಇಂದು ಬಿಹಾರ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟ; ಯಾರಿಗೆ ದಕ್ಕಲಿದೆ ಅಧಿಕಾರದ ಗದ್ದುಗೆ?

Bihar Election Results 2020 | ಇಂದು ಬಿಹಾರ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟ; ಯಾರಿಗೆ ದಕ್ಕಲಿದೆ ಅಧಿಕಾರದ ಗದ್ದುಗೆ?

Bihar Election Result 2020

Bihar Election Result 2020

Bihar Election Results ಕೆಲ ಸಮೀಕ್ಷೆಗಳು ಬಿಹಾರದಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾಗಲಿದೆ ಎಂಬ ಭವಿಷ್ಯವನ್ನೂ ನುಡಿದಿವೆ. ಈ ಭವಿಷ್ಯಗಳು ನಿಜವಾದರೆ ಮಹಾಮೈತ್ರಿ ಮತ್ತು ಎನ್ ಡಿ ಎ ಎರಡೂ ಪಾಳೆಯದಲ್ಲಿ ಬೇರೆಯದೇ ರೀತಿಯ ಬೆಳವಣಿಗೆಗಳಾಗುತ್ತವೆ. ಆಗ ಎನ್ ಡಿ ಎ ಅಧಿಕಾರ ಗಿಟ್ಟಿಸಿಕೊಂಡರೂ ನಿತೀಶ್ ಕುಮಾರ್ ಸಿಎಂ ಆಗುವುದು ಕಷ್ಟವಾಗಲಿದೆ. ಒಟ್ಟಿನಲ್ಲಿ ಬಿಹಾರ ಫಲಿತಾಂಶ ತೀವ್ರ ಕುತೂಹಲ ಮೂಡಿಸಿದೆ.

ಮುಂದೆ ಓದಿ ...
  • Share this:

    ನವದೆಹಲಿ, ನ. 9:  ಬಿಹಾರ ವಿಧಾನಸಭೆ ಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗಲಿದೆ. ಇಂದು ಪ್ರಕಟವಾಗಲಿರುವ ಫಲಿತಾಂಶ ರಾಷ್ಟ್ರವ್ಯಾಪಿ ಕುತೂಹಲ ಮೂಡಿಸಿದೆ. ಬಿಹಾರದ ಮುಖ್ಯಮಂತ್ರಿ ಪಟ್ಟ ನಿತೀಶ್ ಕುಮಾರ್ ಅಥವಾ ತೇಜಸ್ವಿ ಯಾದವ್ ಯಾರ ಪಾಲಾಗುತ್ತದೆ ಎಂಬುದರ ಜೊತೆಗೆ ಚುನಾವಣೋತ್ತರ ಸಮೀಕ್ಷೆಗಳು ಹೇಳಿರುವ ಭವಿಷ್ಯ ನಿಜವಾಗುತ್ತೋ ಇಲ್ಲವೋ ಎಂಬ ಕುತೂಹಲ ಕೂಡ ಮನೆಮಾಡಿದೆ.


    243 ಸದಸ್ಯ ಬಲದ ಬಿಹಾರ ವಿಧಾನಸಭೆಗೆ ಒಟ್ಟು ಮೂರು ಹಂತಗಳಲ್ಲಿ ಚುನಾವಣೆ ನಡೆದಿತ್ತು. ಅಕ್ಟೋಬರ್ 28, ನವೆಂಬರ್ 3 ಹಾಗೂ ನವೆಂಬರ್ 7ರಂದು ಮತದಾನ ನಡೆದಿತ್ತು. ಹಾಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದಲ್ಲಿ ಎನ್​ಡಿಎ ಹಾಗೂ ತೇಜಸ್ವಿ ಯಾದವ್ ನೇತೃತ್ವದ ಮಹಾಘಟಬಂಧನ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿದ್ದು, ಯಾರಿಗೆ ಗದ್ದುಗೆ ದಕ್ಕಲಿದೆ ಎಂಬುದು ಇಂದು ಮಧ್ಯಾಹ್ನದ ಒಳಗೆ ತಿಳಿದುಬರಲಿದೆ.


    ಇದೇ ಬಿಹಾರದಲ್ಲಿ ಕಳೆದ ಬಾರಿ,‌ ಅಂದರೆ 2015ರ ವಿಧಾನಸಭಾ ಚುನಾವಣೆ ವಿಷಯದಲ್ಲಿ ಹೇಳಲಾಗಿದ್ದ ಚುನಾವಣೋತ್ತರ ಸಮೀಕ್ಷೆಗಳ ಭವಿಷ್ಯ ಸುಳ್ಳಾಗಿದ್ದವು.‌ ಅಷ್ಟೇ ಅಲ್ಲ, ಹಲವು ಬಾರಿ ಚುನಾವಣೋತ್ತರ ಸಮೀಕ್ಷೆಗಳು ಸುಳ್ಳಾದ ಉದಾಹರಣೆಗಳಿವೆ. ಹಾಗಾಗಿಯೇ ಈ ಬಾರಿಯ ಬಿಹಾರ ಚುನಾವಣೆಯ ಎಕ್ಸಿಟ್ ಪೋಲ್ ಹೇಳಿರುವಂಥದೇ ಫಲಿತಾಂಶ ಬರುತ್ತೋ ಇಲ್ಲವೋ ಎಂಬ ಅನುಮಾನ ಕಾಡುತ್ತಿದೆ.


    ಬಹುತೇಕ ಚುನಾವಣೋತ್ತರ ಸಮೀಕ್ಷೆಗಳು ತೇಜಸ್ವಿ ಯಾದವ್ ನೇತೃತ್ವದ ಮಹಾಮೈತ್ರಿಯ ಸರ್ಕಾರ ಬರುತ್ತವೇ ಎಂದು ಹೇಳಿರುವುದರಿಂದಲೋ ಏನೋ ಬಿಜೆಪಿ ನಾಯಕರು ಈ ಬಾರಿಯ ಎಕ್ಸಿಟ್ ಪೋಲ್ ನಂಬಲು ಸಿದ್ದರಿಲ್ಲ. ಅವರು 'ಇದು‌ ಎಕ್ಸಿಟ್ ಪೋಲ್ ಅಷ್ಟೇ, ಎಕ್ಸಾಕ್ಟ್ ಪೋಲ್ ಅಲ್ಲ' ಅಂತಾ ಹೇಳುತ್ತಿದ್ದಾರೆ. ಚುನಾವಣೋತ್ತರ ಸಮೀಕ್ಷೆಗಳು ಹೇಳಿರುವಂಥದೇ ಫಲಿತಾಂಶ ಬಂದರೆ ಆರ್ ಜೆಡಿ ಮತ್ತು ಕಾಂಗ್ರೆಸ್ ನೇತೃತ್ವದ ಮಹಾಘಟಬಂಧನಕ್ಕೆ ಭಾರಿ ಬಲ ಬಂದಂತಾಗುತ್ತದೆ. ಬಿಹಾರದಲ್ಲಿ ಅಧಿಕಾರ ಹಿಡಿದ ಕಾರಣಕ್ಕೆ ಮಾತ್ರವಲ್ಲ, ರಾಷ್ಟ್ರ ಮಟ್ಟದಲ್ಲೂ ಬಿಜೆಪಿ ಮೇಲೆ ದಾಳಿ ಮಾಡಲು ಬ್ರಹ್ಮಾಸ್ತ್ರ ಸಿಕ್ಕಂತಾಗುತ್ತದೆ. ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಜನ ತಿರಸ್ಕರಿಸಿದ್ದಾರೆ ಎಂದು ಸಾರಿ‌ ಸಾರಿ ಹೇಳಲು ಅವಕಾಶ ಸಿಕ್ಕಂತಾಗುತ್ತದೆ.


    ಮಹಾಮೈತ್ರಿ ಗೆದ್ದರೆ ಎಲ್ಲರಿಗಿಂತ ಹೆಚ್ಚು ಅದೃಷ್ಟ ಖುಲಾಯಿಸುವುದು ತೇಜಸ್ವಿ ಯಾದವ್ ಅವರಿಗೆ. ಈಗಾಗಲೇ ಮಹಾಘಟಬಂಧನದ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಲಾಗಿರುವುದರಿಂದ ತೇಜಸ್ವಿ ಯಾದವ್ ಅನಾಯಾಸವಾಗಿ ಮುಖ್ಯಮಂತ್ರಿ ಆಗಲಿದ್ದಾರೆ. ಜೊತೆಗೆ ಅಪ್ಪ ಲಾಲೂಪ್ರಸಾದ್ ಯಾದವ್ ಬಳಿಕ ಆರ್ ಜೆ ಡಿ ಪಕ್ಷದಲ್ಲಿ ತೇಜಸ್ವಿ ಯಾದವ್ ಪ್ರಶ್ನಾತೀತ ನಾಯಕ ಆಗಿ ಹೊರಹೊಮ್ಮಲಿದ್ದಾರೆ.


    ನಿತೀಶ್ ಗೆ ನಿರ್ಣಾಯಕ


    ಈ‌ ಬಾರಿಯ ಬಿಹಾರ ಫಲಿತಾಂಶ ಎಲ್ಲರಿಗಿಂತ ಹೆಚ್ಚು ನಿತೀಶ್ ಕುಮಾರ್ ಪಾಲಿಗೆ ಹೆಚ್ಚು ನಿರ್ಣಾಯಕವಾದುದಾಗಿದೆ. ಏಕೆಂದರೆ ಒಂದೊಮ್ಮೆ ಈ ಚುನಾವಣೆಯಲ್ಲಿ ನಿತೀಶ್ ಕುಮಾರ್ ಅವರ ಜೆಡಿಯು ಸೋತರೆ ರಾಜಕೀಯವಾಗಿ ನಿತೀಶ್ ಕುಮಾರ್ ಅವರ ಅಧ್ಯಾಯ ಮುಗಿದಂತೆ ಎನ್ನುವುದು ನಿರ್ವೀವಾದ. ಚುನಾವಣೋತ್ತರ ಸಮೀಕ್ಷೆಗಳು ನಿತೀಶ್ ಕುಮಾರ್ ಅವರ ಜೆಡಿಯು ಪಕ್ಷ ಬಿಜೆಪಿಗಿಂತಲೂ ಕಡಿಮೆ ಸ್ಥಾನಗಳನ್ನು ಗೆಲ್ಲಲಿದೆ ಎಂದು‌ ಹೇಳಿರುವುದರಿಂದ ಅವರ ಜೆಡಿಯು ಅಧಿಕೃತವಾದ ಪ್ರತಿಪಕ್ಷ‌ ಸ್ಥಾನವನ್ನು ಗಳಿಸುವ ಸಾಧ್ಯತೆಯೂ ಇಲ್ಲ. ಹಾಗಾದರೆ ನೈತಿಕವಾಗಿ ಕೂಡ ನಿತೀಶ್ ಕುಮಾರ್ ಅವರಿಗೆ ಭಾರೀ ಹಿನ್ನಡೆಯಾಗಲಿದೆ.


    ತಲೆಕೆಳಗಾಗಲಿದೆ ಬಿಜೆಪಿ ಲೆಕ್ಕಾಚಾರಹಲವು ಸಮಸ್ಯೆಗಳನ್ನು ಎದುರಿಸುತ್ತಿರುವ ಕೇಂದ್ರದ ಬಿಜೆಪಿ ನಾಯಕರು ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಪ್ರತಿಪಕ್ಷಗಳ ಆರೋಪಕ್ಕೆ ತಕ್ಕ ಉತ್ತರ ನೀಡಬಹುದು ಎಂದುಕೊಂಡಿದ್ದಾರೆ. ಅದಕ್ಕಿಂತ ಹೆಚ್ಚಾಗಿ ಬಿಹಾರ ಚುನಾವಣೆ ಗೆದ್ದರೆ ಪಶ್ಚಿಮ ಬಂಗಾಳದ ಚುನಾವಣೆಗೆ ಸ್ಪೂರ್ತಿ ಸಿಗಲಿದೆ ಎಂಬ ಲೆಕ್ಕಾಚಾರ ಹಾಕಿಕೊಂಡಿದ್ದಾರೆ. ಒಂದೊಮ್ಮೆ ಚು‌ನಾವಣೋತ್ತರ ಸಮೀಕ್ಷೆಗಳು ನಿಜವಾದರೆ ಬಿಜೆಪಿಗೆ ಪಶ್ಚಿಮ ಬಂಗಾಳದ ಚುನಾವಣೆ ಇನ್ನಷ್ಟು ಕಠಿಣವಾಗಲಿದೆ. ಜೊತೆಗೆ ರಾಷ್ಟ್ರ ಮಟ್ಟದಲ್ಲೂ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗಲಿದೆ.


    ಒಂದೊಮ್ಮೆ ಚುನಾವಣೋತ್ತರ ಸಮೀಕ್ಷೆಗಳು ಸುಳ್ಳಾಗಿ ಎನ್ ಡಿಎ ಮೈತ್ರಿ ಕೂಟ ಗೆದ್ದರೆ ಬಿಜೆಪಿಗೆ ಭಾರೀ ಲಾಭವಾಗಲಿದೆ. ಅದು ಪಶ್ಚಿಮ ಬಂಗಾಳದ ಚುನಾವಣೆ ಅಥವಾ ರಾಷ್ಟ್ರ ರಾಜಕಾರಣದ ದೃಷ್ಟಿಯಿಂದ ಮಾತ್ರವಲ್ಲ. ಬಿಹಾರದಲ್ಲೂ ಸದ್ಯಕ್ಕೆ ನಿತೀಶ್ ಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡಿ ಕ್ರಮೇಣ ಬಿಜೆಪಿಗೆ ಮುಖ್ಯಮಂತ್ರಿ ಪಟ್ಟ ದಕ್ಕಿಸಿಕೊಳ್ಳುವ ಪ್ರಯತ್ನಗಳಾಗಲಿವೆ. ನಿತೀಶ್ ಕುಮಾರ್ ಅವರ ಜೆಡಿಯುಗಿಂತ ಬಿಜೆಪಿ ಹೆಚ್ಚು ಸೀಟು ಗೆದ್ದರೆ ಈ ಲೆಕ್ಕಾಚಾರವನ್ನು ಜಾರಿಗೊಳಿಸುವುದು ಸುಲಭವಾಗಲಿದೆ‌.


    ಕೆಲ ಸಮೀಕ್ಷೆಗಳು ಬಿಹಾರದಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾಗಲಿದೆ ಎಂಬ ಭವಿಷ್ಯವನ್ನೂ ನುಡಿದಿವೆ. ಈ ಭವಿಷ್ಯಗಳು ನಿಜವಾದರೆ ಮಹಾಮೈತ್ರಿ ಮತ್ತು ಎನ್ ಡಿ ಎ ಎರಡೂ ಪಾಳೆಯದಲ್ಲಿ ಬೇರೆಯದೇ ರೀತಿಯ ಬೆಳವಣಿಗೆಗಳಾಗುತ್ತವೆ. ಆಗ ಎನ್ ಡಿ ಎ ಅಧಿಕಾರ ಗಿಟ್ಟಿಸಿಕೊಂಡರೂ ನಿತೀಶ್ ಕುಮಾರ್ ಸಿಎಂ ಆಗುವುದು ಕಷ್ಟವಾಗಲಿದೆ. ಒಟ್ಟಿನಲ್ಲಿ ಬಿಹಾರ ಫಲಿತಾಂಶ ತೀವ್ರ ಕುತೂಹಲ ಮೂಡಿಸಿದೆ.

    Published by:HR Ramesh
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು