ಚೆನ್ನೈ(ಆ. 03): ಕೇಂದ್ರ ಸಂಪುಟ ಅನುಮೋದನೆ ನೀಡಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಕೆಲ ಅಂಶಗಳನ್ನು ತಮಿಳುನಾಡು ಸರ್ಕಾರ ತೀವ್ರವಾಗಿ ವಿರೋಧಿಸಿದೆ. ಶಿಕ್ಷಣ ನೀತಿಯಲ್ಲಿ ಅಡಕವಾಗಿರುವ ತ್ರಿಭಾಷಾ ಸೂತ್ರಕ್ಕೆ ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ತ್ರಿಭಾಷಾ ಸೂತ್ರದಿಂದ ರಾಜ್ಯದ ಜನರ ಮನೋಭಾವನೆಗೆ ಧಕ್ಕೆ ತರುವುದರಿಂದ ಇದನ್ನು ತಮಿಳುನಾಡಿನಲ್ಲಿ ಜಾರಿ ಮಾಡುವುದಿಲ್ಲ ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ.
ಇಂದು ಸೋಮವಾರ ಈ ಬಗ್ಗೆ ಹೇಳಿಕೆ ನೀಡಿದ ಸಿಎಂ ಪಳನಿಸ್ವಾಮಿ, ತಮಿಳುನಾಡಿನಲ್ಲಿ ಈಗ ಅಸ್ತಿತ್ವದಲ್ಲಿರುವ ದ್ವಿಭಾಷಾ ನೀತಿಯನ್ನೇ ಮುಂದುವರಿಸುತ್ತೇವೆ ಎಂದು ತಿಳಿಸಿದ್ದಾರೆ.
ನೂತನ ಶಿಕ್ಷಣ ನೀತಿಯನ್ನು ಆಯಾ ರಾಜ್ಯಗಳಿಗೆ ಅನುಕೂಲವಾಗುವಂತೆ ಒಂದಷ್ಟು ಬದಲಾವಣೆ ಮಾಡಿಕೊಳ್ಳಲು ಅನುವು ಮಾಡಿಕೊಡಬೇಕು ಎಂದೂ ಅವರು ಪ್ರಧಾನಿ ನರೇಂದರ ಮೋದಿ ಅವರಲ್ಲಿ ಮನವಿ ಮಾಡಿದ್ದಾರೆ.
ತಮಿಳುನಾಡಿನ ಶಾಲಾ ಶಿಕ್ಷಣ ಸಚಿವ ಕೆ.ಎ. ಸೆಂಗೊಟ್ಟಿಯನ್ ಅವರೊಂದಿಗೆ ಸಭೆ ನಡೆಸಿ ಚರ್ಚಿಸಿ ಬಳಿಕ ಸಿಎಂ ಎಡಪ್ಪಾಡಿ ಪಳನಿಸ್ವಾಮಿ ಅವರು ರಾಷ್ಟ್ರೀಯ ಶಿಕ್ಷಣ ನೀತಿಯ ಕೆಲ ಅಂಶಗಳನ್ನ ವಿರೋಧಿಸಲು ನಿರ್ಧರಿಸಿದರೆನ್ನಲಾಗಿದೆ.
ಇದನ್ನೂ ಓದಿ: ದೆಹಲಿಯ ಪ್ರಸಿದ್ಧ ರೆಸ್ಟೋರೆಂಟ್ ಸಾಂಬಾರ್ನಲ್ಲಿ ಸತ್ತ ಹಲ್ಲಿ ಪತ್ತೆ; ಕೇಸ್ ದಾಖಲು
ತಮಿಳುನಾಡಿನಲ್ಲಿ ದಶಕಗಳಿಂದಲೂ ಹಿಂದಿ ಹೇರಿಕೆ ವಿರುದ್ಧ ಚಳವಳಿಗಳು ನಡೆಯುತ್ತಾ ಬಂದಿದೆ. ಇಲ್ಲಿಯ ಶಿಕ್ಷಣದಲ್ಲಿ ತಮಿಳು ಮತ್ತು ಇಂಗ್ಲೀಷ್ ಭಾಷೆಯ ದ್ವಿಭಾಷಾ ಸೂತ್ರ ಇದೆ. ಆದರೆ, ಕೇಂದ್ರ ಸರ್ಕಾರದ ನೂತನ ಶಿಕ್ಷಣ ನೀತಿಯಲ್ಲಿ ತ್ರಿಭಾಷಾ ಸೂತ್ರ ಇದೆ. ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಈ ಬಗ್ಗೆ ತೀವ್ರ ವಿರೋಧಗಳು ವ್ಯಕ್ತವಾಗಿವೆ. ತಮಿಳುನಾಡಿನಲ್ಲಿ ವಿಪಕ್ಷಗಳು ಕಟುವಾಗಿ ವಿರೋಧಿಸಿವೆ. ಆರಂಭದಲ್ಲಿ ರೂಪಿತವಾದ ಶಿಕ್ಷಣ ನೀತಿಯ ಕರಡಿನಲ್ಲಿ ಹಿಂದಿ ಭಾಷೆಯ ಕಲಿಕೆಯನ್ನು ಕಡ್ಡಾಯಗೊಳಿಸಲಾಗಿತ್ತು. ಆದರೆ, ಡಿಎಂಕೆ ಪಕ್ಷ 2019ರ ಆಗಸ್ಟ್ ತಿಂಗಳಲ್ಲೇ ಇದನ್ನು ತೀವ್ರವಾಗಿ ವಿರೋಧಿಸಿತ್ತು. ಇನ್ನೂ ಕೆಲ ರಾಜ್ಯಗಳು ಇದಕ್ಕೆ ಧ್ವನಿಗೂಡಿಸಿದವು. ಎಲ್ಲೆಡೆ ವಿರೋಧ ವ್ಯಕ್ತವಾದ ಬಳಿಕ ಕರಡು ಮಸೂದೆಗೆ ತಿದ್ದುಪಡಿ ತರಲಾಯಿತು. ಇದು ಡಿಎಂಕೆ ಪಕ್ಷದ ಹೋರಾಟಕ್ಕೆ ಸಂದ ಗೆಲುವು ಎಂದು ಬಣ್ಣಿಸಲಾಗಿದೆ.
ಭಾರತದ ಸಂವಿಧಾನದಲ್ಲಿ ದಯಪಾಲಿಸಲಾಗಿರುವ ಒಕ್ಕೂಟ ವ್ಯವಸ್ಥೆಯ ಮೇಲೆ ನಡೆದಿರುವ ದಾಳಿ ಇದಾಗಿದೆ ಎಂದು ಡಿಎಂಕೆ ಪಕ್ಷದ ಮುಖ್ಯಸ್ಥ ಎಂ.ಕೆ. ಸ್ಟಾಲಿನ್ ಟೀಕಿಸಿದ್ದಾರೆ. ಹಿಂದಿ ಹೇರಿಕೆಯನ್ನು ಶಿಕ್ಷಣ ನೀತಿಯಿಂದ ಹಿಂಪಡೆಯಲಾಗಿದ್ದರೂ ತ್ರಿಭಾಷಾ ಸೂತ್ರದ ಅಳವಡಿಕೆಗೆ ಡಿಎಂಕೆ ಪಕ್ಷ ವಿರೋಧ ಮುಂದುವರಿಸಿದೆ. ಇದು ತಮಿಳು ಭಾಷೆಗೆ ಧಕ್ಕೆ ತರುತ್ತದೆ ಎಂಬುದು ಅದರ ವಾದ.
ಇದನ್ನೂ ಓದಿ: ಪಾಕಿಸ್ತಾನೀ ಸುದ್ದಿ ವಾಹಿನಿ Dawnನಲ್ಲಿ ತ್ರಿವರ್ಣ ಧ್ವಜ ಪ್ರಸಾರ; ಭಾರತೀಯ ಹ್ಯಾಕರ್ಸ್ ಮೋಡಿ
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಜನರ ಬಳಿ ಹೋರಾಟ ಮಾಡಲು ಡಿಎಂಕೆಗೆ ಸಿಕ್ಕಿರುವ ಪ್ರಬಲ ಆಯುಧಗಳಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯೂ ಒಂದು. ಈ ಹಿನ್ನೆಲೆಯಲ್ಲಿ ತಮಿಳುನಾಡಿನ ಎಐಎಡಿಎಂಕೆ ಸರ್ಕಾರವು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ವಿರೋಧಿಸಲು ನಿರ್ಧರಿಸಿದ್ದಾರೆಂಬ ಮಾತು ಇಲ್ಲಿನ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ. ದ್ರಾವಿಡ ಹೋರಾಟದ ಮೂಲದಿಂದಲೇ ಹುಟ್ಟಿ ಬೆಳೆದಿರುವ ಎಐಎಡಿಎಂಕೆಯಿಂದ ಈ ನಿರ್ಧಾರ ಅನಿರೀಕ್ಷಿತವೇನಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ