ಲಾಕ್​ಡೌನ್​ ನಿಯಮ ಉಲ್ಲಂಘಿಸಿ ಸಿಎಎ ವಿರೋಧಿ ಪ್ರತಿಭಟನೆ; 1500 ಪ್ರಕರಣಗಳನ್ನು ಕೈಬಿಟ್ಟ ತಮಿಳುನಾಡು ಸರ್ಕಾರ

ಲಾಕ್​ಡೌನ್​ ನಿಯಮಗಳನ್ನು ಮೀರಿ ಸಿಎಎ ವಿರೋಧಿ ಹೋರಾಟದಲ್ಲಿ ಪಾಲ್ಗೊಂಡ ಸುಮಾರು 1500 ಹೋರಾಟಗಾರರ ಮೇಲೂ ಪ್ರಕರಣಗಳನ್ನು ದಾಖಲಿಸಲಾಗಿದೆ. ಆದರೆ, ತಮಿಳುನಾಡು ಸರ್ಕಾರ ಈ ಎಲ್ಲಾ ಪ್ರಕರಣಗಳನ್ನು ಇದೀಗ ಕೈಬಿಡಲು ನಿರ್ಧರಿಸಿದೆ ಎಂದು ಸಿಎಂ ಯಡಪ್ಪಾಡಿ ಕೆ ಪಳನಿಸ್ವಾಮಿ ಇಂದು ತಿಳಿಸಿದ್ದಾರೆ.

ಸಿಎಂ ಎಡಪ್ಪಾಡಿ ಕೆ ಪಳನಿಸ್ವಾಮಿ.

ಸಿಎಂ ಎಡಪ್ಪಾಡಿ ಕೆ ಪಳನಿಸ್ವಾಮಿ.

 • Share this:
  ಚೆನ್ನೈ (ಫೆಬ್ರವರಿ 19); ಕೇಂದ್ರ ಸರ್ಕಾರ ವಿವಾದಾತ್ಮಕ ಸಿಎಎ (ಪೌರತ್ವ ತಿದ್ದುಪಡಿ ಕಾಯ್ದೆ) ಕಾಯ್ದೆಯನ್ನು ಜಾರಿಗೆ ತಂದಾಗ ಇಡೀ ದೇಶದಾದ್ಯಂತ ಅನೇಕರು ಈ ಕಾಯ್ದೆಯನ್ನು ವಿರೋಧಿಸಿದ್ದರು. ಅಲ್ಲದೆ, ಬೀದಿಗೆ ಇಳಿದು ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ನಡೆಸಿದ್ದರು. ಈ ವೇಳೆ ದೆಹಲಿಯ ಶಾಹೀನ್​ ಭಾಗ್ ಸಿಎಎ ವಿರೋಧಿ ​ ಹೋರಾಟದ ಭಾಗವಾಗಿ ದೇಶದ ನಾನಾ ಭಾಗಗಳಲ್ಲಿಯೂ ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ನಿರಂತರವಾಗಿತ್ತು. ಆದರೆ, ಈ ವೇಳೆ ದೇಶದಲ್ಲಿ ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದ ಕಾರಣ ಸಾರ್ವಜನಿಕ ಹೋರಾಟಕ್ಕೆ ಸರ್ಕಾರ ನಿಷೇಧ ಹೇರಿತ್ತು. ಲಾಕ್​ಡೌನ್​ ನಿಯಮಗಳನ್ನು ಜಾರಿಗೆ ತಂದಿತ್ತು. ಆದರೆ, ಈ ವೇಳೆ ಲಾಕ್​ಡೌನ್​ ನಿಯಮಗಳನ್ನು ಮೀರಿ ಹೋರಾಟ ನಡೆಸಿದ್ದ ಕಾರಣಕ್ಕೆ ತಮಿಳುನಾಡಿನಲ್ಲಿ 1500 ಜನರ ಮೇಲೆ ಪ್ರಕರಣ ಹೂಡಲಾಗಿತ್ತು. ಆದರೆ, ತಮಿಳುನಾಡು ಮುಖ್ಯಮಂತ್ರಿ ಯಡಪ್ಪಾಡಿ ಕೆ. ಪಳನಿಸ್ವಾಮಿ ಇದೀಗ ದಿಢೀರೆಂದು ಈ ಎಲ್ಲಾ ಪ್ರಕರಣಗಳನ್ನು ಕೈಬಿಡುವುದಾಗಿ ಘೋಷಿಸಿದ್ದಾರೆ. 

  ತಮಿಳುನಾಡಿನಲ್ಲಿ ಇದೀಗ ಚುನಾವಣೆ ಹತ್ತಿರಾಗುತ್ತಿದೆ. ಹೀಗಾಗಿ ಎಲ್ಲಾ ಪಕ್ಷಗಳೂ ನಿರಂತರವಾಗಿ ಚುನಾವಣಾ ಪ್ರಚಾರ ಕೆಲಸದಲ್ಲಿ ತೊಡಗಿವೆ. ಆಡಳಿತರೂಢ ಎಐಎಡಿಎಂಕೆ ಪಕ್ಷದ ವತಿಯಿಂದ ಇಂದು ತಮಿಳುನಾಡಿನ ತೆನ್​ಕಾಸಿ ಜಿಲ್ಲೆಯ ಕಡಲೂರಿನಲ್ಲಿ ಪ್ರಚಾರ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮಾತನಾಡಿರುವ ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ, "ಮಾರ್ಚ್‌ 25, 2020 ರಂದು ಕೇಂದ್ರ ಸರ್ಕಾರ ಲಾಕ್‌ಡೌನ್ ಘೋಷಿಸಿದಾಗಿನಿಂದ ಕೊರೋನಾ ನಿಯಮಗಳನ್ನು ಉಲ್ಲಂಘಿಸಿದವರ ವಿರುದ್ಧ ತಮಿಳುನಾಡು ಸಾರ್ವಜನಿಕ ಆರೋಗ್ಯ ಕಾಯ್ದೆ ಮತ್ತು ಸಾಂಕ್ರಾಮಿಕ ರೋಗಗಳ ಕಾಯ್ದೆಯಡಿ ಪೊಲೀಸರು ಸುಮಾರು 10 ಲಕ್ಷ ಪ್ರಕರಣಗಳನ್ನು ದಾಖಲಿಸಿದ್ದಾರೆ.

  ಇದಲ್ಲದೆ, ಲಾಕ್​ಡೌನ್​ ನಿಯಮಗಳನ್ನು ಮೀರಿ ಸಿಎಎ ವಿರೋಧಿ ಹೋರಾಟದಲ್ಲಿ ಪಾಲ್ಗೊಂಡ ಸುಮಾರು 1500 ಹೋರಾಟಗಾರರ ಮೇಲೂ ಪ್ರಕರಣಗಳನ್ನು ದಾಖಲಿಸಲಾಗಿದೆ. ಆದರೆ, ತಮಿಳುನಾಡು ಸರ್ಕಾರ ಈ ಎಲ್ಲಾ ಪ್ರಕರಣಗಳನ್ನು ಇದೀಗ ಕೈಬಿಡಲು ನಿರ್ಧರಿಸಿದೆ" ಎಂದು ತಿಳಿಸಿದ್ದಾರೆ.

  "ಲಾಕ್‌ಡೌನ್ ನಿಯಮಗಳನ್ನು ಕಾರ್ಯಗತಗೊಳಿಸಲು, ಪೊಲೀಸ್ ಸಿಬ್ಬಂದಿ ಚೆಕ್ ಪೋಸ್ಟ್‌ಗಳನ್ನು ಹಾಕಿದ್ದರು. ಜೊತೆಗೆ ರಾಜ್ಯದಾದ್ಯಂತ ವಾಹನ-ಪರಿಶೀಲನೆ ಮಾಡಿದ್ದರು. ಲಾಕ್‌ಡೌನ್ ನಿಯಮಗಳನ್ನು ಉಲ್ಲಂಘಿಸಿದವರು, ವದಂತಿಗಳು ಮತ್ತು ಸುಳ್ಳು ಸಂದೇಶಗಳನ್ನು ಹರಡಿದವರ ವಿರುದ್ಧ ಅವರು ಹಲವಾರು ಪ್ರಕರಣಗಳನ್ನು ದಾಖಲಿಸಿದ್ದಾರೆ.

  ನಿರ್ದಿಷ್ಟ ಅಪರಾಧಗಳಲ್ಲಿ ಭಾಗಿಯಾದವರ, ಕಾನೂನುಬಾಹಿರವಾಗಿ ಇ-ಪಾಸ್ ಪಡೆದುಕೊಂಡವರ ಮತ್ತು ಪೊಲೀಸರ ಕರ್ತವ್ಯಕ್ಕೆ ಅಡ್ಡಪಡಿಸಿದವರ ವಿರುದ್ಧ ದಾಖಲಾದ ಪ್ರಕರಣಗಳನ್ನು ಹೊರತುಪಡಿಸಿ, ಇತರ ಎಲ್ಲ ಪ್ರಕರಣಗಳನ್ನು ಕೈಬಿಡಲಾಗುತ್ತದೆ" ಎಂದು ಮುಖ್ಯಮಂತ್ರಿ ಯಡಪ್ಪಾಡಿ ಕೆ. ಪಳನಿಸ್ವಾಮಿ ತಮ್ಮ ಭಾಷಣದ ವೇಳೆ ತಿಳಿಸಿದ್ದಾರೆ.

  ಇದನ್ನೂ ಓದಿ: ಚುನಾವಣಾ ಪ್ರಚಾರಕ್ಕೆ ಪ್ರಧಾನಿ ಮೋದಿ ಸಿದ್ಧತೆ; ಮುಂದಿನ 2 ವಾರಗಳ ಕಾಲ 4 ರಾಜ್ಯಗಳಲ್ಲಿ ಮೆಗಾ ರ‍್ಯಾಲಿ

  ಸಿಎಎ ಕಾಯ್ದೆಯನ್ನು 2019ರಲ್ಲಿ ಕೇಂದ್ರ ಗೃಹ ಸಚಿವ ಅಮಿತ್​ ಶಾ ವಿರೋಧ ಪಕ್ಷಗಳು ಹಾಗೂ ಪ್ರಗತಿಪರ ಹೋರಾಟಗಾರರ ವಿರೋಧದ ನಡುವೆಯೂ ಕೇಂದ್ರದ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಮಂಡಿಸಿ ಅಂಗೀಕಾರ ಪಡೆದಿದ್ದರು. ಆದರೆ, ಈ ಕಾಯ್ದೆ ದೇಶದ ಸಂವಿಧಾನಕ್ಕೆ ವಿರುದ್ಧವಾದದ್ದು ಎಂದು ರಾಷ್ಟ್ರದಾದ್ಯಂತ ದೊಡ್ಡ ಮಟ್ಟದ ಹೋರಾಟ ನಡೆದಿತ್ತು. ಈ ವೇಳೆ ತಮಿಳುನಾಡಿನಲ್ಲೂ ಹೋರಾಟ ನಡೆದು 1500 ಜನರ ಮೇಲೆ ಪೊಲೀಸರು ಪ್ರಕರಣವನ್ನು ದಾಖಲಿಸಿದ್ದರು. ಈ ಎಲ್ಲಾ ಪ್ರಕರಣಗಳನ್ನು ಇದೀಗ ತಮಿಳುನಾಡು ಸರ್ಕಾರ ಹಿಂಪಡೆದಿದೆ.

  ಈ ನಡುವೆ ಕೂಡಂಕುಳಂ ಪರಮಾಣು ವಿದ್ಯುತ್ ಸ್ಥಾವರ ಯೋಜನೆಯ ವಿರುದ್ಧ ಪ್ರತಿಭಟಿಸಿದವರ ವಿರುದ್ಧ ದಾಖಲಾದ ಪ್ರಕರಣಗಳನ್ನೂ ಸಹ ಹಿಂಪಡೆಯಲು ತಮ್ಮ ಸರ್ಕಾರ ಯೋಚಿಸಿರುವುದಾಗಿ ಪಳನಿಸ್ವಾಮಿ ಚುನಾವಣಾ ಪ್ರಚಾರದ ವೇಳೆ ಭರವಸೆ ನೀಡಿದ್ದಾರೆ.
  Published by:MAshok Kumar
  First published: