Goa Election: ಗೋವಾದಲ್ಲಿ ಚುನಾವಣಾ ತಯಾರಿ ಚುರುಕುಗೊಳಿಸಿದ ಟಿಎಂಸಿ

ನ್ಯೂಸ್ 18 (News 18) ಜೊತೆ ಮಾತನಾಡಿದ್ದ ಡೇರಿಕ್ ಓ'ಬ್ರೆಯನ್, 'ರಾಜಕಾರಣಿಗಳು ಮಾತ್ರವಲ್ಲ, ನಾವು ಎಲ್ಲಾ ವರ್ಗದ ಜನರನ್ನು, ನಿರ್ದಿಷ್ಟವಾಗಿ ನಾಗರಿಕ ಸಮಾಜದ (Civil Society) ಜನರನ್ನು ಭೇಟಿಯಾಗುತ್ತಿದ್ದೇವೆ. ಹಾಗಾಗಿ ಎಲ್ಲೆಡೆಯಿಂದ ಜನರು ಟಿಎಂಸಿಗೆ ಸೇರುವುದನ್ನು ನೀವು ನೋಡುತ್ತೀದ್ದೀರಿ' ಎಂದು ಹೇಳಿದ್ದರು.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ನವದೆಹಲಿ, ‌ಅ. 23: ಮುಂದಿನ‌ ವರ್ಷದ ಮಾರ್ಚ್ - ಏಪ್ರಿಲ್ ತಿಂಗಳಲ್ಲಿ ಉತ್ತರ ಪ್ರದೇಶ (Uttar Pradesh), ಪಂಜಾಬ್ (Punjab) ಮಣಿಪುರ (Manipur) ಉತ್ತರ ಖಂಡ (Uttarkhand) ಮತ್ತು ಗೋವಾ (Goa) ವಿಧಾನಸಭಾ ಚುನಾವಣೆ ನಡೆಯಲಿದೆ. ಈ ಪೈಕಿ‌ 2024ರ ಲೋಕಸಭಾ‌ ಚುನಾವಣೆಯ (2024 Lokasabha Election) ದೃಷ್ಟಿಯಿಂದ ಉತ್ತರ ಪ್ರದೇಶ‌ ವಿಧಾನಸಭಾ ಚುನಾವಣೆ ಕಾಂಗ್ರೆಸ್ ಮತ್ತು ಬಿಜೆಪಿಗೆ ಅತ್ಯಂತ ಮಹತ್ವದ್ದಾಗಿದ್ದರೆ ಸ್ಥಳೀಯ ಪಕ್ಷಗಳಾದ ಆಮ್ ಆದ್ಮಿ‌ಪಕ್ಷ (Aam Admi Party) ಮತ್ತು ತೃಣಮೂಲ ಕಾಂಗ್ರೆಸ್ (Trinamool Congress) ಗಳಿಗೆ ನೆಲೆ ವಿಸ್ತರಣೆ ಮಾಡಿಕೊಳ್ಳುವ ದೃಷ್ಟಿಯಿಂದ ಗೋವಾ ವಿಧಾನಸಭಾ ಚುನಾವಣೆ ಅತ್ಯಂತ ನಿರ್ಣಾಯಕವಾದುದಾಗಿದೆ. ಈ‌ ಹಿನ್ನೆಲೆಯಲ್ಲಿ ಟಿಎಂಸಿ ಗೋವಾದಲ್ಲಿ ತನ್ನ‌ ಚುನಾವಣಾ ತಯಾರಿಯನ್ನು‌ ಚುರುಕುಗೊಳಿಸಿದೆ.

ತೃಣಮೂಲ ಕಾಂಗ್ರೆಸ್ ಪಕ್ಷ ಗೋವಾ ವಿಧಾನಸಭಾ ಚುನಾವಣೆಯಲ್ಲಿ ಸ್ಫರ್ಧೆ ಮಾಡುವುದಾಗಿ ಘೋಷಿಸಿದಾಗಲೇ ಇಂಥದೊಂದು ಕುತೂಹಲ ನಿರ್ಮಾಣ ಆಗಿತ್ತು. ಈಗ ಟಿಎಂಸಿ ಅಧಿನಾಯಕಿ ಹಾಗೂ ಪಶ್ಚಿಮ‌ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (West Bengal Chief Minister Mamata Banarji) ಸ್ವತಃ ಗೋವಾಕ್ಕೆ ಭೇಟಿ ನೀಡಿ ಚುನಾವಣಾ ತಂತ್ರ ರೂಪಿಸಲಿದ್ದಾರೆ. ಅಕ್ಟೋಬರ್ 28ರಿಂದ ಎರಡು ದಿನ‌ ಗೋವಾದಲ್ಲಿ ಇರಲಿರುವ ಮಮತಾ ಬ್ಯಾನರ್ಜಿ ಪಕ್ಷದ ವತಿಯಿಂದ ಚುನಾವಣಾ ಪ್ರಚಾರಕ್ಕೂ ಚಾಲನೆ ನೀಡಲಿದ್ದಾರೆ. ಈಗಾಗಲೇ ಮಾಜಿ  ಮುಖ್ಯಮಂತ್ರಿ ಲುಝಿನ್ಹೋ ಫಲೇರೋ (Former Chief Minister Luizinho Falerio) ಮತ್ತು ಕಾಂಗ್ರೆಸ್ (Congress) ಪಕ್ಷದ ಇತರ ದೊಡ್ಡ ನಾಯಕರು ಟಿಎಂಸಿ ಸೇರಿಕೊಂಡಿದ್ದು ಮಮತಾ ಬ್ಯಾನರ್ಜಿ ಭೇಟಿ ವೇಳೆ ಇನ್ನಷ್ಟು ನಾಯಕರು ಟಿಎಂಸಿ ಸೇರುವ ಸಾಧ್ಯತೆ ಇದೆ.

ಗೋವಾದಲ್ಲಿ ಬೀಡುಬಿಟ್ಟ ಪ್ರಶಾಂತ್ ಕಿಶೋರ್

ಮಮತಾ ಬ್ಯಾನರ್ಜಿ ಅವರು ಗೋವಾಕ್ಕೆ ಭೇಟಿ ನೀಡುವ ವೇಳೆ ಅಲೆ ಸೃಷ್ಟಿ ಮಾಡಬೇಕು ಎಂಬ ಕಾರಣಕ್ಕೆ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ (Election Strategist Prashant Kishor) ಗೋವಾದಲ್ಲಿ ದೀರ್ಘಕಾಲ ಬೀಡು ಬಿಟ್ಟಿದ್ದು ಟಿಎಂಸಿ ಪರ ರಣತಂತ್ರ ರೂಪಿಸುತ್ತಿದ್ದಾರೆ. ಈ‌ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 29ರಂದು ಟಿಎಂಸಿ ಸೇರಿದ್ದ ಕಾಂಗ್ರೆಸ್ ನಾಯಕ ಲುಝಿನ್ಹೋ ಫಲೇರೋ ಅವರಿಗೆ ಶುಕ್ರವಾರ ಟಿಎಂಸಿ ರಾಷ್ಟ್ರೀಯ ಉಪಾಧ್ಯಕ್ಷ ಸ್ಥಾನವನ್ನು ನೀಡಲಾಗಿದೆ. ಟಿಎಂಸಿ ಪ್ರಧಾನ‌ ಕಾರ್ಯದರ್ಶಿ ಅಭಿಷೇಕ ಬ್ಯಾನರ್ಜಿ (TMC general secretary Abhishek Banerjee) ಪ್ರಕಟಣೆ ಹೊರಡಿಸಿ ಈ‌ ವಿಷಯ ತಿಳಿಸಿದ್ದಾರೆ.
'ಲುಝಿನ್ಹೋ ಫಲೇರೋ ಅವರನ್ನು ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷರನ್ನಾಗಿ ನೇಮಿಸಲು ಮಮತಾ ಬ್ಯಾನರ್ಜಿ ಅತ್ಯಂತ ಹೆಮ್ಮೆ ಪಟ್ಟಿದ್ದಾರೆ.‌ ನಾಲ್ಕು ದಶಕಗಳಿಂದ ರಾಜಕೀಯ ವೃತ್ತಿಜೀವನದಲ್ಲಿ, ಗೋವಾದ ಮಾಜಿ ಸಿಎಂ ಲುಝಿನ್ಹೋ ಫಲೇರೊ ಜನರ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಅವರ ಸಮರ್ಥ ಮಾರ್ಗದರ್ಶನದಲ್ಲಿ ಟಿಎಂಸಿ ಗೋವಾದಲ್ಲಿ ಎತ್ತರವನ್ನು ತಲುಪುತ್ತದೆ. ಪ್ರತಿಯೊಬ್ಬ ಭಾರತೀಯನ ಪ್ರಜಾತಾಂತ್ರಿಕ ಹಕ್ಕುಗಳನ್ನು ರಕ್ಷಿಸುವ ಹೋರಾಟವನ್ನು ಮುಂದುವರಿಸುತ್ತದೆ' ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮಮತಾ ಬ್ಯಾನರ್ಜಿ ಅವರ ಬಳಿಕ ಟಿಎಂಸಿಯಲ್ಲಿ ಅತ್ಯಂತ ಪ್ರಭಾವಿ ಎನಿಸಿಕೊಂಡಿರುವ ಅಭಿಷೇಕ ಬ್ಯಾನರ್ಜಿ ಕೂಡ ಶೀಘ್ರದಲ್ಲೇ ಗೋವಾಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ.

ಕಳೆದ ವಾರ ಗೋವಾ ಪ್ರವಾಸದಲ್ಲಿದ್ದ ತೃಣಮೂಲ ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಡೇರಿಕ್ ಓ'ಬ್ರೆಯನ್ (Trinamool Congress Rajasabha Member Derek O’Brien) ಅವರು ಗಾಯಕ ಲಕ್ಕಿ ಅಲಿ (Singer Lucky Ali) ಮತ್ತು ನಟಿ ಹಾಗೂ ಸಾಮಾಜಿಕ ಕಾರ್ಯಕರ್ತೆ ನಫೀಸಾ ಅಲಿ (Actress and Activist Nafisa Ali) ಅವರನ್ನು ಭೇಟಿಯಾಗಿ ಇವರಿಬ್ಬರನ್ನೂ ಪಕ್ಷಕ್ಕೆ ಸೇರಿಸಿಕೊಳ್ಳುವ ಬಗ್ಗೆ ಚರ್ಚೆ ಮಾಡಿದ್ದಾರೆ ಎನ್ನಲಾಗಿದೆ.

ನ್ಯೂಸ್ 18 (News 18) ಜೊತೆ ಮಾತನಾಡಿದ್ದ ಡೇರಿಕ್ ಓ'ಬ್ರೆಯನ್, 'ರಾಜಕಾರಣಿಗಳು ಮಾತ್ರವಲ್ಲ, ನಾವು ಎಲ್ಲಾ ವರ್ಗದ ಜನರನ್ನು, ನಿರ್ದಿಷ್ಟವಾಗಿ ನಾಗರಿಕ ಸಮಾಜದ (Civil Society) ಜನರನ್ನು ಭೇಟಿಯಾಗುತ್ತಿದ್ದೇವೆ. ಹಾಗಾಗಿ ಎಲ್ಲೆಡೆಯಿಂದ ಜನರು ಟಿಎಂಸಿಗೆ ಸೇರುವುದನ್ನು ನೀವು ನೋಡುತ್ತೀದ್ದೀರಿ' ಎಂದು ಹೇಳಿದ್ದರು.

ಡೇರಿಕ್ ಓ'ಬ್ರೆಯನ್ ಅವರನ್ನು ಭೇಟಿ ಮಾಡಿದ ಫೋಟೋ ಜೊತೆ ನಫೀಸಾ ಅಲಿ, 'ಪಶ್ಚಿಮ‌ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್ ಗೋವಾದಿಂದ ಸ್ಪರ್ಧೆ ಮಾಡಲು ನಿರ್ಧರಿಸಿದ ಸಂತೋಷವನ್ನು  ತಮ್ಮ ಇನ್‌ಸ್ಟಾಗ್ರಾಮ್‌ (Instagram) ಖಾತೆಯಲ್ಲಿ ಪೋಸ್ಟ್ ಮಾಡಿದ್ದರು.  "ಭಾರತಕ್ಕೆ ಈಗ ಉತ್ತಮ ನಾಯಕತ್ವದ ಅಗತ್ಯವಿದೆ ಮತ್ತು ಮಮತಾ ಬ್ಯಾನರ್ಜಿ ಗೋವಾದಿಂದ ಸ್ಪರ್ಧಿಸಲು ನಿರ್ಧರಿಸಿರುವುದಕ್ಕೆ ನನಗೆ ಸಂತೋಷವಾಗಿದೆ. ಗೋವಾ ಭವಿಷ್ಯದ ಬಗ್ಗೆ ಯೋಚಿಸಬಲ್ಲ ಒಬ್ಬ ಉತ್ತಮ ನಾಯಕನ ಅಗತ್ಯವಿದೆ' ಎಂದು ಒತ್ತಿ ಹೇಳಿದ್ದರು. ಸದ್ಯ ಗೋವಾದಲ್ಲಿ ಉಳಿದಿರುವ ನಫೀಸಾ ಅಲಿ ಅವರು ಮಮತಾ ಬ್ಯಾನರ್ಜಿ ಅವರನ್ನು 'ಹುಲಿ' ಎಂದು ಸಂಬೋಧಿಸಿದ ಕೆಲವೇ ದಿನಗಳಲ್ಲಿ ಈ ಪೋಸ್ಟ್ (Post) ಬಂದಿದೆ. ನಫೀಸಾ ಅಲಿ ಹಿಂದೆ ಪಶ್ಚಿಮ ಬಂಗಾಳದಲ್ಲೂ ಚುನಾವಣೆಗೆ ಸ್ಪರ್ಧೆ ಮಾಡಿದ್ದರು. ಮತ್ತೊಂದೆಡೆ ಲಕ್ಕಿ ಅಲಿ ಅವರು ಕೂಡ ಇತ್ತೀಚೆಗೆ ಹೆಚ್ಚಾಗಿ ಗೋವಾದಲ್ಲಿಯೇ ಇರುತ್ತಾರೆ. 90ರ ದಶಕದಲ್ಲಿ ಅವರ "ಓ ಸನಮ್" (O Sanam) ಚಿತ್ರ ಬಹಳ ಹಿಟ್ ಆಗಿತ್ತು.

ಇದನ್ನು ಓದಿ: Goa Election: ಮುಂದಿನ ವಾರ ಗೋವಾ ಚುನಾವಣಾ ಕಣಕ್ಕಿಳಿಯಲಿರುವ ಮಮತಾ ಬ್ಯಾನರ್ಜಿ

ಮೂಲಗಳು ನಫೀಸಾ ಅಲಿ ಮತ್ತು ಲಕ್ಕಿ ಅಲಿ ಅವರ ಪಾತ್ರ ತೃಣಮೂಲ ಕಾಂಗ್ರೆಸ್ ಪಕ್ಷದಲ್ಲಿ ಏನಿರಲಿದೆ ಎಂಬುದನ್ನು ಹೇಳುತ್ತಿಲ್ಲವಾದರೂ ಇವರು ಸ್ಟಾರ್ ಪ್ರಚಾರಕರಾಗಬಹುದು, ಟಿಎಂಸಿಯಿಂದ ಸ್ಪರ್ಧೆ ಮಾಡಬಹುದು ಎನ್ನಲಾಗುತ್ತಿದೆ. ಟಿಎಂಸಿ ನಾಯಕರು ಹೇಳುವ ಪ್ರಕಾರ ಪಕ್ಷವು ಗೋವಾದ ಬಗ್ಗೆ ತುಂಬಾ ಗಂಭೀರವಾಗಿದೆ.
Published by:HR Ramesh
First published: