HOME » NEWS » National-international » TMC ROPES IN POLL STRATEGIST PRASHANT KISHORS IPAC TILL 2026 WEST BENGAL ASSEMBLY ELECTION MAK

ಚುನಾವಣಾ ತಜ್ಞ ಪ್ರಶಾಂತ್ ಕಿಶೋರ್ ಇಲ್ಲದೆಯೂ 2026ರ ವರೆಗೆ ಟಿಎಂಸಿಗಾಗಿ ಕೆಲಸ ಮಾಡಲಿದೆ I-PAC!

ತೃಣಮೂಲ ಕಾಂಗ್ರೆಸ್‌ ಮತ್ತು I-PAC ನಡುವಿನ ಒಪ್ಪಂದ 2026 ರ ವರೆಗೂ ಮುಂದುವರೆಯಲಿದೆ. ಆದರೆ ಈಗ I-PAC ನಲ್ಲಿ ಮುಖ್ಯಸ್ಥರಾಗಿ ಪ್ರಶಾಂತ್ ಕಿಶೋರ್ ಕೆಲಸ ಮಾಡುತ್ತಿಲ್ಲ. ಅವರ ಬದಲಾಗಿ 9 ಜನ ಹಿರಿಯ ಸದಸ್ಯರ ನೇತೃತ್ವದಲ್ಲಿ I-PAC ಕಾರ್ಯನಿರ್ವಹಿಸಲಿದೆ.

news18-kannada
Updated:June 15, 2021, 9:03 PM IST
ಚುನಾವಣಾ ತಜ್ಞ ಪ್ರಶಾಂತ್ ಕಿಶೋರ್ ಇಲ್ಲದೆಯೂ 2026ರ ವರೆಗೆ ಟಿಎಂಸಿಗಾಗಿ ಕೆಲಸ ಮಾಡಲಿದೆ I-PAC!
ಪ್ರಶಾಂತ್ ಕಿಶೋರ್.
  • Share this:
ಕೋಲ್ಕತ್ತಾ (ಜೂನ್ 15); ಪಶ್ಚಿಮ ಬಂಗಾಳ ಚುನಾವಣೆ ಇಡೀ ದೇಶದ ಗಮನ ಸೆಳೆದಿತ್ತು. ಈ ಚುನಾವಣೆಯಲ್ಲಿ ಚುನಾವಣಾ ತಜ್ಞ ಪ್ರಶಾಂತ್ ಕಿಶೋರ್ ನೇತೃತ್ವದ ಐ-ಪ್ಯಾಕ್ ಸಂಸ್ಥೆ ಟಿಎಂಸಿ ಪಕ್ಷಕ್ಕಾಗಿ ಕೆಲಸ ಮಾಡಿತ್ತು. ಅಲ್ಲದೆ, ಚುನಾವಣಾ ಫಲಿತಾಂಶಕ್ಕೂ ಮುನ್ನವೇ ಪ್ರಶಾಂತ್ ಕಿಶೋರ್ ಈ ಚುನಾವಣೆಯಲ್ಲಿ ಬಿಜೆಪಿ ಮೂರಂಕಿ ದಾಟುವುದಿಲ್ಲ ಎಂದು ಭವಿಷ್ಯ ನುಡಿದಿದ್ದರು. ಅದರಂತೆ ಬಿಜೆಪಿ ಹೀನಾಯ ಸೋಲನುಭವಿಸಿತ್ತು. ಮಮತಾ ಬ್ಯಾನರ್ಜಿ ಮತ್ತೊಂದು ಅವಧಿಗೆ ಸಿಎಂ ಕುರ್ಚಿಗೂ ಏರಿದ್ದರು. ಈ ಎಲ್ಲಾ ಬೆಳವಣಿಗೆಯ ನಂತರ ಸಂದರ್ಶನ ನೀಡಿದ್ದ ಪ್ರಶಾಂತ್ ಕಿಶೋರ್ ತಾನು ಚುನಾವಣಾ ರಾಜಕಾರಣ ಮತ್ತು ಐ-ಪ್ಯಾಕ್ ಸಂಸ್ಥೆಯಿಂದ ನಿವೃತ್ತಿ ಹೊಂದುವುದಾಗಿ ಘೋಷಿಸಿದ್ದರು. ಈ ನಡುವೆ ಪ್ರಶಾಂತ್ ಕಿಶೋರ್ ರಾಜಕೀಯಕ್ಕೆ ಪ್ರವೇಶಿಸುತ್ತಾರ? ಎಂಬ ಸುದ್ದಿಗಳು ಕೆಲವು ದಿನ ಹರಿದಾಡುತ್ತಿತ್ತು. ಈ ಎಲ್ಲಾ ಊಹಾಪೋಹದ ನಡುವೆ ತೃಣಮೂಲ್ ಕಾಂಗ್ರೆಸ್ ಪ್ರಶಾಂತ್ ಕಿಶೋರ್ ಹುಟ್ಟು ಹಾಕಿದ I-PAC ಚುನಾವಣಾ ವಿಶ್ಲೇಷಣಾ ಸಂಸ್ಥೆಯ ಜೊತೆ ತನ್ನ ಒಪ್ಪಂದವನ್ನು 2026ರ ಚುನಾವಣೆ ವರೆಗೆ ಮುಂದುವರೆಸಿದೆ ಎನ್ನಲಾಗುತ್ತಿದೆ.

ಪಶ್ಚಿಮ ಬಂಗಾಳದ ಜಿಲ್ಲಾ ಪಂಚಾಯತಿ, ಸ್ಥಳೀಯ ಸಂಸ್ಥೆಗಳು, ಇತರ ಚುನಾವಣೆಗಳು ಸೇರಿ ಎಲ್ಲಾ ಚುನಾವಣಾ ಪ್ರಕ್ರಿಯೆಯಲ್ಲಿ I-PAC ತೃಣಮೂಲ ಕಾಂಗ್ರೆಸ್‌ಗೆ ಸಹಾಯ ಮಾಡಲಿದೆ. ತೃಣಮೂಲ ಕಾಂಗ್ರೆಸ್‌ ಮತ್ತು I-PAC ನಡುವಿನ ಒಪ್ಪಂದ 2026 ರ ವರೆಗೂ ಮುಂದುವರೆಯಲಿದೆ. ಆದರೆ ಈಗ I-PAC ನಲ್ಲಿ ಮುಖ್ಯಸ್ಥರಾಗಿ ಪ್ರಶಾಂತ್ ಕಿಶೋರ್ ಕೆಲಸ ಮಾಡುತ್ತಿಲ್ಲ. ಅವರ ಬದಲಾಗಿ 9 ಜನ ಹಿರಿಯ ಸದಸ್ಯರ ನೇತೃತ್ವದಲ್ಲಿ I-PAC ಕಾರ್ಯನಿರ್ವಹಿಸಲಿದೆ. ಪ್ರಶಾಂತ್ ಕಿಶೋರ್ ಇಲ್ಲದೇ ತೃಣಮೂಲ್-I-PAC ಜೋಡಿ ಚುನಾವಣೆಗಳಲ್ಲಿ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂದು ಬಂಗಾಳದ ಉಪಚುನಾವಣೆಗಳು ಸ್ಪಷ್ಟಪಡಿಸಲಿವೆ.

ಇವೆಲ್ಲದರ ನಡುವೆ ಇತ್ತ ಪ್ರಶಾಂತ್ ಕಿಶೋರ್ ಸದ್ದಿಲ್ಲದೇ ಶರದ್ ಪವಾರ್ ಅವರನ್ನು ಭೇಟಿ ಮಾಡಿದ್ದಾರೆ. ಬಂಗಾಳ ಚುನಾವಣೆಯಲ್ಲಿ ಬೆಂಬಲಿಸಿದ್ದಕ್ಕೆ ಕೃತಜ್ಞತೆ ತಿಳಿಸಲು ಪವಾರ್ ಭೇಟಿಯಾಗಿದ್ದಾಗಿ ಪ್ರಶಾಂತ್ ಕಿಶೋರ್ ಹೇಳುತ್ತಿದ್ದಾರಾದರೂ ಭೇಟಿ ಹಿಂದೆ ಮಹತ್ವದ ರಾಜಕೀಯ ಉದ್ಧೇಶವಿದೆ ಎಂದು ಹೇಳಲಾಗುತ್ತಿದೆ. ಮಮತಾ ಬ್ಯಾನರ್ಜಿ ಪರವಾಗಿ ಪ್ರಶಾಂತ್ ಕಿಶೋರ್ ಶರದ್ ಪವಾರ್ ಅವರನ್ನು ಭೇಟಿಯಾಗಿದ್ದಾರೆ.

ಮಮತಾ ಬ್ಯಾನರ್ಜಿ ರಾಷ್ಟ್ರ ಮಟ್ಟದಲ್ಲಿ ವಿರೋಧ ಪಕ್ಷಗಳ ಒಕ್ಕೂಟಗಳನ್ನು ಸಂಘಟಿಸಲು ಆರಂಭಿಸಿದ್ದಾರೆ ಎಂದು ರಾಜಕೀಯ ವಲಯದಲ್ಲಿ ಚರ್ಚೆಗಳು ಕೇಳಿ ಬರುತ್ತಿವೆ. ಇದಕ್ಕೆ ಪುಷ್ಠಿ ನೀಡುವಂತೆ ತೃಣಮೂಲ್ ಕಾಂಗ್ರೆಸ್‌ ನಾಯಕಿ ಮಮತಾ ಬ್ಯಾನರ್ಜಿ ಪಕ್ಷವನ್ನು ರಾಷ್ಟ್ರ ಮಟ್ಟಕ್ಕೆ ಕೊಂಡೊಯ್ಯುವ ಅವಶ್ಯಕತೆಯಿದೆಯೆಂದು ಹೇಳಿದ್ದಾರೆ. ಮತ್ತೊಬ್ಬ ತೃಣಮೂಲ್ ನಾಯಕ ಅಭಿಷೇಕ್ ಬ್ಯಾನರ್ಜಿ ಕೂಡ ಇದೇ ರೀತಿಯ ಹೇಳಿಕೆಯನ್ನು ಇತ್ತೀಚೆಗೆ ನೀಡಿದ್ದಾರೆ.

ಪ್ರಶಾಂತ್ ಕಿಶೋರ್ ಶರದ್ ಪವಾರ್ ಅವರನ್ನು ಭೇಟಿಯಾಗಿರುವುದು, ಮಮತಾ ಬ್ಯಾನರ್ಜಿಯವರ ರಾಷ್ಟ್ರ ರಾಜಕಾರಣದ ಕನಸು ಎಲ್ಲವನ್ನೂ ತಾಳೆಹಾಕಿ ನೋಡಿದರೆ ತೃಣಮೂಲ ಕಾಂಗ್ರೆಸ್‌ ತೆರೆಮರೆಯಲ್ಲಿ ರಾಷ್ಟ್ರರಾಜಕಾರಣದಲ್ಲಿ ಮಹತ್ವದ ಹೆಜ್ಜೆಯಿಡಲು ಸಜ್ಜಾಗುತ್ತಿರುವುದು ಸ್ಪಷ್ಟವಾಗುತ್ತದೆ.

ಇದನ್ನೂ ಓದಿ: Mayawati: ಉತ್ತರಪ್ರದೇಶ ಚುನಾವಣೆಗೂ ಮುನ್ನವೇ ಮುರಿದು ಬೀಳಲಿದೆಯಾ ಬಿಎಸ್​ಪಿ ಪಕ್ಷ?; ಶಾಸಕರಿಂದ ಪ್ರತ್ಯೇಕ ಪಕ್ಷದ ಕೂಗು!

ಬಂಗಾಳದ ಗೆಲುವು ಮಮತಾ ಬ್ಯಾನರ್ಜಿ ಅವರಲ್ಲಿ ದೆಹಲಿ ಗದ್ದುಗೆಯ ಕನಸನ್ನು ಬಿತ್ತಿರಬಹುದು. ಹಾಗಾಗಿ ಮಮತಾ ಈಗಿನಿಂದಲೇ ಪ್ರಧಾನಿ ಮೋದಿ ವಿರುದ್ಧ ವಿರೋಧ ಪಕ್ಷಗಳ ಒಕ್ಕೂಟವನ್ನು ಸಂಘಟಿಸುವ ಯತ್ನಕ್ಕೆ ಕೈ ಹಾಕಿದ್ದಾರೆ. ಬಂಗಾಳ ಚುನಾವಣೆಯ ಸಂದರ್ಭದಲ್ಲಿ ಮಮತಾ ಬ್ಯಾನರ್ಜಿ ವಿರೋಧ ಪಕ್ಷಗಳು ಒಟ್ಟಾದರೆ ಪ್ರಧಾನಿ ಮೋದಿಯವರನ್ನು ಸೋಲಿಸಬಹುದು ಎಂದಿದ್ದರು. ಹಾಗೇ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಸೇರಿ ಹಲವು ನಾಯಕರುಗಳಿಗೆ ಬೆಂಬಲ ಕೋರಿ ಪತ್ರ ಬರೆದಿದ್ದರು.ಇದನ್ನೂ ಓದಿ: ಕೊನೆಗೂ ಅಂತ್ಯಗೊಂಡ “ಬಾಬಾ ಕಾ ಡಾಬಾ” ವಿವಾದ..!

ಇದಕ್ಕೂ ಹಿಂದೆ 2019 ರ ಲೋಕಸಭೆ ಚುನಾವಣೆಯ ಸಮಯದಲ್ಲೂ ಮಮತಾ ಬ್ಯಾನರ್ಜಿ ಅವರು ವಿರೋಧ ಪಕ್ಷಗಳ ಒಕ್ಕೂಟವಾದ ತೃತೀಯ ರಂಗವನ್ನು ಸಂಘಟಿಸಲು ಪ್ರಯತ್ನಿಸಿದ್ದರು. ಈ ನಡುವೆ ಮಮಾತಾ ಬ್ಯಾನರ್ಜಿ ಮತ್ತು ಪ್ರಧಾನಿ ಮೋದಿಯವರ ನಡುವಿನ ವಾಕ್ಸಮರಗಳು, ಅಧಿಕಾರಿ ವರ್ಗಾವಣೆ ತಿಕ್ಕಾಟಗಳನ್ನು ಗಮನಿಸಿದರೆ ಪ್ರಶಾಂತ್ ಕಿಶೋರ್ ಶರದ್‌ ಪವಾರ್ ಭೇಟಿಯೆ ಹಿಂದೆ ಹಲವು ಅರ್ಥಗಳು ಹುಟ್ಟಿಕೊಳ್ಳುತ್ತವೆ. ಜೊತೆಗೆ ಪ್ರಶಾಂತ್ ಕಿಶೋರ್ ಸ್ಥಾಪಿಸಿದ I-PAC ಸಂಸ್ಥೆ ಜೊತೆ ತೃಣಮೂಲ್ ಒಪ್ಪಂದವನ್ನು ಮುಂದುವರೆಸಿರುವುದು ಸಹ ಮಮತಾ ಬ್ಯಾನರ್ಜಿಯವರ ರಾಷ್ಟ್ರ ರಾಜಕಾರಣದ ಮಹತ್ವಾಕಾಂಕ್ಷೆಯ ಜಾಡನ್ನು ಸೂಚಿಸುವಂತಿದೆ.
Youtube Video

ಒಟ್ಟಿನಲ್ಲಿ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್‌ ಗೆಲುವು, ಚುನಾವಣೆಯ ನಂತರದ ಬಿಜೆಪಿ ನಾಯಕರ ವಲಸೆ, ಪ್ರಶಾಂತ್ ಕಿಶೋರ್- ಶರದ್ ಪವಾರ್ ನಿಗೂಢ ಭೇಟಿ ಎಲ್ಲವೂ ಮಮತಾ ಬ್ಯಾನರ್ಜಿ ಅವರನ್ನು ಮತ್ತೊಮ್ಮೆ ರಾಷ್ಟ್ರ ರಾಜಕಾರಣದ ಮುನ್ನೆಲೆಗೆ ತಂದು ನಿಲ್ಲಿಸಿವೆ.
Published by: MAshok Kumar
First published: June 15, 2021, 9:03 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories